Asianet Suvarna News Asianet Suvarna News

'ತನ್ನ ಪರಿಶ್ರಮದಲ್ಲಿ ತೃಪ್ತಿ ಕಾಣುತ್ತಾನಲ್ಲ, ಆತ ನಿಜವಾದ ಯೋಗಿ..' ಕುಟುಂಬದ ಬಗ್ಗೆ ಮಾತನಾಡಿದ ಯೋಗಿ ಆದಿತ್ಯನಾಥ್‌!

ಅಪ್ಪ ಸತ್ತಾಗಲೂ ನನಗೆ ಹೋಗೋಕೆ ಆಗಿರಲಿಲ್ಲ, ನನ್ನ ಅಕ್ಕ-ತಂಗಿ 30 ವರ್ಷಗಳಿಂದ ನನಗೆ ರಾಖಿ ಕಟ್ಟಿಲ್ಲ.. ಹೀಗೆ ಇತ್ತೀಚಿನ ಸಂದರ್ಶನವೊಂದರಲ್ಲಿ ತನ್ನ ವೈಯಕ್ತಿಕ ಜೀವನದ ಬಗ್ಗೆ ಬಹಳಷ್ಟು ಮಾಹಿತಿಗಳನ್ನು ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್‌ ಹಂಚಿಕೊಂಡಿದ್ದಾರೆ.
 

Uttar Pradesh Chief Minister Yogi Adityanath Opens Up on His Father Death Sister Hardship san
Author
First Published Aug 2, 2023, 3:38 PM IST | Last Updated Aug 2, 2023, 3:38 PM IST

ನವದೆಹಲಿ (ಆ.2): ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್‌ 'ಸಂನ್ಯಾಸಿ'ಯಾಗಿ ಬದುಕೋಕೆ ಆರಂಭಿಸಿ ಎಷ್ಟು ವರ್ಷವಾಯಿತು ಅನ್ನೋದಕ್ಕೆ ಸ್ವತಃ ಅವರೇ ಉತ್ತರ ನೀಡಿದ್ದಾರೆ. 30 ವರ್ಷದ ಹಿಂದೆ ತಮ್ಮ ಕೌಟುಂಬಿಕ ಬಂಧನವನ್ನು ತೊರೆದ ಯೋಗಿ ಆದಿತ್ಯನಾಥ್‌, ಅಲ್ಲಿಯವರೆಗೂ ಗೋರಖ್‌ಪುರದ ಗೋರಖನಾಥ ಮಠದ ಪ್ರಧಾನ ಅರ್ಚಕರಾಗಿ ಕೆಲಸ ಮಾಡಿದ್ದರು. ಆ ಬಳಿಕ ರಾಜಕೀಯಕ್ಕೆ ಇಳಿದು, ಉತ್ತರ ಪ್ರದೇಶದ ಸಿಎಂ ಪದವಿಗೇರಿದ್ದು ಈಗ ಇತಿಹಾಸ. ಅದರೂ ಕುತೂಹಲ ಉಳಿದಿರುವುದು ಅವರ ಕುಟುಂಬದ ಬಗ್ಗೆ ಮಾತ್ರ. ಈ ಬಗ್ಗೆ ಅವರು ಎಲ್ಲಿಯೂ ಮಾತನಾಡೋದಿಲ್ಲ. ಆದರೆ, ಎಲ್ಲಿಯಾದರೂ ಕಾರ್ಯಕ್ರಮದಲ್ಲಿ, ಸಂದರ್ಶನದಲ್ಲಿ ಅವರ ಕುಟುಂಬದ ಬಗ್ಗೆ ಕೇಳಿದಾಗ ಸಂನ್ಯಾಸಿಯಾಗಿರುವ ಯೋಗಿ ಆದಿತ್ಯನಾಥ್‌ ಭಾವುಕರಾಗುತ್ತಾರೆ. ಇತ್ತೀಚಿಗಿನ ಸಂದರ್ಶನವೊಂದರಲ್ಲಿ ಯೋಗಿ ಆದಿತ್ಯನಾಥ್‌ ಅವರಿಗೆ ಈ ಬಾರಿಯ ರಕ್ಷಾಬಂಧನವನ್ನು ನಿಮ್ಮ ತಂಗಿಯೊಂದಿಗೆ ಆಚರಿಸುವ ಯೋಜನೆ ಇದೆಯೇ ಎಂದು ಪ್ರಶ್ನೆ ಮಾಡಲಾಯಿತು. ಅದಕ್ಕೆ ಉತ್ತರಿಸಿದ ಅವರು, ಕಳೆದ 30 ವರ್ಷಗಳಿಂದ ನನಗೆ ಸಹೋದರಿ ರಾಖಿ ಕಟ್ಟಿಲ್ಲ ಎಂದು ಹೇಳಿದ್ದಾರೆ. ಆ ಬಳಿಕ ವೈಯಕ್ತಿಕ ಜೀವನದ ಬಗ್ಗೆ ಯೋಗಿ ಆದಿತ್ಯನಾಥ್‌ಗೆ ಹಲವಾರು ಪ್ರಶ್ನೆಗಳನ್ನು ಕೇಳಲಾಯಿತು. ಅದರಲ್ಲೂ 2020ರಲ್ಲಿ ಕೋವಿಡ್‌ ಲಾಕ್‌ಡೌನ್ ಸಮಯದಲ್ಲಿ ತೀರಿಹೋದ ತಂದೆಯ ಬಗ್ಗೆಯೂ ಅವರು ಮಾತನಾಡಿದರು.

ಕಳೆದ 30 ವರ್ಷದಿಂದ ಸಹೋದರಿ ರಾಖಿ ಕಟ್ಟಿಲ್ಲ: ಕಳೆದ 30 ವರ್ಷಗಳಿಂದ ನಿಮ್ಮ ತಂಗಿ ನಿಮಗೆ ರಾಖಿ ಕಟ್ಟಿಲ್ಲ ಅದಕ್ಕೆ ಕಾರಣವೇನು ಎನ್ನುವ ಪ್ರಶ್ನೆಗೆ, 'ಇಂಥ ಸಂದರ್ಭಗಳು ನನ್ನ ಜೀವನದಲ್ಲಿ ಮಾತ್ರವಲ್ಲ ಎಲ್ಲರ ಜೀವನದಲ್ಲೂ ಬರುತ್ತದೆ. ಆದರೆ ಅವುಗಳನ್ನು ನಮ್ಮ ನೆನಪಿಗಾಗಿ ಇಡಬೇಕು ಎನ್ನುವುದು ನನ್ನ ಅಭಿಪ್ರಾಯ. ಇದೇ ಜೀವನ ಎಂದು ನಾನು ಭಾವಿಸುತ್ತೇನೆ' ಎಂದಿದ್ದಾರೆ.

ತಮ್ಮ ಕಿರಿಯ ಸಹೋದರಿ ಟೀ ಸ್ಟಾಲ್ ನಡೆಸುತ್ತಿರುವ ಬಗ್ಗೆ ಪ್ರಶ್ನೆ ಕೇಳಿದಾಗ, "ಹಣ ಮತ್ತು ಖ್ಯಾತಿಯು ವ್ಯಕ್ತಿಯನ್ನು ಎಂದಿಗೂ ತೃಪ್ತಿಪಡಿಸಲು ಸಾಧ್ಯವಿಲ್ಲ. ಹಾಗಾಗಿ ಆಕೆ ಮಾಡುತ್ತಿರುವುದು ಸರಿಯಾಗಿಯೇ ಇದೆ. ತನ್ನ ಪರಿಶ್ರಮದಲ್ಲಿ ತೃಪ್ತಿ ಕಾಣುತ್ತಾನಲ್ಲ, ಆತ ನಿಜವಾದ ಯೋಗಿ ಎಂದು ನಾನು ಅಂದುಕೊಂಡಿದ್ದೇನೆ ಎಂದರು. ಸಿಎಂ ತಂಗಿಯಾಗಿದ್ದರೂ ಟೀ ಸ್ಟಾಲ್ ನಡೆಸುವುದಕ್ಕೆ ಅವರಿಗೆ ನಾಚಿಕೆ ಆಗುತ್ತಿರಬಹುದೇ ಎನ್ನುವ ಪ್ರಶ್ನೆಗೆ ಅವರ ಸಹೋದರಿಯೇ ಉತ್ತರ ನೀಡಿದ್ದು, ನನ್ನ ಹಣೆಬರಹ ನಾನು ಬಡವಳಾಗಿ ಹುಟ್ಟಿದ್ದೇನೆ. ಜೀವನಕ್ಕಾಗಿ ಟೀ ಸ್ಟಾಲ್‌ ನಡೆಸಬೇಕಿತ್ತು. ನಾನೇನು ಕೆಟ್ಟ ಕೆಲಸ ಮಾಡುತ್ತಿಲ್ಲ. ಬದುಕಿಗಾಗಿ ದುಡಿಯುತ್ತಿದ್ದೇನೆ.  ಕಷ್ಟಪಟ್ಟು ದುಡಿಯುವ ಮೂಲಕ ನನ್ನ ಜೀವನೋಪಾಯ ನೋಡಿಕೊಳ್ಳುತ್ತಿದ್ದೇನೆ. ಅದಕ್ಕಾಗಿ ನನಗೆ ಯಾವ ನಾಚಿಕೆ ಕೂಡ ಇಲ್ಲ ಎಂದಿದ್ದಾರೆ.

'ಜ್ಞಾನವಾಪಿಯನ್ನ ಮಸೀದಿ ಅಂತಾ ಕರೆಯೋದನ್ನ ಮೊದಲು ಬಿಡಿ..' ವಿವಾದದ ಬಗ್ಗೆ ಯೋಗಿ ಆದಿತ್ಯನಾಥ್‌ ಮಾತು!

ಕಾರ್ಯಕ್ರಮವೊಂದರಲ್ಲಿ ತಂದೆಯ ಭೇಟಿಯಾಗಿದ್ದೆ:  ಯೋಗಿ ಆದಿತ್ಯನಾಥ್ ಅವರು ಬಿಜ್ನೋರ್ ಜಿಲ್ಲೆಯಲ್ಲಿ ತಮ್ಮ ತಂದೆಯೊಂದಿಗಿನ ಕೊನೆಯ ಭೇಟಿಯನ್ನು ಈ ವೇಳೆ ನೆನಪಿಸಿಕೊಂಡರು. "ನನ್ನ ತಂದೆ ಇಲ್ಲಿಗೆ (ಲಕ್ನೋದಲ್ಲಿ) ಬಂದಿಲ್ಲ. ನಾನು ಅವರನ್ನು ಕೊನೆಯದಾಗಿ ನಜೀಬಾಬಾದ್‌ನಲ್ಲಿ ಭೇಟಿಯಾದೆ, ಅಲ್ಲಿ ನಾನು ಸಕ್ಕರೆ ಕಾರ್ಖಾನೆಯನ್ನು ಉದ್ಘಾಟಿಸಲು ಭೇಟಿ ಹೋಗಿದ್ದೆ. ಸಭೆಯನ್ನು ಉದ್ದೇಶಿಸಿ ಮಾತನಾಡುವಾಗ, ನನಗೆ ಹೆಚ್ಚು ಪರಿಚಿತ ವ್ಯಕ್ತಿಯೊಬ್ಬರು ಗುಂಪಿನಲ್ಲಿ ಕುಳಿತಿರುವುದನ್ನು ನಾನು ಗಮನಿಸಿದೆ. ಅವರು  ಸ್ವಲ್ಪ ದೂರದಲ್ಲಿ ಕುಳಿತಿದ್ದರು. ಅವರು ನನ್ನ ತಂದೆ ಎಂದು ನಾನು ತಕ್ಷಣ ಗುರುತಿಸಿದೆ, ಕಾರ್ಯಕ್ರಮ ಮುಗಿದ ನಂತರ ನಾನು ಅವರನ್ನು ಭೇಟಿಯಾಗಿದ್ದೆ ಎಂದರು.

France Riots: 'ಒಂದೇ ದಿನಕ್ಕೆ ಯೋಗಿ ಅವರನ್ನು ಫ್ರಾನ್ಸ್‌ಗೆ ಕಳಿಸಿ..' ಯುರೋಪ್‌ನ ವೈದ್ಯ ಈ ಬೇಡಿಕೆ ಇಟ್ಟಿದ್ದೇಕೆ?

ಮೇ 2022 ರಲ್ಲಿ ಉತ್ತರಾಖಂಡ್‌ನಲ್ಲಿ ತಾಯಿ ಮತ್ತು ಕುಟುಂಬವನ್ನು ಭೇಟಿಯಾಗಿದ್ದೆ ಎಂದು ಸಂದರ್ಶನದಲ್ಲಿ ಹೇಳಿದರು. "ನಾನು ನನ್ನ ತಾಯಿಯನ್ನು ಭೇಟಿಯಾಗಲು ಹಲವು ವರ್ಷಗಳ ನಂತರ ಹೋಗಿದ್ದೆ. ನನ್ನ ತಂದೆ 2020 ರಲ್ಲಿ ನಿಧನರಾದರು. ಅದಕ್ಕೂ ಮೊದಲು ನಾನು ಅವರನ್ನು ಅಥವಾ ಕುಟುಂಬ ಸದಸ್ಯರನ್ನು ಭೇಟಿ ಮಾಡಲು ಸಾಧ್ಯವಾಗಲಿಲ್ಲ. ನಂತರ ಲಾಕ್‌ಡೌನ್‌ನಿಂದಾಗಿ ನನ್ನ ತಂದೆಯ ಅಂತ್ಯಕ್ರಿಯೆಗೆ ಹೋಗಲೂ ಸಾಧ್ಯವಾಗಲಿಲ್ಲ, ಕಳೆದ ವರ್ಷ ನನಗೆ ಅವಕಾಶ ಸಿಕ್ಕಾಗ ನಾನು ನನ್ನ ತಾಯಿಯನ್ನು ಭೇಟಿಯಾಗಲು ಹೋಗಿದ್ದೆ, ಸ್ವಾಭಾವಿಕವಾಗಿ, ತಾಯಿ ಮತ್ತು ಮಗನ ನಡುವೆ ನಡೆಯಬೇಕಾದ ಸಂಭಾಷಣೆಗಳು ನಡೆದವು. ಎಲ್ಲಾ ತಾಯಿ-ಮಕ್ಕಳ ನಡುವೆ ಇರುವಂತೆ ಅಲ್ಲೂ ಕೂಡ ಅದೇ ಡೈಲಾಗ್‌ಗಳು ಇದ್ದವು" ಎಂದು ಯೋಗಿ ಆದಿತ್ಯನಾಥ್ ಅವರು ಕೆಲ ಸಮಯದ ಹಿಂದೆ ತಮ್ಮ ತಾಯಿಯ ಚಿತ್ರವನ್ನು ಟ್ವೀಟ್ ಮಾಡಿರುವ ಬಗ್ಗೆ ಕೇಳಿದಾಗ ಉತ್ತರಿಸಿದರು.

Latest Videos
Follow Us:
Download App:
  • android
  • ios