* ಉತ್ತರ ಪ್ರದೇಶದ ಪ್ರಯಾಗ್‌ರಾಜ್‌ನಲ್ಲಿ ಅಪರೂಪದ ಪ್ರಸಂಗ* ಸಲಿಂಗ ಸಂಬಂಧ ವಿರೋಧಿಸಿದ್ದಕ್ಕೆ ಲಿಂಗ ಬದಲಿಸಿಕೊಂಡಳು!* ಸಂಪೂರ್ಣ ಲಿಂಗ ಬದಲಾವಣೆಗೆ ಒಂದೂವರೆ ವರ್ಷ ಬೇಕಂತೆ

ಪ್ರಯಾಗ್‌ರಾಜ್‌ (ಜೂ.28): ದೇಶದಲ್ಲಿ ಸಲಿಂಗ ಸಂಬಂಧಗಳಿಗೆ ಅಪಸ್ವರ ಇರುವ ನಡುವೆಯೇ ಉತ್ತರಪ್ರದೇಶದ ಪ್ರಯಾಗರಾಜ್‌ನಲ್ಲಿ ಇಬ್ಬರು ಯುವತಿಯರ ಸಲಿಂಗ ಸಂಬಂಧಕ್ಕೂ ಕುಟುಂಬಗಳ ವಿರೋಧ ಕೇಳಿಬಂದಿದೆ. ಹೀಗಾಗಿ ಇಬ್ಬರು ಯುವತಿಯರಲ್ಲಿ ಒಬ್ಬಳು ಗಂಡಾಗಿ ಪರಿವರ್ತನೆ ಆಗುವ ಶಸ್ತ್ರಕ್ರಿಯೆಗೆ ಒಳಗಾಗುತ್ತಿದ್ದಾಳೆ. ಈ ಮೂಲಕವಾದರೂ ತನ್ನ ಸಲಿಂಗ ಪ್ರೇಮಿಯನ್ನು ಮದುವೆಯಾಗಿ ಬಾಳುವ ಉದ್ದೇಶ ಇರಿಸಿಕೊಂಡಿದ್ದಾಳೆ.

ಇಬ್ಬರೂ ಯುವತಿಯರು ಪರಸ್ಪರ ಪ್ರೇಮಿಸುತ್ತಿದ್ದರು. ಈ ವಿಷಯವನ್ನು ಕುಟುಂಬಗಳಿಗೆ ತಿಳಿಸಿ ಮದುವೆ ಪ್ರಸ್ತಾಪ ಇರಿಸಿದರೂ ಕುಟುಂಬಗಳ ಮನವೊಲಿಸಲು ಆಗಲಿಲ್ಲ. ಹೀಗಾಗಿ ಅನಿವಾರ್ಯವಾಗಿ ಇಬ್ಬರಲ್ಲೊಬ್ಬಳು ಲಿಂಗ ಪರಿವರ್ತನೆಗೆ ಒಳಗಾಗುತ್ತಿದ್ದಾಳೆ.

ಪ್ರಯಾಗ್‌ರಾಜ್‌ನ ಸ್ವರೂಪರಾಣಿ ಆಸ್ಪತ್ರೆಯಲ್ಲಿ ಲಿಂಗ ಪರಿವರ್ತನೆ ಸರ್ಜರಿ ನಡೆಸಿದ್ದಾರೆ. ಮೊದಲು ದೇಹದ ಮೇಲ್ಭಾಗದ ಬದಲಾವಣೆ ಮಾಡಿದ್ದಾರೆ. ಆದರೆ ಯುವತಿ ಸಂಪೂರ್ಣ ಪುರುಷನಾಗಿ ಬದಲಾಗಲು 18 ತಿಂಗಳು ಬೇಕು. ಸದ್ಯ ಯುವತಿ ಆರೋಗ್ಯವಾಗಿದ್ದಾಳೆ ಎಂದು ವೈದ್ಯರು ಹೇಳಿದ್ದಾರೆ.

ಆದರೆ, ಲಿಂಗ ಪರಿವರ್ತನೆ ಆದ ನಂತರ ಗರ್ಭಧಾರಣೆ ಅವಕಾಶ ಇರುವುದಿಲ್ಲ ಎಂದು ವೈದ್ಯರು ಯುವತಿಗೆ ಸ್ಪಷ್ಟಪಡಿಸಿದ್ದಾರೆ.