ಭಾರತ ವಿರೋಧಿ ಸಂಸದನ ಜೊತೆ ರಾಹುಲ್ ವಿವಾದ, ಚೀನಾ ಬಗ್ಗೆ ಹೊಗಳಿಕೆ ಮೋದಿಯ ತೆಗಳಿಕೆ
ಹಾಲಿ ಯುರೋಪ್ ದೇಶಗಳ ಪ್ರವಾಸದಲ್ಲಿರುವ ರಾಹುಲ್ ಗಾಂಧಿ ಭಾರತ ವಿರೋಧಿ ಸಂಸದನ ಜೊತೆ ಕಾಣಿಸಿಕೊಂಡು ವಿವಾದಕ್ಕೀಡಾಗಿದ್ದಾರೆ. ಜೊತೆಗೆ ನರೇಂದ್ರ ಮೋದಿ ಸರ್ಕಾರದ ವಿರುದ್ಧ ವಿದೇಶಿ ನೆಲದಲ್ಲಿ ವಾಗ್ದಾಳಿ ಮುಂದುವರಿಸಿದ್ದಾರೆ.
ಲಂಡನ್ (ಸೆ.9): ನರೇಂದ್ರ ಮೋದಿ ಸರ್ಕಾರದ ವಿರುದ್ಧ ವಿದೇಶಿ ನೆಲದಲ್ಲಿ ಕಾಂಗ್ರೆಸ್ ಮುಖಂಡ ರಾಹುಲ್ ಗಾಂಧಿ ವಾಗ್ದಾಳಿ ಮುಂದುವರಿಸಿದ್ದಾರೆ. ‘ಭಾರತದ ಪ್ರಜಾಸತ್ತಾತ್ಮಕ ಸಂಸ್ಥೆಗಳ ಮೇಲೆ ಪೂರ್ಣ ಪ್ರಮಾಣದ ಆಕ್ರಮಣ ನಡೆಯುತ್ತಿದೆ ಮತ್ತು ದೇಶದ ಪ್ರಜಾಪ್ರಭುತ್ವ ಸಂರಚನೆಗಳನ್ನು ನಿಗ್ರಹಿಸುವ ಈ ಪ್ರಯತ್ನದ ಬಗ್ಗೆ ಯುರೋಪ್ ಒಕ್ಕೂಟವೂ ಕಳವಳ ಹೊಂದಿದೆ’ ಎಂದಿದ್ದಾರೆ,
ಬೆಲ್ಜಿಯಂನಿಂದ ಯುರೋಪ್ ಪ್ರವಾಸ ಆರಂಭಿಸಿರುವ ರಾಹುಲ್ ಗಾಂಧಿ ಬ್ರಸೆಲ್ಸ್‌ನಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ‘ಭಾರತದಲ್ಲಿ ತಾರತಮ್ಯ ಮತ್ತು ಹಿಂಸಾಚಾರ ಹೆಚ್ಚುತ್ತಿದೆ ಮತ್ತು ನಮ್ಮ ದೇಶದ ಪ್ರಜಾಪ್ರಭುತ್ವ ಸಂಸ್ಥೆಗಳ ಮೇಲೆ ಪೂರ್ಣ ಪ್ರಮಾಣದ ದಾಳಿ ನಡೆಯುತ್ತಿದೆ. ಅದು ಎಲ್ಲರಿಗೂ ತಿಳಿದಿದೆ’ ಎಂದರು.
ಚೀನಾ ಜಾಗತಿಕ ಉತ್ಪಾದನಾ ಕೇಂದ್ರ: ರಾಹುಲ್ ಗಾಂಧಿ ಪ್ರಶಂಸೆ
‘ಯುರೋಪ್ ಸಂಸದರು ಕೂಡ ಈ ವಿಷಯಗಳ ಬಗ್ಗೆ ಕಳವಳ ಹೊಂದಿದ್ದಾರೆ. ಭಾರತದ ಪ್ರಜಾಪ್ರಭುತ್ವ ರಚನೆಗಳನ್ನು ನಿಗ್ರಹಿಸುವ ಯತ್ನ ನಡೆದಿದೆ ಎಂದು ಅವರಿಗೆ ಮನವರಿಕೆ ಆಗಿದೆ. ಈ ಎಲ್ಲ ವಿಚಾರಗಳ ಬಗ್ಗೆ ಯರೋಪ್ ಸಂಸದರು ನನ್ನ ಜತೆ ಮಾತನಾಡಿದರು’ ಎಂದರು.
ಉಕ್ರೇನ್ ಬಗ್ಗೆ ಮೋದಿಗೆ ರಾಹುಲ್ ಶ್ಲಾಘನೆ: ರಷ್ಯಾ-ಉಕ್ರೇನ್ ಸಂಘರ್ಷ ಕುರಿತು ಪತ್ರಿಕಾ ಸಂವಾದದಲ್ಲಿ ಮಾತನಾಡಿದ ರಾಹುಲ್ ಗಾಂಧಿ, ‘ಈ ವಿಷಯದಲ್ಲಿ ಸರ್ಕಾರದ ಪ್ರಸ್ತುತ ನಿಲುವನ್ನು ಪ್ರತಿಪಕ್ಷಗಳು ಒಪ್ಪುತ್ತವೆ’ ಎಂದರು. ಈ ಮೂಲಕ ಅಪರೂಪಕ್ಕೆಂಬಂತೆ ಮೋದಿ ಸರ್ಕಾರ ತಳೆದಿರುವ ತಟಸ್ಥ ಯುದ್ಧ ನೀತಿಯನ್ನು ರಾಹುಲ್ ಶ್ಲಾಘಿಸಿದರು.
ಜಿ20 ಶೃಂಗಸಭೆಗೆ ಕ್ಷಣಗಣನೆ ಆರಂಭವಾಗುತ್ತಿದ್ದಂತೆ ಯುರೋಪ್ ಪ್ರವಾಸಕ್ಕೆ ಹೊರಟ ರಾಹುಲ್
ಭಾರತ ವಿರೋಧಿ ಸಂಸದನ ಜೊತೆ ರಾಹುಲ್ ವಿವಾದ
ಹಾಲಿ ಯುರೋಪ್ ದೇಶಗಳ ಪ್ರವಾಸದಲ್ಲಿರುವ ರಾಹುಲ್ ಗಾಂಧಿ, ಗುರುವಾರ ಯುರೋಪ್ ಸಂಸದ ಫ್ಯಾಬಿಯೋ ಮ್ಯಾಸ್ಸಿಮೋ ಅವರೊಂದಿಗೆ ಕಾಣಿಸಿಕೊಂಡರು. ಮ್ಯಾಸ್ಸಿಮೋ ಈ ಹಿಂದೆ ಕಾಶ್ಮೀರ ವಿಷಯದಲ್ಲಿ ಭಾರತದ ನಿಲುವು ವಿರೋಧಿಸಿ ಪಾಕಿಸ್ತಾನವನ್ನು ಬಹಿರಂಗವಾಗಿ ಬೆಂಬಲಿಸಿದ್ದರು.
ಚೀನಾ ಜಾಗತಿಕ ಉತ್ಪಾದನಾ ಕೇಂದ್ರ, ಭಾರತ ಜಾಗತಿಕ ಉತ್ಪಾದನಾ ಕೇಂದ್ರವಾಗಿಲ್ಲ
ಬ್ರಸೆಲ್ಸ್: ವಿದೇಶ ಪ್ರವಾಸದಲ್ಲಿರುವ ಕಾಂಗ್ರೆಸ್ ಮುಖಂಡ ರಾಹುಲ್ ಗಾಂಧಿ ಅವರು ಭಾರತದ ವೈರಿ ದೇಶ ಆಗಿರುವ ಚೀನಾವನ್ನು ಹೊಗಳಿ ದೇಶದ ಜನತೆ ಹುಬ್ಬೇರುವಂತೆ ಮಾಡಿದ್ದಾರೆ. ‘ಚೀನಾ ಜಾಗತಿಕ ಉತ್ಪಾದನಾ ಕೇಂದ್ರವಾಗಿ ಹೊರಹೊಮ್ಮಿದೆ’ ಎಂದು ಅವರು ಶ್ಲಾಘಿಸಿದ್ದು, ಭಾರತ ಈ ಸಾಧನೆ ಮಾಡಲು ವಿಫಲವಾಗಿದೆ ಎಂದಿದ್ದಾರೆ.
ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಚೀನಾ ಇಂದು ಜಾಗತಿಕ ಉತ್ಪಾದನಾ ಕೇಂದ್ರವಾಗಿದೆ. ಏಕೆಂದರೆ ಚೀನಾ ಸರ್ಕಾರಕ್ಕೆ ಅದರದ್ದೇ ಆದ ಪರ್ಯಾಯ ದೃಷ್ಟಿಕೋನವಿದೆ. ಆದರೆ ನಾವು (ಭಾರತ) ಈ ಪರ್ಯಾಯ ದೃಷ್ಟಿಕೋನ ಹೊಂದಿಲ್ಲ. ಹೀಗಾಗಿ ಜಾಗತಿಕ ಉತ್ಪಾದನಾ ಕೇಂದ್ರವಾಗಲು ವಿಫಲವಾಗಿದೆ’ ಎಂದರು.
‘ಚೀನಾ ಒತ್ತಡದ ವಾತಾವರಣದಲ್ಲೂ ಉತ್ತಮ ಉತ್ಪಾದನೆ ಮಾಡಲು ಸಾಧ್ಯ ಎಂದು ತೋರಿಸಿಕೊಟ್ಟಿದೆ. ಏಕೆಂದರೆ ಆ ದೇಶವು ಪರಾರಯಯ ದೃಷ್ಟಿಕೋನವಲ್ಲದೆ ನಿರ್ದಿಷ್ಟದೃಷ್ಟಿಕೋನವನ್ನೂ ಹೊಂದಿದೆ’ ಎಂದರು.
ಜಾಗತಿಕವಾಗಿ ಚೀನಾವನ್ನು ವಿಶ್ವದ ದೇಶಗಳು ಮೂಲೆಗುಂಪು ಮಾಡುತ್ತಿರುವ ಸಂದರ್ಭದಲ್ಲಿ ರಾಹುಲ್ ಅವರ ಈ ಹೇಳಿಕೆ ವಿವಾದಕ್ಕೀಡಾಗುವ ಸಾಧ್ಯತೆ ಇದೆ. ಅಲ್ಲದೆ, ರಾಹುಲ್ ಮೇಲೆ, ‘ವಿದೇಶಿ ನೆಲದಲ್ಲಿ ಭಾರತವನ್ನು ಟೀಕಿಸುತ್ತಾರೆ’ ಎಂಬ ಆರೋಪವನ್ನು ಆಗಾಗ ಬಿಜೆಪಿ ಮಾಡುತ್ತಲೇ ಇರುತ್ತದೆ.