Asianet Suvarna News Asianet Suvarna News

ವಿದೇಶಗಳಿಂದ ಆಕ್ಸಿಜನ್‌ ಕಂಟೈನರ್‌ ಏರ್‌ಲಿಫ್ಟ್‌, ಕೋವಿಡ್‌ ವಿರುದ್ಧ ಹೋರಾಟಕ್ಕೆ ಸೇನೆ ಬಲ

ವಾಯುಸೇನೆ ವಿದೇಶಗಳಿಂದ ಮೆಡಿಕಲ್‌ ಆಕ್ಸಿಜನ್‌ ಸರಬರಾಜು ಮಾಡಲು ಟೊಂಕಕಟ್ಟಿನಿಂತಿದೆ. ಈವರೆಗೆ 1142 ಮೆಟ್ರಿಕ್‌ ಟನ್‌ ಸಾಮರ್ಥ್ಯದ 61 ಆಕ್ಸಿಜನ್‌ ಕಂಟೈನರ್‌ಗಳನ್ನು ವಿದೇಶಗಳಿಂದ ಏರ್‌ಲಿಫ್ಟ್‌ ಮಾಡಿದೆ. 

Indian Air force Airlifts cryogenic Oxygen containers from Abroad hls
Author
Bengaluru, First Published May 7, 2021, 10:57 AM IST

ಭಾರತದಲ್ಲಿ ಕಳೆದ 2-3 ವಾರದಿಂದ ಕೋವಿಡ್‌ ಆರ್ಭಟ ಭಾರೀ ಆತಂಕಕಾರಿಯಾಗಿದ್ದು, ಇಡೀ ದೇಶದಲ್ಲಿ ಆರೋಗ್ಯ ತುರ್ತು ಪರಿಸ್ಥಿತಿಯ ವಾತಾವರಣ ನಿರ್ಮಾಣವಾಗಿದೆ. ಅದೃಶ್ಯ ಹೆಮ್ಮಾರಿ ಕೋವಿಡ್‌-19 ವಿರುದ್ಧದ ಹೋರಾಟಕ್ಕೆ ಆರೋಗ್ಯ ಸಿಬ್ಬಂದಿಗಳು, ಅಧಿಕಾರಿಗಳು, ವಿಜ್ಞಾನಿಗಳು ಸೇರಿದಂತೆ ಇಡೀ ಸರ್ಕಾರಿ ವ್ಯವಸ್ಥೆ ತನ್ನೆಲ್ಲಾ ಸಂಪನ್ಮೂಲಗಳನ್ನು ಬಳಸಿಕೊಂಡು ಹೋರಾಟಕ್ಕೆ ಸಜ್ಜಾಗಿದೆ.

ಅದರಂತೆ ರಕ್ಷಣಾ ಸಚಿವಾಲಯ, ಭಾರತೀಯ ಸೇನೆಯೂ ಸಹ ಈ ಹೋರಾಟಕ್ಕೆ ಕೈಜೋಡಿಸಿ, ಜನಸಾಮಾನ್ಯರ ಸಹಾಯಕ್ಕೆ ನಿಂತಿದೆ. ಕೊರೋನಾ ವಿರುದ್ಧದ ಹೋರಾಟಕ್ಕೆ ಹೆಚ್ಚುವರಿ ಆರೋಗ್ಯ ಸಿಬ್ಬಂದಿಗಳ ನಿಯೋಜನೆ, ಕೋವಿಡ್‌ ಕೇಂದ್ರಗಳ ಸ್ಥಾಪನೆ ಮತ್ತು ವೈದ್ಯಕೀಯ ಸವಲತ್ತುಗಳ ಸರಬರಾಜು ಮಾಡುತ್ತಿದೆ.

ಹಣಕಾಸಿನ ಅಧಿಕಾರ

ಇಡೀ ದೇಶದ ಜನತೆ ಸೇನೆಯ ಸಾಮರ್ಥ್ಯದ ಮೇಲೆ ಅಪಾರ ನಂಬಿಕೆ ಇಟ್ಟಿದೆ. ಈ ನಿಟ್ಟಿನಲ್ಲಿ ಸಾಂಕ್ರಾಮಿಕ ರೋಗ ಸೃಷ್ಟಿಸಿರುವ ಬಿಕ್ಕಟ್ಟಿನ ಸಂದರ್ಭದಲ್ಲಿ ಸಾಧ್ಯವಾದ ಎಲ್ಲಾ ರೀತಿಯ ನೆರವು ನೀಡುವಂತೆ ಸೇನೆಗೆ ರಕ್ಷಣಾ ಸಚಿವ ರಾಜನಾಥ್‌ ಸಿಂಗ್‌ ಸೂಚಿಸಿದ್ದಾರೆ. ಅದಕ್ಕಾಗಿಯೇ ಹಣಕಾಸಿನ ತುರ್ತು ಬಳಕೆಗೆ ಸೇನೆಗೆ ಅಧಿಕಾರ ನೀಡಲಾಗಿದೆ. ಈ ಮೂಲಕ ಕ್ವಾರಂಟೈನ್‌ ಕೇಂದ್ರಗಳು, ಆಸ್ಪತ್ರೆ ಮತ್ತು ವೈದ್ಯಕೀಯ ಸಾಧನಗಳ ರಿಪೇರಿ ಮತ್ತಿತರ ಸೌಲಭ್ಯ ಒದಗಿಸಲು ಹಣಕಾಸಿಗೆ ಸಂಬಂಧಿಸಿದ ನಿರ್ಧಾರಗಳನ್ನು ವೈದ್ಯಕೀಯ ಸೇವೆಯ ಮಹಾ ನಿರ್ದೇಶಕರು, ಕಮಾಂಡ್‌ ಮೆಡಿಕಲ್‌ ಅಧಿಕಾರಿಗಳು ಕೈಗೊಳ್ಳಬಹುದಾಗಿದೆ.

ಬಂಗಾಳ ಗದ್ದುಗೆ ಗೆದ್ದ ಮಮತಾ ಬ್ಯಾನರ್ಜಿ ಮೋದಿಗೆ ಪರ್ಯಾಯವಾಗಿ ನಿಲ್ಲಬಲ್ಲರೇ?

ಕೋವಿಡ್‌ ವಿರುದ್ಧ ಹೋರಾಟದ ತತ್‌ಕ್ಷಣದ ಅಗತ್ಯಗಳಿಗೆ ಅನುಸಾರವಾಗಿ ಬೆಂಗಳೂರು, ದೆಹಲಿ, ಲಖನೌ ಮತ್ತು ಪಟನಾ ಮುಂದಾದ ನಗರಗಳಲ್ಲಿ ಕೋವಿಡ್‌ ಕೇಂದ್ರ/ ಆಸ್ಪತ್ರೆಗಳ ನಿರ್ಮಾಣ ಮಾಡಲಾಗಿದೆ. ಸೇನಾ ಆಸ್ಪತ್ರೆಗಳ ಸುಮಾರು 750 ಹಾಸಿಗೆಗಳನ್ನು ನಾಗರಿಕರ ಬಳಕೆಗೆ ಮೀಸಲಿಡಲಾಗಿದೆ. ಹಾಗೆಯೇ ಸೇನಾ ವೈದ್ಯಕೀಯ ಸೇವೆಯು 19 ಆಸ್ಪತ್ರೆ, 4000 ಹಾಸಿಗೆ ಮತ್ತು 585 ತೀವ್ರ ನಿಗಾ ಘಟಕಗಳನ್ನು ಕೋವಿಡ್‌ಗೆಂದೇ ಮೀಸಲಿಟ್ಟಿದೆ. ದೆಹಲಿಯ ಸೇನಾ ಆಸ್ಪತ್ರೆಯನ್ನು ಕೋವಿಡ್‌ ಆಸ್ಪತ್ರೆಯಾಗಿ ಪರಿವರ್ತಿಸಿ ಅದರ ಹಾಸಿಗೆ ಸಾಮರ್ಥ್ಯವನ್ನು 400ರಿಂದ 1000ಕ್ಕೆ ಹೆಚ್ಚಿಸಲಾಗಿದೆ.

ಡಿಆರ್‌ಡಿಒ ಆಸ್ಪತ್ರೆಗಳು

ನವದೆಹಲಿ, ಲಖನೌ, ಪಟನಾದಲ್ಲಿ ತಲಾ 500 ಹಾಸಿಗೆಗಳ ಆಸ್ಪತ್ರೆ, ಅಹಮದಾಬಾದಿನಲ್ಲಿ 900 ಹಾಸಿಗೆಗಳ ಆಸ್ಪತ್ರೆಯನ್ನು ಡಿಆರ್‌ಡಿಒ ಸಿದ್ಧಪಡಿಸಿದೆ. ಮುಜಾಫ್ಪರ್‌ಪುರ ಮತ್ತು ವಾರಾಣಸಿಯಲ್ಲೂ ಇಂಥದ್ದೇ ಆಸ್ಪತ್ರೆಗಳು ನಿರ್ಮಾಣವಾಗುತ್ತಿವೆ. ಹಾಗೆಯೇ ತಾತ್ಕಾಲಿಕ ಕೋವಿಡ್‌ ಕೇಂದ್ರ ನಿರ್ಮಾಣಕ್ಕೆ ಅಗತ್ಯ ತಾಂತ್ರಿಕ ನೆರವು ನೀಡುವುದಾಗಿ ಡಿಆರ್‌ಡಿಒ ತಿಳಿಸಿದೆ.

ಆರೋಗ್ಯ ಸಿಬ್ಬಂದಿ ನಿಯೋಜನೆ

ಕೊರೋನಾ ವಿರುದ್ಧದ ಹೋರಾಟಕ್ಕೆ ಸೇನೆಯು ಹೆಚ್ಚುವರಿ ವೈದ್ಯರು, ತಜ್ಞರು ಮತ್ತು ಸೂಪರ್‌ ಸ್ಪೆಷಲಿಸ್ಟ್‌, ಪ್ಯಾರಾಮೆಡಿಕ್ಸ್‌ಗಳನ್ನು ದೇಶದ ವಿವಿಧ ಆಸ್ಪತ್ರೆಗಳಲ್ಲಿ ನಿಯೋಜಿಸಿದೆ. ಅಲ್ಲದೆ ಇತ್ತೀಚೆಗೆ ನಿವೃತ್ತರಾದವರನ್ನೂ ಸೇವೆಗೆ ಮರು ನಿಯೋಜಿಸಿದೆ. ನಿವೃತ್ತರಿಂದ ಕೋವಿಡ್‌ ರೋಗಿಗಳಿಗೆ ಸಮಾಲೋಚನೆ ಒದಗಿಸುವ ವ್ಯವಸ್ಥೆಯನ್ನೂ ಜಾರಿ ಮಾಡಿದೆ.

ಸೇನಾ ಆಸ್ಪತ್ರೆ ಮೀಸಲು

ವೈರಸ್‌ ನಿಗ್ರಹಕ್ಕೆ ಸೇನೆ ತನ್ನೆಲ್ಲಾ ಸಂಪನ್ಮೂಲಗಳ ಸದ್ಬಳಕೆಗೆ ಮುಂದಾಗಿದ್ದು, ಯೋದರ ಚಿಕಿತ್ಸೆಗೆ ಮೀಸಲಿಟ್ಟಿರುವ ಆಸ್ಪತ್ರೆಗಳನ್ನು ಕೊರೋನಾ ಚಿಕಿತ್ಸೆಗೆ ಮೀಸಲಿಡುತ್ತಿದೆ, ಹೊಸದಾಗಿಯೂ ಆಸ್ಪತ್ರೆಗಳನ್ನು ನಿರ್ಮಿಸುತ್ತಿದೆ. ಉತ್ತರಪ್ರದೇಶದ ಲಖನೌ, ಪ್ರಯಾಗ್‌ರಾಜ್‌ನಲ್ಲಿ ತಲಾ 100, ಮಧ್ಯಪ್ರದೇಶದ ಭೋಪಾಲ್‌ ಮತ್ತು ಜಬಲಪುರ್‌ನಲ್ಲಿ ತಲಾ 100, ಗ್ವಾಲಿಯರ್‌ನಲ್ಲಿ 40 ಸಾಮಾನ್ಯ ಹಾಸಿಗೆಗಳು ಮತ್ತು ಜಾರ್ಖಂಡ್‌ನಲ್ಲಿ 50 ಹಾಸಿಗೆಯ ಐಸೋಲೇಷನ್‌ ಸೌಲಭ್ಯ, ಮಹಾರಾಷ್ಟ್ರದಲ್ಲಿ 60 ಐಸಿಯು ಬೆಡ್‌ ವ್ಯವಸ್ಥೆ ಮಾಡಿದೆ. ಅಷ್ಟೇ ಅಲ್ಲದೆ ಅಹಮದಾಬಾದ್‌, ಪಟನಾಗಳಲ್ಲಿ ಸೇನಾ ವೈದ್ಯ ಸಿಬ್ಬಂದಿಗಳನ್ನೂ ನಿಯೋಜಿಸಲಾಗಿದೆ. ಆಮ್ಲಜನಕ ಸರಬರಾಜಿಗೆಂದೇ 200 ಸೇನಾ ಚಾಲಕರನ್ನು ವಿವಿಧೆಡೆ ನಿಯೋಜಿಸಲಾಗಿದೆ.

ಸಿಂಗಾಪುರದಿಂದ ಆಕ್ಸಿಜನ್ ಟ್ಯಾಂಕ್ ಏರ್‌ಲಿಫ್ಟ್ ಮಾಡಿದ IAF ಏರ್‌ಕ್ರಾಫ್ಟ್‌.?

ಆಕ್ಸಿಜನ್‌ ಏರ್‌ಲಿಫ್ಟ್‌

ಭಾರತೀಯ ವಾಯುಸೇನೆ ವಿದೇಶಗಳಿಂದ ಮೆಡಿಕಲ್‌ ಆಕ್ಸಿಜನ್‌ ಸರಬರಾಜು ಮಾಡಲು ಟೊಂಕಕಟ್ಟಿನಿಂತಿದೆ. ಈವರೆಗೆ 1142 ಮೆಟ್ರಿಕ್‌ ಟನ್‌ ಸಾಮರ್ಥ್ಯದ 61 ಆಕ್ಸಿಜನ್‌ ಕಂಟೈನರ್‌ಗಳನ್ನು ವಿದೇಶಗಳಿಂದ ಏರ್‌ಲಿಫ್ಟ್‌ ಮಾಡಿದೆ. ಮೇ 5ರ ವರೆಗೆ ದೇಶದ ವಿವಿಧ ರಾಜ್ಯಗಳಿಗೆ 4527 ಮೆಟ್ರಿಕ್‌ ಟನ್‌ ಸಾಮರ್ಥ್ಯದ 230 ಆಕ್ಸಿಜನ್‌ ಕಂಟೈಂನರ್‌ಗಳನ್ನು ಸರಬರಾಜು ಮಾಡಿದೆ.

ಆಮ್ಲಜನಕ ಸರಬರಾಜಿಗೆ ಸೇನೆ ಹಡಗುಗಳನ್ನೂ ಬಳಕೆ ಮಾಡಿಕೊಂಡಿದೆ. ಐಎನ್‌ಎಸ್‌ ತಲ್ವಾರ್‌ ಮೇ 5ರಂದು ಬಹ್ರೇನ್‌ನಿಂದ ಮಂಗಳೂರಿಗೆ ಆಮ್ಲಕಜನಕ ಕಂಟೈನರ್‌ಗಳನ್ನು ಹೊತ್ತು ತಂದಿದೆ. ಅಲ್ಲದೆ ಐರಾವತ, ಜಲಾಶ್ವ ಮುಂತಾದ ಹಡಗುಗಳು ಮಧ್ಯಪ್ರಾಚ್ಯ, ದಕ್ಷಿಣ ಏಷ್ಯಾ ದೇಶಗಳಿಂದ ವೈದ್ಯಕೀಯ ಸಾಧನಗಳು ಮತ್ತು ಆಕ್ಸಿಜನ್‌ಯುಕ್ತ ಕ್ರಯೋಜೆನಿಕ್‌ ಕಂಟೈನರ್‌ ಸರಬರಾಜಿಗೆ ನಿಯುಕ್ತಿಯಾಗಿವೆ. ಹಾಗೂ ಆಗ್ರಾದಲ್ಲಿದ್ದ 2 ಆಕ್ಸಿಜನ್‌ ಘಟಕಗಳನ್ನು ರಿಪೇರಿ ಮಾಡಿದೆ. ಅವು ನಿತ್ಯ 1800 ಸಿಲಿಂಡರ್‌ ಆಮ್ಲಜನಕವನ್ನು ಒದಗಿಸಲಿವೆ.

ಆಮ್ಲಜನಕ ಘಟಕಗಳು

ಡಿಆರ್‌ಡಿಒ ಪಿಎಂ ಕೇ​ರ್‍ಸ್ ಫಂಡ್‌ ಬಳಸಿಕೊಂಡು ಬೆಂಗಳೂರು ಸೇರಿದಂತೆ ವಿವಿಧೆಡೆ 500 ಆಮ್ಲಜನಕ ಘಟಕ ಸ್ಥಾಪನೆಗೆ ನಿರ್ಧರಿಸಿದೆ. ದೆಹಲಿಯ ಏಮ್ಸ್‌ ಮತ್ತು ಆರ್‌ಎಂಎಲ್‌ ಆಸ್ಪತ್ರೆಯಲ್ಲಿ ಈಗಾಗಲೇ ಇಂಥ 2 ಘಟಕಗಳನ್ನು ಸ್ಥಾಪಿಸಲಾಗಿದೆ. ಉಳಿದವುಗಳನ್ನು ಇನ್ನು 3 ತಿಂಗಳಲ್ಲಿ ನಿರ್ಮಾಣ ಮಾಡುವ ಗುರಿ ಹಾಕಿಕೊಳ್ಳಲಾಗಿದೆ. ಹಾಗೆಯೇ 23 ಮೊಬೈಲ್‌ ಆಕ್ಸಿಜನ್‌ ಜನರೇಟಿಂಗ್‌ ಘಟಕಗಳ ನಿರ್ಮಾಣಕ್ಕೂ ನಿರ್ಧರಿಸಲಾಗಿದೆ. ಈ ವಾರದಲ್ಲೇ ಇವು ಸ್ಥಾಪನೆಯಾಗುವ ನಿರೀಕ್ಷೆ ಇದೆ.

ಜೊತೆಗೆ ಎಚ್‌ಎಎಲ್‌ ಸೇರಿದಂತೆ ಹಲವು ರಕ್ಷಣಾ ಸಂಸ್ಥೆಗಳು ಆಕ್ಸಿಜನ್‌ ಬೆಡ್‌, ವೈದ್ಯಕೀಯ ಸಲಕರಣೆಗಳನ್ನು ಒದಗಿಸುವ ಮೂಲಕ ವಿವಿಧ ರಾಜ್ಯಗಳ ಜೊತೆಗೆ ಕೈಜೋಡಿಸಿ ಕೋವಿಡ್‌ ಹೋರಾಟಕ್ಕೆ ಕೈಜೋಡಿಸಿವೆ. ಬೆಂಗಳೂರಿನಲ್ಲಿ ಎಚ್‌ಎಎಲ್‌ ವೆಂಟಿಲೇಟರ್‌ ಮತ್ತು ಆಮ್ಲಜನಕದ ವ್ಯವಸ್ಥೆ ಇರುವ 180 ಹಾಸಿಗೆ ಇರುವ ಕೋವಿಡ್‌ ಕೇಂದ್ರವನ್ನು ನಿರ್ಮಿಸಿದೆ. 250 ಹಾಸಿಗೆ ಸಾಮರ್ಥ್ಯದ ಮತ್ತೊಂದು ಕೋವಿಡ್‌ ಕೇಂದ್ರ ಬೆಂಗಳೂರಿನಲ್ಲಿ ನಿರ್ಮಾಣವಾಗುತ್ತಿದೆ.

ಒಡಿಶಾದಲ್ಲಿ 70 ಹಾಸಿಗೆಗಳು ಮತ್ತು ಮಹಾರಾಷ್ಟ್ರದ ನಾಸಿಕ್‌ನಲ್ಲಿ 40 ಹಾಸಿಗೆ ಸಾಮರ್ಥ್ಯದ ಇಂಥದ್ದೇ ಆಸ್ಪತ್ರೆಗಳು ನಿರ್ಮಾಣವಾಗಿವೆ. ಉತ್ತರ ಪ್ರದೇಶದ ಲಖನೌನಲ್ಲಿ ಎಚ್‌ಎಎಲ್‌ 250 ಬೆಡ್‌ಗಳ ಆಸ್ಪತ್ರೆ ನಿರ್ಮಿಸುತ್ತಿದೆ. ಹಾಗೆಯೇ ಕೊರೋನಾದಿಂದ ತೀವ್ರ ಬಾಧಿತವಾಗಿರುವ ಬೆಂಗಳೂರು ಮತ್ತು ಲಖನೌ ನಗರಗಳಿಗೆ ಹೆಚ್ಚಿನ ವೆಂಟಿಲೇಟರ್‌ ಮತ್ತು ಆಮ್ಲಜನಕ ಒದಗಿಸಲು ಎಚ್‌ಎಎಲ್‌ ಯೋಜನೆ ರೂಪಿಸಿದೆ.

ರಕ್ಷಣಾ ಇಲಾಖೆ ಅಡಿಯಲ್ಲಿ ಕಾರ‍್ಯನಿರ್ವಹಿಸುವ ಕಂಟೋನ್ಮೆಂಟ್‌ ಬೋರ್ಡ್‌ ಇಲಾಖೆ ಸಹ ಕೊರೋನಾ ಕುರಿತು ಜಾಗೃತಿ ಮೂಡಿಸುವಲ್ಲಿ ನಿರತವಾಗಿದೆ. ಸದ್ಯ 39 ಕಂಟೋನ್ಮೆಂಟ್‌ ಬೋರ್ಡ್‌ಗಳು ದೇಶದ ವಿವಿಧೆಡೆ 40 ಜನರಲ್‌ ಆಸ್ಪತ್ರೆಗಳಲ್ಲಿ 1240 ಹಾಸಿಗೆ ವ್ಯವಸ್ಥೆ ಮಾಡಿವೆ. 37 ಕಂಟೋನ್ಮೆಂಟ್‌ ಬೋರ್ಡ್‌ಗಳಲ್ಲಿ ಆಕ್ಸಿಜನ್‌ ಸೌಲಭ್ಯ ಸಹ ಒದಗಿಸಲಾಗುತ್ತಿದೆ.

ಕೊರೋನಾ 2ನೇ ಅಲೆ ವಿರುದ್ಧದ ಹೋರಾಟಕ್ಕೆ ಮತ್ತು ಲಸಿಕೆ ಅಭಿಯಾನಕ್ಕೆ ರಾಜ್ಯ ಸರ್ಕಾರಗಳಿಗೆ ನೆರವಾಗಲು ಎನ್‌ಸಿಸಿ ಅಧಿಕಾರಿಗಳಿಗೂ ಸೂಚಿಸಲಾಗಿದೆ. ಕೊರೋನಾ ನಿಗ್ರಹಕ್ಕೆ ಭಾರತೀಯ ಸೇನೆ ರಾಜ್ಯ ಸರ್ಕಾರ ಮತ್ತು ಸ್ಥಳೀಯ ಸರ್ಕಾರದೊಂದಿಗೆ ಕೈಜೋಡಿಸಿರುವುದು ಮಾತ್ರವಲ್ಲದೆ ಲಸಿಕೆ ಅಭಿಯಾನದಲ್ಲೂ ಸೇನೆ ಮಹತ್ತರ ಪಾತ್ರ ವಹಿಸುತ್ತಿದೆ. 

- ರಾಜನಾಥ್‌ ಸಿಂಗ್‌, ರಕ್ಷಣಾ ಸಚಿವ

- ವಿಶೇಷ ಲೇಖನ

Follow Us:
Download App:
  • android
  • ios