Asianet Suvarna News Asianet Suvarna News

ಕೊರೋನಾ ವೀರರ ಮೇಲೆ ದಾಳಿಗೆ 7 ವರ್ಷ ಜೈಲು: ಕೇಂದ್ರದ ಸುಗ್ರೀವಾಜ್ಞೆ!

ಕೊರೋನಾ ವೀರರ ಮೇಲೆ ದಾಳಿಗೆ 7 ವರ್ಷ ಜೈಲು| 5 ಲಕ್ಷವರೆಗೆ ದಂಡ: ಸುಗ್ರೀವಾಜ್ಞೆಗೆ ಕೇಂದ್ರ ನಿರ್ಧಾರ - ವೈದ್ಯ ಸಿಬ್ಬಂದಿ ಮನೆ ಖಾಲಿ ಮಾಡಿಸುವುದೂ ಕಿರುಕುಳ| ಕೊರೋನಾ ಬಂದಿದೆ ಎಂದು ಶಂಕಿಸಿದರೂ ದೌರ್ಜನ್ಯ - ಆಸ್ತಿಪಾಸ್ತಿಗೆ ಹಾನಿ ಮಾಡಿದರೆ ದುಪ್ಪಟ್ಟು ದಂಡ ವಸೂಲಿ

Upto 7 years in jail for attacking Corona warriors central govt brings in ordinance
Author
Bangalore, First Published Apr 23, 2020, 7:17 AM IST

ನವದೆಹಲಿ(ಏ.23): ಮಾರಕ ಕೊರೋನಾ ವೈರಸ್‌ ನಿಗ್ರಹಕ್ಕಾಗಿ ಜೀವದ ಹಂಗು ತೊರೆದು ಮುಂಚೂಣಿಯಲ್ಲಿ ನಿಂತು ಹೋರಾಡುತ್ತಿರುವ ವೈದ್ಯ ಸಿಬ್ಬಂದಿಗೆ ಹಿಂಸೆ ಹಾಗೂ ಕಿರುಕುಳ ನೀಡುವುದನ್ನು ಜಾಮೀನುರಹಿತ ಅಪರಾಧ ಎಂದು ಪರಿಗಣಿಸಿ ಸುಗ್ರೀವಾಜ್ಞೆ ಹೊರಡಿಸಲು ಕೇಂದ್ರ ಸರ್ಕಾರ ನಿರ್ಧರಿಸಿದೆ. ಗರಿಷ್ಠ 7 ವರ್ಷಗಳ ಜೈಲು ಶಿಕ್ಷೆ ಹಾಗೂ 5 ಲಕ್ಷ ರು. ದಂಡ ವಿಧಿಸುವ ಪ್ರಸ್ತಾಪ ಈ ಸುಗ್ರೀವಾಜ್ಞೆಯಲ್ಲಿದೆ.

ಬೆಂಗಳೂರಿನ ಪಾದರಾಯನಪುರ ಸೇರಿದಂತೆ ದೇಶದ ಹಲವೆಡೆ ‘ಕೊರೋನಾ ವೀರರ’ ಮೇಲೆ ದಾಳಿಗಳು ನಡೆದ ಬೆನ್ನಲ್ಲೇ ಬುಧವಾರ ನಡೆದ ಕೇಂದ್ರ ಸಚಿವ ಸಂಪುಟ ಸಭೆ ಸುಗ್ರೀವಾಜ್ಞೆ ಹೊರಡಿಸುವ ನಿರ್ಧಾರವನ್ನು ಕೈಗೊಂಡಿದೆ.

ಕೊರೋನಾ ವಿರುದ್ಧ ಹೋರಾಡುತ್ತಿರುವ ವೈದ್ಯರು, ನರ್ಸ್‌ಗಳು, ಪ್ಯಾರಾಮೆಡಿಕಲ್‌ ಸಿಬ್ಬಂದಿ ಹಾಗೂ ಆಶಾ ಕಾರ್ಯಕರ್ತರನ್ನು ಹಿಂಸಿಸಿದರೆ, ಕಿರುಕುಳ ನೀಡಿದರೆ 3 ತಿಂಗಳಿನಿಂದ 5 ವರ್ಷದವರೆಗೆ ಜೈಲು ಶಿಕ್ಷೆ ವಿಧಿಸಲು ಸುಗ್ರೀವಾಜ್ಞೆಯಿಂದ ಅವಕಾಶ ಸಿಗಲಿದೆ. ಅಲ್ಲದೆ 50 ಸಾವಿರದಿಂದ 2 ಲಕ್ಷ ರು.ವರೆಗೆ ದಂಡ ವಿಧಿಸಲಾಗುತ್ತದೆ. ಗಂಭೀರ ಸ್ವರೂಪದ ಗಾಯಗಳಾಗಿದ್ದರೆ 6 ತಿಂಗಳಿನಿಂದ 7 ವರ್ಷಗಳ ಜೈಲು ಶಿಕ್ಷೆ ಹಾಗೂ 1ರಿಂದ 5 ಲಕ್ಷ ರು.ವರೆಗೆ ದಂಡ ಹೇರಲಾಗುತ್ತದೆ ಎಂದು ಸಂಪುಟ ಸಭೆಯ ನಂತರ ಕೇಂದ್ರ ವಾರ್ತಾ ಮತ್ತು ಪ್ರಸಾರ ಸಚಿವ ಪ್ರಕಾಶ್‌ ಜಾವಡೇಕರ್‌ ಅವರು ಸುದ್ದಿಗಾರರಿಗೆ ತಿಳಿಸಿದರು.

ಕೊರೋನಾ ವಾರಿಯರ್‌ಗೆ ಜೀವ ಬೆದರಿಕೆ..!

ಸಾಂಕ್ರಾಮಿಕ ರೋಗಗಳ ಕಾಯ್ದೆ-1897ಕ್ಕೆ ಸುಗ್ರೀವಾಜ್ಞೆ ಮೂಲಕ ತಿದ್ದುಪಡಿ ತರಲು ನಿರ್ಧರಿಸಲಾಗಿದೆ. ಮನೆ ಮಾಲೀಕರಿಂದ ಅಥವಾ ವೈದ್ಯಕೀಯ ಸಿಬ್ಬಂದಿ ಎಂಬ ಕಾರಣಕ್ಕೆ ಸೋಂಕು ತಗುಲಿರಬಹುದು ಎಂದು ನೆರೆಹೊರೆಯವರಿಂದ ಕಿರುಕುಳ ಅನುಭವಿಸಿದರೆ ಅವರ ವಿರುದ್ಧವೂ ಈ ತಿದ್ದುಪಡಿಯಾಗುವ ಕಾಯ್ದೆಯನ್ನು ಪ್ರಯೋಗಿಸಲಾಗುತ್ತದೆ. ತಿದ್ದುಪಡಿಯಾದ ಕಾಯ್ದೆಯಡಿ ಈ ಅಪರಾಧಗಳನ್ನು ಗಂಭೀರ (ಕಾಗ್ನಿಸಬಲ್‌) ಹಾಗೂ ಜಾಮೀನುರಹಿತ ಎಂದು ಪರಿಗಣಿಸಲಾಗುತ್ತದೆ ಎಂದು ಅವರು ತಿಳಿಸಿದರು. ಗಂಭೀರ ಹಾಗೂ ಜಾಮೀನುರಹಿತ ಅಪರಾಧಗಳಾದರೆ, ಪೊಲೀಸರು ನೇರವಾಗಿ ಬಂಧಿಸಬಹುದು. ಬಂಧಿತರನ್ನು ಕೋರ್ಟುಗಳು ಮಾತ್ರವೇ ಜಾಮೀನಿನ ಮೇಲೆ ಬಿಡುಗಡೆ ಮಾಡಬಹುದಾಗಿರುತ್ತದೆ.

ವೈದ್ಯರು, ನರ್ಸ್‌ಗಳು, ಪ್ಯಾರಾಮೆಡಿಕಲ್‌ ಸಿಬ್ಬಂದಿ ಹಾಗೂ ಆಶಾ ಕಾರ್ಯಕರ್ತರು ಕೊರೋನಾ ವಿರುದ್ಧ ಹೋರಾಟ ನಡೆಸುತ್ತಿದ್ದಾರೆ. ಅಂಥವರನ್ನು ಗುರಿಯಾಗಿಸಿಕೊಂಡು ಹಿಂಸೆ ನಡೆಸುವುದು, ಕಿರುಕುಳ ನೀಡುವುದರ ಬಗ್ಗೆ ಕೇಂದ್ರ ಸರ್ಕಾರ ಶೂನ್ಯ ಸಹಿಷ್ಣುತೆ ಹೊಂದಿದೆ. ಹಿಂಸೆಗೆ ಕಾರಣರಾದ ವ್ಯಕ್ತಿಗಳು ಹಾನಿಗೆ ನಷ್ಟಭರಿಸಿಕೊಡಬೇಕಾಗುತ್ತದೆ. ಇದು ಮಾರುಕಟ್ಟೆಮೌಲ್ಯಕ್ಕಿಂತ ದುಪ್ಪಟ್ಟಾಗಿರುತ್ತದೆ. ನಮ್ಮ ಆರೋಗ್ಯ ಸಿಬ್ಬಂದಿ ಯಾವುದೇ ಒತ್ತಡ ಬೀಳದಂತೆ ಕೇಂದ್ರ ಸರ್ಕಾರ ನೋಡಿಕೊಳ್ಳುತ್ತಿದೆ ಎಂದು ತಿಳಿಸಿದರು.

ಪುಂಡರ ಕಡಿವಾಣಕ್ಕೆ ಕರ್ನಾಟಕದಲ್ಲಿ ಬಂತು ಸುಗ್ರೀವಾಜ್ಞೆ: ಇನ್ನೇನಿದ್ರೂ ದಂಡಂ ದಶಗುಣಂ

ವೈದ್ಯರ ರಕ್ಷಣೆಯಲ್ಲಿ ರಾಜಿ ಇಲ್ಲವೇ ಇಲ್ಲ

ಕೊರೋನಾ ವಿರುದ್ಧ ಹೋರಾಡುತ್ತಿರುವ ವೈದ್ಯ ಸಿಬ್ಬಂದಿ ಸುರಕ್ಷತೆ ವಿಷಯದಲ್ಲಿ ರಾಜಿ ಇಲ್ಲ. ಕೇಂದ್ರ ಸಂಪುಟ ಅಂಗೀಕರಿಸಿರುವ ಸುಗ್ರೀವಾಜ್ಞೆಯು ಪ್ರತಿಯೊಬ್ಬ ಆರೋಗ್ಯ ಕಾರ್ಯಕರ್ತನ ರಕ್ಷಣೆ ಕುರಿತು ಸರ್ಕಾರಕ್ಕಿರುವ ಬದ್ಧತೆಯನ್ನು ತೋರಿಸುತ್ತದೆ.

ಕೇಂದ್ರದ ಸುಗ್ರೀವಾಜ್ಞೆ

ಸುಗ್ರೀವಾಜ್ಞೆಯಲ್ಲಿ ಏನೇನಿದೆ?

- ವೈದ್ಯ ಸಿಬ್ಬಂದಿಗೆ ಹಿಂಸಿಸಿದರೆ 3 ತಿಂಗಳಿನಿಂದ 5 ವರ್ಷದವರೆಗೆ ಜೈಲು. 50 ಸಾವಿರದಿಂದ 2 ಲಕ್ಷ ರು.ವರೆಗೆ ದಂಡ

- ಗಂಭೀರ ಸ್ವರೂಪದ ಗಾಯ ಮಾಡಿದರೆ 6 ತಿಂಗಳಿನಿಂದ 7 ವರ್ಷಗಳವರೆಗೆ ಜೈಲು. 1ರಿಂದ 5 ಲಕ್ಷ ರು.ವರೆಗೆ ದಂಡ

- ಮನೆ ಮಾಲೀಕರಿಂದ ಅಥವಾ ನೆರೆಹೊರೆಯವರಿಂದ ವೈದ್ಯಕೀಯ ಸಿಬ್ಬಂದಿ ಕಿರುಕುಳ ಅನುಭವಿಸಿದರೂ ಶಿಕ್ಷೆ ಅನ್ವಯ

- ಗಂಭೀರ, ಜಾಮೀನುರಹಿತ ಅಪರಾಧ ಎಂದು ಪರಿಗಣನೆ. ಪೊಲೀಸರು ಬಂಧಿಸಿದರೆ ಠಾಣಾ ಜಾಮೀನು ಸಿಗುವುದಿಲ್ಲ

- ಹಿಂಸಾಚಾರದ ವೇಳೆ ಆಸ್ತಿಪಾಸ್ತಿ ಹಾನಿ ಮಾಡಿದರೆ ನಷ್ಟವಸೂಲಿ. ಮಾರುಕಟ್ಟೆಯ ದುಪ್ಪಟ್ಟಮೌಲ್ಯದಂತೆ ಬೆಲೆ ತೆರಬೇಕು

Follow Us:
Download App:
  • android
  • ios