ಉತ್ತರ ಪ್ರದೇಶದಲ್ಲಿ ಪೆಟ್ರೋಲ್, ಡೀಸೆಲ್ ಅಗ್ಗ: VAT ಇಳಿಸುವ ಬಗ್ಗೆ ಯೋಗಿ ಸಭೆ!
* ಪೆಟ್ರೋಲ್, ಡೀಸೆಲ್ ಬೆಲೆ ಏರಿಕೆಯಿಂದ ರಾಜ್ಯದ ಜನತೆಗೆ ಪರಿಹಾರ
* ಉತ್ತರ ಪ್ರದೇಶ ಚುನಾವಣಾ ಹೊಸ್ತಿಲಲ್ಲಿ ಸಿಎಂ ಯೋಗಿ ಮಹತ್ವದ ಸಭೆ
* ಇಳಿಕೆಯಾಗುತ್ತಾ ಪೆಟ್ರೋಲ್, ಡೀಸೆಲ್ ದರ
ಲಕ್ನೋ(ಅ.28): ಪೆಟ್ರೋಲ್(Petrol), ಡೀಸೆಲ್(Diesel) ಬೆಲೆ ಏರಿಕೆಯಿಂದ ರಾಜ್ಯದ ಜನತೆಗೆ ಪರಿಹಾರ ನೀಡುವ ನಿಟ್ಟಿನಲ್ಲಿ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್(Chief Minister Yogi Adityanath) ಗುರುವಾರ ಸಂಜೆ 5.30ಕ್ಕೆ ಅಧಿಕೃತ ನಿವಾಸದಲ್ಲಿ ಮಹತ್ವದ ಸಭೆ ಕರೆದಿದ್ದಾರೆ. ಸಿಕ್ಕಿರುವ ಮಾಹಿತಿ ಪ್ರಕಾರ ರಾಜ್ಯದಲ್ಲಿ ಪೆಟ್ರೋಲ್ ಮತ್ತು ಡೀಸೆಲ್ ಮೇಲೆ ವಿಧಿಸಿರುವ ವ್ಯಾಟ್(VAT) ಬಗ್ಗೆ ಈ ಸಭೆಯಲ್ಲಿ ಚರ್ಚೆ ನಡೆಸಬಹುದು. ಸಭೆಯಲ್ಲಿ ವ್ಯಾಟ್ ಕಡಿತಗೊಳಿಸುವಾಗ ಹೆಚ್ಚಿದ ಪೆಟ್ರೋಲ್ ಮತ್ತು ಡೀಸೆಲ್ ಬೆಲೆಯಲ್ಲಿ ಸಾಮಾನ್ಯ ಜನರಿಗೆ ಪರಿಹಾರ ನೀಡಲು ನಿರ್ಧರಿಸಬಹುದು. ಸದ್ಯ ರಾಜ್ಯದಲ್ಲಿ ಪೆಟ್ರೋಲ್ ಬೆಲೆ 100 ರೂ.ಗಿಂತ ಹೆಚ್ಚು ಮಾರಾಟವಾಗುತ್ತಿದ್ದು, ಡೀಸೆಲ್ ಕೂಡ ಶತಕದ ಸಮೀಪದಲ್ಲಿದೆ ಎಂಬುವುದು ಉಲ್ಲೇಖನೀಯ. ಮುಂದಿನ ವರ್ಷ ಉತ್ತರ ಪ್ರದೇಶ ವಿಧಾನಸಭಾ ಚುನಾವಣೆ ನಡೆಯಲಿದ್ದು, ಯೋಗಿ ಸರ್ಕಾರ ವ್ಯಾಟ್ ದರ ಕಡಿತಗೊಳಿಸುವ ಮೂಲಕ ರಾಜ್ಯದ ಜನತೆಗೆ ಕೊಂಚ ನೆಮ್ಮದಿ ನೀಡುವ ಸಾಧ್ಯತೆ ಇದೆ ಎನ್ನಲಾಗಿದೆ.
ನಾವು ಗುರುವಾರ ಉತ್ತರ ಪ್ರದೇಶದಲ್ಲಿ ಪೆಟ್ರೋಲ್ ಬೆಲೆ ಹೇಗಿದೆ ಎಂದು ನೋಡುವುದಾದರೆ, ಲೀಟರ್‌ಗೆ 105 ರೂ ಹಾಗೂ ಡೀಸೆಲ್ ಲೀಟರ್‌ಗೆ 97.48 ರೂ.ಗೆ ಮಾರಾಟವಾಗುತ್ತಿದೆ. ಸರ್ಕಾರ ವ್ಯಾಟ್ ದರವನ್ನು ಕಡಿತಗೊಳಿಸಿದರೆ, ಡೀಸೆಲ್ ಪೆಟ್ರೋಲ್ ಬೆಲೆಯಲ್ಲಿ ಸ್ವಲ್ಪ ಇಳಿಕೆಯಾಗಬಹುದು. ಮತ್ತೊಂದೆಡೆ, ಮಂಗಳವಾರ ಕೇಂದ್ರ ಪೆಟ್ರೋಲಿಯಂ ಸಚಿವ ಹರ್ದೀಪ್ ಸಿಂಗ್ ಪುರಿ ಅವರು ಪೆಟ್ರೋಲ್ ಮತ್ತು ಡೀಸೆಲ್ ಬೆಲೆಯನ್ನು ಕಡಿಮೆ ಮಾಡಲು ಸರ್ಕಾರ ಪ್ರಯತ್ನಿಸುತ್ತಿದೆ ಎಂದು ಹೇಳಿದ್ದಾರೆ. ಸೌದಿ ಅರೇಬಿಯಾ, ಗಲ್ಫ್ ರಾಷ್ಟ್ರಗಳು ಮತ್ತು ರಷ್ಯಾದೊಂದಿಗೆ ಸರ್ಕಾರದ ಮಾತುಕತೆ ನಡೆಯುತ್ತಿದೆ ಎಂದು ಅವರು ಹೇಳಿದ್ದಾರೆ.
ಕಾಳಧನ ಮತ್ತು ಬ್ಲಾಕ್ ಮಾರ್ಕೆಟಿಂಗ್ ಕಡಿವಾಣ
ಇಂದು ಮುಖ್ಯಮಂತ್ರಿಗಳ ನಿವಾಸದಲ್ಲಿ ನಡೆಯಲಿರುವ ಸಭೆಗೆ ಹಣಕಾಸು ಇಲಾಖೆಯ ಅಧಿಕಾರಿಗಳು ಕೂಡ ಆಗಮಿಸಲಿದ್ದಾರೆ. ಸಿಕ್ಕಿರುವ ಮಾಹಿತಿಯ ಪ್ರಕಾರ ಕಾಳಧನ ಮತ್ತು ಬ್ಲಾಕ್ ಮಾರ್ಕೆಟಿಂಗ್ ತಡೆಯಲು ಪ್ರಮುಖ ನಿರ್ಧಾರಗಳನ್ನೂ ತೆಗೆದುಕೊಳ್ಳಬಹುದು. ಹಬ್ಬದ ಸಂದರ್ಭದಲ್ಲಿ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರು ಖಾದ್ಯ ತೈಲಗಳ ಬೆಲೆ ಏರಿಕೆ, ತರಕಾರಿಗಳ ಬೆಲೆಗೆ ಕಡಿವಾಣ ಮುಂತಾದ ಎಲ್ಲಾ ವಿಷಯಗಳ ಬಗ್ಗೆ ಅಧಿಕಾರಿಗಳಿಗೆ ಹೆಚ್ಚಿನ ಸೂಚನೆಗಳನ್ನು ನೀಡಬಹುದು. ಇಂದು ಮುಂಜಾನೆ ತಂಡ 09ರ ಸಭೆಯಲ್ಲಿ ಡೀಸೆಲ್, ಪೆಟ್ರೋಲ್ ಬೆಲೆ ಮತ್ತು ಹಣದುಬ್ಬರ ವಿಷಯದ ಬಗ್ಗೆಯೂ ಅಧಿಕಾರಿಗಳಿಗೆ ಸಿಎಂ ಸೂಚನೆ ನೀಡಿದ್ದಾರೆ.
ಪೆಟ್ರೋಲ್ ಲೀಟರ್‌ಗೆ 150 ರೂ
ಮತ್ತೊಂದೆಡೆ, ತಜ್ಞರು ಹೇಳುವ ಅನ್ವಯ, ಮುಂದಿನ ದಿನಗಳಲ್ಲಿ, ದೇಶದ ಅನೇಕ ರಾಜ್ಯಗಳಲ್ಲಿ ಪೆಟ್ರೋಲ್ ಬೆಲೆ ಲೀಟರ್‌ಗೆ 150 ರೂ. ಆಗಬಹುದು. ವಾಸ್ತವವಾಗಿ, ಜಾಗತಿಕ ಮಾರುಕಟ್ಟೆಯಲ್ಲಿ ಕಚ್ಚಾ ತೈಲದ ಬೆಲೆ ಹೆಚ್ಚುತ್ತಿರುವ ರೀತಿಯಲ್ಲಿ, ಅಂತಹ ಪರಿಸ್ಥಿತಿಯಲ್ಲಿ, ತೈಲ ಬೆಲೆಯಲ್ಲಿ ಇಳಿಕೆಯ ನಿರೀಕ್ಷೆಗಳು ಸಹ ಕಡಿಮೆಯಾಗುತ್ತಿವೆ. ಇನ್ನು ಮಧ್ಯಪ್ರದೇಶದ ಬಗ್ಗೆ ಹೇಳುವುದಾದರೆ, ಇಲ್ಲಿನ ಗಡಿಭಾಗದ ಅನುಪ್ಪುರ್ ಜಿಲ್ಲೆಯಲ್ಲಿ ಪೆಟ್ರೋಲ್ ಬೆಲೆ ಲೀಟರ್‌ಗೆ 120 ರೂಪಾಯಿ ದಾಟಿದ್ದು, ಡೀಸೆಲ್ ಬೆಲೆ ಲೀಟರ್‌ಗೆ 110 ರೂಪಾಯಿ ತಲುಪಿದೆ.
ಕರ್ನಾಟಕದಲ್ಲೂ ಪೆಟ್ರೋಲ್, ಡೀಸೆಲ್ ದರ ಇಳಿಕೆಗೆ ಚಿಂತನೆ?
ರಾಜ್ಯದ ಹಣಕಾಸು ಪರಿಸ್ಥಿತಿಯನ್ನು ನೋಡಿಕೊಂಡು ಪೆಟ್ರೋಲ್(Petrol) ಡೀಸೆಲ್(Diesel) ಮೇಲಿನ ಮೇಲಿನ ಸುಂಕ ಇಳಿಕೆ ಮಾಡುವ ಕುರಿತು ನಿರ್ಧಾರ ಮಾಡಲಾಗುವುದು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ(Chief Minister Basavaraj Bommai) ಹೇಳಿದ್ದಾರೆ.
ತೈಲದ ಮೇಲಿನ ಸುಂಕ ಕಡಿಮೆ ಮಾಡುವ ನಿರ್ಧಾರ ಏಕಾಏಕಿ ತೆಗೆದುಕೊಳ್ಳಲು ಸಾಧ್ಯವಿಲ್ಲ. ಹಣಕಾಸು ಸ್ಥಿತಿಗತಿ, ಆದಾಯದ ಪ್ರಮಾಣ ಎಲ್ಲವನ್ನೂ ನೋಡಿಕೊಂಡು ನಿರ್ಧರಿಸಬೇಕಾಗುತ್ತದೆ. ಹೀಗಾಗಿ ಸರ್ಕಾರವು ರಾಜ್ಯದ ಹಣಕಾಸು ಸ್ಥಿತಿಯನ್ನು ನೋಡಿಕೊಂಡು ಬಳಿಕ ಸೂಕ್ತ ನಿರ್ಧಾರ ಮಾಡಲಿದೆ ಎಂದು ಹೇಳಿದ್ದಾರೆ
ರಾಜ್ಯದಲ್ಲಿ ಪೆಟ್ರೋಲ್ ಬೆಲೆ ಈಗಾಗಲೇ 110 ರು. ಸಮೀಪಿಸಿದ್ದು, ಡೀಸೆಲ್ ಬೆಲೆ ಹಲವೆಡೆ 100 ರು. ದಾಟಿದೆ. ಹೀಗಾಗಿ ಜನಾಕ್ರೋಶ ವ್ಯಕ್ತವಾಗುತ್ತಿದೆ. ಇದರ ಬೆನ್ನಲ್ಲೇ ಮುಖ್ಯಮಂತ್ರಿಗಳ ಈ ಹೇಳಿಕೆ ಬಂದಿದೆ.