ಚೆನ್ನೈ(ನ.21): ಬೆಟ್ಟಿಂಗ್‌ಗೆ ಅವಕಾಶ ನೀಡುವ ಆನ್‌ಲೈನ್‌ ಗೇಮ್‌ನಿಂದಾಗಿ ಭಾರೀ ಪ್ರಮಾಣದಲ್ಲಿ ಜನರು ಸಂಕಷ್ಟಕ್ಕೀಡಾಗಿ ಆತ್ಮಹತ್ಯೆ ಮಾಡಿಕೊಳ್ಳುತ್ತಿರುವ ಬೆನ್ನಲ್ಲೇ, ಇಂಥ ಆಟಗಳಿಗೆ ತಮಿಳುನಾಡು ಸರ್ಕಾರ ನಿಷೇಧ ಹೇರಿದೆ. ಈ ಕುರಿತು ಅದು ಶುಕ್ರವಾರ ಸುಗ್ರೀವಾಜ್ಞೆ ಹೊರಡಿಸಿದೆ.

ಮುಖ್ಯಮಂತ್ರಿ ಕೆ. ಪಳನಿಸ್ವಾಮಿ ನೇತೃತ್ವದ ಸರ್ಕಾರ ಸಲ್ಲಿಸಿದ ಪ್ರಸ್ತಾವನೆ ಮೇರೆಗೆ ರಾಜ್ಯಪಾಲ ಬನ್ವರಿಲಾಲ್‌ ಪುರೋಹಿತ್‌ ಅವರು ಶುಕ್ರವಾರ ಈ ಸುಗ್ರೀವಾಜ್ಞೆ ಹೊರಡಿಸಿದರು. ಕಂಪ್ಯೂಟರ್‌ಗಳು ಅಥವಾ ಇನ್ನಿತರ ಸಂಪನ್ಮೂಲಗಳ ಮೂಲಕ ಆನ್‌ಲೈನ್‌ನಲ್ಲಿ ಬೆಟ್ಟಿಂಗ್‌ ದಂಧೆ ನಡೆಸುವವರ ಕ್ರಮಕ್ಕೆ ಈ ಸುಗ್ರೀವಾಜ್ಞೆ ಅವಕಾಶ ಕಲ್ಪಿಸಲಿದೆ ಎಂದು ರಾಜಭವನ ಹೇಳಿಕೆ ಬಿಡುಗಡೆ ಮಾಡಿದೆ.

ಬೆಟ್ಟಿಂಗ್‌ಗೆ ಅವಕಾಶ ಕಲ್ಪಿಸುವ ಆನ್‌ಲೈನ್‌ ಆಟಗಳಿಂದಾಗಿ ಇತ್ತೀಚಿನ ವರ್ಷಗಳಲ್ಲಿ ಭಾರೀ ಸಂಖ್ಯೆಯಲ್ಲಿ ಜನ ಆರ್ಥಿಕವಾಗಿ ನಷ್ಟಅನುಭವಿಸಿದ್ದರು. ಅಲ್ಲದೆ ಯುವ ಸಮೂಹ ಕೂಡಾ ಇದಕ್ಕೆ ದಾಸರಾಗುತ್ತಿರುವ ಹಲವು ಪ್ರಕರಣಗಳು ಬೆಳಕಿಗೆ ಬಂದಿತ್ತು. ಅಲ್ಲದೆ ಆರ್ಥಿಕ ನಷ್ಟಕ್ಕೆ ಗುರಿಯಾದವರು ಆತ್ಮಹತ್ಯೆಗೆ ಶರಣಾದ ಪ್ರಕರಣಗಳು ವರದಿಯಾಗಿದ್ದವು. ಅದರ ಬೆನ್ನಲ್ಲೇ ತಮಿಳುನಾಡು ಸರ್ಕಾರ ಈ ತುರ್ತು ಕ್ರಮ ಕೈಗೊಂಡಿದೆ.