Asianet Suvarna News Asianet Suvarna News

ಉತ್ತರಾಖಂಡದಲ್ಲಿ ಏಕರೂಪ ಸಂಹಿತೆ ಕರಡು ವರದಿ ಸಲ್ಲಿಕೆ, ಇಂದು ಅಸ್ತು ಸಾಧ್ಯತೆ

ಉತ್ತರಾಖಂಡ ಏಕರೂಪ ಸಂಹಿತೆ ಕರಡು ವರದಿ ಸರ್ಕಾರಕ್ಕೆ ಸಲ್ಲಿಕೆ. ಇಂದು ಸಂಪುಟ ಸಭೆಯಲ್ಲಿ ಚರ್ಚೆ. ಮುಂದಿನ ವಾರ ವಿಧಾನಸಭೆಯಲ್ಲಿ ಅಂಗೀಕಾರ ಸಾಧ್ಯತೆ

Uniform Civil Code committee submits draft report to Uttarakhand government gow
Author
First Published Feb 3, 2024, 8:31 AM IST

ಡೆಹ್ರಾಡೂನ್‌ (ಫೆ.3): ರಾಜ್ಯದಲ್ಲಿ ಏಕರೂಪ ನಾಗರಿಕ ಸಂಹಿತೆ ಜಾರಿಗೆ ತರುವ ಕುರಿತು ಶಿಫಾರಸು ಮಾಡಲು ರಚಿಸಿದ್ದ ಉನ್ನತ ಮಟ್ಟದ ಸಮಿತಿ ಶುಕ್ರವಾರ ತನ್ನ ಕರಡು ವರದಿಯನ್ನು ಉತ್ತರಾಖಂಡದ ಮುಖ್ಯಮಂತ್ರಿ ಪುಷ್ಕರ್‌ ಸಿಂಗ್‌ ಧಾಮಿ ಅವರಿಗೆ ಸಲ್ಲಿಸಿದೆ.

ಸುಪ್ರೀಂಕೋರ್ಟ್‌ನ ನಿವೃತ್ತ ನ್ಯಾ। ರಂಜನಾ ಪ್ರಕಾಶ್‌ ದೇಸಾಯಿ ಅವರ ನೇತೃತ್ವದ ಐವರು ಸದಸ್ಯರ ಸಮಿತಿ, ಮುಖ್ಯಮಂತ್ರಿ ಅವರ ನಿವಾಸಕ್ಕೆ ಭೇಟಿ ನೀಡಿ ವರದಿ ಹಸ್ತಾಂತರಿಸಿತು. ಶನಿವಾರ ನಡೆವ ಸಂಪುಟ ಸಭೆಯಲ್ಲಿ ಕರಡು ವರದಿಯನ್ನು ಅನುಮೋದಿಸಿ ಫೆ.5ರಿಂದ ಕರೆಯಲಾಗಿರುವ ವಿಶೇಷ ಅಧಿವೇಶನದಲ್ಲಿ ಮಸೂದೆ ಅಂಗೀಕಾರ ಪಡೆಯುವ ಉದ್ದೇಶವನ್ನು ಸರ್ಕಾರ ಹೊಂದಿದೆ.

ಎಲ್ಲ ವರ್ಗಾವಣೆಗೂ ಕಾರಣ ನೀಡೋದು ಕಡ್ಡಾಯವಲ್ಲ: ಹೈಕೋರ್ಟ್

ವರದಿ ಸ್ವೀಕರಿಸಿದ ಬಳಿಕ ಮಾತನಾಡಿದ ಮುಖ್ಯಮಂತ್ರಿ ಧಾಮಿ, ‘ಬಹುನಿರೀಕ್ಷಿತ ಸಮಯ ಸನ್ನಿಹಿತವಾಗಿದೆ. ಏಕರೂಪ ನಾಗರಿಕ ಸಂಹಿತೆ ಕುರಿತ ಕರಡು ವರದಿಯನ್ನು ನಮಗೆ ಸಲ್ಲಿಸಲಾಗಿದೆ. ನಾವು ವರದಿಯನ್ನು ಪರಿಶೀಲಿಸಿ, ಅಧ್ಯಯನ ಮಾಡಿ ಚರ್ಚೆ ನಡೆಸಿದ ಬಳಿಕ ಅದನ್ನು ವಿಧಾನಸಭೆಯಲ್ಲಿ ಮಂಡಿಸಲಿದ್ದೇವೆ. 2022ರ ಚುನಾವಣೆಗೂ ಮುನ್ನ ನಾವು ರಾಜ್ಯದ ಜನತೆಗೆ ನೀಡಿದ್ದ ಭರವಸೆಯನ್ನು ಈಡೇರಿಸುವಲ್ಲಿ ಈ ಮಸೂದೆ ಅಂಗೀಕಾರ ಮಹತ್ವದ ಹೆಜ್ಜೆಯಾಗಿದೆ. ನ್ಯಾ। ದೇಸಾಯಿ ನೇತೃತ್ವದ ಸಮಿತಿಯು ಸಮಾಜದ ಎಲ್ಲಾ ವರ್ಗಗಳ ಅಭಿಪ್ರಾಯಗಳನ್ನು ಸಂಗ್ರಹಿಸಿ ವರದಿ ಸಿದ್ಧಪಡಿಸಿದೆ’ ಎಂದು ತಿಳಿಸಿದರು.

ಮೊದಲ ರಾಜ್ಯ:

ಒಂದು ವೇಳೆ ಫೆ.5-8ರವರೆಗೆ ನಡೆಯಲಿರುವ ವಿಧಾನಸಭೆಯ ವಿಶೇಷ ಅಧಿವೇಶನದಲ್ಲಿ ಮಸೂದೆ ಅಂಗೀಕಾರವಾದರೆ ಇಂಥ ಕಾಯ್ದೆ ರೂಪಿಸಿದ ದೇಶದ ಮೊದಲ ರಾಜ್ಯವಾಗಿ ಉತ್ತರಾಖಂಡ ಹೊರಹೊಮ್ಮಲಿದೆ. ಹಾಲಿ ಗೋವಾದಲ್ಲಿ ಮಾತ್ರವೇ ಈ ನಿಯಮ ಜಾರಿಯಲ್ಲಿದೆ. ಆದರೆ ಅದು ಪೋರ್ಚುಗೀಸರ ಕಾಲದಿಂದಲೂ ಇದೆ.

'ನಾನು ಹಾಕಲ್ಲ, ಕುಮಾರಸ್ವಾಮಿನೂ ಹಾಕಬಾರದಿತ್ತು' ಎಚ್‌ಡಿಕೆ ಕೇಸರಿ ಶಾಲು ಧರಿಸಿದ್ದಕ್ಕೆ ತಂದೆ ದೇವೇಗೌಡರಿಂದ್ಲೇ ವಿರೋಧ!

ಏನಿದು ಏಕರೂಪ ನಾಗರಿಕ ಸಂಹಿತೆ?

ಎಲ್ಲಾ ಧರ್ಮೀಯರಿಗೂ ವಿವಾಹ, ವಿಚ್ಛೇದನ, ಆಸ್ತಿ, ಭೂಮಿ ಮತ್ತು ಉತ್ತರಾಧಿಕಾರ ಕುರಿತು ವಿವಿಧ ಧರ್ಮಗಳಲ್ಲಿ ಪ್ರತ್ಯೇಕ ನಿಯಮಗಳಿವೆ. ಅದನ್ನೆಲ್ಲಾ ರದ್ದುಪಡಿಸಿ ಒಂದೇ ಕಾನೂನು ರೂಪಿಸುವುದೇ ಏಕರೂಪ ನಾಗರಿಕ ಸಂಹಿತೆ.

Follow Us:
Download App:
  • android
  • ios