ತಮ್ಮನ್ನು ವರ್ಗಾವಣೆ ಮಾಡಿದ್ದ ಸರ್ಕಾರದ ಕ್ರಮ ಪುರಸ್ಕರಿಸಿದ ಕರ್ನಾಟಕ ಆಡಳಿತಾತ್ಮಕ ನ್ಯಾಯಾಧಿಕರಣ (ಕೆಎಟಿ) ಆದೇಶ ರದ್ದು ಕೋರಿ ವಾಣಿಜ್ಯ ತೆರಿಗೆ ಇಲಾಖೆ ಸಹಾಯಕ ಆಯುಕ್ತರಾಗಿದ್ದ ಎಚ್.ಎಸ್. ವೀಣಾ ಹಾಗೂ ಇತರೆ ಅಧಿಕಾರಿಗಳು ಸಲ್ಲಿಸಿದ್ದ ಪ್ರತ್ಯೇಕ ಅರ್ಜಿಗಳ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಕೆ. ಸೋಮಶೇಖರ್ ಅವರ ನೇತೃತ್ವದ ವಿಭಾಗೀಯ ಪೀಠ ಈ ಆದೇಶ ನೀಡಿದೆ.
ಬೆಂಗಳೂರು(ಫೆ.03): ದೊಡ್ಡ ಪ್ರಮಾಣದಲ್ಲಿ ಹಾಗೂ ಸಾಮೂಹಿಕವಾಗಿ ಅಧಿಕಾರಿಗಳ ವರ್ಗಾವಣೆ ಮಾಡಿದ ಸಂದರ್ಭದಲ್ಲಿ ಪ್ರತಿಯೊಬ್ಬರ ವರ್ಗಾವಣೆಗೂ ಸರ್ಕಾರ ಪ್ರತ್ಯೇಕ ಕಾರಣ ನೀಡುವುದು ಕಡ್ಡಾಯವಲ್ಲ ಎಂದು ಹೈಕೋರ್ಟ್ ಸ್ಪಷ್ಟಪಡಿಸಿದೆ. ತಮ್ಮನ್ನು ವರ್ಗಾವಣೆ ಮಾಡಿದ್ದ ಸರ್ಕಾರದ ಕ್ರಮ ಪುರಸ್ಕರಿಸಿದ ಕರ್ನಾಟಕ ಆಡಳಿತಾತ್ಮಕ ನ್ಯಾಯಾಧಿಕರಣ (ಕೆಎಟಿ) ಆದೇಶ ರದ್ದು ಕೋರಿ ವಾಣಿಜ್ಯ ತೆರಿಗೆ ಇಲಾಖೆ ಸಹಾಯಕ ಆಯುಕ್ತರಾಗಿದ್ದ ಎಚ್.ಎಸ್. ವೀಣಾ ಹಾಗೂ ಇತರೆ ಅಧಿಕಾರಿಗಳು ಸಲ್ಲಿಸಿದ್ದ ಪ್ರತ್ಯೇಕ ಅರ್ಜಿಗಳ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಕೆ. ಸೋಮಶೇಖರ್ ಅವರ ನೇತೃತ್ವದ ವಿಭಾಗೀಯ ಪೀಠ ಈ ಆದೇಶ ನೀಡಿದೆ.
ಮುಖ್ಯಮಂತ್ರಿಗಳ ಪೂರ್ವಾನುಮತಿ ಪಡೆಯದೆ ಮತ್ತು ಸಕಾರಣ ನೀಡದೆ ತಮ್ಮನ್ನು ವರ್ಗಾಯಿಸಿರುವುದು ಕಾನೂನು ಬಾಹಿರ ಕ್ರಮ ಎಂಬ ಅರ್ಜಿದಾರರ ವಾದವನ್ನು ಹೈಕೋರ್ಟ್ ತಳ್ಳಿಹಾಕಿದೆ. ಪ್ರಕರಣದ ದಾಖಲೆಗಳನ್ನು ಪರಿಶೀಲಿಸಿದಾಗ ಮುಖ್ಯಮಂತ್ರಿಗಳ ಪೂರ್ವಾನುಮತಿ ಪಡೆದು ಅರ್ಜಿದಾರರನ್ನು ವರ್ಗಾವಣೆ ಮಾಡಲಾಗಿದೆ ಎಂಬ ಅಂಶ ಸ್ಪಷ್ಟವಾಗುತ್ತಿದೆ. ಇನ್ನೂ ಸಾಮೂಹಿಕವಾಗಿ ವರ್ಗಾವಣೆ ಮಾಡಿದ ಸಂದರ್ಭದಲ್ಲಿ ರಾಜ್ಯ ಸರ್ಕಾರವು ಪ್ರತಿಯೊಬ್ಬ ಅಧಿಕಾರಿಯ ವರ್ಗಾವಣೆಗೂ ಕಾರಣ ಉಲ್ಲೇಖಿಸಲು ಕಷ್ಟವಾಗುತ್ತದೆ. ಪ್ರತಿಯೊಬ್ಬ ಅಧಿಕಾರಿಯ ವರ್ಗಾವಣೆಗೂ ಕಾರಣ ನಮೂದಿಸಬೇಕಾದ ಅನಿರ್ವಾತೆಯೂ ಇಲ್ಲ.
27 ವರ್ಷಗಳ ಬಳಿಕ ಕರ್ನಾಟಕ ಹೈಕೋರ್ಟ್‌ಗೆ ಕನ್ನಡಿಗ ಸಿಜೆ..!
ಪ್ರಕರಣದ ದಾಖಲೆ ಪರಿಶೀಲಿಸಿದಾಗ ಅರ್ಜಿದಾರರೆಲ್ಲರು ಒಂದೇ ಸ್ಥಳದಲ್ಲಿ ಒಂದಲ್ಲಾ ಒಂದು ಹುದ್ದೆಯಲ್ಲಿ ಸುದೀರ್ಘ ಅವಧಿ ಸೇವೆ ಸಲ್ಲಿಸಿದ್ದರು ಎಂಬುದು ತಿಳಿಯುತ್ತದೆ. ಅವರನ್ನು ಸರ್ಕಾರ ಆಡಳಿತಾತ್ಮಕ ದೃಷ್ಠಿಯಿಂದ ವರ್ಗಾವಣೆ ಮಾಡಿದ್ದು, ಅದಲ್ಲಿ ಯಾವುದೇ ಲೋಪ ಕಂಡು ಬರುತ್ತಿಲ್ಲ ಎಂದು ತಿಳಿಸಿದ ವಿಭಾಗೀಯ ಪೀಠ ಅರ್ಜಿಗಳನ್ನು ವಜಾಗೊಳಿಸಿದೆ.
ಪ್ರಕರಣವೇನು?
ವಾಣಿಜ್ಯ ತೆರಿಗೆ ಇಲಾಖೆಯ ವಿವಿಧ ವಿಭಾಗದಲ್ಲಿ ಉಪ ಆಯುಕ್ತರಾಗಿದ್ದ ಎಚ್.ಎಸ್. ವೀಣಾ, ಸಿ.ಪುಷ್ಪಾ, ವಿ.ಆರ್.ಮಂಜುಳಾ, ಸಹಾಯಕ ಆಯುಕ್ತರಾದ ಎನ್.ಸಿ ಶೈಲಾ, ಇ-ಆಡಳಿತ ವಿಭಾಗದ ಹೆಚ್ಚುವರಿ ಆಯುಕ್ತ ಕೆ.ಎಸ್. ಬಸವರಾಜು ಅವರನ್ನು 2022ರ ಜೂ.22ರಂದು ಅದೇ ಇಲಾಖೆಯ ಇತರೆ ಹುದ್ದೆಗಳಿಗೆ ವರ್ಗಾವಣೆ ಮಾಡಿ ರಾಜ್ಯ ಸರ್ಕಾರ ಆದೇಶಿಸಿತ್ತು. ಅದಾಗಿ ಒಂದು ವರ್ಷ ಎರಡು ತಿಂಗಳು ಮುಗಿಯುವ ಮುನ್ನವೇ ಮತ್ತೆ ವರ್ಗಾವಣೆ ಮಾಡಲಾಗಿತ್ತು. ಸರ್ಕಾರದ ಈ ಕ್ರಮ ಪ್ರಶ್ನಿಸಿ ಅರ್ಜಿದಾರರು ಕೆಎಟಿಗೆ ಪ್ರತ್ಯೇಕ ಅರ್ಜಿ ಸಲ್ಲಿಸಿದ್ದರು. ಅರ್ಜಿಗಳನ್ನು ವಜಾಗೊಳಿಸಿ ಕೆಎಟಿ ಆದೇಶಿಸಿತ್ತು. ಇದರಿಂದ ಅಧಿಕಾರಿಗಳು ಹೈಕೋರ್ಟ್ ಮೊರೆ ಹೋಗಿದ್ದರು.
