Farm Laws Repeal: 3 ಕೃಷಿ ಕಾಯ್ದೆ ಹಿಂಪಡೆವ ಮಸೂದೆಗೆ ಸಂಪುಟ ಅಸ್ತು!
*ಕೃಷಿ ಕಾಯ್ದೆ ಹಿಂತೆಗೆತ ಮಸೂದೆ ಅಧಿವೇಶನದಲ್ಲಿ ಮಂಡನೆ
*ರೈತರ ಬೇಡಿಕೆ ಈಡೇರಿಸುವತ್ತ ಇನ್ನೊಂದು ಹೆಜ್ಜೆ!
*ಉಭಯ ಸದನಗಳಲ್ಲೂ ಮಂಡಿಸಿ ಅಂಗೀಕರಿಸುವ ಉದ್ದೇಶ
ನವದೆಹಲಿ(ನ.25): ವಿವಾದಿತ 3 ಕೃಷಿ ಕಾಯ್ದೆಗಳನ್ನುಮ (Farm Laws repeal) ಹಿಂಪಡೆಯುವ ಮಸೂದೆಗೆ ಕೇಂದ್ರ ಸಚಿವ ಸಂಪುಟ (Union Cabinet) ಬುಧವಾರ ಅನುಮೋದನೆ ನೀಡಿದೆ. ಇದರಿಂದಾಗಿ ರೈತರ (Farmers) ಪ್ರಮುಖ ಬೇಡಿಕೆಗಳಲ್ಲಿ ಒಂದಾದ ಕಾಯ್ದೆ ಹಿಂಪಡೆತ ಬೇಡಿಕೆಯನ್ನು ಈಡೇರಿಸುವತ್ತ ಮತ್ತೊಂದು ಪ್ರಮುಖ ಹೆಜ್ಜೆ ಇರಿಸಿದಂತಾಗಿದೆ. ‘ಕೃಷಿ ಕಾಯ್ದೆ ಹಿಂತೆಗೆತ ಮಸೂದೆ-2021’ಕ್ಕೆ ಸಂಪುಟ ಅಸ್ತು ಎಂದಿದ್ದು, ನ.29ರಂದು ಆರಂಭವಾಗಲಿರುವ ಸಂಸತ್ತಿನ ಚಳಿಗಾಲದ ಅಧಿವೇಶನದಲ್ಲಿ ಮಂಡನೆ ಆಗಲಿದೆ ಎಂದು ಸಂಪುಟ ಸಭೆ ಬಳಿಕ ಕೇಂದ್ರ ವಾರ್ತಾ ಸಚಿವ ಅನುರಾಗ್ ಠಾಕೂರ್ (Anurag Thakur) ಸುದ್ದಿಗೋಷ್ಠಿಯಲ್ಲಿ ತಿಳಿಸಿದರು. ಮಸೂದೆಯನ್ನು ಸಂಸತ್ ಅಧಿವೇಶನದ ಮೊದಲೇ ದಿನವೇ ಉಭಯ ಸದನಗಳಲ್ಲೂ ಮಂಡಿಸಿ ಅಂಗೀಕರಿಸುವ ಉದ್ದೇಶದಲ್ಲಿ ಸರ್ಕಾರ ಇದೆ ಎನ್ನಲಾಗುತ್ತಿದೆ.
ಈ ವಿವಾದಿತ ಕಾಯ್ದೆಗಳನ್ನು ಹಿಂಪಡೆಯುವುದಾಗಿ ಕಳೆದ ಶುಕ್ರವಾರ ಗುರುನಾನಕ ಜಯಂತಿ ಸಂದರ್ಭದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಪ್ರಕಟಿಸಿದ್ದರು. ಆದರೆ ಸಂಪುಟದಲ್ಲಿ ಇವುಗಳ ಅಂಗೀಕಾರ ಆಗಬೇಕು ಹಾಗೂ ಸಂಸತ್ತಿನಲ್ಲಿ ಅಧಿಕೃತವಾಗಿ ಕಾಯ್ದೆ ರದ್ದುಪಡಿಸಬೇಕು ಎಂದು ರೈತ ಸಂಘಟನೆಗಳು ಪಟ್ಟು ಹಿಡಿದಿದ್ದವು. ಈ ಕಾಯ್ದೆಗಳ ವಿರುದ್ಧದ ಹೋರಾಟಕ್ಕೆ ಶುಕ್ರವಾರ 1 ವರ್ಷ ತುಂಬಲಿದೆ.
ರದ್ದಾಗಲಿರುವ ಕಾಯ್ದೆಗಳು
1. ರೈತ ಉತ್ಪನ್ನಗಳ ವಾಣಿಜ್ಯ ವ್ಯವಹಾರ ಕಾಯ್ದೆ-2020
ಎಲ್ಲ ರಾಜ್ಯಗಳ ಎಪಿಎಂಸಿ ಕಾಯ್ದೆ ರದ್ದು. ಎಪಿಎಂಸಿಯಿಂದ ಹೊರಗೂ ಉತ್ಪನ್ನ ಮಾರಲು ರೈತರಿಗೆ ಈ ಕಾಯ್ದೆಯಡಿ ಅವಕಾಶ
2. ಬೆಲೆ ಖಾತ್ರಿ ಮತ್ತು ಕೃಷಿ ಸೇವೆಗಳಿಗೆ ರೈತ ಒಪ್ಪಂದ ಕಾಯ್ದೆ-2020
ಗುತ್ತಿಗೆ ಕೃಷಿ ಒಪ್ಪಂದಕ್ಕೆ ಕಾನೂನು ಚೌಕಟ್ಟು ಕಲ್ಪಿಸಿ, ಖರೀದಿದಾರನ ಜತೆ ಬಿತ್ತನೆಗೂ ಮೊದಲೇ ಬೆಲೆ ನಿಗದಿಗೆ ಅವಕಾಶ ಒದಗಿಸುವುದು
3. ಅಗತ್ಯ ವಸ್ತುಗಳ (ತಿದ್ದುಪಡಿ) ಕಾಯ್ದೆ-2020
ಅತ್ಯಂತ ಗಂಭೀರ ಪರಿಸ್ಥಿತಿ ಹೊರತುಪಡಿಸಿ ಉಳಿದ ಸಂದರ್ಭದಲ್ಲಿ ಯಾವುದೇ ಕೃಷಿ ಉತ್ಪನ್ನದ ಸಂಗ್ರಹದ ಮೇಲೆ ಮಿತಿ ಹೇರುವಂತಿರಲಿಲ್ಲ
ಪ್ರಧಾನಿ ಬೇಡಿಕೆಗೆ ಒಪ್ಪಿದರೆ ಹೋರಾಟ ವಾಪಸ್: ಟಿಕಾಯತ್
ಭಾರತೀಯ ಕಿಸಾನ್ ಯೂನಿಯನ್(Bharatiya Kisan Union) ನಾಯಕ ಮಾತನಾಡಿ, ಸರ್ಕಾರ ಹಿಂಪಡೆಯಲು ಬಯಸಿರುವ ಮೂರು ಕೃಷಿ ಮಸೂದೆಗಳ ವಿಚಾರವಾಗಿ ಮಾತ್ರ ನಾವು ಪ್ರತಿಭಟನೆ ನಡೆಸುತ್ತಿಲ್ಲ. ಕನಿಷ್ಠ ಬೆಂಬಲ ಬೆಲೆ(MSP) ಹಾಗೂ ಕಳೆದ ವರ್ಷ ಮೃತಪಟ್ಟ ೭೦೦ ರೈತರಿಗೆ ಪರಿಹಾರದ ವಿಚಾರವಾಗಿಯೂ ನಾವು ಹೋರಾಟ ನಡೆಸುತ್ತಿದ್ದೇವೆ. ಸರ್ಕಾರ ಕಾಯಿದೆಗಳನ್ನು ಘೋಷಣೆ ಮಾಡುತ್ತದೆ ಹಾಗೂ ಅವರು ಪ್ರಸ್ತಾವನೆಯನ್ನು ಕಾರ್ಯರೂಪಕ್ಕೆ ತರಬಹುದು. ಆದರೆ ಕನಿಷ್ಠ ಬೆಂಬಲ ಬೆಲೆ ಹಾಗೂ 700 ರೈತರ ಸಾವು ಕೂಡ ನಮ್ಮ ಹೋರಾಟದ ವಿಚಾರವಾಗಿದೆ. ಈ ವಿಚಾರಗಳ ಬಗ್ಗೆಯೂ ಸರ್ಕಾರ ಮಾತನಾಡಬೇಕಾಗಿದೆ. ಒಂದು ವೇಳೆ ಸರ್ಕಾರ ಜನವರಿ 26ಕ್ಕೂ ಮೊದಲು ಮಾತನಾಡಿದರೆ, ನಾವು ನಮ್ಮ ಹೋರಾಟವನ್ನು ಹಿಂಪಡೆಯುತ್ತೇವೆ ಹಾಗೆಯೇ ಮಾದರಿ ನೀತಿ ಸಂಹಿತೆ ಜಾರಿಗೆ ಬಂದ ಬಳಿಕ ನಾವು ಚುನಾವಣೆ ಬಗ್ಗೆ ಮಾತನಾಡುತ್ತೇವೆ ಎಂದು ಟಿಕಾಯತ್ ಹೇಳಿದರು.
Jewar International Airport: ಮತ್ತೊಂದು ಐತಿಹಾಸಿಕ ಯೋಜನೆಗೆ ಮೋದಿ ಶಿಲಾನ್ಯಾಸ!
ಮುಂದಿನ ವರ್ಷ ಪಂಜಾಬ್ ಹಾಗೂ ಉತ್ತರಪ್ರದೇಶ ಸೇರಿದಂತೆ ಹಲವು ರಾಜ್ಯಗಳಲ್ಲಿ ವಿಧಾನಸಭೆ ಚುನಾವಣೆ ನಡೆಯಲಿದೆ. ಈ ವಿಚಾರವನ್ನು ಇಲ್ಲಿ ಗಮನಿಸಬಹುದು. ಮೂರು ಕೃಷಿ ಕಾನೂನು ಬಗ್ಗೆ ರೈತರು ಪ್ರತಿಭಟನೆ ನಡೆಸುತ್ತಿದ್ದು, ಈ ಕಾಯಿದೆಗಳನ್ನು ಕೇಂದ್ರ ಕ್ಯಾಬಿನೆಟ್( Union Cabinet) ವಾಪಸ್ ಪಡೆಯುವ ಬಗ್ಗೆ ಬುಧವಾರ ಕ್ಯಾಬಿನೆಟ್ ಸಭೆ ನಡೆಯಲಿದೆ. ಕಳೆದ ಶುಕ್ರವಾರ ಪ್ರಧಾನಿ ನರೇಂದ್ರ ಮೋದಿ( Narendra Modi)ಮೂರು ವಿವಾದಿತ ಕೃಷಿ ಮಸೂದೆಗಳನ್ನು ವಾಪಸ್ ಪಡೆಯುವುದಾಗಿ ಘೋಷಣೆ ಮಾಡಿದ್ದರು.