ಉತ್ತರ ಪ್ರದೇಶದಲ್ಲಿ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಹಾಗೂ ಕೇಂದ್ರ ಗೃಹ ಸಚಿವ ಅಮಿತ್ ಶಾ ನಡುವೆ ಭಿನ್ನಾಭಿಪ್ರಾಯವಿದೆ ಎಂಬ ವದಂತಿಗಳು ದಟ್ಟವಾಗಿವೆ. ಕಾಗೆ ಕೂಡುವುದಕ್ಕೂ ಟೊಂಗೆ ಮುರಿಯುವುದಕ್ಕೂ ನೆವವಾದಂತೆ, ಮುಂಬರುವ ಚುನಾವಣಾ ಬೆಳವಣಿಗೆಗಳ ನಡುವೆ ಯುಪಿ ಬಿಜೆಪಿಯಲ್ಲಿ ಸೃಷ್ಟಿಯಾಗಿರುವ ಬಿಗುವಿನ ವಾತಾವರಣದ ಸಂಪೂರ್ಣ ವಿವರ ಇಲ್ಲಿದೆ.
ಉತ್ತರ ಪ್ರದೇಶದಲ್ಲಿ ಮುಂಬರುವ ಚುನಾವಣೆಯ ಹಿನ್ನೆಲೆಯಲ್ಲಿ ಕೇಂದ್ರ ನಾಯಕತ್ವ ಮತ್ತು ರಾಜ್ಯ ನಾಯಕತ್ವದ ನಡುವೆ ಭಿನ್ನಾಭಿಪ್ರಾಯಗಳಿವೆ ಎಂಬ ಚರ್ಚೆಗಳು ರಾಜಕೀಯ ವಲಯದಲ್ಲಿ ತೀವ್ರಗೊಂಡಿದ್ದವು. ಲೋಕಸಭಾ ಚುನಾವಣೆಯ ಪ್ರಚಾರದ ಸಂದರ್ಭದಲ್ಲಿ ದೆಹಲಿ ಮಾಜಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರು, ಬಿಜೆಪಿ 400ಕ್ಕೂ ಹೆಚ್ಚು ಸ್ಥಾನಗಳನ್ನು ಗೆದ್ದರೆ ಪ್ರಧಾನಿ ಮೋದಿ ಮತ್ತು ಅಮಿತ್ ಶಾ ಅವರು ಯೋಗಿ ಆದಿತ್ಯನಾಥ್ ಅವರನ್ನು ಮುಖ್ಯಮಂತ್ರಿ ಸ್ಥಾನದಿಂದ ತೆಗೆದುಹಾಕಲಿದ್ದಾರೆ ಎಂದು ಪ್ರತಿಪಾದಿಸಿದ್ದರು. ಸಮಾಜವಾದಿ ಪಕ್ಷದ ನಾಯಕ ಅಖಿಲೇಶ್ ಯಾದವ್ ಸಹ ಇದನ್ನು ಡಬಲ್ ಇಂಜಿನ್ ಸರ್ಕಾರದ ಬೋಗಿಗಳು ತಮಗೆ ತಾವೇ ಡಿಕ್ಕಿ ಹೊಡೆಯುತ್ತಿವೆ ಎಂದು ಲೇವಡಿ ಮಾಡಿದ್ದರು. ಈ ರೀತಿಯ ಅಪಪ್ರಚಾರ ಮತ್ತು ಆಂತರಿಕ ಭಿನ್ನಾಭಿಪ್ರಾಯದ ವದಂತಿಗಳು ಚುನಾವಣಾ ಫಲಿತಾಂಶದ ಮೇಲೆ ಹಾಗೂ ಪಕ್ಷದ ಚೌಕಟ್ಟಿನ ಮೇಲೆ ಪರಿಣಾಮ ಬೀರಿದವು. ಅದು ಬೇರಿ ಈ ಭಿನ್ನಾಭಿಪ್ರಾಯದ ನಡುವೆ ಈಗ ಕಾಗೆ ಕೂಡುವುದಕ್ಕೂ ಟೊಂಗೆ ಮುರಿಯುವುದಕ್ಕೂ ನೆವವಾದಂತೆ, ಆಂತರಿಕ ಸಮೀಕ್ಷೆ ಬಿಜೆಪಿಗೆ ಗೊಂದಲದ ಗೂಡಾಗಿ ನಿರ್ಮಾಣವಾಗಿದೆ.
ಲೋಕಸಭಾ ಚುನಾವಣೆಯಲ್ಲಿ!
ಕಳೆದ ಲೋಕಸಭಾ ಚುನಾವಣೆಯಲ್ಲಿ ಉತ್ತರ ಪ್ರದೇಶದಲ್ಲಿ ಬಿಜೆಪಿಗೆ ಭಾರಿ ಹಿನ್ನಡೆಯಾಯಿತು. ಕಳೆದ ಬಾರಿ 62 ಸ್ಥಾನಗಳನ್ನು ಗೆದ್ದಿದ್ದ ಬಿಜೆಪಿ ಈ ಬಾರಿ ಕೇವಲ 33 ಸ್ಥಾನಗಳಿಗೆ ಕುಸಿಯಿತು. ಈ ಸೋಲಿಗೆ ಸಂಬಂಧಿಸಿದಂತೆ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರು, ವಿರೋಧ ಪಕ್ಷಗಳು ಹಬ್ಬಿಸಿದ ಸುಳ್ಳು ಕಥನಗಳಿಗೆ (ನ್ಯಾರೇಟಿವ್) ಸೂಕ್ತವಾಗಿ ಹಾಗೂ ಸಾಮಾಜಿಕ ಮಾಧ್ಯಮಗಳಲ್ಲಿ ಸರಿಯಾದ ಸಮಯಕ್ಕೆ ಪ್ರತ್ಯುತ್ತರ ನೀಡಲು ತಮ್ಮ ಪಕ್ಷಕ್ಕೆ ಸಾಧ್ಯವಾಗಲಿಲ್ಲ ಎಂದು ಸಾರ್ವಜನಿಕವಾಗಿ ಒಪ್ಪಿಕೊಂಡಿದ್ದರು. ಅಷ್ಟೇ ಅಲ್ಲದೆ, ಅಭ್ಯರ್ಥಿಗಳ ಆಯ್ಕೆಯ ಕುರಿತಾದ ಅಸಮಾಧಾನ ಹಾಗೂ ಪ್ರಧಾನಿ ನರೇಂದ್ರ ಮೋದಿ ಮತ್ತು ರಾಜನಾಥ್ ಸಿಂಗ್ ಅವರಂತಹ ಅಗ್ರ ನಾಯಕರ ಕ್ಷೇತ್ರಗಳಲ್ಲೂ ಮತಗಳ ಪ್ರಮಾಣ ಕಡಿಮೆಯಾಗಿದ್ದು ಇಂಟರನಲ್ ಪಾಲಿಟಿಕ್ಸ್ನಲ್ಲಿ ವಿಭಿನ್ನ ಪ್ರಶ್ನೆ ಉದ್ಭವವಾಗುವಂತೆ ಮಾಡಿದ್ದವು.
ಬಿಜೆಪಿ ಆಂತರಿಕ ಸಮೀಕ್ಷೆಯ ಆಘಾತಕಾರಿ ವರದಿ!
ಇತ್ತೀಚೆಗೆ ಬಿಜೆಪಿ ನಡೆಸಿದ ಆಂತರಿಕ ಸಮೀಕ್ಷೆಯ ವರದಿಯು ಕೇಂದ್ರ ಮತ್ತು ರಾಜ್ಯ ನಾಯಕತ್ವಕ್ಕೆ ದೊಡ್ಡ ಆಘಾತ ನೀಡಿದೆ. ಉತ್ತರ ಪ್ರದೇಶದಲ್ಲಿ ಸತತ ಮೂರನೇ ಬಾರಿಗೆ ಅಧಿಕಾರಕ್ಕೆ ಬರುವುದು ಮತ್ತು ಹ್ಯಾಟ್ರಿಕ್ ಗೆಲುವು ಸಾಧಿಸುವುದು ಅಷ್ಟು ಸುಲಭವಲ್ಲ ಎಂಬ ವಿಷಯ ಸಮೀಕ್ಷೆಯಲ್ಲಿ ಸ್ಪಷ್ಟವಾಗಿದೆ. ಈ ಹಿಂದಿನ 2021 ರ ಚುನಾವಣಾ ಸಿದ್ಧತೆಗಳಿಗೆ ಹೋಲಿಸಿದರೆ ಈ ಬಾರಿ ಸಂಘಟನಾತ್ಮಕವಾಗಿ ವಿಳಂಬವಾಗಿದೆ. 2021 ರಲ್ಲಿ ಜುಲೈ ತಿಂಗಳ ವೇಳೆಗೆ ಸುನಿಲ್ ಬನ್ಸಲ್ ಮತ್ತು ಸ್ವತಂತ್ರ ದೇವ್ ಸಿಂಗ್ ಅವರ ನೇತೃತ್ವದಲ್ಲಿ ಮಂಡಲ ಹಾಗೂ ವಿಧಾನಸಭಾ ಉಸ್ತುವಾರಿಗಳ ನೇಮಕ ಪೂರ್ಣಗೊಂಡು ಕಾರ್ಯಕರ್ತರಿಗೆ ಆರು ತಿಂಗಳ ಸ್ಪಷ್ಟ ಯೋಜನೆ ನೀಡಲಾಗಿತ್ತು. ಆದರೆ ಈ ಬಾರಿ ಅಕ್ಟೋಬರ್ ತಿಂಗಳಾದರೂ ಉಸ್ತುವಾರಿಗಳ ನೇಮಕ ಪ್ರಕ್ರಿಯೆ ಪೂರ್ಣಗೊಂಡಿರಲಿಲ್ಲ.
ಕೋರ್ಸ್ ತಿದ್ದುಪಡಿ; ಅಮಿತ್ ಶಾ ಪ್ರವೇಶ ಮತ್ತು ಕಾರ್ಯಕರ್ತರಿಗೆ ಕರೆ!
ಸಮೀಕ್ಷೆಯ ವರದಿ ಬಹಿರಂಗಗೊಂಡ ನಂತರ ಬಿಜೆಪಿ ತನ್ನ ಕಾರ್ಯತಂತ್ರದಲ್ಲಿ ಮಹತ್ವದ ಕೋರ್ಸ್ ತಿದ್ದುಪಡಿ ಮಾಡಿಕೊಂಡಿದೆ. ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಉತ್ತರ ಪ್ರದೇಶ ಚುನಾವಣೆಯ ಸಂಪೂರ್ಣ ತಂತ್ರಗಾರಿಕೆಯ ಹೊಣೆಯನ್ನು ತಾವೇ ನೇರವಾಗಿ ವಹಿಸಿಕೊಳ್ಳಲು ನಿರ್ಧರಿಸಿದ್ದಾರೆ. ಲಕ್ನೋದಲ್ಲಿ ನಡೆದ ರಾಜ್ಯ ಕಾರ್ಯಕಾರಿ ಸಮಿತಿ ಸಭೆಯಲ್ಲಿ ಭಾಗವಹಿಸಿದ ಅಮಿತ್ ಶಾ, ಕಾರ್ಯಕರ್ತರು ತಮ್ಮ ಮನಸ್ಸಿನಲ್ಲಿರುವ ಎಲ್ಲ ಭಿನ್ನಾಭಿಪ್ರಾಯಗಳನ್ನು ಬದಿಗೊತ್ತಿ ಅರ್ಜುನನಿಗೆ ಪಕ್ಷಿಯ ಕಣ್ಣು ಮಾತ್ರ ಕಾಣಿಸುವಂತೆ ಪೂರ್ಣ ಗಮನಹರಿಸಿ ಬಿಜೆಪಿ ಸರ್ಕಾರವನ್ನು ಮತ್ತೆ ತರಲು ಶ್ರಮಿಸಬೇಕು ಎಂದು ಕರೆ ನೀಡಿದ್ದಾರೆ. ಈಗ ಕೇಂದ್ರದ ನಾಯಕತ್ವವು ಚುನಾವಣಾ ತಂತ್ರಗಾರಿಕೆಯ ಸಂಪೂರ್ಣ ಜವಾಬ್ದಾರಿಯನ್ನು ವಹಿಸಿಕೊಂಡಿದೆ.
ಯೋಗಿ-ಶಾ ಜಂಟಿ ನಾಯಕತ್ವ ಮತ್ತು ವಿರೋಧ ಪಕ್ಷಗಳ ಪ್ರತ್ಯುತ್ತರ!
ಮುಂಬರುವ ಚುನಾವಣೆಯಲ್ಲಿ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರ ಜನಪ್ರಿಯತೆಯನ್ನು ಪ್ರಚಾರದ ಮುಂಚೂಣಿಯಲ್ಲಿ ಬಳಸಿಕೊಳ್ಳಲು ಮತ್ತು ಅಮಿತ್ ಶಾ ಅವರ ಸಂಘಟನಾತ್ಮಕ ಕೌಶಲ್ಯವನ್ನು ಪಕ್ಷವನ್ನು ಒಂದುಗೂಡಿಸಲು ಬಳಸಿಕೊಳ್ಳಲು ನಿರ್ಧರಿಸಲಾಗಿದೆ ಎನ್ನಲಾಗಿದೆ. 2014 ರಿಂದಲೂ ಉತ್ತರ ಪ್ರದೇಶದ ಚುನಾವಣಾ ನಿರ್ವಹಣೆಯನ್ನು ನಿಭಾಯಿಸಿರುವ ಅಮಿತ್ ಶಾ ಅವರು ಸಂಘಟನೆಯನ್ನು ಬಲಪಡಿಸಲಿದ್ದಾರೆ. ಆದರೆ ಈ ಬೆಳವಣಿಗೆಗೆ ಪ್ರತಿಕ್ರಿಯಿಸಿರುವ ಅಖಿಲೇಶ್ ಯಾದವ್, "ಬಿಜೆಪಿಯ ಈ ತಂತ್ರಗಾರಿಕೆ ಮತ್ತು ನಿರ್ವಹಣೆ ಈಗ ತುಂಬಾ ತಡವಾಗಿದೆ" ಎಂದು ವ್ಯಂಗ್ಯವಾಡಿದ್ದಾರೆ. ಮುಂಬರುವ ಚುನಾವಣೆಯಲ್ಲಿ ಅಖಿಲೇಶ್ ಯಾದವ್ ಮತ್ತು ರಾಹುಲ್ ಗಾಂಧಿ ಅವರ ಜೋಡಿಗೆ ಯೋಗಿ ಹಾಗೂ ಅಮಿತ್ ಶಾ ಅವರ ಈ ತಂತ್ರ ಫಲ ನೀಡಲಿದೆಯೇ ಎಂಬುದು ಕುತೂಹಲಕಾರಿಯಾಗಿದೆ.














