ಉತ್ತರ ಪ್ರದೇಶದ ಕುಂಭಮೇಳದಲ್ಲಿ 65 ಕೋಟಿ ಜನರು ಭಾಗವಹಿಸಿದ್ದು, ಯೋಗಿ ಸರ್ಕಾರಕ್ಕೆ 4 ಲಕ್ಷ ಕೋಟಿ ರೂಪಾಯಿ ಆದಾಯ ಬಂದಿದೆ. ಇದು ಕರ್ನಾಟಕದ ಬಜೆಟ್‌ಗಿಂತಲೂ ದೊಡ್ಡದಾಗಿದೆ, ಜೊತೆಗೆ 8 ಲಕ್ಷ ಉದ್ಯೋಗಗಳನ್ನು ಸೃಷ್ಟಿಸಿದೆ.

ಜಗತ್ತಿನಲ್ಲಿ ಅತಿ ಹೆಚ್ಚು ಜನರು ಒಂದೆಡೆ ಸೇರುವ ಕಾರ್ಯಕ್ರಮ ಯಾವುದಾದರೂ ಇದ್ದರೆ ಅದು ಕುಂಭಮೇಳ, ಉತ್ತರಪ್ರದೇಶದ ಪ್ರಯಾಗರಾಜ್‌ನಲ್ಲಿ ಬುಧವಾರ ಅಂತ್ಯಗೊಂಡ ಮಹಾ ಕುಂಭಮೇಳದಲ್ಲಿ 65 ಕೋಟಿ ಜನರು ಪುಣ್ಯ ಸ್ನಾನ ಮಾಡಿರಬಹುದು. ಅದರ ಜತೆಗೇ ಉತ್ತರ ಪ್ರದೇಶ ಸರ್ಕಾರಕ್ಕೆ ಗಂಗೆಯಲ್ಲಿ ಹರಿದ ನೀರಿನಂತೆ ಭರ್ಜರಿ ಆದಾಯವೇ ಹರಿದು ಬಂದಿದೆ. 

ಯೋಗಿ ಸರ್ಕಾರಕ್ಕೆ 4 ಲಕ್ಷ ಕೋಟಿ ರು. ಆದಾಯದ ಯೋಗ ಇದು ಕರ್ನಾಟಕದ ಬಜೆಟ್‌ಗಿಂತಲೂ ಹೆಚ್ಚು
ಮಹಾಕುಂಭಮೇಳವನ್ನು ಉತ್ತರಪ್ರದೇಶ ಸರ್ಕಾರ ಆಚ್ಚುಕಟ್ಟಾಗಿ ಆಯೋಜನೆ ಮಾಡಿತ್ತು ಎಂದು ಅಸಂಖ್ಯಾತ ಜನರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಆ ಅಚ್ಚುಕಟ್ಟು ವ್ಯವಸ್ಥೆಗಾಗಿ ರಾಜ್ಯ ಸರ್ಕಾರ ವೆಚ್ಚ ಮಾಡಿದು ಬರೋಬ್ಬರಿ 7500 ಕೋಟಿ ರುಪಾಯಿ. ಇದೊಂದು ರೀತಿಯ ಹೂಡಿಕೆಯಂತಾಯ್ತು. ಆ ಹೂಡಿಕೆಯಿಂದ ಸರ್ಕಾರಕ್ಕೆ ಅಂದಾಜು 3 ಲಕ್ಷ ಕೋಟಿ ರು. ಆದಾಯ ಬಂದಿದೆ. ಕರ್ನಾಟಕ ಸರ್ಕಾರದ ಕಳೆದ ವರ್ಷ ಮಂಡನೆ ಮಾಡಿದ ಇಡೀ ವರ್ಷದ ಆಯವ್ಯಯ ಗಾತ್ರ 3.47 ಲಕ್ಷ ಕೋಟಿ ರುಪಾಯಿ, ಅದಕ್ಕಿಂತ ಹೆಚ್ಚು ಆದಾಯ 45 ದಿನಗಳ ಉತ್ಸವದಿಂದ ಯೋಗಿ ಸರ್ಕಾರಕ್ಕೆ ಹರಿದು ಬಂದಿದೆ! 

8 ಲಕ್ಷ ಮಂದಿಗೆ ಕೆಲಸ: ಬೈಕರ್‌ಗಳಿಗೆ ಭರ್ಜರಿ ಬಿಸಿನೆಸ್, ಮೊನಾಲಿಸಾಗೆ ಹೊಸ ಲೈಫ್ 
ಕುಂಭಮೇಳದಿಂದ ಆದಾಯದ ಜತೆಗೆ ಉತ್ತರ ಪ್ರದೇಶದಲ್ಲಿ 8 ಲಕ್ಷ ಉದ್ಯೋಗ ಸೃಷ್ಟಿಯಾದ ಅಂದಾಜಿದೆ. ಆಹಾರ, ವಸತಿ, ಪ್ರವಾಸೋದ್ಯಮ ಕ್ಷೇತ್ರಕ್ಕೆ ಭಾರಿ ಅನುಕೂಲವಾಗಿದೆ. ಅತ್ಯಂತ ವಿಶಾಲ ಪ್ರದೇಶದಲ್ಲಿ ಹರಡಿಕೊಂಡಿದ ಮಹಾಕುಂಭಪ್ರದೇಶದಲ್ಲಿ ಓಡಾಡುವುದೇ ತ್ರಾಸದಾಯಕವಾಗಿತ್ತು. ಅಂತಹ ವೇಳೆ ಬೈಕ್ ಹೊಂದಿದ್ದ ಯುವಕರು ಜನರನ್ನು ಅತ್ತಿಂದ ಇತ್ತ ಸಾಗಣೆ ಮಾಡಿ ಭರ್ಜರಿ ಆದಾಯವನ್ನೂ ಸಂಪಾದನೆ ಮಾಡಿಕೊಂಡಿದು ವಿಶೇಷ, ಮಧ್ಯಪ್ರದೇಶದಿಂದ ರುದ್ರಾಕ್ಷಿ ಮಾರಲು ಬಂದ ಮೊನಾಲಿಸಾ ಜಗದ್ದಿಖ್ಯಾತವಾಗಿ ಸಿನಿಮಾದಲ್ಲಿ ನಟಿಸುವಷ್ಟರ ಮಟ್ಟಿಗೆ ಆಕೆಯ ಜೀವನವನ್ನೇ ಈ ಕುಂಭಮೇಳ ಬದಲಿಸಿದ್ದೂ ವಿಶೇಷ.

ಅಂಗಡಿಗಳಿಗೆ 2 ತಿಂಗಳಲ್ಲೇ ಒಂದು ವರ್ಷದ ವ್ಯಾಪಾರ 
ಸಣ್ಣ ಅಂಗಡಿಗಳು, ದಿನಸಿ ಅಂಗಡಿಗಳು, ವಿಶೇಷವಾಗಿ ಬಟ್ಟೆ ಉದ್ಯಮಕ್ಕೆ ಕುಂಭಮೇಳ ಬೂಸ್ಟರ್ ಆಗಿದೆ. ಭಾರತೀಯ ಕೈಗಾರಿಕೆಗಳ ಒಕ್ಕೂಟದ ಪ್ರಕಾರ 1 ವರ್ಷದಲ್ಲಿ ಆಗುತ್ತಿದ್ದ ವ್ಯಾಪಾರವು ಕೇವಲ 2 ತಿಂಗಳಲ್ಲೇ ಆಗಿದೆ. ಇದು ಜನರಿಗೆ ಅಧಿಕ ಪ್ರಮಾಣದಲ್ಲಿ ಲಾಭ ತಂದುಕೊಟ್ಟಿದೆ. 

59 ಲಕ್ಷ ಜನರ ಊರಿಗೆ ಬಂದಿದ್ದು 65 ಕೋಟಿ ಜನ 
ಪ್ರಯಾಗರಾಜ ಎಂಬುದು ಉತ್ತರಪ್ರದೇಶದ ಪೌರಾಣಿಕ ಇತಿಹಾಸ ಹೊಂದಿರುವ ನಗರ. ಈ ನಗರದ ಒಟ್ಟು ಜನಸಂಖ್ಯೆ 59 ಲಕ್ಷ. ಆದರೆ 45 ದಿನಗಳಲ್ಲಿ ಈ ನಗರ 65 ಕೋಟಿ ಜನರಿಗೆ ಆತಿಥ್ಯ ವಹಿಸಿದೆ. ಕುಂಭಮೇಳದಿಂದ ಅದರ ಮೂಲಸೌಕರ್ಯ ಕೂಡ ಬದಲಾವಣೆ ಕಂಡಿದೆ. 

ಬಂದ ಜನರನ್ನು ಲೆಕ್ಕ ಹಾಕಿದ್ದು ಎಐ ಕೆಮೆರಾ 
ಕುಂಭಮೇಳಕ್ಕೆ 65 ಕೋಟಿ ಜನರು ಬಂದಿದ್ದಾರೆ ಎಂದು ಉತ್ತರಪ್ರದೇಶ ಸರ್ಕಾರ ಹೇಳುತ್ತಿದೆ. ಅದಕ್ಕೆ ಹೆಚ್ಚಾಗಿ ಅವಲಂಬಿಸಿದ್ದು 1700 ಎಐ ಕ್ಯಾಮೆರಾಗಳನ್ನು, ಇಷ್ಟೊಂದು ಎಐ ಕ್ಯಾಮೆರಾ ಬಳಸಿದ್ದು ವಿಶ್ವದಲ್ಲಿ ಇದೇ ಮೊದಲು.

ವಿಶ್ವದ ಅತಿದೊಡ್ಡ ತಾತ್ಕಾಲಿಕ ಜಿಲ್ಲೆ ಮಹಾಕುಂಭನಗರ 1 ತಿಂಗಳಲ್ಲಿ ತೆರವು
ಐತಿಹಾಸಿಕ ಮಹಾಕುಂಭಮೇಳಕ್ಕಾಗಿ ಉತ್ತರಪ್ರದೇಶ ಸರ್ಕಾರ ಮಹಾಕುಂಭನಗರ ಎಂಬ ತಾತ್ಕಾಲಿಕ ಜಿಲ್ಲೆಯನ್ನೇ ಸೃಷ್ಟಿ ಮಾಡಿತ್ತು. ಇದು ವಿಶ್ವದ ಅತ್ಯಂತ ಜನನಿಬಿಡ ಹಾಗೂ ಬೃಹತ್ ಗಾತ್ರದ ತಾತ್ಕಾಲಿಕ ಜಿಲ್ಲೆ ಎಂಬ ಅಭಿದಾನಕ್ಕೆ ಪಾತ್ರವಾಗಿತ್ತು. ಈಗ ಕುಂಭಮೇಳ ಮುಗಿದಿರುವ ಹಿನ್ನೆಲೆಯಲ್ಲಿ ಅದನ್ನು ತೆರವುಗೊಳಿಸಲಾಗುತ್ತದೆ. ಆ ಕಾರ್ಯ ಮಾಡಲು ಬರೋಬ್ಬರಿ 1 ತಿಂಗಳಷ್ಟು ಸುದೀರ್ಘ ಸಮಯ ಹಿಡಿಯಲಿದೆ! ಗಂಗಾ, ಯಮುನಾ ನದಿಯ ಮರಳು ದಂಡೆಯ ಮೇಲಿರುವ 10 ಸಾವಿರ ಎಕರೆ ಪ್ರದೇಶದಲ್ಲಿ ತಾತ್ಕಾಲಿಕವಾಗಿ ತಲೆ ಎತ್ತಿದ ವ್ಯವಸ್ಥೆಯೇ ಮಹಾಕುಂಭನಗರ, 3 ತಿಂಗಳ ಅವಧಿಯಲ್ಲಿ ನಿರ್ಮಾಣವಾದ ಉತ್ತರಪ್ರದೇಶದ 76ನೇ ಜಿಲ್ಲೆ, ಪ್ರತ್ಯೇಕವಾದ ವಿದ್ಯುತ್, ನೀರು ವಿತರಣೆ, ಸಾರ್ವಜನಿಕ ಸಾರಿಗೆ ವ್ಯವಸ್ಥೆ, ಜಿಲ್ಲಾಧಿಕಾರಿ, ಎಸ್ಪಿ, 5 ಪೊಲೀಸ್ ಠಾಣೆಗಳನ್ನು ಹೊಂದಿತ್ತು. 65 ಕೋಟಿ ಜನರು ಭೇಟಿ ನೀಡಿದ್ದು ಇದೇ ನಗರಕ್ಕೆ. ಸದ್ಯದಲ್ಲೇ ಈ ನಗರವನ್ನು ಬೃಹತ್ ಗಾತ್ರದ ಯಂತ್ರಗಳ ಸಹಾಯದಿಂದ ತೆರವುಗೊಳಿಸಲಾಗುತ್ತದೆ. ಈ ನಗರದಲ್ಲಿ 30 ಪಂಟೂನ್ ಸೇತುವೆಗಳು, 400 ಕಿ.ಮೀ. ಉದ್ದದ ತಾತ್ಕಾಲಿಕ ರಸ್ತೆ ಜಾಲವೂ ಇದೆ.