Assembly Elections 2022| ಪಂಚರಾಜ್ಯ ಪೈಕಿ 4ರಲ್ಲಿ ಬಿಜೆಪಿಗೇ ಚಾನ್ಸ್‌: ಸಿ ವೋಟರ್‌ ಸಮೀಕ್ಷೆ!

* ಉತ್ತರಪ್ರದೇಶದಲ್ಲಿ ಬಿಜೆಪಿಗೆ ಎಸ್‌ಪಿ ಭರ್ಜರಿ ಪೈಪೋಟಿ

* ಪಂಜಾಬ್‌ನಲ್ಲಿ ಆಪ್‌ ಅತಿದೊಡ್ಡ ಪಕ್ಷ ಸಂಭವ: ಸಮೀಕ್ಷೆ

* ಪಂಚರಾಜ್ಯ ಪೈಕಿ 4ರಲ್ಲಿ ಬಿಜೆಪಿಗೇ ಚಾನ್ಸ್‌

* ಗೋವಾದಲ್ಲಿ ಮೊದಲ ಬಾರಿಗೆ ಆಪ್‌ ಖಾತೆ ತೆರೆವ ಸಾಧ್ಯತೆ

* ಉತ್ತರಾಖಂಡ, ಮಣಿಪುರದಲ್ಲೂ ಬಿಜೆಪಿ: ಸಿ ವೋಟರ್‌

UP Elections BJP to retain UP with reduced margin AAP Congress to battle in Punjab CVoter survey pod

ನವದೆಹಲಿ(ನ.14): 2022ರ ಆರಂಭದಲ್ಲಿ ನಡೆಯಲಿರುವ ಪಂಚರಾಜ್ಯಗಳ ಚುನಾವಣೆ (Five State Elections) ಪೈಕಿ ಬಿಜೆಪಿ ಉತ್ತರಪ್ರದೇಶ ಸೇರಿ ನಾಲ್ಕು ರಾಜ್ಯಗಳಲ್ಲಿ ಮತ್ತೊಮ್ಮೆ ಅಧಿಕಾರಕ್ಕೆ ಏರುವ ಸಾಧ್ಯತೆ ಇದೆ ಎಂದು ಚುನಾವಣಾಪೂರ್ವ ಸಮೀಕ್ಷೆಯೊಂದು (Pre-poll survey) ಭವಿಷ್ಯ ನುಡಿದಿದೆ. ಉತ್ತರಪ್ರದೇಶ, ಉತ್ತರಾಖಂಡ, ಮಣಿಪುರ ಹಾಗೂ ಗೋವಾದಲ್ಲಿ ಬಿಜೆಪಿ ಅಧಿಕಾರ ಉಳಿಸಿಕೊಳ್ಳುವ ಸಂಭವವಿದೆ. ಆದರೆ ಪಂಜಾಬ್‌ನಲ್ಲಿ ಶೂನ್ಯ ಸಂಪಾದನೆ ಮಾಡುವ ನಿರೀಕ್ಷೆ ಇದೆ ಎಂದು ಎಬಿಪಿ ನ್ಯೂಸ್‌ ಹಾಗೂ ಸಿ-ವೋಟರ್‌ (ABP-CVoter Survey) ನಡೆಸಿರುವ ಸಮೀಕ್ಷೆ ತಿಳಿಸಿದೆ.

ಉತ್ತರಪ್ರದೇಶ ಮತ್ತೆ ಬಿಜೆಪಿ ವಶ

403 ಸದಸ್ಯ ಬಲದ ಉತ್ತರಪ್ರದೇಶ (Uttar Pradesh) ವಿಧಾನಸಭೆಯಲ್ಲಿ ಬಹುಮತಕ್ಕೆ 202 ಸ್ಥಾನಗಳು ಬೇಕು. 2017ರಲ್ಲಿ ಬಿಜೆಪಿ 312 ಸ್ಥಾನಗಳನ್ನು ಗೆದ್ದು ಐತಿಹಾಸಿಕ ಭರ್ಜರಿ ಬಹುಮತ ಗಳಿಸಿತ್ತು. ಆದರೆ ಈ ಬಾರಿ ಬಿಜೆಪಿ (BJP) 108 ಸ್ಥಾನಗಳನ್ನು ಕಳೆದುಕೊಳ್ಳುವ ನಿರೀಕ್ಷೆ ಇದೆ. ಆದರೂ ಬಿಜೆಪಿ ಹಾಗೂ ಮಿತ್ರ ಪಕ್ಷಗಳು 217 ಸ್ಥಾನಗಳನ್ನು ಗಳಿಸುವ ಸಾಧ್ಯತೆ ಇದೆ. ಸಮಾಜವಾದಿ ಪಕ್ಷ ಪುಟಿದೆದ್ದಿದ್ದು 156 ಸ್ಥಾನ ಗಳಿಸುವ ಸಾಧ್ಯತೆ ಇದ್ದರೆ, ಬಿಎಸ್ಪಿ 18 ಹಾಗೂ ಕಾಂಗ್ರೆಸ್‌ ಕೇವಲ 8 ಸ್ಥಾನಕ್ಕೆ ತೃಪ್ತಿಪಟ್ಟುಕೊಳ್ಳಬೇಕಾಗಬಹುದು.

ಪಂಜಾಬ್‌ನಲ್ಲಿ ಆಪ್‌:

117 ಸದಸ್ಯ ಬಲದ ಪಂಜಾಬ್‌ ವಿಧಾನಸಭೆಯಲ್ಲಿ ಬಹುಮತಕ್ಕೆ 59 ಸ್ಥಾನಗಳು ಬೇಕು. 2017ರಲ್ಲಿ ಕ್ಯಾಪ್ಟನ್‌ ಅಮರೀಂದರ್‌ ಸಿಂಗ್‌ (Amarinder Singh) ನೇತೃತ್ವದಲ್ಲಿ ಕಾಂಗ್ರೆಸ್‌ 77 ಸ್ಥಾನ ಗೆದ್ದಿತ್ತು. ಆದರೆ ಈ ಬಾರಿ ಕಾಂಗ್ರೆಸ್‌ 46 ಸ್ಥಾನಗಳಿಗೆ ತೃಪ್ತಿಪಟ್ಟುಕೊಳ್ಳುವ ನಿರೀಕ್ಷೆ ಇದೆ. ಆದರೆ ಆಮ್‌ ಆದ್ಮಿ ಪಕ್ಷ 51 ಸ್ಥಾನಗಳನ್ನು ಗೆದ್ದು ಅತಿದೊಡ್ಡ ಪಕ್ಷವಾಗಿ ಹೊರಹೊಮ್ಮುವ ನಿರೀಕ್ಷೆ ಇದೆ. ಅಕಾಲಿ ದಳ 20 ಸ್ಥಾನ ಗಳಿಸುವ ಸಾಧ್ಯತೆ ಇದ್ದರೆ, ಬಿಜೆಪಿ ಶೂನ್ಯ ಸಂಪಾದನೆ ಮಾಡಲಿದೆ ಎಂದು ಸಮೀಕ್ಷೆ ತಿಳಿಸಿದೆ.

ಉತ್ತರಾಖಂಡ ಬಿಜೆಪಿಗೆ:

70 ಸದಸ್ಯ ಬಲದ ಉತ್ತರಾಖಂಡ ವಿಧಾನಸಭೆಯಲ್ಲಿ ಬಹುಮತಕ್ಕೆ 36 ಸ್ಥಾನಗಳ ಅಗತ್ಯವಿದೆ. ಕಳೆದ ಬಾರಿ 57 ಸ್ಥಾನ ಗಳಿಸಿದ್ದ ಬಿಜೆಪಿ ತನ್ನ ಆಳ್ವಿಕೆಯಲ್ಲಿ ಮೂವರು ಮುಖ್ಯಮಂತ್ರಿಗಳನ್ನು ನೀಡಿದ ಹೊರತಾಗಿಯೂ ಈ ಬಾರಿ 38 ಸ್ಥಾನ ಗೆದ್ದು ಬಹುಮತ ಗಳಿಸಲಿದೆ. ಆ ಪಕ್ಷಕ್ಕೆ ಕಾಂಗ್ರೆಸ್ಸಿನಿಂದ ತೀವ್ರ ಪೈಪೋಟಿ ಇದ್ದು 32 ಸ್ಥಾನಗಳನ್ನು ಗಳಿಸಲಿದೆ.

ಗೋವಾ ಬಿಜೆಪಿಗೆ:

40 ಶಾಸಕ ಬಲದ ಗೋವಾ ವಿಧಾನಸಭೆಯಲ್ಲಿ ಬಹುಮತಕ್ಕೆ 21 ಸ್ಥಾನ ಬೇಕು. 2017ರಲ್ಲಿ ಕೇವಲ 13 ಸ್ಥಾನ ಗೆದ್ದರೂ ಮಿತ್ರ ಪಕ್ಷಗಳ ಸಹಾಯದಿಂದ ರಾಜಕೀಯ ತಂತ್ರಗಾರಿಕೆ ಮೆರೆದು ಅಧಿಕಾರಕ್ಕೇರುವ ಮೂಲಕ ಕಾಂಗ್ರೆಸ್ಸಿಗೆ ಬಿಜೆಪಿ ಚಳ್ಳೆ ಹಣ್ಣು ತಿನ್ನಿಸಿತ್ತು. ಆದರೆ ಈ ಬಾರಿ ಬಿಜೆಪಿ 21 ಸ್ಥಾನ ಗಳಿಸುವ ನಿರೀಕ್ಷೆ ಇದೆ. 5 ಸ್ಥಾನ ಗೆದ್ದು ಆಪ್‌ ಇದೇ ಮೊದಲ ಬಾರಿಗೆ ಖಾತೆ ತೆರೆಯುವ ಸಾಧ್ಯತೆ ಇದೆ. ಕಾಂಗ್ರೆಸ್‌ ಕೇವಲ 4 ಸೀಟು ಗಳಿಸಿ ಮೂರನೇ ಸ್ಥಾನಕ್ಕೆ ಜಾರಲಿದೆ ಎಂದು ಸಿ-ವೋಟರ್‌ ಭವಿಷ್ಯ ಹೇಳಿದೆ.

ಮಣಿಪುರ ಮತ್ತೆ ಬಿಜೆಪಿಗೆ:

60 ಸದಸ್ಯ ಬಲದ ಮಣಿಪುರ ವಿಧಾನಸಭೆಯಲ್ಲಿ ಬಹುಮತಕ್ಕೆ 31 ಸ್ಥಾನಗಳ ಅಗತ್ಯವಿದೆ. ಕಳೆದ ಬಾರಿ ಕೇವಲ 21 ಸ್ಥಾನ ಗೆದ್ದರೂ ಬಿಜೆಪಿ ಇತರೆ ಪಕ್ಷಗಳ ಸಹಾಯದಿಂದ ಅಧಿಕಾರಕ್ಕೇರಿತ್ತು. ಈ ಬಾರಿ 29ರವರೆಗೂ ಬಿಜೆಪಿ ಸ್ಥಾನ ಗಳಿಸಲಿದೆ. ಕಾಂಗ್ರೆಸ್ಸಿನಿಂದ ತುರುಸಿನ ಪೈಪೋಟಿ ಇದ್ದು, 24 ಸ್ಥಾನ ಗಳಿಸುವ ಸಂಭವ ಇದೆ ಎಂದು ಸಿ-ವೋಟರ್‌ ತಿಳಿಸಿದೆ.

Latest Videos
Follow Us:
Download App:
  • android
  • ios