Asianet Suvarna News Asianet Suvarna News

ಬಿಜೆಪಿ ಮೋದಿ ಹೆಸರಲ್ಲಿ ವೋಟು ಕೇಳೋದೇಕೆ?: ಅಮಿತ್‌ ಶಾ

ಗುಜರಾತ್‌ ವಿಧಾನಸಭಾ ಚುನಾವಣೆ ಸಮೀಪಿಸುತ್ತಿದೆ. ಈ ಹಿನ್ನೆಲೆಯಲ್ಲಿ ಬಿಜೆಪಿ ನಾಯಕ ಹಾಗೂ ಕೇಂದ್ರ ಗೃಹ ಸಚಿವ ಅಮಿತ್‌ ಶಾ ಅವರು ಗುಜರಾತಿನ ಪ್ರಸ್ತುತ ರಾಜಕೀಯ, ಬಿಜೆಪಿಯ ಪ್ರಬಲ ಪ್ರತಿಸ್ಪರ್ಧಿಗಳು, ಈವರೆಗಿನ ಬಿಜೆಪಿ ಸರ್ಕಾರದ ಸಾಧನೆಗಳು ಹಾಗೂ ತಮ್ಮ ಮುಂದಿನ ಗುರಿಗಳ ಬಗ್ಗೆ ಸವಿಸ್ತಾರವಾಗಿ ಮಾತನಾಡಿದ್ದಾರೆ. ಅಲ್ಲದೆ ದಾಖಲೆಯ ಮತಗಳೊಂದಿಗೆ ಗೆಲುವು ಸಾಧಿಸುವ ವಿಶ್ವಾಸ ವ್ಯಕ್ತಪಡಿಸಿದ್ದಾರೆ.

union home minister amit shah exclusive interview gvd
Author
First Published Nov 21, 2022, 5:27 AM IST

ಸಂದರ್ಶನ: ಅಮಿತ್‌ ಶಾ, ಕೇಂದ್ರ ಗೃಹ ಸಚಿವ

* ಪ್ರಸ್ತುತ ಗುಜರಾತಿನ ರಾಜಕೀಯ ಕಾವು ಹೇಗಿದೆ?
ಚುನಾವಣೆ ಸಮೀಪಿಸುತ್ತಿದ್ದಂತೆ ಪ್ರಜಾಪ್ರಭುತ್ವ ರಾಷ್ಟ್ರಗಳಲ್ಲಿ ರಾಜಕೀಯ ಕಾವೇರುವುದು ಸಹಜವಾದ ಪ್ರಕ್ರಿಯೆ. ಎಲ್ಲ ಪಕ್ಷಗಳು ತಮ್ಮ ತಮ್ಮ ವಿಚಾರಧಾರೆ, ಅಜೆಂಡಾಗಳೊಂದಿಗೆ ಜನರ ಬಳಿ ಮತ ಯಾಚನೆಗೆ ಇಳಿದಿವೆ. ಆದರೆ ಈ ಬಾರಿ ಗುಜರಾತ್‌ ಚುನಾವಣೆಯಲ್ಲಿ ಬಿಜೆಪಿ ಅತಿ ಹೆಚ್ಚು ಸೀಟುಗಳನ್ನು ಗೆಲ್ಲುವ ಹಾಗೂ ಅತಿ ಹೆಚ್ಚು ಶೇಕಡಾವಾರು ಮತಗಳನ್ನು ಪಡೆಯುವ ಎರಡೂ ದಾಖಲೆಯನ್ನು ಮುರಿದು ಅಭೂತಪೂರ್ವ ಗೆಲುವು ಸಾಧಿಸಲಿದೆ ಎಂದು ನಾನು ಸಂಪೂರ್ಣ ವಿಶ್ವಾಸದಿಂದ ಹೇಳುತ್ತಿದ್ದೇನೆ.

* 27 ವರ್ಷಗಳಿಂದಲೂ ಬಿಜೆಪಿ ಆಡಳಿತ ನೋಡಿದ ಜನರು ಈ ಬಾರಿ ಬೇರೆ ಪಕ್ಷದತ್ತ ಮನಸ್ಸು ಮಾಡಬಹುದು ಎಂಬ ಭೀತಿ ಇದೆಯೇ?
ಗುಜರಾತ್‌ನ ಯುವಕರು ರಾಜ್ಯದಲ್ಲಿ ಕಾಂಗ್ರೆಸ್‌ ಆಡಳಿತವನ್ನೇ ನೋಡಿಲ್ಲ. ಆದರೆ ಇತರೆ ರಾಜ್ಯಗಳಲ್ಲಿ ಅವರು ಕಾಂಗ್ರೆಸ್‌ ಆಡಳಿತವನ್ನು ಹಾಗೂ ಅವರ ಅವಧಿಯಲ್ಲಾದ 12 ಲಕ್ಷ ಕೋಟಿ ರು. ಅವ್ಯವಹಾರ, ಭ್ರಷ್ಟಾಚಾರದ ಪ್ರಕರಣಗಳನ್ನು ಕಂಡಿದ್ದಾರೆ. ಇದರೊಂದಿಗೆ ಕಳೆದ 8 ವರ್ಷದಿಂದ ಕೇಂದ್ರದಲ್ಲಿ ನರೇಂದ್ರ ಮೋದಿಯವರ ನೇತೃತ್ವದ ಬಿಜೆಪಿ ಸರ್ಕಾರವನ್ನೂ ನೋಡುತ್ತಿದ್ದಾರೆ. ನಮ್ಮ ಸರ್ಕಾರವು 11ನೇ ಸ್ಥಾನದಲ್ಲಿದ್ದ ದೇಶದ ಆರ್ಥಿಕತೆಯನ್ನು ಇಂದು 5ನೇ ಸ್ಥಾನಕ್ಕೆ ತಂದು ನಿಲ್ಲಿಸಿದೆ. ದೇಶದ ಗಡಿಗಳನ್ನು ಭಯೋತ್ಪಾದನೆಯ ಆತಂಕದಿಂದ ಸುರಕ್ಷಿತಗೊಳಿಸಿದ್ದಲ್ಲದೆ, ನಮ್ಮ ಸಂಸ್ಕೃತಿಯನ್ನು ಎತ್ತಿ ಹಿಡಿದು ದೇಶದ ಗೌರವವನ್ನು ಹೆಚ್ಚಿಸುವ ಕಾರ್ಯವನ್ನು ಮಾಡಿದೆ. ಇದನ್ನೆಲ್ಲ ಗುಜರಾತಿನ ಯುವಕರು ನೋಡಿದ್ದಾರೆ. ಅದೇ ಕಾಂಗ್ರೆಸ್‌ನ ಆಳ್ವಿಕೆ 365 ದಿನಗಳಲ್ಲಿ 250 ದಿನಗಳು ಕರ್ಫ್ಯೂ ಇರುವುದು ಇವರಿಗೆ ತಿಳಿದಿದೆ. ದಿನಕ್ಕೆ ಕೇವಲ 7 ಗಂಟೆ ವಿದ್ಯುತ್‌ ಸಿಗುತ್ತಿದ್ದ ರಾಜ್ಯದಲ್ಲಿ ಇಂದು 24 ಗಂಟೆಯೂ ವಿದ್ಯುತ್‌ ಒದಗಿಸಲಾಗುತ್ತಿದೆ. ಇದನ್ನೆಲ್ಲ ತಿಳಿದುಕೊಂಡ ಗುಜರಾತಿನ ಯುವಜನತೆಗೆ ತಮ್ಮ ಉಜ್ವಲ ಭವಿಷ್ಯ ಬಿಜೆಪಿಯೊಂದಿಗಿದೆ ಎಂಬುದು ಚೆನ್ನಾಗಿ ತಿಳಿದಿದೆ. ಹೀಗಾಗಿ ನಮಗೆ ಯಾವ ಭೀತಿಯೂ ಇಲ್ಲ.

ಬಿಜೆಪಿ ಸೇರಿಕೊಳ್ತಾರ ಧೋನಿ? ಅಮಿತ್ ಶಾ ಜೊತೆ ಕಾಣಿಸಿಕೊಂಡ ಕ್ಯಾಪ್ಟನ್ ಕೂಲ್!

* ಈ ಚುನಾವಣೆಯಲ್ಲಿ ಪ್ರಬಲ ಪ್ರತಿಸ್ಪರ್ಧಿಯಾಗಿ ನೀವು ಯಾರನ್ನು ಕಾಣುತ್ತಿದ್ದೀರಿ?
ಕಳೆದ 27 ವರ್ಷಗಳಿಂದಲೂ ಗುಜರಾತ್‌ನಲ್ಲಿ ಬಿಜೆಪಿ ಸರ್ಕಾರವಿದೆ. ನಮ್ಮ ಸರ್ಕಾರದ ಅಡಿಯಲ್ಲಿಯೇ ಗುಜರಾತ್‌ ಸಾಕಷ್ಟುಅಭಿವೃದ್ಧಿಯನ್ನೂ ಸಾಧಿಸಿದೆ. ಮುಂದಿನ 10 ವರ್ಷಗಳಲ್ಲಿ ಮಾಡಬೇಕಾದ ಅಭಿವೃದ್ಧಿ ಕಾರ್ಯಗಳ ಸಂಪೂರ್ಣವಾದ ರೋಡ್‌ಮ್ಯಾಪ್‌ ಕೂಡ ನಮ್ಮ ಬಳಿ ಇದೆ. ಹೀಗಾಗಿ ನಾವು ಕಾಂಗ್ರೆಸ್‌ ಅಥವಾ ಇತ್ತೀಚೆಗೆ ಗುಜರಾತ್‌ನಲ್ಲಿ ನೆಲೆಕಾಣಲು ಬಯಸುತ್ತಿರುವ ಆಮ್‌ ಆದ್ಮಿ ಪಕ್ಷವನ್ನು ಸೋಲಿಸಲು ಕಣಕ್ಕಿಳಿಯುತ್ತಿಲ್ಲ. ಗುಜರಾತ್‌ ಅಭಿವೃದ್ಧಿಯ ಉದ್ದೇಶದಿಂದ ಚುನಾವಣಾ ಕಣಕ್ಕಿಳಿದಿದ್ದೇವೆ.

* ಗುಜರಾತ್‌ನಲ್ಲಿ ಮತ್ತೆ ಬಿಜೆಪಿ ಗೆದ್ದು ಬಂದರೆ ಜನರು ಯಾವ ರೀತಿಯ ಅಭಿವೃದ್ಧಿ ನೋಡಲಿದ್ದಾರೆ?
ಗುಜರಾತ್‌ನಲ್ಲಿ ನಾವು 9 ಹೆದ್ದಾರಿಗಳನ್ನು ನಿರ್ಮಾಣ ಮಾಡಿದ್ದೇವೆ. ಪ್ರತಿಯೊಂದು ತೀರ್ಥ ಕ್ಷೇತ್ರವನ್ನೂ ರಸ್ತೆಯೊಂದಿಗೆ ಸಂಪರ್ಕಿಸಿದ್ದೇವೆ. ಗುಜರಾತಿನ ಗ್ರಾಮಗಳಿಗೂ ರಸ್ತೆಯ ಸೌಲಭ್ಯವನ್ನು ಒದಗಿಸಿದ್ದೇವೆ. ಇಲ್ಲಿ ದೇಶದ ಅತ್ಯುತ್ತಮ ಶಿಕ್ಷಣ ಸಂಸ್ಥೆಗಳನ್ನು ಕಾಣಬಹುದಾಗಿದೆ. ಇದರೊಂದಿಗೆ ಸ್ಟಾರ್ಚ್‌ಅಪ್‌ಗಳ ಉಪಕ್ರಮಗಳು ಹಾಗೂ ಹೊಸ ನೀತಿಗಳನ್ನು ಈಗಾಗಲೇ ಘೋಷಿಸಲಾಗಿದ್ದು, ಇವುಗಳ ಅನುಷ್ಠಾನ ಕಾರ್ಯವನ್ನು ನಡೆಸಲಾಗುವುದು. ಈಗಾಗಲೇ ನಾವು ವಿಕಾಸದ ವಾತಾವರಣವನ್ನು ರಾಜ್ಯದಲ್ಲಿ ಸೃಷ್ಟಿಸಿದ್ದೇವೆ. ಇನ್ನು ಗುಜರಾತಿನ ಅರ್ಥವ್ಯವಸ್ಥೆಯನ್ನು ಹಾಗೂ ಗುಜರಾತಿನ ಜನರನ್ನು ವಿಕಾಸದ ಹಾದಿಯಲ್ಲಿ ಕರೆದೊಯ್ಯುವ ಕಾರ್ಯ ಇನ್ನು ನಡೆಯಲಿದೆ.

* ಈ ಬಾರಿ ಗುಜರಾತಿನಲ್ಲಿ ತ್ರಿಕೋನ ಸ್ಪರ್ಧೆ ಅಚ್ಚರಿಯ ಫಲಿತಾಂಶಗಳಿಗೆ ಕಾರಣವಾಗಬಹುದು ಎಂದೆನಿಸುತ್ತದೆಯೇ?
ಗುಜರಾತಿನಲ್ಲಿ 1990ರ ನಂತರ ಲೋಕಸಭೆಯಾಗಲೀ, ವಿಧಾನಸಭೆಯಾಗಲೀ ಯಾವುದೇ ಚುನಾವಣೆಯಲ್ಲಿ ಬಿಜೆಪಿ ಸೋತಿಲ್ಲ. ಇದಲ್ಲದೇ ಗುಜರಾತಿನಲ್ಲಿ ತ್ರಿಕೋನ ಸ್ಪರ್ಧೆ ನಡೆಯುತ್ತಿರುವುದು ಇದೇ ಮೊದಲೇನಲ್ಲ. ಈಗ ತ್ರಿಕೋನ ಸ್ಪರ್ಧೆ ಎನಿಸುತ್ತಿದೆ ಆದರೆ ಫಲಿತಾಂಶ ಬಂದಾಗಲೇ ಸ್ಪರ್ಧೆ ನಿಜವಾಗಿ ಯಾರ ನಡುವೆ ಇದ್ದಿದ್ದು ಎಂದು ತಿಳಿದುಬರಲಿದೆ. ಈ ಹಿಂದೆ ಶಂಕರ್‌ ಸಿಂಗ್‌ ವಘೇಲಾ ಹಾಗೂ ಕೇಶುಭಾಯಿ ಪಟೇಲ್‌, ರತುಭಾಯಿ ಅದಾನಿಯವರು ಅವರು ಕೂಡ ತಮ್ಮ ಪಕ್ಷವನ್ನು ಸ್ಥಾಪಿಸಿ ತ್ರಿಕೋನ ಸ್ಪರ್ಧೆಗಾಗಿ ಪ್ರಯತ್ನಿಸಿದ್ದರು. ಆದರೆ ಪ್ರತಿಬಾರಿಯೂ ಗುಜರಾತ್‌ ಜನರು ಬಿಜೆಪಿ ಹಾಗೂ ಕಾಂಗ್ರೆಸ್‌ ಈ ಎರಡೂ ಪಕ್ಷಗಳನ್ನು ಮಾತ್ರವೇ ಪರಿಗಣನೆಗೆ ತೆಗೆದುಕೊಂಡಿದ್ದಾರೆ. ಇತ್ತೀಚೆಗೆ ಆಪ್‌ ಪದೇ ಪದೇ ಬಿಜೆಪಿ ನಾಯಕರ ಮೇಲೆ ಇಲ್ಲಸಲ್ಲದ ಆರೋಪ ಮಾಡಿ ತನ್ನ ಗುಜರಾತಿನಲ್ಲಿ ತನ್ನ ಅಸ್ತಿತ್ವಕ್ಕಾಗಿ ಪ್ರಯತ್ನಿಸುತ್ತಿದೆ. ಹೀಗಾಗಿ ಅವರ ನಿರಾಧಾರ ಆರೋಪಗಳನ್ನೇ ಬಂಡವಾಳವಾಗಿಸಿ ಯಾರಾದರೂ ಚುನಾವಣೆ ಗೆಲ್ಲಲ್ಲು ಹವಣಿಸುತ್ತಿದ್ದರೆ ಅವರ ಸತ್ಯವನ್ನು ಜನತೆಯ ಮುಂದಿಡುವುದು ನಮ್ಮ ಕರ್ತವ್ಯ. ನಾವಿದನ್ನಷ್ಟೇ ಮಾಡುತ್ತಿದ್ದೇವೆ. ಚುನಾವಣೆಯಲ್ಲಿ ಮತದಾರರೇ ಅವರಿಗೆ ಸರಿಯಾದ ಪಾಠ ಕಲಿಸಲಿದ್ದಾರೆ.

* ಈ ಬಾರಿ ಗುಜರಾತಿನ ಹಲವು ಹಿರಿಯ ಹಾಗೂ ಅಗ್ರಗಣ್ಯ ನಾಯಕರಿಗೆ ಟಿಕೆಟ್‌ ನೀಡಿಲ್ಲ, ಇದರ ಹಿಂದಿನ ರಣತಂತ್ರವೇನು?
ಇದೆಲ್ಲ ಪಕ್ಷದ ಆಂತರಿಕ ವಿಚಾರಗಳಾಗಿದ್ದು, ಪಕ್ಷದ ನಾಯಕರೆಲ್ಲ ಸೇರಿ ಈ ಬಗ್ಗೆ ನಿರ್ಧಾರ ಅಂತಿಮಗೊಳಿಸುತ್ತಾರೆ. ಈ ಬಾರಿ ಚುನಾವಣಾ ಕಣಕ್ಕಿಳಿಯದೆ ಇದ್ದರೂ ಈ ಎಲ್ಲ ನಾಯಕರು ಹಲವಾರು ವರ್ಷಗಳ ಕಾಲ ಗುಜರಾತ್‌ನಲ್ಲಿ ಸೇವೆ ಸಲ್ಲಿಸಿದ್ದಾರೆ. ಹೀಗಾಗಿ ಈ ಬಾರಿ ಟಿಕೆಟ್‌ ಸಿಕ್ಕಿಲ್ಲ ಎಂದು ಯಾವ ನಾಯಕ ಕೂಡ ಮುನಿಸಿಕೊಂಡಿಲ್ಲ. ಹೊಸಬರಿಗೂ ಅವಕಾಶ ಕೊಡಲು ವರಿಷ್ಠ ನಾಯಕರು ಚುನಾವಣೆಯಿಂದ ಹಿಂದಕ್ಕೆ ಸರಿದ ಇತಿಹಾಸ ಬಿಜೆಪಿಯಲ್ಲಿ ಮೊದಲಿನಿಂದಲೂ ಇದೆ.

* ಈ ಬಾರಿಯೂ ಮೋದಿ ಹೆಸರಲ್ಲೇ ಮತ ಕೇಳಲಾಗುತ್ತಿದೆ. ಇದರರ್ಥ ಸ್ಥಳೀಯ ಶಾಸಕರು ತಮ್ಮ ಕಾರ್ಯಕ್ಷಮತೆ ಸಾಬೀತು ಪಡಿಸುವಲ್ಲಿ ಹೆಚ್ಚೇನೂ ಸಫಲರಾಗಿಲ್ಲ ಎನ್ನಬಹುದೇ?
ಗುಜರಾತಿನಲ್ಲಿ 182 ಶಾಸಕರಿದ್ದಾರೆ. ಇವರಲ್ಲಿ ಎಷ್ಟುಜನರ ಹೆಸರನ್ನು ನಾವು ಹೇಳುತ್ತ ಕೂಡಲು ಸಾಧ್ಯ? ನಾವು ನಮ್ಮ ಸರ್ವೋಚ್ಚ ನಾಯಕನ ಹೆಸರನ್ನು ಹೇಳಿಕೊಂಡರೆ ಇದರಲ್ಲಿ ತಪ್ಪೇನೂ ಇಲ್ಲ. ಗುಜರಾತಿನಲ್ಲಿ ಕಳೆದ 5 ಚುನಾವಣೆಗಳನ್ನು ಗಮನಿಸಿದರೆ ಪ್ರತಿ ಬಾರಿಯೂ ಬಿಜೆಪಿ 30-40 ಹಳೆಯ ಶಾಸಕರ ಬದಲಾಗಿ ಹೊಸ ಶಾಸಕರಿಗೆ ಟಿಕೆಟ್‌ ನೀಡುವ ಪರಂಪರೆಯನ್ನು ಮುಂದುವರೆಸಿಕೊಂಡು ಬಂದಿದೆ. ಈ ಬಾರಿಯೂ ಇದೇ ರೀತಿ 42 ಕಡೆಗಳಲ್ಲಿ ಹಳಬರ ಬದಲಾಗಿ ಹೊಸಬರಿಗೆ ಟಿಕೆಟ್‌ ನೀಡುತ್ತಿದ್ದೇವೆ. ರಾಜನೀತಿಗೆ ಬರುವ ಉದ್ದೇಶ ಪ್ರತಿ ಬಾರಿ ಚುನಾವಣೆಗೆ ಸ್ಪರ್ಧಿಸುವುದು ಅಥವಾ ಸಚಿವರಾಗುವುದು ಮಾತ್ರವಲ್ಲ. ಹಲವಾರು ಕಾರ್ಯಕರ್ತರು ಟಿಕೆಟ್‌ ಸಿಗದಿದ್ದರೂ ಆಯ್ಕೆಯಾದ ಶಾಸಕರಿಗಿಂತ ಹೆಚ್ಚಿನ ಪರಿಶ್ರಮದಿಂದ ಪಕ್ಷ ಬಲಪಡಿಸುತ್ತಿದ್ದಾರೆ.

* 2024ರ ಲೋಕಸಭಾ ಚುನಾವಣೆ ಸಮೀಪಿಸುತ್ತಿದ್ದಂತೆ ವಿಪಕ್ಷಗಳು ಬಿಜೆಪಿ ವಿರುದ್ಧ ಒಂದಾಗಿ ಚುನಾವಣೆಗಿಳಿಯುವ ಸಾಧ್ಯತೆ ಇದೆ ಎನಿಸುತ್ತದೆಯೇ?
ಎಲ್ಲ ವಿಪಕ್ಷಗಳು ಒಂದಾಗುವುದು ಕೇವಲ ತೋರಿಕೆಗಾಗಿ ಅಷ್ಟೇ. ಚುನಾವಣೆಗೆ ಮುನ್ನ ಅವು ಒಂದಾದಂತೆ ತೋರಿಸಿಕೊಂಡರೂ ಆ ಮೈತ್ರಿ ಬಹುದಿನಗಳ ಕಾಲವೇನೂ ಉಳಿಯುವುದಿಲ್ಲ. ಚುನಾವಣೆ ಬಳಿಕ ಆಂತರಿಕ ಕಚ್ಚಾಟ ಆರಂಭವಾಗಿ ವಿಪಕ್ಷಗಳು ಮತ್ತೆ ಚದುರಿ ಹೋಗುವುದು ಖಚಿತ. ಇದೆಲ್ಲ ಜನರಿಗೆ ತಿಳಿಯದ ಸಂಗತಿಯೇನಲ್ಲ. ಇದಲ್ಲದೆ ಚುನಾವಣೆ ವೇಳೆ ಮೋದಿ ಸರ್ಕಾರ ಸಾಧನೆಗಳನ್ನು ಪರಿಗಣಿಸಿ ಜನರು ಮತ ನೀಡುತ್ತಾರೆಯೇ ಹೊರತು ಇಂತಹ ತೋರಿಕೆಯ ಮೈತ್ರಿಗಳ ಸುಳ್ಳು ಆಶ್ವಾಸನೆಗಳಿಗಲ್ಲ.

* ಈ ಬಾರಿ ಗುಜರಾತಿನಲ್ಲಿ ಬಿಜೆಪಿಯ ಟಾರ್ಗೆಟ್‌ ಏನು?
ಈ ಬಾರಿ ಚುನಾವಣೆಯಲ್ಲಿ ಇಷ್ಟೇ ಸೀಟು ಗೆಲ್ಲಬಹುದು ಎಂದು ದೃಢವಾಗಿ ಹೇಳುವುದು ಕಷ್ಟ. ಏಕೆಂದರೆ 3 ಪಕ್ಷಗಳು ಮಾತ್ರವಲ್ಲದೇ ಕೆಲವೊಂದು ಸೀಟುಗಳಲ್ಲಿ ಸ್ವತಂತ್ರ ಅಭ್ಯರ್ಥಿಗಳೂ ಚುನಾವಣೆಯಿಂದ ನಾವು 370ನೇ ವಿಧಿಯನ್ನು ತೆಗೆದು ಹಾಕುವುದಾಗಿ ಆಶ್ವಾಸನೆ ನೀಡಿದ್ದೆವು. ಅದನ್ನು ಮಾಡಿ ತೋರಿಸಿದ್ದೇವೆ. ರಾಮ ಜನ್ಮಭೂಮಿಯ ವಿವಾದಿತ ಸ್ಥಳದಲ್ಲೇ ರಾಮಮಂದಿರ ನಿರ್ಮಾಣ ಮಾಡುವ ಆಶ್ವಾಸನೆ ನೀಡಿದ್ದೆವು. ನಾನು ಈಗಲೇ ಗುಜರಾತಿನ ಜನರಿಗೆ ಜನವರಿ 2024ರಲ್ಲಿ ಅಯೋಧ್ಯೆಯ ಟಿಕೆಟ್‌ ಬುಕ್ಕಿಂಗ್‌ ಮಾಡಿ ಎಂದು ಹೇಳುತ್ತೇನೆ. ಏಕೆಂದರೆ ಅಲ್ಲಿ ರಾಮ ಹುಟ್ಟಿದ ಜಾಗದಲ್ಲೇ ಭವ್ಯ ರಾಮಮಂದಿರ ತಲೆಯೆತ್ತಿ ನಿಲ್ಲಲಿದೆ. ನಾವು ತ್ರಿವಳಿ ತಲಾಖ್‌ ಕೊನೆಗೊಳಿಸುವುದಾಗಿ ಹಾಗೂ ಏಕರೂಪ ನಾಗರಿಕ ಸಂಹಿತೆ ಜಾರಿಗೆ ತರುವುದಾಗಿ ಹೇಳಿದ್ದೆವು. ಇದನ್ನೆಲ್ಲ ಮಾಡಿ ತೋರಿಸಿದ್ದೆವು. ದೇಶದ ಆರ್ಥಿಕತೆಯನ್ನು ಉತ್ತಮಗೊಳಿಸುವುದಾಗಿ ಹೇಳಿದ್ದೆವು. ಅದರಂತೆ ಈಗ ನಮ್ಮ ಆರ್ಥಿಕತೆ 5ನೇ ಸ್ಥಾನದಲ್ಲಿದೆ. 2026ರವರೆಗೆ ಇದು 3ನೇ ಸ್ಥಾನಕ್ಕೇರಿಕೆಯಾಗಲಿದೆ ಎಂದು ಹಲವಾರು ಏಜೆನ್ಸಿಗಳು ಅಂದಾಜಿಸಿವೆ. ಗುಜರಾತಿನ ಸರ್ವತೋಮುಖ ಅಭಿವೃದ್ಧಿ ನಮ್ಮ ಉದ್ದೇಶವಾಗಿದ್ದು, ಈ ಬಾರಿಯೂ ಜನರು ಭೂಪೇಂದ್ರ ಪಟೇಲ್‌ ಅವರ ನೇತೃತ್ವದ ಬಿಜೆಪಿ ಸರ್ಕಾರವನ್ನೇ ಮತ್ತೆ 5 ವರ್ಷಗಳಿಗಾಗಿ ಅಧಿಕಾರಕ್ಕೆ ತರಲಿದ್ದಾರೆ ಎಂಬ ಸಂಪೂರ್ಣ ನಂಬಿಕೆ ನನಗಿದೆ.

* ಬಿಜೆಪಿಯ ಪ್ರಮುಖ ಆದ್ಯತಾ ಕ್ಷೇತ್ರಗಳು ಯಾವುವು?
ನಮ್ಮ ಪ್ರಮುಖ ಆದ್ಯತೆಯು ದೇಶವನ್ನು ಸುರಕ್ಷಿತಗೊಳಿಸುವುದಾಗಿದೆ. ಇದಕ್ಕಾಗಿಯೇ ಪ್ರಧಾನಿ ನರೇಂದ್ರ ಮೋದಿಯವರು ಸೇನೆಯನ್ನು ಆಧುನಿಕವಾಗಿಸುವುದು, ದೇಶದಲ್ಲೇ ಸೇನಾ ಶಸ್ತ್ರಾಸ್ತ್ರಗಳ ಉತ್ಪಾದನೆಯನ್ನು ಆರಂಭಿಸುವುದು, ಗಡಿಯನ್ನು ಸುರಕ್ಷಿತವಾಗಿಸುವುದು ಮೊದಲಾದ ಕ್ರಮಗಳನ್ನು ಕೈಗೊಂಡಿದ್ದಾರೆ. ಈವರೆಗೆ ದೇಶದ ಯಾವುದೇ ಸರ್ಕಾರಗಳೂ ಉಗ್ರವಾದಿ ಕೃತ್ಯಗಳಿಗೆ ಸರ್ಜಿಕಲ್‌ ಸ್ಟೆ್ರೖಕ್‌ ಮೂಲಕ ಉತ್ತರ ನೀಡಿರಲಿಲ್ಲ. ಇದನ್ನು ಮೊಟ್ಟಮೊದಲು ಮಾಡಿ ತೋರಿಸಿದ್ದು ನಮ್ಮ ಮೋದಿ ಸರ್ಕಾರ. ವಿಶ್ವದಲ್ಲೇ 5ನೇ ಅತಿದೊಡ್ಡ ಆರ್ಥಿಕತೆಯಾಗಿ ಭಾರತ ಅಭಿವೃದ್ಧಿ ಸಾಧಿಸಿದೆ. 

ಇಡೀ ಜಗತ್ತೇ ಕೊರೋನಾ ಕಾರಣದಿಂದಾಗಿ ಆರ್ಥಿಕ ಹಿಂಜರಿತವನ್ನು ಅನುಭವಿಸುತ್ತಿರುವಾಗ ಅತಿ ಕಡಿಮೆ ಸಮಯದಲ್ಲಿ ಇದರಿಂದ ಹೊರಬಂದು ಮತ್ತೆ ಪ್ರಗತಿಯತ್ತ ಸಾಗುತ್ತಿರುವ ಆರ್ಥಿಕತೆಯು ನಮ್ಮ ಭಾರತದ್ದಾಗಿದೆ. ದೇಶದ ಪ್ರತಿ ಮನೆಯಲ್ಲಿ ವಿದ್ಯುತ್‌, ಶೌಚಾಲಯ, ಗ್ಯಾಸ್‌ ಸಿಲಿಂಡರ್‌ ದೊರಕುವಂತೆ ಮಾಡಿದ್ದು ಮೋದಿ ಸರ್ಕಾರದ ಸಾಧನೆಯಾಗಿದೆ. ದೇಶದ 80 ಕೋಟಿ ಜನರ ಜೀವನಸ್ತರವನ್ನು ಹೆಚ್ಚಿಸುವ ಕೆಲಸವನ್ನು ನಾವು ಮಾಡಿ ತೋರಿಸಿದ್ದೇವೆ. ಹೀಗಾಗಿ ಒಟ್ಟಾರೆ ಗೆಲ್ಲುವ ಸೀಟುಗಳ ಪ್ರಮಾಣದಲ್ಲಿ ಇದರಿಂದ ಏರಿಳಿಕೆಯಾಗಬಹುದು. ಆದರೆ ಬಿಜೆಪಿ ಸರ್ಕಾರದಲ್ಲಿ ನಂಬಿಕೆ ಇಟ್ಟವರು ಹಾಗೂ ನಮ್ಮ ವಿಚಾರಧಾರೆಗಳಿಗೆ ಬೆಂಬಲ ಸೂಚಿಸುವವರು ಖಂಡಿತ ನಮ್ಮ ಕೈಬಿಡುವುದಿಲ್ಲ ಎಂಬ ನಂಬಿಕೆ ನಮಗಿದೆ. ಗುಜರಾತಿನ ಸರ್ವತೋಮುಖ ಅಭಿವೃದ್ಧಿ ನಮ್ಮ ಉದ್ದೇಶವಾಗಿದ್ದು, ಈ ಬಾರಿಯೂ ಜನರು ಭೂಪೇಂದ್ರ ಪಟೇಲ್‌ ಅವರ ನೇತೃತ್ವದ ಬಿಜೆಪಿ ಸರ್ಕಾರವನ್ನೇ ಮತ್ತೆ 5 ವರ್ಷಗಳಿಗಾಗಿ ಅಧಿಕಾರಕ್ಕೆ ತರಲಿದ್ದಾರೆ ಎಂಬ ಸಂಪೂರ್ಣ ನಂಬಿಕೆ ನನಗಿದೆ.

ಉಗ್ರರ ಹೆಡೆಮುರಿ ಕಟ್ಟಲು ಎಲ್ಲ ರಾಜ್ಯಗಳಲ್ಲಿ ಎನ್‌ಐಎ ಕಚೇರಿ: ಅಮಿತ್‌ ಶಾ

* ಇತ್ತೀಚೆಗೆ ಮಹಾರಾಷ್ಟ್ರಕ್ಕೆ ಸಿಗಬೇಕಾದ ಕೆಲವು ಮಹತ್ವದ ಯೋಜನೆಗಳನ್ನು ಗುಜರಾತ್‌ಗೆ ನೀಡಲಾಗಿದೆ ಎಂಬ ಆರೋಪವಿದೆ. ಈ ಬಗ್ಗೆ ಏನನ್ನುತ್ತೀರಿ?
ಟಾಟಾ ಹಾಗೂ ವೇದಾಂತದ ಯೋಜನೆಗಳು ಮಹಾರಾಷ್ಟ್ರಕ್ಕೆ ಸಿಗಬೇಕಾಗಿದ್ದವು ಎಂಬುದೇ ದೊಡ್ಡ ಸುಳ್ಳು. ಯಾವುದೇ ಕಂಪನಿಯು ರಾಜ್ಯದ ಆಡಳಿತ ವ್ಯವಸ್ಥೆ, ರಸ್ತೆ ಹಾಗೂ ಬಂದರುಗಳ ಸೌಲಭ್ಯ, ಅಲ್ಲಿನ ಭೌಗೋಳಿಕ ಸ್ಥಿತಿ ಮೊದಲಾದಗಳ ಬಗ್ಗೆ ಸಂಪೂರ್ಣವಾಗಿ ಅಧ್ಯಯನ ನಡೆಸಿಯೇ ನಂತರ ಅಲ್ಲಿ ಯೋಜನೆಯನ್ನು ಆರಂಭಿಸಲು ಮುಂದಾಗುತ್ತದೆ. ಮೊದಲು ಯಾವುದೋ ರಾಜ್ಯದಲ್ಲಿ ಯೋಜನೆ ಆರಂಭಿಸುವುದಾಗಿ ಹೇಳಿ ಕೊನೆ ಹಂತದಲ್ಲಿ ಅದನ್ನು ಬದಲಾಯಿಸಲಾಗುವುದಿಲ್ಲ. ಈಗಾಗಲೇ ಹಲವಾರು ಯೋಜನೆಗಳು ಮಹಾರಾಷ್ಟ್ರಕ್ಕೂ ಹೋಗಿವೆ. ಅದಕ್ಕೆ ಗುಜರಾತ್‌ ಆಕ್ಷೇಪಿಸಲು ಸಾಧ್ಯವೇ? ಯಾವುದೇ ಯೋಜನೆಯಾಗಲಿ ಅದು ನಮ್ಮ ದೇಶದಲ್ಲೇ ಆರಂಭವಾಗುತ್ತಿದೆ. ದೇಶ ಉತ್ಪಾದನಾ ಹಬ್‌ ಆಗುತ್ತಿದೆ ಇದಕ್ಕಾಗಿ ನಾವು ಸಂತೋಷ ಪಡಬೇಕು.

ನಮ್ಮ ಸರ್ಕಾರದ ಹಳೆಯ ದಾಖಲೆಯನ್ನು ಪರಿಗಣಿಸಿ ಹಾಗೂ ನಮ್ಮಲ್ಲಿರುವ ಅಭಿವೃದ್ಧಿಯ ರೋಡ್‌ಮ್ಯಾಪ್‌ ಆಧಾರದ ಮೇಲೆ ಮತ್ತೊಮ್ಮೆ ಗುಜರಾತ್‌ನಲ್ಲಿ ಬಿಜೆಪಿ ಸರ್ಕಾರವನ್ನೇ ಗೆಲ್ಲಿಸಿ ಎಂದು ಕೋರುತ್ತೇನೆ. ಗುಜರಾತ್‌ ಅನ್ನು ದೇಶದಲ್ಲೇ ನಂ.1 ರಾಜ್ಯವಾಗಿಸುವ ಹಾಗೂ ಮುಂಚೂಣಿ ಸ್ಥಾನವನ್ನು ಮುಂದುವರೆಸಿಕೊಂಡು ಹೋಗುವ ಭರವಸೆಯನ್ನೂ ನೀಡುತ್ತೇನೆ.

Follow Us:
Download App:
  • android
  • ios