ನವದೆಹಲಿ (ಮೇ. 10): ಈ ವರ್ಷದ ಜನವರಿ ಆರಂಭದಲ್ಲಿ ದೇಶಾದ್ಯಂತ ಕೋವಿಡ್‌ ಗಣನೀಯವಾಗಿ ಇಳಿಕೆಯಾಗುತ್ತಿತ್ತು. ಆದರೆ ಕೇರಳದಲ್ಲಿ ಮಾತ್ರ ಸೋಂಕು ಏರುಗತಿಯಲ್ಲಿತ್ತು. ದೈನಂದಿನ ಪ್ರಕರಣಗಳಲ್ಲಿ ಬಹುತೇಕ ಮೂರನೇ ಒಂದರಷ್ಟುಪ್ರಕರಣಗಳು ಆ ರಾಜ್ಯದಿಂದ ವರದಿಯಾಗುತ್ತಿದ್ದವು.

ಕೇಂದ್ರ ಆರೋಗ್ಯ ಸಚಿವರು ಜನವರಿ 6 ರಂದು ಕೇರಳ ಸರ್ಕಾರಕ್ಕೆ ಪತ್ರ ಬರೆದು, ತಕ್ಷಣವೇ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿದ್ದರು. ಮರುದಿನವೇ ಉನ್ನತ ಮಟ್ಟದ ಕೇಂದ್ರ ತಂಡವನ್ನು ಕೇರಳಕ್ಕೆ ಕಳುಹಿಸಿ ಅಲ್ಲಿ ಕೋವಿಡ್‌ ನಿರ್ವಹಣಾ ಪ್ರಯತ್ನಗಳನ್ನು ಕೈಗೊಳ್ಳಲಾಯಿತು. ಇದು ಕೇಂದ್ರ ಸರ್ಕಾರ ದೇಶಾದ್ಯಂತ ಕೋವಿಡ್‌ ಸೋಂಕು ಏರಿಕೆ ಕಂಡ ಕೂಡಲೇ ಕಠಿಣ ಮೇಲ್ವಿಚಾರಣೆ ಪ್ರಯತ್ನ ನಡೆಸಿ ಕ್ಷಿಪ್ರವಾಗಿ ಸ್ಪಂದಿಸುತ್ತಿರುವುದಕ್ಕೆ ಸಾಕ್ಷಿ.

ವಾಸ್ತವಾಂಶ ಏನು?

ಕೋವಿಡ್‌ ಮೊದಲನೇ ಅಲೆಯ ನಂತರ ಕೇಂದ್ರ ಸರ್ಕಾರ ಕೋವಿಡ್‌ ನಿರ್ವಹಣೆಯ ಎಲ್ಲ ಕ್ರಮಗಳನ್ನೂ ಕೈಬಿಟ್ಟಿದೆ, ಕಳೆದ ಕೆಲವು ತಿಂಗಳಿನಿಂದ ಎಲ್ಲ ಹೊಣೆಯನ್ನು ಸಂಪೂರ್ಣವಾಗಿ ರಾಜ್ಯ ಸರ್ಕಾರಗಳ ಮೇಲೆ ವಹಿಸಿದೆ ಎಂಬ ಮಿಥ್ಯೆ ಹರಿದಾಡುತ್ತಿದೆ. ಆದರೆ ಸತ್ಯಾಂಶವನ್ನು ಯಾರಿಂದಲೂ ಮುಚ್ಚಿಡಲು ಸಾಧ್ಯವಿಲ್ಲ. ಸಾರ್ವಜನಿಕ ಆರೋಗ್ಯ ರಾಜ್ಯದ ವಿಷಯವಾದರೂ ಕೇಂದ್ರ ಸರ್ಕಾರ ಕೋವಿಡ್‌ ನಿರ್ವಹಣೆಯಲ್ಲಿ ಸಕ್ರಿಯವಾಗಿದ್ದು, ಸಾಂಕ್ರಾಮಿಕದ ಸಂದರ್ಭದಲ್ಲಿ ರಾಷ್ಟ್ರೀಯ ಮಟ್ಟದಲ್ಲಿ ಸಮನ್ವಯ ಮತ್ತು ಸಂಪನ್ಮೂಲಗಳನ್ನು ಒಟ್ಟುಗೂಡಿಸುವುದು ಅತ್ಯಗತ್ಯವಾಗಿದೆ.

ಬಂಗಾಳ ಗದ್ದುಗೆ ಗೆದ್ದ ಮಮತಾ ಬ್ಯಾನರ್ಜಿ ಮೋದಿಗೆ ಪರ್ಯಾಯವಾಗಿ ನಿಲ್ಲಬಲ್ಲರೇ?

ಈ ನಿಟ್ಟಿನಲ್ಲಿ ಸರ್ಕಾರ ನಿರಂತರವಾಗಿ ಮುಂಚೂಣಿಯಲ್ಲಿ ನಿಂತು ಕೆಲಸ ಮಾಡುತ್ತಿದೆ. ನಿರಂತರವಾಗಿ ರಾಜ್ಯ ಸರ್ಕಾರಗಳಿಗೆ ಅಗತ್ಯ ನೆರವು ಮತ್ತು ಸೂಕ್ತ ಮಾರ್ಗದರ್ಶನ ಒದಗಿಸಿದೆ. 2020ರ ಫೆಬ್ರವರಿಯಿಂದೀಚೆಗೆ ಕೇಂದ್ರ ಆರೋಗ್ಯ ಸಚಿವಾಲಯ ಸೋಂಕು ಪ್ರಕರಣಗಳ ಪ್ರವೃತ್ತಿಯ ಮೇಲೆ ನಿಗಾ ಇರಿಸಿದೆ. ರಾಜ್ಯಗಳ ಸಿದ್ಧತೆಗಳನ್ನು ಪರಾಮರ್ಶಿಸುತ್ತಿದೆ. ತಾಂತ್ರಿಕ ಪರಿಣತಿಯ ನೆರವು ಒದಗಿಸುತ್ತಿದೆ. ರಾಜ್ಯ ಹಾಗೂ ಜಿಲ್ಲಾ ಮಟ್ಟದ ನಿರ್ವಹಣಾ ಕಾರ್ಯತಂತ್ರಗಳ ಮೇಲ್ವಿಚಾರಣೆ ನಡೆಸುತ್ತಿದೆ.

ಕೇಂದ್ರದಿಂದ ಮೇಲ್ವಿಚಾರಣೆ

ಕೋವಿಡ್‌ ನಿರ್ವಹಣೆಗೆ ಸಂಬಂಧಿಸಿದಂತೆ ಕೇಂದ್ರದ ಪಾತ್ರ ನವದೆಹಲಿಯಿಂದ ಕೇವಲ ಸಲಹೆ ಮತ್ತು ಮಾರ್ಗಸೂಚಿಗಳನ್ನು ಹೊರಡಿಸುವುದಕ್ಕೆ ಸೀಮಿತವಾಗಿಲ್ಲ. ಹಲವು ಸಂದರ್ಭಗಳಲ್ಲಿ ಕೇಂದ್ರ ಸರ್ಕಾರ ರಾಜ್ಯಗಳ ಸಿದ್ಧತೆಗಳನ್ನು ಪರಿಶೀಲಿಸಲು ಉನ್ನತ ಮಟ್ಟದ ಮೇಲ್ವಿಚಾರಣಾ ಸಮಿತಿಗಳನ್ನು ನಿಯೋಜಿಸಿದೆ. ನಿಯಂತ್ರಣ ಹಾಗೂ ನಿರ್ಬಂಧಿತ ಕ್ರಮಗಳನ್ನು ಬೆಂಬಲಿಸಿದೆ. ಶೇ.75ಕ್ಕೂ ಅಧಿಕ ಉನ್ನತ ಮಟ್ಟದ ತಂಡಗಳಲ್ಲಿ ಕೇಂದ್ರ ಸರ್ಕಾರಿ ಅಧಿಕಾರಿಗಳು ಮತ್ತು ಸಾರ್ವಜನಿಕ ಆರೋಗ್ಯ ಪರಿಣತರು ಇದ್ದು, ಆ ತಂಡಗಳನ್ನು 2020ರ ಸೆಪ್ಟೆಂಬರ್‌ನಿಂದೀಚೆಗೆ ನಾನಾ ರಾಜ್ಯಗಳಿಗೆ ನಿಯೋಜಿಸಲಾಗಿದೆ. ಈ ತಂಡಗಳು ನೀಡುವ ಪ್ರತಿಸ್ಪಂದನೆಯಿಂದಾಗಿ ರಾಜ್ಯ ಮತ್ತು ಕೇಂದ್ರಗಳ ನಡುವಿನ ಮಾಹಿತಿ ಕೊರತೆ ತಗ್ಗಿದ್ದು, ರಾಜ್ಯಗಳ ಸಿದ್ಧತೆ ಮತ್ತು ನಿರ್ವಹಣಾ ಕಾರ್ಯತಂತ್ರಗಳಲ್ಲಿನ ಪ್ರಮುಖ ಅಂತರಗಳನ್ನು ಗುರುತಿಸಲು ಸಹಾಯಕವಾಗಿದೆ.

2 ನೇ ಅಲೆ ನಿರ್ಲಕ್ಷಿಸಿಲ್ಲ

ಕೇಂದ್ರ ಸರ್ಕಾರ ಆತಂಕಕಾರಿಯಾಗಿ ಹರಡುತ್ತಿರುವ ಕೊರೋನಾ 2ನೇ ಅಲೆಯನ್ನು ನಿರ್ಲಕ್ಷಿಸಿದೆಯೇ ಎಂಬುದಕ್ಕೆ ಕೇಂದ್ರ ಸರ್ಕಾರ ನಿಗದಿತ ಕಾಲಮಿತಿಯಲ್ಲಿ ತ್ವರಿತವಾಗಿ ಕೈಗೊಂಡ ಕ್ರಮಗಳೇ ವಾಸ್ತವಾಂಶವನ್ನು ಬಹಿರಂಗಪಡಿಸುತ್ತವೆ. ಫೆ.21ರಂದು ದೈನಂದಿನ ಸೋಂಕು 13,000ಕ್ಕಿಂತ ಕಡಿಮೆಯಿದ್ದಾಗ ಕೇಂದ್ರ ಆರೋಗ್ಯ ಸಚಿವಾಲಯ ಸೋಂಕು ಪ್ರವೃತ್ತಿಯಲ್ಲಿ ಅಂತಾರಾಜ್ಯ ವ್ಯತ್ಯಾಸಗಳನ್ನು ಗುರುತಿಸಿತು. ತಕ್ಷಣವೇ ಪ್ರಕರಣಗಳ ಸಂಖ್ಯೆ ಏರಿಕೆಯಾಗುತ್ತಿದ್ದ ಛತ್ತೀಸ್‌ಗಢ, ಕೇರಳ ಮತ್ತು ಮಹಾರಾಷ್ಟ್ರ ರಾಜ್ಯಗಳಿಗೆ ಪತ್ರ ಬರೆಯಿತು.

ಅಲ್ಲದೆ ಫೆ.24ರಂದು ಸೋಂಕು ಏರುಗತಿಯಲ್ಲಿದ್ದ ರಾಜ್ಯಗಳಾದ ಮಹಾರಾಷ್ಟ್ರ, ಕೇರಳ, ಛತ್ತೀಸ್‌ಗಢ, ಮಧ್ಯಪ್ರದೇಶ, ಗುಜರಾತ್‌, ಪಂಜಾಬ್‌, ಕರ್ನಾಟಕ, ತಮಿಳುನಾಡು, ಪಶ್ಚಿಮ ಬಂಗಾಳ ಮತ್ತು ಜಮ್ಮು-ಕಾಶ್ಮೀರಗಳಿಗೆ ಮೇಲ್ವಿಚಾರಣೆ ಮತ್ತು ಅಗತ್ಯ ನೆರವು ನೀಡಲು ಉನ್ನತ ಮಟ್ಟದ ಕೇಂದ್ರ ತಂಡಗಳನ್ನು ಕಳುಹಿಸಿತು.

ರಾಜ್ಯಗಳೇ ಎಚ್ಚೆತ್ತುಕೊಂಡಿಲ್ಲ

ಮಾಚ್‌ರ್‍ ತಿಂಗಳಾದ್ಯಂತ ಕೇಂದ್ರ ಸರ್ಕಾರ ಈ ರಾಜ್ಯಗಳಲ್ಲಿನ ಸೋಂಕು ಹರಡುವ ಕುರಿತು ಸಕ್ರಿಯವಾಗಿ ನಿಗಾವಹಿಸಿತ್ತು. ರಾಜ್ಯ ಸರ್ಕಾರಗಳ ಜೊತೆ ಸೇರಿ ನಿರ್ವಹಣಾ ಕ್ರಮಗಳ ಪರಿಶೀಲನೆ ನಡೆಸಿತ್ತು. ಕೇಂದ್ರ ತಂಡಗಳು ಸಿದ್ಧಪಡಿಸಿದ ವರದಿಗಳನ್ವಯ ಕ್ರಮಗಳನ್ನು ಪಾಲಿಸಿತು. ಈ ರಾಜ್ಯಗಳು ಕೇಂದ್ರ ಸರ್ಕಾರ ಮುಂಚಿತವಾಗಿಯೇ ನೀಡಿದ್ದ ಎಚ್ಚರಿಕೆ ಮತ್ತು ಪ್ರತಿಕ್ರಿಯೆಗಳನ್ನು ಗಂಭೀರವಾಗಿ ಪರಿಗಣಿಸಿದ್ದರೆ ಸದ್ಯದ ಗಂಭೀರ ಸ್ಥಿತಿ ಉಂಟಾಗುತ್ತಿರಲಿಲ್ಲ.

ಕೇಂದ್ರ ಸರ್ಕಾರ ಕೋವಿಡ್‌ ನಿಯಂತ್ರಣಕ್ಕೆ ಶ್ರದ್ಧೆಯಿಂದ ಪ್ರಯತ್ನ ನಡೆಸುತ್ತಿದ್ದರೆ, ಪ್ರತಿಪಕ್ಷಗಳ ನಾಯಕರು ಎಂದಿನಂತೆ ರಾಜಕಾರಣ ಮುಂದುವರಿಸಿದ್ದಾರೆ. ಉದ್ಧವ್‌ ಠಾಕ್ರೆ ತನ್ನ ಮೂಗಿನಡಿಯೇ ನಡೆದ ಅತ್ಯಂತ ಗಂಭೀರವಾದ ಮಹಾ-ವಸೂಲಿ ದಂಧೆಯನ್ನು ಮುಚ್ಚಿಹಾಕಲು ಹೆಚ್ಚಿನ ಗಮನಹರಿಸಿದ್ದರು. ಅತ್ತ ಕಾಂಗ್ರೆಸ್‌ ನಾಯಕರಾದ ರಾಹುಲ್‌ ಗಾಂಧಿ​ ಮತ್ತು ಪ್ರಿಯಾಂಕ ಗಾಂಧಿ​ ವಾದ್ರಾ ಇಂತಹ ಸಮಯದಲ್ಲಿ ಹೇಗೆ ವರ್ತಿಸಿದರು ಎಂಬುದನ್ನು ವಿಸ್ತೃತವಾಗಿ ಹೇಳಬೇಕಿಲ್ಲ.

ಲಸಿಕೆಗೆ ಸಂಬಂಧಿ​ಸಿದಂತೆ ಮತ್ತು ದೀರ್ಘಕಾಲದ ಗೈರಿಗೆ ಸಂಬಂ​ಧಿಸಿದಂತೆ ಛತ್ತೀಸ್‌ಗಢದ ಮುಖ್ಯಮಂತ್ರಿಯ ವರ್ತನೆ ಎಲ್ಲರಿಗೂ ಚೆನ್ನಾಗಿ ತಿಳಿದಿದೆ. ಅಲ್ಲದೆ ಪ್ರತಿಪಕ್ಷಗಳು ಆಡಳಿತ ನಡೆಸುತ್ತಿರುವ ಕೆಲವು ರಾಜ್ಯಗಳಲ್ಲಿ ಕೋಟ್ಯಂತರ ರು. ಸಾರ್ವಜನಿಕರ ಹಣವನ್ನು ತಮ್ಮ ಕೋವಿಡ್‌ ನಿರ್ವಹಣಾ ಪ್ರಯತ್ನಗಳ ಕುರಿತು ಪ್ರಚಾರ ಮತ್ತು ಜಾಹೀರಾತಿಗಾಗಿ ಬಳಸಿಕೊಂಡವು.

ಪ್ರಧಾನಿಗೆ ಗಂಭೀರತೆಯ ಅರಿವಿತ್ತು

ಸರ್ಕಾರದ ಅಕಾಲಿಕ ವಿಜಯೋತ್ಸವದ ಕುರಿತು ಕೆಲವು ತಪ್ಪು ಕಲ್ಪನೆಯ ಟೀಕೆಗಳು ಬರುತ್ತಿರುವ ನಡುವೆಯೇ, ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಮಾ.17ರಂದು ಮುಖ್ಯಮಂತ್ರಿಗಳೊಂದಿಗೆ ನಡೆಸಿದ ಸಮಾಲೋಚನೆ ವೇಳೆ ಹೇಳಿದ್ದನ್ನು ಇಲ್ಲಿ ಪುನರುಚ್ಚರಿಸುವ ಅಗತ್ಯವಿದೆ. ‘ಕೊರೋನಾದಿಂದ ಬಾ​ಧಿತವಾದ ಜಗತ್ತಿನ ಹಲವು ರಾಷ್ಟ್ರಗಳಲ್ಲಿ ಕೊರೋನಾ ಹಲವು ಅಲೆ ಬಂದು ಹೋಗಿದೆ. ನಮ್ಮ ದೇಶದಲ್ಲೂ ಸೋಂಕಿನ ಪ್ರಮಾಣ ಇಳಿಕೆಯ ನಂತರ ಇದ್ದಕ್ಕಿದ್ದಂತೆ ಕೆಲವು ರಾಜ್ಯಗಳಲ್ಲಿ ಮತ್ತೆ ಪ್ರಕರಣಗಳ ಸಂಖ್ಯೆ ಹೆಚ್ಚಾಗುತ್ತಿದೆ.

ಮಹಾರಾಷ್ಟ್ರ ಮತ್ತು ಮಧ್ಯಪ್ರದೇಶಗಳಲ್ಲಿ ಪಾಸಿಟಿವಿಟಿ ದರ ಹೆಚ್ಚಾಗಿರುವುದನ್ನು ಗಮನಿಸಿದ್ದೇವೆ. ಜೊತೆಗೆ ಅಲ್ಲಿ ಪ್ರಕರಣಗಳ ಸಂಖ್ಯೆ ಕೂಡ ಹೆಚ್ಚಾಗುತ್ತಿದೆ. ಈ ಬಾರಿ ಮೊದಲ ಅಲೆಯಲ್ಲಿ ಸೋಂಕಿನಿಂದ ಬಾಧಿ​ತವಾಗದ ಹಲವು ಜಿಲ್ಲೆಗಳಲ್ಲಿ ಮತ್ತು ಪ್ರದೇಶಗಳಲ್ಲಿ ಸೋಂಕಿನ ಪ್ರಮಾಣ ಹೆಚ್ಚಾಗುತ್ತಿದೆ. ಒಂದು ರೀತಿಯಲ್ಲಿ ಅವುಗಳು ಸುರಕ್ಷಿತ ವಲಯಗಳಾಗಿದ್ದವು. ಆದರೆ ಇದೀಗ ಹೊಸ ಪ್ರಕರಣಗಳು ಅಲ್ಲಿ ಬೆಳಕಿಗೆ ಬರುತ್ತಿವೆ. ಕಳೆದ ಕೆಲವು ವಾರಗಳಲ್ಲಿ ದೇಶದ 70 ಜಿಲ್ಲೆಗಳಲ್ಲಿ ಸೋಂಕು ಪ್ರಮಾಣ ಹೆಚ್ಚಾಗಿದೆ. ನಾವು ಈ ಸಾಂಕ್ರಾಮಿಕವನ್ನು ತಡೆದು ನಿಯಂತ್ರಿಸದಿದ್ದರೆ ಸೋಂಕು ದೇಶವ್ಯಾಪಿ ಹರಡುವ ಸಾಧ್ಯತೆ ಇದೆ.

ತಕ್ಷಣವೇ ನಾವು ಹೆಚ್ಚುತ್ತಿರುವ ಕೊರೋನಾ 2ನೇ ಅಲೆ ಉತ್ತುಂಗಕ್ಕೇರದಂತೆ ತಡೆಯಬೇಕು. ಅತ್ಯಂತ ತ್ವರಿತ ಮತ್ತು ನಿರ್ಣಾಯಕ ಕ್ರಮಗಳನ್ನು ಕೈಗೊಳ್ಳಬೇಕು. ಈಗ ಸ್ಥಳೀಯ ಮಟ್ಟದ ಆಡಳಿತದಲ್ಲಿ ಎದುರಾಗುತ್ತಿರುವ ಸಮಸ್ಯೆಗಳನ್ನು ನೋಡಬೇಕು. ಅವುಗಳನ್ನು ಪರಿಶೀಲಿಸಿ ಬಗೆಹರಿಸುವುದು ಅತ್ಯಗತ್ಯ. ಕೊರೋನಾ ವಿರುದ್ಧದ ನಮ್ಮ ಸಮರದಲ್ಲಿ ಅತಿಯಾದ ಆತ್ಮವಿಶ್ವಾಸ ಬೇಡ. ನಮ್ಮ ಯಶಸ್ಸು ನಿರ್ಲಕ್ಷ್ಯಕ್ಕೆ ತಿರುಗಬಾರದು’ ಎಂದಿದ್ದರು. ಈ ಮಾತುಗಳು ವಿಜಯವನ್ನು ಘೋಷಿಸಿದ ಮತ್ತು ಅಪಾಯದ ಬಗ್ಗೆ ತಿಳಿದಿಲ್ಲದವರಂತೆ ಕಾಣುಸುತ್ತಿವೆಯೇ?

ವಿದೇಶಗಳಿಂದ ಆಕ್ಸಿಜನ್ ಕಂಟೈನರ್ ಏರ್‌ಲಿಫ್ಟ್, ಕೋವಿಡ್ ವಿರುದ್ಧ ಹೋರಾಟಕ್ಕೆ ಸೇನೆ ಬಲ

ವಿಶೇಷ ತಂಡ ಕಳುಹಿಸಿತ್ತು

ಸದ್ಯದ ಅಲೆಯನ್ನು ಅಂದಾಜಿಸಿ ಕೇಂದ್ರ ಸರ್ಕಾರ, ಸೋಂಕಿನಿಂದ ತೀವ್ರ ಬಾಧಿ​ತವಾದ ರಾಜ್ಯಗಳು ಮತ್ತು ಜಿಲ್ಲೆಗಳಿಗೆ ವಿಶೇಷ ತಂಡಗಳನ್ನು ಕಳುಹಿಸಿತ್ತು. ಏಪ್ರಿಲ್‌ ತಿಂಗಳಲ್ಲಿ 50ಕ್ಕೂ ಅಧಿ​ಕ ತಂಡಗಳನ್ನು ದೇಶದಲ್ಲಿ ತೀವ್ರವಾಗಿ ಸೋಂಕಿನಿಂದ ಬಾ​ಧಿತವಾದ ಜಿಲ್ಲೆಗಳಿಗೆ ನಿಯೋಜಿಸಲಾಗಿತ್ತು. ಈ ತಂಡಗಳು ಸೋಂಕು ನಿಯಂತ್ರಣಕ್ಕೆ ಕಠಿಣ ಕ್ರಮಗಳನ್ನು ಕೈಗೊಳ್ಳಲು ರಾಜ್ಯ ಸರ್ಕಾರಗಳಿಗೆ ಅಗತ್ಯ ನೆರವು ನೀಡಿವೆ. ಅಲ್ಲದೆ ಮಾಚ್‌ರ್‍ ಅಂತ್ಯದ ವೇಳೆಗೆ ಪ್ರಕರಣಗಳ ಸಂಖ್ಯೆ ಹೆಚ್ಚಾಗುತ್ತಿದ್ದಂತೆಯೇ ರಾಜ್ಯಗಳು ಜಿಲ್ಲಾ ಮಟ್ಟದಲ್ಲಿ ನಿರ್ವಹಣಾ ಕಾರ್ಯತಂತ್ರಗಳನ್ನು ರೂಪಿಸಬೇಕಿತ್ತು. ಕೇಂದ್ರ ಸರ್ಕಾರದ ಅ​ಧಿಕಾರಿಗಳು ಮಾ.27ರಿಂದ ಏ.15ರ ಅವಧಿ​ಯಲ್ಲಿ ಬಹುತೇಕ 200ಕ್ಕೂ ಅಧಿಕ ಕಡೆಗಳಲ್ಲಿ ಜಿಲ್ಲೆಗಳ ಕ್ರಿಯಾ ಯೋಜನೆಗಳ ಪರಾಮರ್ಶೆ ನಡೆಸಿದ್ದಾರೆ.

ಬಹು ಆಯಾಮದ ಕ್ರಮ

ಹೊಸ ಸವಾಲು ಆಗಾಗ್ಗೆ ಎದುರಾಗುತ್ತಿದ್ದು, ಕೇಂದ್ರ ಸರ್ಕಾರ ತನ್ನ ಪ್ರಜೆಗಳ ಜೀವ ರಕ್ಷಿಸಲು ಬಹು ಆಯಾಮದ ಕ್ರಮಗಳನ್ನು ಕೈಗೊಂಡಿದೆ. ಮೊದಲ ಹಂತದ ಲಸಿಕೆ ನೀಡಿಕೆ ಅಭಿಯಾನದಲ್ಲಿ ಆರೋಗ್ಯ ಕಾರ್ಯಕರ್ತರು, ಮುಂಚೂಣಿ ಕಾರ್ಯಕರ್ತರು, ವೃದ್ಧರಿಗೆ ಲಸಿಕೆ ಹಾಕಲು ಯೋಜಿಸಲಾಗಿತ್ತು. ಅದನ್ನು ಅವಿರತ ಪ್ರಯತ್ನಗಳ ಮೂಲಕ ಅನುಷ್ಠಾನಗೊಳಿಸಲಾಗಿದೆ. ಪ್ರಕರಣಗಳ ಸಂಖ್ಯೆ ಹೆಚ್ಚಾಗುತ್ತಿದ್ದಂತೆ ಹಲವು ರಾಜ್ಯಗಳಲ್ಲಿ ಆರೋಗ್ಯ ಮೂಲಸೌಕರ್ಯದ ಕೊರತೆ ಇರುವುದು ಅರ್ಥವಾಯಿತು. ಅವು ಔಷಧ, ಆಕ್ಸಿಜನ್‌ ಸಿಲಿಂಡರ್‌, ವೆಂಟಿಲೇಟರ್‌ ಇತ್ಯಾದಿ ಪ್ರಮುಖ ಅಗತ್ಯ ವೈದ್ಯಕೀಯ ಸೌಕರ‍್ಯಕ್ಕಾಗಿ ಕೇಂದ್ರ ಸರ್ಕಾರಕ್ಕೆ ಮನವಿ ಸಲ್ಲಿಸಿದ್ದವು.

ತಪ್ಪು ಮಾಹಿತಿಗೆ ವ್ಯತಿರಿಕ್ತವಾಗಿ, ಕೇಂದ್ರ ಸರ್ಕಾರ ಸಾಂಕ್ರಾಮಿಕ ರೋಗದ ನಿಗ್ರಹಕ್ಕಾಗಿ ಎಲ್ಲಾ ಆಯಾಮಗಳಲ್ಲಿ ಕಾರ್ಯನಿರ್ವಹಿಸುತ್ತಿದೆ. ಸದ್ಯದ ಬಿಕ್ಕಟ್ಟಿನ ನಡುವೆಯೂ ಕೆಲವರು ತಪ್ಪು ಮಾಹಿತಿ ಹರಡುವುದರಲ್ಲಿ, ರಾಜಕೀಯ ಪ್ರೇರಿತ ವ್ಯಾಖ್ಯಾನಗಳನ್ನು ಸೃಷ್ಟಿಸುವಲ್ಲಿ ತೊಡಗಿರುವುದು ನಿಜಕ್ಕೂ ದುರದೃಷ್ಟಕರ. ನಮಗೆ, ಸಾಂಕ್ರಾಮಿಕದಿಂದ ಹೊರಬರುವುದು ಮತ್ತು ಪ್ರಜೆಗಳ ಅಗತ್ಯಗಳನ್ನು ಪೂರೈಸುವುದು ಪ್ರಮುಖ ಆದ್ಯತೆಯ ವಿಷಯ. ನಾವು ಒಂದು ರಾಷ್ಟ್ರ, ಒಂದು ಜನರು ಮತ್ತು ಒಂದೇ ಮಿಷನ್‌ ಅಡಿಯಲ್ಲಿ ಈ ಯುದ್ಧವನ್ನು ಎದುರಿಸುವ ಅಗತ್ಯವಿದೆ.

- ಪ್ರಕಾಶ್‌ ಜಾವಡೇಕರ್‌

ಕೇಂದ್ರ ಸಚಿವ, ವಿಶೇಷ ಲೇಖನ