ಕೇಂದ್ರ ಸರ್ಕಾರದಿಂದ ಜನತೆಗೆ ದೀಪಾವಳಿ ಗಿಫ್ಟ್, ಕೆಜಿಗೆ 27.50 ರೂಪಾಯಿಗೆ ಸಿಗಲಿದೆ ಗೋಧಿ ಹಿಟ್ಟು!
ದೀಪಾವಳಿ ಸಮಯದಲ್ಲಿ ಕೇಂದ್ರ ಸರ್ಕಾರ ಬಡ ಜನತೆಗೆ ಗಿಫ್ಟ್ ನೀಡಿದೆ. ಭಾರತ್ ಆಟಾ ಎನ್ನುವ ಬ್ರ್ಯಾಂಡ್‌ನ ಹೆಸರಲ್ಲಿ ಗೋಧಿ ಹಿಟ್ಟನ್ನು ಪ್ರತಿ ಕೆಜಿಗೆ 27.50 ರೂಪಾಯಿಯಂತೆ ಮಾರಾಟ ಮಾಡಲಿದೆ. ಕಡಲೆ ಬೇಳೆಯನ್ನು ಕೆಜಿಗೆ 60 ರೂಪಾಯಿಯಂತೆ ಮಾರಾಟ ಮಾಡಲಿದೆ.

ನವದೆಹಲಿ (ನ.6): ದೀಪಾವಳಿ ಹಬ್ಬದ ಸಂಭ್ರಮ ದೇಶದಲ್ಲಿ ಮನೆ ಮಾಡಿರುವ ಹೊತ್ತಿನಲ್ಲಿ ಕೇಂದ್ರ ಸರ್ಕಾರ ಜನತೆಗೆ ಭರ್ಜರಿ ಗಿಫ್ಟ್ ನೀಡಿದೆ. ಪ್ರಸ್ತುತ ದೇಶದಲ್ಲಿ ಒಂದು ಕೆಜಿ ಗೋಧಿ ಬ್ರ್ಯಾಂಡೆಡ್ ಹಿಟ್ಟಿನ ಬೆಲೆ 60 ರಿಂದ 70ರ ನಡುವೆ ಇದೆ. ಆದರೆ, ಕೇಂದ್ರ ಸರ್ಕಾರ ಭಾರತ್ ಆಟಾ ಎನ್ನುವ ಬ್ರ್ಯಾಂಡ್‌ನಲ್ಲಿ ಪ್ರತಿ ಕೆಜಿ ಗೋಧಿ ಹಿಟ್ಟನ್ನು ಪ್ರತಿ ಕೆಜಿಗೆ 27.50ಯಂತೆ ಮಾರಾಟ ಮಾಡಲಿದೆ. ಕೇಂದ್ರ ಸಚಿವ ಪಿಯೂಷ್ ಗೋಯಲ್ ಅವರು ಸೋಮವಾರ ದೆಹಲಿಯಲ್ಲಿ ಭಾರತ್ ಆಟಾ ವಿತರಣಾ ವಾಹನಗಳಿಗೆ (ಮೊಬೈಲ್ ವ್ಯಾನ್) ಚಾಲನೆ ನೀಡಿದರು. ಇದು 10 ಕೆಜಿ ಮತ್ತು 30 ಕೆಜಿ ಪ್ಯಾಕ್‌ಗಳಲ್ಲಿ ಲಭ್ಯವಾಗಲಿದೆ. ದೇಶಾದ್ಯಂತ 2 ಸಾವಿರ ಮಳಿಗೆಗಳಲ್ಲಿ ಈ ಹಿಟ್ಟು ಲಭ್ಯವಾಗಲಿದೆ. ಇದನ್ನು ನ್ಯಾಷನಲ್ ಅಗ್ರಿಕಲ್ಚರಲ್ ಕೋಆಪರೇಟಿವ್ ಮಾರ್ಕೆಟಿಂಗ್ ಫೆಡರೇಶನ್ ಆಫ್ ಇಂಡಿಯಾ ಲಿಮಿಟೆಡ್ (NAFED), ನ್ಯಾಷನಲ್ ಕೋಆಪರೇಟಿವ್ ಕನ್ಸೂಮರ್ಸ್ ಫೆಡರೇಶನ್ ಆಫ್ ಇಂಡಿಯಾ (NCCF), ಸಫಲ್, ಮದರ್ ಡೈರಿ ಮತ್ತು ಇತರ ಸಹಕಾರಿ ಸಂಸ್ಥೆಗಳ ಮೂಲಕ ಮಾರಾಟ ಮಾಡಲಾಗುತ್ತದೆ. ಇದಕ್ಕಾಗಿ 2.5 ಲಕ್ಷ ಮೆಟ್ರಿಕ್ ಟನ್ ಗೋಧಿಯನ್ನು ವಿವಿಧ ಸರ್ಕಾರಿ ಸಂಸ್ಥೆಗಳಿಗೆ ಹಂಚಿಕೆ ಮಾಡಲಾಗಿದೆ ಎಂದು ಕೇಂದ್ರ ಸಚಿವ ಪಿಯೂಷ್ ಗೋಯಲ್ ಈ ವೇಳೆ ತಿಳಿಸಿದರು. ಗ್ರಾಹಕರ ವ್ಯವಹಾರಗಳ ಇಲಾಖೆಯ ಪ್ರಕಾರ, ಪ್ರಸ್ತುತ ದೇಶದಲ್ಲಿ ಹಿಟ್ಟಿನ ಸರಾಸರಿ ಬೆಲೆ ಕೆಜಿಗೆ 35 ರೂಪಾಯಿ ಆಗಿದೆ.
ಗೋಧಿ ಬೆಲೆ ಏರಿಕೆಯಿಂದಾಗಿ ಈ ನಿರ್ಧಾರ ಕೈಗೊಳ್ಳಲಾಗಿದೆ. ಮಾರುಕಟ್ಟೆಯಲ್ಲಿ ಬ್ರಾಂಡ್ ಅಲ್ಲದ ಹಿಟ್ಟಿನ ಚಿಲ್ಲರೆ ಬೆಲೆ ಕೆಜಿಗೆ 30-40 ರೂ.ಗಳಾಗಿದ್ದು, ಬ್ರ್ಯಾಂಡೆಡ್ ಹಿಟ್ಟು ಕೆಜಿಗೆ 50-60ರೂಪಾಯಿ ವರೆಗೆ ಮಾರಾಟವಾಗುತ್ತಿದೆ. ನಿರಂತರವಾಗಿ ದೇಶದಲ್ಲಿ ಗೋಧಿ ಹಿಟ್ಟಿನ ಬೆಲೆ ಏರಿಕೆ ಆಗುತ್ತಿದೆ. ಹಬ್ಬದ ಸಮಯದಲ್ಲಿ ಹಿಟ್ಟಿನ ಬೆಲೆಗಳಲ್ಲಿ ಏರಿಕೆ ಆದರೆ, ಜನಸಾಮಾನ್ಯರಿಗೆ ಕಷ್ಟವಾಗುತ್ತದೆ ಎನ್ನುವುದನ್ನು ಅರಿತ ಕೇಂದ್ರ ಸರ್ಕಾರ, ಕಡಿಮೆ ಬೆಲೆಗೆ ತನ್ನದೇ ಬ್ರ್ಯಾಂಡ್‌ನ ಹಿಟ್ಟುಗಳನ್ನು ಮಾರಾಟ ಮಾಡಲು ನಿರ್ಧಾರ ಮಾಡಿದೆ.
ಅಗ್ಗದ ದರದಲ್ಲಿ ಈರುಳ್ಳಿ ಹಾಗೂ ಬೇಳೆಕಾಳುಗಳ ಮಾರಾಟ: ಈರುಳ್ಳಿ ಬೆಲೆ ಏರಿಕೆಯಿಂದ ಗ್ರಾಹಕರಿಗೆ ನಿರಾಳತೆ ನೀಡಲು ಸರ್ಕಾರ ಪ್ರತಿ ಕೆ.ಜಿ.ಗೆ ₹ 25 ದರದಲ್ಲಿ ಈರುಳ್ಳಿ ಮಾರಾಟ ಮಾಡುತ್ತಿದೆ. ಭಾರತದ ರಾಷ್ಟ್ರೀಯ ಸಹಕಾರಿ ಗ್ರಾಹಕರ ಒಕ್ಕೂಟ ಅಂದರೆ NCCF ಮತ್ತು NAFED ಈಗಾಗಲೇ ಪ್ರತಿ ಕೆಜಿಗೆ ₹ 25 ದರದಲ್ಲಿ ಬಫರ್ ಈರುಳ್ಳಿ ಮಾರಾಟ ಮಾಡುತ್ತಿವೆ. ಎನ್‌ಸಿಸಿಎಫ್ 20 ರಾಜ್ಯಗಳಾದ್ಯಂತ 54 ನಗರಗಳಲ್ಲಿ 457 ಚಿಲ್ಲರೆ ಅಂಗಡಿಗಳಲ್ಲಿ ಸಬ್ಸಿಡಿ ದರದಲ್ಲಿ ಈರುಳ್ಳಿಯನ್ನು ಮಾರಾಟ ಮಾಡುತ್ತಿದೆ. ಆದರೆ ನಾಫೆಡ್ 21 ರಾಜ್ಯಗಳ 55 ನಗರಗಳಲ್ಲಿ 329 ಚಿಲ್ಲರೆ ಅಂಗಡಿಗಳಲ್ಲಿ ರಿಯಾಯಿತಿ ದರದಲ್ಲಿ ಈರುಳ್ಳಿ ಮಾರಾಟ ಮಾಡುತ್ತಿದೆ.
ಕರ್ನಾಟಕದಲ್ಲಿ ಭೀಕರ ಬರಗಾಲ: ಆಹಾರ ಉತ್ಪಾದನೆ ಅರ್ಧಕ್ಕರ್ಧ ಕುಸಿತ..!
ಕೇಂದ್ರೀಯ ಭಂಡಾರ್ ಕಳೆದ ಶುಕ್ರವಾರದಿಂದ ದೆಹಲಿ-ಎನ್‌ಸಿಆರ್‌ನಲ್ಲಿರುವ ತನ್ನ ಮಳಿಗೆಗಳಿಂದ ಈರುಳ್ಳಿ ಚಿಲ್ಲರೆ ಮಾರಾಟವನ್ನು ಪ್ರಾರಂಭಿಸಿದೆ. ಇದಲ್ಲದೇ ಸರ್ಕಾರವು ಭಾರತ್ ದಾಲ್ (ಬೇಳೆ ಕಾಳುಗಳು) ಕೆಜಿಗೆ 60 ರೂಪಾಯಿಯಂತೆ ಮಾರಾಟ ಮಾಡುತ್ತಿದೆ.
ಜನಸಾಮಾನ್ಯರಿಗೆ ಗುಡ್ ನ್ಯೂಸ್: ಕೇಂದ್ರ ಸರ್ಕಾರದಿಂದ 25 ರೂ.ಗೆ ಈರುಳ್ಳಿ ಮಾರಾಟ