ಬೋಳುತಲೆಯ ಕಾರಣಕ್ಕೆ ಮುರಿದುಬಿದ್ದ ಮದುವೆ ಉತ್ತರಪ್ರದೇಶದ ಇತ್ವಾಹ್‌ನಲ್ಲಿ ಘಟನೆ ಹೂ ಹಾರ ಹಾಕುವ ವೇಳೆ ವಿಗ್‌ ಧರಿಸಿದ್ದು ಬಯಲು  

ಇತ್ವಾಹ್‌(ಫೆ.25): ವರ ವಿಗ್‌ ಧರಿಸಿದ ಕಾರಣಕ್ಕೆ ಮದುವೆ ಮುರಿದು ಬಿದ್ದ ಘಟನೆ ಉತ್ತರಪ್ರದೇಶದ(Uttar Pradesh) ಇತ್ವಾಹ್‌ನಲ್ಲಿ (Etawah) ನಡೆದಿದೆ. ನಾಟಕ, ರಹಸ್ಯ ಹಾಗೂ ದುರಂತದಿಂದಾಗಿ ಕೆಲವು ಭಾರತೀಯ ಮದುವೆಗಳು ಯಾವುದೇ ಸಿನಿಮಾ ಕತೆಗಿಂತ ಕಡಿಮೆ ಇರುವುದಿಲ್ಲ. ಹಾಗೆಯೇ ಇಲ್ಲೊಂದು ಕಡೆ ಮದುವೆ ದಿನ ವಧುವಿಗೆ ತಾನು ಮದುವೆಯಾಗುತ್ತಿರುವ ಹುಡುಗನ ತಲೆಯಲ್ಲಿ ಕೂದಲಿಲ್ಲ ಆತ ವಿಗ್‌ ಧರಿಸಿದ್ದಾನೆ ಎನ್ನುವುದು ಗೊತ್ತಾಗಿದ್ದು, ಆಕೆ ಮಂಟಪದಲ್ಲೇ ತಲೆ ತಿರುಗಿ ಬಿದ್ದಿದ್ದಾಳೆ. 

ಈ ನೈಜ ಘಟನೆ ನಿಮಗೆ ಆಯುಷ್ಮಾನ್‌ ಖುರಾನ (Ayushmann Khurrana) ನಟನೆಯ 2019ರಲ್ಲಿ ತೆರೆ ಕಂಡ ಸಿನಿಮಾ ಬಾಲವನ್ನು ನೆನಪು ಮಾಡದಿರದು. ಇದರಲ್ಲಿ ವ್ಯಕ್ತಿಯೊಬ್ಬನಿಗೆ ತನ್ನ ವಯಸ್ಸಿಗೂ ಮೊದಲೇ ಕೂದಲೆಲ್ಲಾ ಉದುರಿ ತಲೆ ಬೋಳಾಗಿರುತ್ತದೆ. ಆದರೆ ಆತ ವಿವಾಹವಾಗುವ ಸಲುವಾಗಿ ಈ ಬೋಳು ತಲೆಯನ್ನು ತನ್ನ ವಿಗ್‌ನಿಂದ ಮುಚ್ಚಿರುತ್ತಾನೆ. 

ಇಂತಹ ಸಿನಿಮೀಯ ಘಟನೆಯೊಂದು ಈಗ ಉತ್ತರಪ್ರದೇಶದ ಇತ್ವಾಹ್‌ನಲ್ಲಿ ನಡೆದಿದೆ. ಮದುವೆಯ ಎಲ್ಲಾ ಸಂಪ್ರದಾಯದ ಬಳಿಕ ಹೂವಿನ ಹಾರ ಬದಲಾಯಿಸುವ ವೇಳೆ ಗಂಡು ತನ್ನ ಬೋಳು ತಲೆಯನ್ನು ಮುಚ್ಚಲು ವಿಗ್‌ ಧರಿಸಿದ್ದಾನೆ ಎಂಬ ಬಗ್ಗೆ ಯುವತಿಗೆ ಸಂಶಯ ಬಂದಿದೆ. ಹೂ ಹಾರ ಬದಲಾಯಿಸುವ ವೇಳೆ ಮದುವೆ ಗಂಡು ಅಜಯ್‌ಕುಮಾರ್ ತನ್ನ ತಲೆ ಕೂದಲಿನ ಬಗ್ಗೆ ಹೆಚ್ಚಿನ ಕಾಳಜಿ ವಹಿಸುತ್ತಿದ್ದ ಅಲ್ಲದೇ ಆತ ಮತ್ತೆ ಮತ್ತೆ ತನ್ನ ತಲೆಕೂದಲನ್ನು ಸರಿ ಪಡಿಸುತ್ತಿದ್ದ ಇದನ್ನು ಯುವತಿ ಗಮನಿಸಿದ್ದಾಳೆ


ಈ ಸಂಶಯದ ಜೊತೆ ಯಾರೋ ಕೆಲವರು ವಧುವಿಗೆ ನೀನು ಮದುವೆಯಾಗುತ್ತಿರುವ ಹುಡುಗನ ತಲೆಯಲ್ಲಿ ನಿಜವಾಗಿಯೂ ಕೂದಲಿಲ್ಲ. ಆತ ಬೋಳುತಲೆಯನ್ನು ಹೊಂದಿದ್ದಾನೆ. ಇದನ್ನು ಮುಚ್ಚಲು ಆತ ವಿಗ್‌ ಧರಿಸಿದ್ದಾನೆ ಎಂದು ಹೇಳಿದ್ದಾರೆ. ಇದನ್ನು ಕೇಳಿದ ವಧು ಅಲ್ಲೇ ಮೂರ್ಛೆ ಹೋಗಿದ್ದಾಳೆ. ನಂತರ ಆಕೆಗೆ ಪ್ರಜ್ಞೆ ಮರಳಿದ್ದು, ಬೋಳುತಲೆಯವನನ್ನು ಮದುವೆಯಾಗಲು ಆಕೆ ನಿರಾಕರಿಸಿದ್ದಾಳೆ. ಮನೆಯವರ ತೀವ್ರ ಒತ್ತಾಯದ ನಂತರವೂ ಆಕೆ ಮದುವೆಯಾಗಲು ನಿರಾಕರಿಸಿದ್ದು, ಇದರಿಂದ ಮದುವೆ ಮುರಿದು ಬಿದ್ದಿದೆ. 

ಇಂತಹದೇ ಘಟನೆಯೊಂದು ಮಧ್ಯಪ್ರದೇಶದ (Madhya Pradesh) ರೇವಾದಲ್ಲಿ (Rewa) ನಡೆದಿತ್ತು. ಮದುವೆಯ ಸಂಪ್ರದಾಯಗಳು ನಡೆಯುತ್ತಿದ್ದಂತೆ ಮಧ್ಯದಲ್ಲೇ ವಧುವೂ ವರನ ಮಾನಸಿಕ ಸ್ಥಿತಿಯನ್ನು ಗಮನಿಸಿ ಆತನನ್ನು ವಿವಾಹವಾಗಲು ನಿರಾಕರಿಸಿದ್ದಾಳೆ. ಅಲ್ಲದೇ ವಧುವಿನ ಕುಟುಂಬದವರು ವರನ ನೆಂಟರಿಷ್ಟರ ಮೇಲೆ ಹಲ್ಲೆಯನ್ನು ಮಾಡಿದ್ದರು. ಈ ಘಟನೆಯ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿತ್ತು.