ಹನುಮಾನ್ ಭಕ್ತರ ಆಹ್ವಾನಿಸಲು ಬಂದಿದ್ದೇನೆ, ಶ್ರೀರಾಮಂದಿರ ಉದ್ಘಾಟನೆಗೆ ಕನ್ನಡಿಗರಿಗೆ ಯೋಗಿ ಆಹ್ವಾನ!
ಶ್ರೀರಾಮಚಂದ್ರನ ನಾಡಿನಿಂದ ಹನುಮಾನ್ ಭಕ್ತರ ನಾಡಿಗೆ ಆಗಮಿಸಿದ್ದೇನೆ. 2024ರಲ್ಲಿ ಪೂರ್ಣಗೊಳ್ಳಲಿರುವ ಶ್ರೀರಾಮಮಂದಿರ ಉದ್ಘಾಟನೆಗೆ ಉತ್ತರ ಪ್ರದೇಶ ಸಿಎಂ ಯೋಗಿ ಆದಿತ್ಯನಾಥ್ ಕನ್ನಡಿಗರನ್ನು ಪ್ರೀತಿಯಿಂದ ಸ್ವಾಗತಿಸಿದ್ದಾರೆ.
ಮಂಡ್ಯ(ಏ.26); ಕರ್ನಾಟಕ ಹಾಗೂ ಉತ್ತರ ಪ್ರದೇಶದ ಸಂಬಂಧ ತ್ರೇತಾಯುಗದಿಂದಲೂ ಇದೆ. ಆಯೋಧ್ಯೆಯಲ್ಲಿ ಶ್ರೀರಾಮ ನೆಲೆಸಿದರೆ, ಕರ್ನಾಟಕದಲ್ಲಿ ಹನುಮನ ಜನ್ಮಸ್ಥಳವಾಗಿದೆ. ಶ್ರೀರಾಮ ಮಂದಿರ ಇದ್ದಲ್ಲಿ ಹನುಮಾನ್ ಮಂದಿರ ಇರಬೇಕು. ತ್ರೇತಾಯುಗದಿಂದಲೂ ಉತ್ತರ ಪ್ರದೇಶ ಹಾಗೂ ಕರ್ನಾಟಕದ ನಡುವೆ ಆತ್ಮೀಯ ಸಂಬಂಧವಿದೆ. ಇದೀಗ ಹನುಮಾನ್ ಭಕ್ತರನ್ನು ಶ್ರೀರಾಮ ಮಂದಿರ ಉದ್ಘಾಟನೆಗೆ ಆಮಂತ್ರಿಸಲು ನಾನು ಇಲ್ಲಿಗೆ ಬಂದಿದ್ದೇನೆ ಎಂದು ಯೋಗಿ ಆದಿತ್ಯನಾಥ್ ಹೇಳಿದ್ದಾರೆ. ಮಂಡ್ಯದಲ್ಲಿ ಆಯೋಜಿಸಿದ ಬಿಜೆಪಿ ಸಮಾವೇಶದಲ್ಲಿ ಮಾತನಾಡಿದ ಯೋಗಿ ಆದಿತ್ಯನಾಥ್, ಕನ್ನಡಿಗರನ್ನು 2024ರ ಜನವರಿಯಲ್ಲಿ ಆಯೋಧ್ಯೆ ಶ್ರೀರಾಮ ಮಂದಿರ ಉದ್ಘಾಟನೆಗೆ ಯೋಗಿ ಆಹ್ವಾನಿಸಿದ್ದಾರೆ.
ಕರ್ನಾಟಕದ ಜನತೆ ರಾಮ ಜನ್ಮಭೂಮಿ ಆಂದೋಲನಕ್ಕೆ ಮಹತ್ತರ ಕೊಡುಗೆ ನೀಡಿದ್ದೀರಿ. ಆಯೋಧ್ಯೆಯಲ್ಲಿ ಭಗವಾನ್ ಶ್ರೀರಾಮ ಭವ್ಯ ಮಂದಿರ ನಿರ್ಮಾಣ ತ್ವರಿತಗತಿಯಲ್ಲಿ ನಡೆಯುತ್ತಿದೆ. 2024ರ ಜನವರಿಯಲ್ಲಿ ಶ್ರೀರಾಮ ಮಂದಿರ ನಿರ್ಮಾಣ ಸಂಪೂರ್ಣವಾಗಲಿದೆ. ಅದೇ ತಿಂಗಳಲ್ಲಿ ಪ್ರಧಾನಿ ನರೇಂದ್ರ ಮೋದಿ ಉದ್ಘಾಟನೆ ಮಾಡಲಿದ್ದಾರೆ. ಪ್ರಭು ಶ್ರೀರಾಮ ಶತಮಾನಗಳ ಬಳಿಕ ತನ್ನ ಸ್ವ ಮಂದಿರದಲ್ಲಿ ಪ್ರತಿಷ್ಠಾಪನೆಯಾಗಲಿದ್ದಾನೆ. ಇದು ಪ್ರತಿಯೊಬ್ಬ ಭಾರತೀಯನಿಗೆ ಹೆಮ್ಮೆಯ ವಿಚಾರವಾಗಿದೆ ಎಂದು ಆಯೋಗಿ ಆದಿತ್ಯನಾಥ್ ಹೇಳಿದರು.
ಮಂಡ್ಯಕ್ಕೆ ಆಗಮಿಸಿದ ಯೋಗಿ ಆದಿತ್ಯನಾಥ್, ಜೆಡಿಎಸ್ ಭದ್ರಕೋಟೆಯಲ್ಲಿ ಭರ್ಜರಿ ರೋಡ್ ಶೋ!
ನಾನು ನಿಮ್ಮನ್ನು ಆಮಂತ್ರಿಸಲು ಇಲ್ಲಿಗೆ ಬಂದಿದ್ದೇನೆ. ಹನುಮಾನ್ ಭಕ್ತರನ್ನು ಆಮಂತ್ರಿಸಲು ಇಲ್ಲಿಗೆ ಬಂದಿದ್ದೇನೆ. ರಾಮಲಲ್ಲಾ ಪ್ರತಿಷ್ಠಾಪನೆ, ರಾಮ ಮಂದಿರ ಉದ್ಘಾಟನೆಗೆ ನಿಮ್ಮನ್ನು ಪ್ರೀತಿಪೂರ್ವಕವಾಗಿ ಸ್ವಾಗತಿಸಲು ಉತ್ಸುಕನಾಗಿದ್ದೇನೆ. ನೀವು ಡಬಲ್ ಎಂಜಿನ್ ಸರ್ಕಾರದೊಂದಿಗೆ ಮುನ್ನಡೆದರೆ ಮತ್ತಷ್ಟು ಪ್ರಗತಿಯಾಗಲಿದೆ. ಕರ್ನಾಟಕ ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ನನ್ನಲ್ಲಿ ಒಂದು ಮನವಿ ಮಾಡಿದ್ದರು. ಆಯೋಧ್ಯೆಯಲ್ಲಿ ಕರ್ನಾಟಕ ಭವನ, ಅತಿಥಿ ಗೃಹ ನಿರ್ಮಾಣಕ್ಕೆ ಮನವಿ ಮಾಡಿದ್ದರು. ಈ ಕರ್ನಾಟಕ ಭವನ ನಿರ್ಮಾಣಕ್ಕೆ ಈಗಾಗಲೇ ಜಮೀನು ಮಂಜೂರು ಮಾಡಿದ್ದೇನೆ. ನೀವು ಎಲ್ಲಿಯೂ ಹುಡುಕಬೇಕಿಲ್ಲ. ರಾಮಮಂದಿರ ಉದ್ಘಾಟನೆ ವೇಳೆ ಕರ್ನಾಟಕ ಭವನವೂ ನಿರ್ಮಾಣಗೊಳ್ಳಲಿದೆ. ನಿಮ್ಮನ್ನು ಸ್ವಾಗತಿಸಲು ನಾನು ಅಲ್ಲಿರುತ್ತೇನೆ ಎಂದು ಯೋಗಿ ಆದಿತ್ಯನಾಥ್ ಹೇಳಿದ್ದಾರೆ.
ಆಯೋಧ್ಯೆಯಲ್ಲಿ ಶ್ರೀರಾಮ ಮಂದಿರ ಉದ್ಘಾಟನಾ ಕಾರ್ಯಕ್ಕೆ ಎಲ್ಲಾ ಸಹೋದರ ಸಹೋದರಿಯರನ್ನು ಉತ್ತರ ಪ್ರದೇಶಕ್ಕೆ ಆಹ್ವಾನಿಸಲು ನಾನು ಇಲ್ಲಿಗೆ ಬಂದಿದ್ದೇನೆ. ನೀವೆಲ್ಲಾ ಈ ಮಹಾ ಉತ್ಸವದಲ್ಲಿ ಪಾಲ್ಗೊಳ್ಳಬೇಕು. ನಿಮ್ಮನ್ನು ಸ್ವಾಗತಿಸಲು ನಾನು ಉತ್ಸುಕನಾಗಿದ್ದೇನೆ ಎಂದು ಯೋಗಿ ಆದಿತ್ಯನಾಥ್ ಹೇಳಿದ್ದಾರೆ.
ಬಿಜೆಪಿ ಸಮಾವೇಶದಲ್ಲಿ ಮಾತನಾಡಿದ ಯೋಗಿ ಆದಿತ್ಯನಾಥ್, ಬಿಜೆಪಿ ಡಬಲ್ ಎಂಜಿನ್ ಸರ್ಕಾರದಿಂದ ಅಭಿವೃದ್ಧಿ ಮತ್ತಷ್ಟು ವೇಗ ಪಡೆದುಕೊಳ್ಳಲಿದೆ. ಪ್ರಧಾನಿ ನರೇಂದ್ರ ಮೋದಿ ಆಡಳಿತದಲ್ಲಿ ದೇಶ ಹೊಸದಿಕ್ಕಿನಲ್ಲಿ ಸಾಗುತ್ತಿದೆ. ಬ್ರಿಟನ್ ಆರ್ಥಿಕತೆಯನ್ನು ಹಿಂದಿಕ್ಕಿ ಭಾರತ 5ನೇ ಸ್ಥಾನಕ್ಕೇರಿದೆ. ರೈತರಿಗೆ ಕಿಸಾನ್ ಸಮ್ಮಾನ್ ನಿಧಿ ಸೇರಿದಂತೆ ಹಲವು ಯೋಜನಗಳನ್ನು ತಂದಿದ್ದಾರೆ.