ನವದೆಹಲಿ (ಡಿ. 04):  ಕಾಂಗ್ರೆಸ್‌ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ಗಾಂಧಿ ವಾದ್ರಾ ಅವರ ದಿಲ್ಲಿ ನಿವಾಸಕ್ಕೆ 7 ಅಪರಿಚಿತರು ಇದ್ದ ಕಾರು ‘ಭದ್ರತಾ ತಪಾಸಣೆ’ಗೆ ಒಳಪಡದೇ ಪ್ರವೇಶಿಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಮೂವರು ಭದ್ರತಾ ಸಿಬ್ಬಂದಿಯನ್ನು ಸೇವೆಯಿಂದ ಅಮಾನತುಗೊಳಿಸಿ ಉನ್ನತ ಮಟ್ಟದ ತನಿಖೆಗೆ ಆದೇಶಿಸಲಾಗಿದೆ ಎಂದು ಕೇಂದ್ರ ಗೃಹ ಸಚಿವ ಅಮಿತ್‌ ಶಾ ತಿಳಿಸಿದ್ದಾರೆ.

ರಾಜ್ಯಸಭೆಯಲ್ಲಿ ಮಂಡನೆಯಾಗಿದ್ದ ಎಸ್‌ಪಿಜಿ ತಿದ್ದುಪಡಿ ಮಸೂದೆಯ ಚರ್ಚೆಗೆ ಉತ್ತರಿಸಿ ಮಾತನಾಡಿದ ಶಾ, ಭದ್ರತಾ ಸಿಬ್ಬಂದಿಗೆ ಬಂದ ಮಾಹಿತಿಯಿಂದ ಆದ ಗೊಂದಲದಿಂದ ಕಾಕತಾಳೀಯವೆಂಬಂತೆ ಈ ಅಚಾತುರ್ಯ ನಡೆದಿರಬಹುದು ಎಂದೂ ಸ್ಪಷ್ಟಪಡಿಸಿದರು.

ಆನ್‌ಲೈನ್‌ನಲ್ಲಿ ಅತಿ ಹೆಚ್ಚು ಶೋಧಿಸಲ್ಪಟ್ಟವ್ಯಕ್ತಿ ಮೋದಿ

‘ಪ್ರಿಯಾಂಕಾ ವಾದ್ರಾ ಅವರ ಸೋದರ ರಾಹುಲ್‌ ಗಾಂಧಿ ಅವರು ಕಪ್ಪು ಬಣ್ಣದ ‘ಟಾಟಾ ಸಫಾರಿ’ಯಲ್ಲಿ ಪ್ರಿಯಾಂಕಾ ಮನೆಗೆ ಬರಲಿದ್ದಾರೆ ಎಂದು ಭದ್ರತೆಯ ಹೊಣೆ ಹೊತ್ತ ಸಿಆರ್‌ಪಿಎಫ್‌ ಸಿಬ್ಬಂದಿಗೆ ಮಾಹಿತಿ ನೀಡಲಾಗಿತ್ತು. ಅದೇ ವೇಳೆ, ‘ಕಪ್ಪು ಬಣ್ಣ’ದ್ದೇ ಆದ ಟಾಟಾ ಸಫಾರಿ ವಾಹನ ಪ್ರಿಯಾಂಕಾ ಮನೆಗೆ ಪ್ರವೇಶಿಸಿದೆ.

ಅದನ್ನು ಭದ್ರತಾ ಸಿಬ್ಬಂದಿ ತಪಾಸಣೆ ಮಾಡದೇ ಒಳಗೆ ಬಿಟ್ಟಿದ್ದಾರೆ. ಆದರೆ ಅದರಲ್ಲಿ ರಾಹುಲ್‌ ಇರದೇ ಉತ್ತರ ಪ್ರದೇಶದ ಮೇರಠ್‌ನ ಕೆಲವು ಕಾಂಗ್ರೆಸ್‌ ಕಾರ್ಯಕರ್ತರು ಇದ್ದುದು ನಂತರ ಗೊತ್ತಾಗಿದೆ’ ಎಂದು ಶಾ ಹೇಳಿದರು. ‘ಈ ಪ್ರಕರಣದ ಉನ್ನತ ಮಟ್ಟದ ತನಿಖೆಗೆ ಆದೇಶಿಸಲಾಗಿದೆ. ಮೂವರು ಸಿಬ್ಬಂದಿಯನ್ನು ಅಮಾನತು ಮಾಡಲಾಗಿದೆ’ ಎಂದು ಅವರು ತಿಳಿಸಿದರು.

ಸಂಸತ್ತಲ್ಲಿ ತುಳುಭಾಷೆ ಪರ ಧ್ವನಿಯೆತ್ತಿದ ಕೇರಳ ಸಂಸದ! ಕರಾವಳಿ ಎಂಪಿಗಳಿಗೆ ನೆಟ್ಟಿಗರ ಛೀಮಾರಿ!

ಸಂಸತ್ತಿನಲ್ಲಿ ಪ್ರಸ್ತಾಪ:

ಕಾಂಗ್ರೆಸ್‌ ಪಕ್ಷದ ಸಂಸದರು ಸಂಸತ್ತಿನಲ್ಲಿ ಪ್ರಿಯಾಂಕಾ ಗಾಂಧಿ ಭದ್ರತಾ ಲೋಪ ವಿಚಾರ ಪ್ರಸ್ತಾಪಿಸಿ, ‘ಇದು ಗಂಭೀರ ವಿಚಾರ’ ಎಂದು ಕಳವಳ ವ್ಯಕ್ತಪಡಿಸಿದರು. ‘ಮೋದಿ ಹಾಗೂ ಅಮಿತ್‌ ಶಾ ಅವರು ರಾಜಕೀಯ ಉದ್ದೇಶಕ್ಕೆ ಗಾಂಧಿ ಕುಟುಂಬಕ್ಕೆ ಎಸ್‌ಪಿಜಿ ಭದ್ರತೆ ತೆಗೆದು ಸಿಆರ್‌ಪಿಎಫ್‌ ಭದ್ರತೆ ನೀಡಿದ್ದಾರೆ. ಇದರಿಂದ ಗಾಂಧಿಗಳ ಜೀವಕ್ಕೆ ಅಪಾಯವಿದೆ’ ಎಂದು ಆವರು ಆರೋಪಿಸಿದರು.

ರಾಬರ್ಟ್‌ ವಾದ್ರಾ ಕಳವಳ:

ಪ್ರಿಯಾಂಕಾ ಪತಿ ರಾಬರ್ಟ್‌ ವಾದ್ರಾ ಪ್ರತಿಕ್ರಿಯಿಸಿ, ‘ಪ್ರಿಯಾಂಕಾ ಮನೆಯಲ್ಲಿ ನಡೆದಿದ್ದು ದೊಡ್ಡ ಪ್ರಮಾಣದ ಭದ್ರತಾ ವೈಫಲ್ಯ. ಎಸ್‌ಪಿಜಿ ಭದ್ರತೆ ಹಿಂತೆಗೆತದ ಹಿಂದೆ ರಾಜಕೀಯ ದುರುದ್ದೇಶವಿದೆ’ ಎಂದು ಆಪಾದಿಸಿದ್ದಾರೆ.