ಹಸುವಿನ ಸಗಣಿ ಕುರಿತು ಹೆಚ್ಚಿನ ಸಂಶೋಧನೆಗೆ ಕೇಂದ್ರ ಸಚಿವ ಗಿರಿರಾಜ್ ಸಿಂಗ್ ಆಗ್ರಹ!
'ಹಸುವಿನ ಸಗಣಿ ಹಾಗೂ ಮೂತ್ರದಲ್ಲಿ ರೋಗ ನಿರೋಧಕ ಅಂಶ'| ಕೇಂದ್ರ ಸಚಿವ ಗಿರಿರಾಜ್ ಸಿಂಗ್ ಅಭಿಮತ| ರೈತ ಸಮುದಾಯ ಗೋ ಸಾಕಾಣಿಕೆಯ ಲಾಭ ಅರಿಯಬೇಕು ಎಂದ ಗಿರಿರಾಜ್| ಹಸುವಿನ ಸಗಣಿ, ಮೂತ್ರದ ಕುರಿತು ಹೆಚ್ಚಿನ ಸಂಶೋಧನೆಗೆ ಆಗ್ರಹಿಸಿದ ಕೇಂದ್ರ ಸಚಿವ| 'ದೇಶದ ಆರ್ಥಿಕ ಬೆಳವಣಿಗೆಯಲ್ಲಿ ಮಹತ್ವದ ಪಾತ್ರ ನಿರ್ವಹಿಸಲಿರುವ ಗೋಮಾತೆ'|
ನವದೆಹಲಿ(ಜ.15): ಹಸುವಿನ ಸಗಣಿ ಹಾಗೂ ಮೂತ್ರದಲ್ಲಿ ರೋಗ ನಿರೋಧಕ ಅಂಶಗಳಿದ್ದು, ಈ ಕುರಿತು ಹೆಚ್ಚಿನ ವೈಜ್ಞಾನಿಕ ಸಂಶೋಧನೆ ನಡೆಸುವ ಅಗತ್ಯವಿದೆ ಎಂದು ಕೇಂದ್ರ ಸಚಿವ ಗಿರಿರಾಜ್ ಸಿಂಗ್ ಅಭಿಪ್ರಾಯಪಟ್ಟಿದ್ದಾರೆ.
12 ರಾಜ್ಯಗಳ ವಿವಿಧ ವಿಶ್ವವಿದ್ಯಾಲಯಗಳ ಕುಲಪತಿಗಳು ಹಾಗೂ ಪಶುವೈದ್ಯ ಅಧಿಕಾರಿಗಳ ಸಮಾವೇಶದಲ್ಲಿ ಮಾತನಾಡಿದ ಗಿರಿರಾಜ್ ಸಿಂಗ್, ಗೋಮಾತೆಯ ಸಕಾಣಿಕೆ ಲಾಭದಾಯಕ ಎಂಬುದನ್ನು ನಾಡಿನ ರೈತ ಸಮುದಾಯ ಅರಿಯಬೇಕಿದೆ ಎಂದು ಹೇಳಿದರು.
ಗೋಮಾತೆಯ ಸಾಕಾಣಿಕೆಯ ಲಾಭ ಹಾಗೂ ಅದರ ಸಗಣಿ ಮತ್ತು ಮೂತ್ರದ ಮಹತ್ವದ ಕುರಿತು ವಿಶ್ವ ವಿದ್ಯಾಲಯಗಳು ಇನ್ನೂ ಹೆಚ್ಚಿನ ಸಂಶೋಧನೆ ಕೈಗೊಳ್ಳಬೇಕು ಎಂದು ಈ ವೇಳೆ ಗಿರಿರಾಜ್ ಸಿಂಗ್ ಆಗ್ರಹಿಸಿದರು.
ಭವಿಷ್ಯದಲ್ಲಿ ದೇಶದ ಆರ್ಥಿಕ ಬೆಳವಣಿಗೆಯಲ್ಲಿ ಹಸುವಿನ ಸಗಣಿ ಹಾಗೂ ಮೂತ್ರ ಅತ್ಯಂತ ಮಹತ್ವದ ಪಾತ್ರ ನಿರ್ವಹಿಸಲಿವೆ ಎಂದೂ ಗಿರಿರಾಜ್ ಸಿಂಗ್ ಅಭಿಪ್ರಾಯಪಟ್ಟಿದ್ದಾರೆ.
ಗೋಮಾತೆಯ ಮಹತ್ವದ ಅರಿವಿದ್ದೇ ಮಹಾತ್ಮಾ ಗಾಂಧಿಜೀ, ರಾಮ್ ಮನೋಹರ್ ಲೋಹಿಯಾ ಹಾಗೂ ದೀನ್ ದಯಾಳ್ ಉಪಾಧ್ಯಾಯ ಅವರಂತ ಮಹನೀಯರು ಹಸು ಸಾಕಾಣಿಕೆಗೆ ಕರೆ ಕೊಟ್ಟಿದ್ದರು ಎಂದು ಗಿರಿರಾಜ್ ಸಿಂಗ್ ಹೇಳಿದ್ದಾರೆ.