ದಾಳಿ ವೇಳೆ ಚೀನಾ ಸೈನಿಕರು ಭಾರತದ 5 ಪಟ್ಟು ಹೆಚ್ಚಿದ್ದರು!
ದಾಳಿ ವೇಳೆ ಚೀನಾ ಸೈನಿಕರು ಭಾರತದ 5 ಪಟ್ಟು ಹೆಚ್ಚಿದ್ದರು| ಚೀನಿ ಸೈನಿಕರು ವಾಪಸ್ ಹೋದರೇ ಎಂದು ನೋಡಲು ಹೋದಾಗ ದಾಳಿ| ಭಾರತದ ಯೋಧರು ಯಾವ ಶಸ್ತಾ್ರಸ್ತ್ರವೂ ಇಲ್ಲದೆ ಬರಿಗೈಲಿ ಹೋರಾಡಿದರು| ಚೀನಾ ಯೋಧರ ಕೈಲಿ ಗನ್ ಸೇರಿದಂತೆ ಎಲ್ಲ ಶಸ್ತಾ್ರಸ್ತ್ರಗಳೂ ಇದ್ದವು| ಸೋಮವಾರ ರಾತ್ರಿ ನಡೆದ ದಾಳಿಯ ಭಯಾನಕ ವಿವರ ಬಹಿರಂಗ
ನವದೆಹಲಿ(ಜೂ.18): ಗಲ್ವಾನ್ ಕಣಿವೆಯಲ್ಲಿ ಸೋಮವಾರ ರಾತ್ರಿ ನಡೆದ ಘಟನೆಗಳ ಭಯಾನಕ ವಿವರಗಳು ಇದೀಗ ಬೆಳಕಿಗೆ ಬಂದಿದ್ದು, ಭಾರತದ ಯೋಧರಿಗಿಂತ 5 ಪಟ್ಟು ಹೆಚ್ಚಿದ್ದ ಚೀನಿ ಯೋಧರು ನಿಶ್ಶಸ್ತ್ರರಾಗಿದ್ದ ಭಾರತೀಯ ಸೈನಿಕರ ಮೇಲೆ ಏಕಾಏಕಿ ಮುಗಿಬಿದ್ದು ಅಮಾನುಷ ಹಿಂಸಾಚಾರ ಎಸಗಿದರು ಎಂದು ತಿಳಿದುಬಂದಿದೆ.
ಅಂದು ಸಂಜೆ ಪೂರ್ವ ಒಪ್ಪಂದದಂತೆ ಚೀನಾದ ಯೋಧರು ಗಲ್ವಾನ್‌ನ ಗಡಿಯಿಂದ ಹಿಂದಕ್ಕೆ ಹೋಗಿದ್ದಾರೆಯೇ ಎಂದು ನೋಡಲು ಕರ್ನಲ್ ಸಂತೋಷ್ ಬಾಬು (ಸಂಘರ್ಷದಲ್ಲಿ ಮೃತಪಟ್ಟಿದ್ದಾರೆ) ಪೂರ್ವ ಲಡಾಖ್‌ನ ನೈಜ ನಿಯಂತ್ರಣ ರೇಖೆಯ (ಎಲ್‌ಎಸಿ) 14ನೇ ನಂಬರ್ ಗಸ್ತು ಪಾಯಿಂಟ್ ಬಳಿಗೆ ಹೋಗಿದ್ದರು. ಆಗ ಮೊದಲೇ ಸಿದ್ಧತೆ ಮಾಡಿಕೊಂಡಿದ್ದ ಚೀನಾದ ಸೈನಿಕರು ಅವರನ್ನು ಸುತ್ತುವರೆದರು. ನಂತರ ಭಾರತದ 120 ಯೋಧರು ಅಲ್ಲಿಗೆ ತೆರಳಿದರು. ಆಗ 600ಕ್ಕೂ ಹೆಚ್ಚು ಚೀನಿ ಯೋಧರು ಭಾರತೀಯರನ್ನು ಸುತ್ತುವರೆದು ಮನಸೋಇಚ್ಛೆ ದಾಳಿ ನಡೆಸಿದರು ಎಂದು ಹೇಳಲಾಗಿದೆ.
ಚೀನಾ ವಿರುದ್ಧ ಭುಗಿಲೆದ್ದ ಆಕ್ರೋಶ: #UnmaskingChina ಅಭಿಯಾನ ಶುರು!
ಭಾರತದ ಯೋಧರು ಉಭಯ ದೇಶಗಳ ನಡುವಿನ ಒಪ್ಪಂದವನ್ನು ಗೌರವಿಸಿ ತಮ್ಮ ಬಳಿ ಯಾವುದೇ ಶಸ್ತಾ್ರಸ್ತ್ರ ಇರಿಸಿಕೊಂಡಿರಲಿಲ್ಲ. ಆದರೆ, ಚೀನಾದ ಯೋಧರು ಗನ್, ಚಾಕು ಸೇರಿದಂತೆ ಎಲ್ಲಾ ಶಸ್ತಾ್ರಸ್ತ್ರಗಳನ್ನು ಹೊಂದಿದ್ದರು. ಅವರು ಭಾರತೀಯ ಸೈನಿಕರ ತಲೆಗೆ ಗನ್ ಹಿಡಿದು, ಹೊಡೆದು, ಅವರ ದೇಹದ ಅಂಗಗಳನ್ನು ಕತ್ತರಿಸಿ ಹತ್ಯೆಗೈದರು. ಸರ್ಕಾರದ ಅನುಮತಿ ಇಲ್ಲದಿದ್ದುದರಿಂದ ಭಾರತೀಯ ಸೈನಿಕರು ಶಸ್ತಾ್ರಸ್ತ್ರಗಳನ್ನು ಬಳಸಲಾಗದೆ ಅಸಹಾಯಕರಾಗಿದ್ದರು. ಹೀಗಾಗಿ ನಿಜವಾಗಿ ಇದು ಕೇವಲ ಕೈ-ಕೈ ಮಿಲಾಯಿಸಿ ನಡೆಸಿದ ಸಂಘರ್ಷವಲ್ಲ. ಚೀನಾದ ಸೈನಿಕರು ಭಾರತೀಯ ಯೋಧರ ಮೇಲೆ ಅಮಾನುಷವಾಗಿ ಸಶಸ್ತ್ರ ದಾಳಿ ನಡೆಸಿದರು ಎಂದು ಮೂಲಗಳು ತಿಳಿಸಿವೆ.
ದಾಳಿಗೂ ಮುನ್ನ ಭಾರತದ ಯೋಧರು ಎಲ್ಲೆಲ್ಲಿದ್ದಾರೆ ಎಂಬುದನ್ನು ಪತ್ತೆಹಚ್ಚಲು ಚೀನಾ ಥರ್ಮಲ್ ಇಮೇಜಿಂಗ್ ಡ್ರೋನ್‌ಗಳನ್ನು ಬಳಸಿತ್ತು. ದಾಳಿ ನಡೆದ ಜಾಗಕ್ಕೆ ಭಾರತೀಯ ಯೋಧರು ಸ್ನೇಹಪೂರ್ವಕ ಚಿಹ್ನೆಯನ್ನು ಪ್ರದರ್ಶಿಸುತ್ತ ನಿಶ್ಶಸ್ತ್ರರಾಗಿ ಹೋಗಿದ್ದರು. ಆದರೂ ಚೀನಾ ದಾಳಿ ನಡೆಸಿತು. ಒಟ್ಟಾರೆ ಸಂಘರ್ಷ 6ರಿಂದ 7 ತಾಸು ನಡೆದಿದೆ ಎಂದು ಮೂಲಗಳು ಹೇಳಿವೆ.
BSNL 4ಜಿಗೆ ಚೀನಾ ಉಪಕರಣ ಬಳಕೆ ನಿಷೇಧ!
ಸಾವಿನ ಸಂಖ್ಯೆ ಇನ್ನಷ್ಟು ಹೆಚ್ಚಳ?
ದಾಳಿಯಲ್ಲಿ ತೀವ್ರವಾಗಿ ಗಾಯಗೊಂಡು ಚಿಕಿತ್ಸೆ ಪಡೆಯುತ್ತಿರುವ ಭಾರತೀಯ ಯೋಧರ ಪೈಕಿ 10ಕ್ಕೂ ಹೆಚ್ಚು ಯೋಧರ ಸ್ಥಿತಿ ಗಂಭೀರವಾಗಿದೆ. ಹೀಗಾಗಿ ಸಾವಿನ ಸಂಖ್ಯೆ ಇನ್ನಷ್ಟುಹೆಚ್ಚುವ ಸಾಧ್ಯತೆಯಿದೆ. ಮಂಗಳವಾರ ಗಲ್ವಾನ್ ಕಣಿವೆಯಿಂದ ಮೃತ ಯೋಧರ ಶವಗಳನ್ನು ತರಲು 16 ಬಾರಿ ಸೇನಾಪಡೆಯ ಹೆಲಿಕಾಪ್ಟರ್‌ಗಳು ಹಾರಾಡಿದ್ದವು. ಬುಧವಾರ ಬೆಳಿಗ್ಗೆ ಕೂಡ ಗಲ್ವಾನ್ ಕಣಿವೆಯಿಂದ ಲೇಹ್‌ಗೆ 4 ಯೋಧರ ಶವಗಳನ್ನು ಹೆಲಿಕಾಪ್ಟರ್‌ನಲ್ಲಿ ತರಲಾಗಿದೆ ಎಂದು ಸರ್ಕಾರದ ಮೂಲಗಳು ತಿಳಿಸಿವೆ.