ಚೀನಾ ವಿರುದ್ಧ ಭುಗಿಲೆದ್ದ ಆಕ್ರೋಶ| ಜಿನ್‌ಪಿಂಗ್‌ ಪ್ರತಿಕೃತಿ, ಚೀನಾ ಧ್ವಜ ದಹಿಸಿ ಪ್ರತಿಭಟನೆ| ಚೀನಾ ರಾಯಭಾರ ಕಚೇರಿ ಎದುರು ನಿವೃತ್ತ ಸೈನಿಕರ ಧರಣಿ| ಚೀನಿ ವಸ್ತುಗಳ ಬಹಿಷ್ಕಾರಕ್ಕೆ ಬೇಡಿಕೆ

ನವದೆಹಲಿ(ಜೂ.18): ಪೂರ್ವ ಲಡಾಖ್‌ನಲ್ಲಿ ಚೀನಾ 20 ಭಾರತೀಯ ಯೋಧರನ್ನು ಹತ್ಯೆಗೈದ ಬೆನ್ನಲ್ಲೇ ಭಾರತದಲ್ಲಿ ಚೀನಾ ವಿರೋಧಿ ಪ್ರತಿಭಟನೆಗಳು ತೀವ್ರವಾಗಿವೆ. ಉತ್ತರ ಪ್ರದೇಶ, ಬಿಹಾರ, ಜಾರ್ಖಂಡ್‌, ರಾಜಸ್ಥಾನ, ಜಮ್ಮು-ಕಾಶ್ಮೀರ ಸೇರಿದಂತೆ ದೇಶದ ಹಲವೆಡೆ ಜನರು ಬೀದಿಗಿಳಿದು ಚೀನಾ ಅಧ್ಯಕ್ಷ ಕ್ಸಿ ಜಿನ್‌ಪಿಂಗ್‌ ಅವರ ಪ್ರತಿಕೃತಿ ಹಾಗೂ ಚೀನಾ ಧ್ವಜಕ್ಕೆ ಬೆಂಕಿ ಇಟ್ಟು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಇತ್ತ ಜಮ್ಮು-ಕಾಶ್ಮೀರದಲ್ಲಿ ಪ್ರತಿಭಟನೆ ವ್ಯಾಪಕವಾಗಿದ್ದು, ದೊಡ್ಡ ಸಂಖ್ಯೆಯಲ್ಲಿ ಜನರು ಗುಂಪುಗೂಡಿ ಟೈರ್‌ಗಳಿಗೆ ಬೆಂಕಿ ಇಟ್ಟು ಚೀನಾ ಕೃತ್ಯವನ್ನು ಖಂಡಿಸಿದ್ದಾರೆ. ಮತ್ತೊಂದೆಡೆ ಶಿವಸೇನೆ ಡ್ರೋಗ್ರಾ ಫ್ರಂಟ್‌, ವಿಶ್ವ ಹಿಂದು ಪರಿಷತ್‌ ಮತ್ತು ರಾಷ್ಟ್ರೀಯ ಬಜರಂಗ ದಳ ಸೇರಿದಂತೆ ವಿವಿಧ ಸಂಘಟನೆಗಳು ಜಮ್ಮುವಿನ ವಿವಿಧೆಡೆ ಪ್ರತಿಭಟನೆ ನಡೆಸಿವೆ.

ದಾಳಿ ವೇಳೆ ಚೀನಾ ಸೈನಿಕರು ಭಾರತದ 5 ಪಟ್ಟು ಹೆಚ್ಚಿದ್ದರು!

ಈ ನಡುವೆ ಚೀನಾ ವಸ್ತುಗಳ ಬಹಿಷ್ಕಾರದ ಕೂಗು ಮತ್ತೊಮ್ಮೆ ಮುನ್ನೆಲೆಗೆ ಬಂದಿದ್ದು, ಚೀನಾ ವಸ್ತುಗಳ ಆಮದನ್ನು ನಿಲ್ಲಿಸುವಂತೆಯೂ ಆಗ್ರಹ ವ್ಯಕ್ತವಾಗಿದೆ. ಭಾರತದ ನಟ-ನಟಿಯರು, ಆಟಗಾರರು ಚೀನಾದ ವಸ್ತುಗಳಿಗೆ ಪ್ರಾಯೋಜಕತ್ವ ನೀಡದಂತೆ ಹಲವೆಡೆ ಪ್ರತಿಭಟನಾಕಾರರು ಆಗ್ರಹಿಸಿದ್ದಾರೆ.

ಅಖಿಲ ಭಾರತ ವ್ಯಾಪಾರಿಗಳ ಒಕ್ಕೂಟ (ಸಿಎಐಟಿ) ಸಹ ಚೀನಾ ಉತ್ಪನ್ನಗಳ ಬಹಿಷ್ಕಾರಕ್ಕೆ ಕರೆ ನೀಡಿದೆ. ಇತ್ತ ನವದೆಹಲಿಯ ಚೀನಾ ರಾಯಭಾರಿ ಕಚೇರಿ ಎದುರು ಸೇನಾ ನಿವೃತ್ತರು ಮತ್ತು ಸ್ವದೇಶಿ ಜಾಗರಣ ಮಂಚ್‌ ಸದಸ್ಯರು ಚೀನಾ ಕೃತ್ಯವನ್ನು ಖಂಡಿಸಿ ಪ್ರತಿಭಟನೆ ನಡೆಸಿದ್ದಾರೆ.

5 ದಶಕ ತೆಪ್ಪಗಿದ್ದ ಚೀನಾ ಈಗ ಹಿಂಸೆ ನಡೆಸಿದ್ದೇಕೆ?: ಅಕ್ಸಾಯ್‌ಚಿನ್ ರಹಸ್ಯ!

#UnmaskingChina

ಭಾರತೀಯ ಯೋಧರನ್ನು ಹತ್ಯೆಗೈದ ಚೀನಾ ವಿರುದ್ಧ ಟ್ವಿಟರ್‌ನಲ್ಲಿ ಅನ್‌ಮಾಸ್ಕಿಂಗ್ ಚೀನಾ ಎಂಬ ಆರಂಭವಾಗಿದ್ದು, ಇದು ಭಾರೀ ಟ್ರೆಂಡ್ ಸೃಷ್ಟಿಸಿದೆ.