ಉತ್ತರ ಪ್ರದೇಶ ಬಿಜೆಪಿ ಸೋಲಿಗೆ ತಲೆದಂಡ, ರಾಜೀನಾಮೆಗೆ ಮುಂದಾದ ರಾಜ್ಯಾಧ್ಯಕ್ಷ !
ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ಬಹುಮತಕ್ಕೆ ಉತ್ತರ ಪ್ರದೇಶದ ತಣ್ಣಿರೆರಚಿದೆ. ಯುಪಿಯಲ್ಲಿನ ಹೀನಾಯ ಸೋಲು ಬಿಜೆಪಿಗೆ ಅರಗಿಸಿಕೊಳ್ಳಲು ಸಾಧ್ಯವಾಗುತ್ತಿಲ್ಲ. ಇದೀಗ ಯುಪಿ ಸೋಲಿಗೆ ತೆಲೆದಂಡ ಆರಂಭಗೊಂಡಿದೆ. ಯುಪಿ ಬಿಜೆಪಿ ರಾಜ್ಯಾಧಕ್ಷ ರಾಜೀನಾಮೆಗೆ ಮುಂದಾಗಿದ್ದಾರೆ.
ಲಖನೌ(ಜೂ.06) ಲೋಕಸಭಾ ಚುನಾವಣೆ ಫಲಿತಾಂಶ ಬಿಜೆಪಿ ನಿರಾಸೆ ತಂದಿದೆ. 300ಕ್ಕೂ ಹೆಚ್ಚು ಸ್ಥಾನದ ಗುರಿ ಹೊಂದಿದ್ದ ಬಿಜೆಪಿ 240ಕ್ಕೆ ತೃಪ್ತಿ ಪಡಬೇಕಾಗಿದೆ. ಪ್ರಮುಖವಾಗಿ ಉತ್ತರ ಪ್ರದೇಶದಲ್ಲಿನ ಹಿನ್ನಡೆ ಬಿಜೆಪಿಗೆ ಭಾರಿ ಹೊಡೆತ ನೀಡಿದೆ. ಇದೀಗ ಯುಪಿ ಸೋಲಿನ ಪರಾಮರ್ಶೆ ನಡೆಯುತ್ತಿದೆ. ಇದರ ಬೆನ್ನಲ್ಲೇ ಸೋಲಿನ ಹೊಣೆ ಹೊತ್ತು ಉತ್ತರ ಪ್ರದೇಶ ಬಿಜೆಪಿ ರಾಜ್ಯಾಧ್ಯಕ್ಷ ಭೂಪೇಂದ್ರ ಚೌಧರಿ ರಾಜೀನಾಮೆಗೆ ಮುಂದಾಗಿದ್ದಾರೆ.
ದೆಹಲಿಯಲ್ಲಿ ಎನ್‌ಡಿಎ ನಾಯಕರು ಸತತ ಸಭೆಗಳು ನಡೆಯುತ್ತಿದೆ. ನಾಳೆ ಎನ್‌ಡಿಎ ಸಂಸದರ ಮಹತ್ವದ ಸಭೆ ನಡೆಯಲಿದೆ. ಇತ್ತ ಬಿಜೆಪಿ ನಾಯಕರು ಮೇಲಿಂದ ಮೇಲೆ ಸಭೆ ನಡೆಸುತ್ತಿದ್ದಾರೆ. ಎಲ್ಲಿ ಸೋಲಾಗಿದೆ. ಕಾರಣಗಳೇನು? ಕ್ರಮದ ಕುರಿತು ಚರ್ಚೆಗಳು ನಡೆಯುತ್ತಿದೆ. ಇದರ ಬೆನ್ನಲ್ಲೇ ತಲೆದಂಡ, ರಾಜೀನಾಮೆ ಪರ್ವಗಳು ಆರಂಭಗೊಳ್ಳುತ್ತಿದೆ. ಉತ್ತರ ಪ್ರದೇಶದಲ್ಲಿ ಬಿಜೆಪಿಯ ಹೀನಾಯ ಪ್ರದರ್ಶನದ ಹೊಣೆ ಹೊತ್ತಿರುವ ರಾಜ್ಯಾಧ್ಯಕ್ಷ ಭೂಪೇಂದ್ರ ಚೌಧರಿ ರಾಜೀನಾಮೆ ಪತ್ರವನ್ನು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆಪಿ ನಡ್ಡಾಗೆ ರವಾನಿಸಿದ್ದಾರೆ.
ಲೋಕಸಭಾ ಚುನಾವಣೆ ಫಲಿತಾಂಶದ ಬೆನ್ನಲ್ಲೇ ನಟ ಅನುಪಮ್ ಖೇರ್ ನಿಗೂಢ ಪೋಸ್ಟ್!
ಭೂಪೇಂದ್ರ ಚೌಧರಿ ರಾಜೀನಾಮೆ ಪತ್ರವನ್ನು ಬಿಜೆಪಿ ಹೈಕಮಾಂಡ್ ಅಂಗೀಕರಿಸಿಲ್ಲ. ಇತ್ತ ಕೆಲವೇ ದಿನಗಳಲ್ಲಿ ಭೂಪೇಂದ್ರ ಚೌಧರಿ ಸೋಲಿಗೆ ಕಾರಣಗಳನ್ನು ಪತ್ತೆ ಹಚ್ಚಿ ಹೈಕಮಾಂಡ್‌ಗೆ ವರದಿ ನೀಡಲಿದ್ದಾರೆ. ಹೀಗಾಗಿ ವರದಿ ಬಳಿಕ ಹೈಕಮಾಂಡ್ ಭೂಪೇಂದ್ರ ಚೌಧರಿ ರಾಜೀನಾಮೆ ಪತ್ರದ ಕುರಿತು ಚರ್ಚಿಸುವ ಸಾಧ್ಯತೆ ಇದೆ. ಅದುವರೆಗೂ ಭೂಪೇಂದ್ರ ಚೌಧರಿ ರಾಜೀನಾಮೆ ಪತ್ರವನ್ನು ಅಂಗೀಕರಿಸುವ ಸಾಧ್ಯತೆ ಇಲ್ಲ.
ಈಗಾಗಲೇ ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್, ಉಪ ಮುಖ್ಯಮಂತ್ರಿ ಕೇಶವ್ ಪ್ರಸಾದ್ ಮೌರ್ಯ, ಅಧ್ಯಕ್ಷ ಭೂಪೇಂದ್ರ ಚೌಧರಿ ಸೇರಿದಂತೆ ಕೆಲ ಪ್ರಮುಖ ನಾಯಕರು ದೆಹಲಿ ತಲುಪಿದ್ದಾರೆ. ಇದೀಗ ಯುಪಿ ಪ್ರಮುಖರ ಜೊತೆ ಬಿಜೆಪಿ ಹೈಕಮಾಂಡ್ ಚರ್ಚೆ ನಡೆಸಲಿದೆ. ಸೋಲಿನ ವರದಿ ತರಿಸಿಕೊಳ್ಳಲಿದೆ. ಈ ಚರ್ಚೆ ಹಾಗೂ ವರದಿ ಬಳಿಕ ಕೆಲವರ ತಲೆದಂಡವಾಗುವ ಸಾಧ್ಯತೆ ಇದೆ ಅನ್ನೋ ಮಾತುಗಳು ಕೇಳಿಬರುತ್ತಿದೆ.
ಚುನಾವಣೆಯ ಮೊದಲ ಹಂತದಲ್ಲೇ ಬಿಜೆಪಿ ವಾಶ್‌ಔಟ್, ಉತ್ತರ ಪ್ರದೇಶದಲ್ಲಿ ರಜಪೂತರ ಸಿಟ್ಟು!
2019ರ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ಉತ್ತರ ಪ್ರದೇಶದಲ್ಲಿ 62 ಸ್ಥಾನ ಗೆದ್ದಿತ್ತು. ಆದರೆ ಈ ಬಾರಿ ಬಿಜೆಪಿ ಕೇವಲ 33 ಸ್ಥಾನ ಗೆದ್ದಿದೆ. ಸಮಾಜವಾದಿ ಪಾರ್ಟಿ 37 ಸ್ಥಾನ ಗೆದ್ದದರೆ, ಕಾಂಗ್ರೆಸ್ 6 ಸ್ಥಾನ ಗೆದ್ದುಕೊಂಡಿದೆ. ಬಿಜೆಪಿ ಈ ಬಾರಿ ಭಾರಿ ಹಿನ್ನಡೆ ಅನುಭವಿಸಿದೆ.