ರಾಮಮಂದಿರ ಪ್ರಾಣ ಪ್ರತಿಷ್ಠಾಪನೆ ಕುರಿತಾಗಿ ಹಿರಿಯ ಗಾಯಕಿ ಕೆಎಸ್‌ ಚಿತ್ರಾ ಅವರ ವಿಡಿಯೋವನ್ನು ಬೆಂಬಲಿಸಿ ಮಾತನಾಡಿರುವ ಕೇಂದ್ರ ಸಚಿವ ವಿ. ಮುರಳೀಧರನ್‌, ದಿಗ್ಗಜ ಗಾಯಕಿಯ ಕುರಿತಾಗಿ ಸೋಶಿಯಲ್‌ ಮೀಡಿಯಾದಲ್ಲಿ ಟೀಕೆ ಮಾಡೋದನ್ನ ನಿಲ್ಲಿಸಬೇಕು. ಕೇರಳವನ್ನು ಮತ್ತೊಂದು ತಾಲಿಬಾನ್‌ ಆಗೋಕೆ ಬಿಡೋದಿಲ್ಲ ಎಂದಿದ್ದಾರೆ. 

ನವದೆಹಲಿ (ಜ.16): ಪ್ರಖ್ಯಾತ ಗಾಯಕಿ ಕೆಎಸ್‌ ಚಿತ್ರಾ ವಿರುದ್ಧ ಸೋಶಿಯಲ್‌ ಮೀಡಿಯಾದಲ್ಲಿ ಟೀಕೆಗಳು ತೀವ್ರವಾಗಿದೆ. ರಾಮಮಂದಿರ ಪ್ರಾಣ ಪ್ರತಿಷ್ಠಾಪನೆಯ ದಿನ ನಿಮ್ಮ ಮನೆಗಳಲ್ಲಿ ಐದು ದೀಪಗಳನ್ನು ಹಚ್ಚಿ, 'ಶ್ರೀರಾಮ ಜಯರಾಮ, ಜಯ ಜಯ ರಾಮ'ವನ್ನು ಪಠಿಸಿ ಎಂದು ಹೇಳಿದ್ದೇ ತಪ್ಪಾಗಿ ಹೋಗಿದೆ. ಇದೇ ಕಾರಣಕ್ಕೆ ಕೇರಳದ ಎಡಪಂಥೀಯರು ಹಾಗೂ ಕಮ್ಯುನಿಸ್ಟ್‌ಗಳು 60 ವರ್ಷದ ಹಿರಿಯ ಗಾಯಕಿಯ ಮೇಲೆ ಮುಗಿಬಿದ್ದಿದ್ದಾರೆ. ಭಾರೀ ಟೀಕೆಗಳು ಬಂದ ಬಳಿಕ ಕೆಎಸ್‌ ಚಿತ್ರಾ, ಸೋಶಿಯಲ್‌ ಮೀಡಿಯಾದಲ್ಲಿ ಹಂಚಿಕೊಂಡಿದ್ದ ವಿಡಿಯೋವನ್ನು ಡಿಲೀಟ್‌ ಮಾಡಿದ್ದಾರೆ. ಇನ್ನೂ ಕೆಲವರು ಕೆಎಸ್‌ ಚಿತ್ರಾ ಅವರಿಗೆ ಬೆಂಬಲ ನೀಡಿದ್ದಾರೆ. ಕೇರಳ ವಿರೋಧ ಪಕ್ಷದ ನಾಯಕ ವಿಡಿ ಸತೀಶನ್‌, ದೇಶದಲ್ಲಿ ಅಭಿವ್ಯಕ್ತಿ ಸ್ವಾತಂತ್ರ್ಯ ಅನ್ನೋದು ಇದೆ. ಸೈಬರ್‌ ದಾಳಿ ಅನ್ನೋದು ಫ್ಯಾಸಿಸಂ ಎಂದು ಹೇಳಿದ್ದಾರೆ. ಕೇರಳದ ಸಾಕಷ್ಟು ಮಂದಿ, ಕೆಎಸ್‌ ಚಿತ್ರಾ ಅವರ ಪೋಸ್ಟ್‌ಗೆ ಬೆಂಬಲ ವ್ಯಕ್ತಪಡಿಸಿದ್ದು, ನೀವು ಹೇಳಿದ ಹಾಗೆಯೇ ಮಾಡಲಿದ್ದೇವೆ ಎಂದು ಹೇಳಿದ್ದಾರೆ. ಇನ್ನು ಈ ವಿವಾದಕ್ಕೆ ಸಂಬಂಧಪಟ್ಟಂತೆ ಕೇಂದ್ರ ಸಚಿವ ವಿ. ಮುರಳೀಧರನ್‌ ಮಾತನಾಡಿದ್ದು, ಹಿರಿಯ ಗಾಯಕಿಯ ಬೆಂಬಲಕ್ಕೆ ನಿಂತಿದ್ದಾರೆ.

ಕೆಎಸ್‌ ಚಿತ್ರಾ ಅವರನ್ನು ಸೋಶಿಯಲ್‌ ಮೀಡಿಯಾದಲ್ಲಿ ಟೀಕೆ ಮಾಡುತ್ತಿರುವುದನ್ನು ಗಮನಿಸಿರುವ ಅವರು, ಹಿರಿಯ ಗಾಯಕಿಯ ವಿಚಾರದಲ್ಲಿ ಇಂಥ ಮಾತುಗಳು ಸರಿಯಲ್ಲ ಎಂದಿದ್ದಾರೆ. ಕೇರಳವನ್ನು ಮತ್ತೊಂದು ತಾಲಿಬಾನ್‌ ಆಗೋಕೆ ಖಂಡಿತಾ ಬಿಡೋದಿಲ್ಲ ಎಂದು ತಿಳಿಸಿದ್ದಾರೆ. ಸೋಶಿಯಲ್‌ ಮೀಡಿಯಾ ವೇದಿಕೆಗಳಲ್ಲಿ ಹಿರಿಯ ಹಾಗೂ ದಿಗ್ಗಜ ಗಾಯಕಿ ಕೆಎಸ್‌ ಚಿತ್ರಾ ಅವರಿಗೆ ಬೆದರಿಕೆ ಒಡ್ಡುವಂತೆ ಪೋಸ್ಟ್‌ಗಳು ಬಂದಿವೆ ಎನ್ನುವುದನ್ನು ನೋಡಿದ್ದೇನೆ. ಆಕೆಗೆ ಮಾನಸಿಕ ಹಿಂಸೆ ನೀಡುತ್ತಿದ್ದಾರೆ. ಆಕೆ ಹೇಳಿದ್ದಾದರೂ ಏನು, ಪ್ರಾಣ ಪ್ರತಿಷ್ಠಾಪನೆಯ ದಿನ ರಾಮ ಜಪವನ್ನು ಪಠಿಸಿ ಹಾಗೂ ಮೆನಯಲ್ಲಿ ದೀಪಗಳನ್ನು ಹಚ್ಚಿ ಎಂದಿದ್ದಾರೆ, ಕೇರಳದಲ್ಲಿ ದೀಪಗಳನ್ನು ಹಚ್ಚೋದು ಕೂಡ ಅಪರಾಧವೇ? ಎಂದು ಪ್ರಶ್ನೆ ಮಾಡಿದ್ದಾರೆ.

ಕೇರಳದಲ್ಲಿ ರಾಮ ಎನ್ನುವ ಹೆಸರನ್ನು ಹೇಳುವುದು ಅಪರಾಧವೇ? ಹಿರಿಯ ಗಾಯಕಿಯ ಮೇಲೆ ಇಂಥ ಸೈಬರ್‌ ದಾಳಿ ಆಗುತ್ತಿದ್ದರೂ ಕೇರಳ ಪೊಲೀಸರು ಸುಮ್ಮನಿರುವುದೇಕೆ? ಶಬರಿಮಲೆಯನ್ನು ಧ್ವಂಸ ಮಾಡಲು ಪಣತೊಟ್ಟು ನಿಂತಿದ್ದ ವ್ಯಕ್ತಿಗಳೇ ಇದರ ಹಿಂದೆಯೂ ಇದ್ದಾರೆ ಎನ್ನುವುದು ನಮಗೆ ಗೊತ್ತಿದೆ. ಶಬರಿಮಲೆಯ ಸಂಪ್ರದಾವನ್ನು ಬ್ರೇಕ್‌ ಮಾಡುವ ನಿಟ್ಟಿನಲ್ಲಿ ಇವರು ಪ್ರಯತ್ನ ಪಟ್ಟಿದ್ದರು. ಈ ವಿಷಯದಲ್ಲಿ ಕೇರಳದ ವಿರೋಧ ಪಕ್ಷ ಮತ್ತು ಆಡಳಿತ ಪಕ್ಷಗಳೆರಡೂ ಇಂತಹ ಅಂಶಗಳನ್ನು ಪ್ರೋತ್ಸಾಹಿಸಲು ಪ್ರಯತ್ನಿಸುತ್ತಿವೆ. ಅಭಿವ್ಯಕ್ತಿ ಸ್ವಾತಂತ್ರ್ಯಕ್ಕೆ ಕಡಿವಾಣ ಹಾಕಿರುವ ಕೇರಳವನ್ನು 'ತಾಲಿಬಾನ್' ರಾಜ್ಯವಾಗಲು ನಾವು ಬಿಡೋದಿಲ್ಲ' ಎಂದು ಹೇಳಿದ್ದಾರೆ.

ರಾಮಭಕ್ತಿಯ ವಿಡಿಯೋ ಮಾಡಿದ್ದಕ್ಕೆ ಖ್ಯಾತ ಗಾಯಕಿ ಕೆಎಸ್‌ ಚಿತ್ರಾ ವಿರುದ್ಧ ಎಡಪಂಥೀಯರ ಸೈಬರ್‌ ದಾಳಿ!

ನಾಲ್ಕು ದಶಗಳಿಂದ ತಮ್ಮ ಮಧುರ ಕಂಠದ ಮೂಲಕ ಅಪಾರ ಅಭಿಮಾನಿ ವರ್ಗವನ್ನು ಸಂಪಾದಿಸಿರುವ ಕೆಎಸ್‌ ಚಿತ್ರಾ, ಭಾನುವಾರ ತಮ್ಮ ಸೋಶಿಯಲ್‌ ಮೀಡಿಯಾ ಪೇಜ್‌ನಲ್ಲಿ ರಾಮ ಮಂದಿರ ಕುರಿತಾದ ವಿಡಿಯೋ ಪೋಸ್ಟ್‌ ಮಾಡಿದ್ದರು. ಇದಕ್ಕೂ ಮುನ್ನ ರಾಮ ಮಂದಿರದ ಮಂತ್ರಾಕ್ಷತೆ ಪಡೆದಿರುವ ವಿಡಿಯೋವನ್ನೂ ಕೂಡ ಅವರು ಶೇರ್‌ ಮಾಡಿದ್ದರು. ಆ ವಿಡಿಯೋದಲ್ಲಿ, 'ರಾಮ ಮಂದಿರದ ಪ್ರಾಣ ಪ್ರತಿಷ್ಠಾಪನೆಯ ದಿನ ಎಲ್ಲರೂ ರಾಮ ನಾಮವನ್ನು ಜಪಿಸಬೇಕು ಹಾಗೂ ತಮ್ಮ ಮನೆಯಲ್ಲಿ ಐದು ದೀಪಗಳನ್ನು ಹಚ್ಚುವ ಮೂಲಕ ಸಂಭ್ರಮಿಸಬೇಕು' ಎಂದಿದ್ದರು. ಆದರೆ, ಅವರ ಈ ಮಾತಿಗೆ ಬರಹಗಾರ್ತಿ ಇಂದು ಮೆನನ್‌, ಗಾಯಕ ಸೂರಜ್‌ ಸಂತೋಷ್‌ ಪ್ರಮುಖವಾಗಿ ಆಕ್ಷೇಪ ವ್ಯಕ್ತಪಡಿಸಿದ್ದರು.

ಕೇರಳದಲ್ಲಿ ಪ್ರಧಾನಿ ನರೇಂದ್ರ ಮೋದಿಯನ್ನು ಹೊಗಳುವುದೆ? ನಟಿ ಶೋಭನಾರನ್ನು ರುಬ್ಬುತ್ತಿರೋ ನೆಟ್ಟಿಗರು!

Scroll to load tweet…