ರಾಮ್‌ಘರ್(ನ.23)‌: 35 ವರ್ಷದ ನಿರುದ್ಯೋಗಿ ವ್ಯಕ್ತಿಯೊಬ್ಬ ಅನುಕಂಪದ ಆಧಾರದಲ್ಲಿ ಉದ್ಯೋಗ ಪಡೆಯಲು ತಂದೆಯನ್ನೇ ಕೊಂದ ಆಘಾತಕಾರಿ ಘಟನೆ ಜಾರ್ಖಂಡ್‌ನ ರಾಮ್‌ಘರ್‌ ಜಿಲ್ಲೆಯಲ್ಲಿ ನಡೆದಿದೆ.

ಕೃಷ್ಣ ರಾಮ್‌ (55) ಎಂಬವರು ಇಲ್ಲಿನ ಕೇಂದ್ರೀಯ ಕಲ್ಲಿದ್ದಲು ಫೀಲ್ಡ್‌ ಲಿಮಿಟೆಡ್‌ (ಸಿಸಿಎಲ್‌) ಕಂಪನಿಯಲ್ಲಿ ಸೆಕ್ಯುರಿಟಿ ಗಾರ್ಡ್‌ ಮುಖ್ಯಸ್ಥರಾಗಿ ಕಾರ‍್ಯ ನಿರ್ವಹಿಸುತ್ತಿದ್ದರು. ಆದರೆ ಕಳೆದ ಗುರುವಾರ ಗಂಟಲು ಸೀಳಿದ ಸ್ಥಿತಿಯಲ್ಲಿ ಇವರ ಮೃತದೇಹ ಪತ್ತೆಯಾಗಿತ್ತು.

ಪ್ರಕರಣದ ಬೆನ್ನತ್ತಿದ ಪೊಲೀಸರು ರಾಮ್‌ರ ಹಿರಿಯ ಮಗ ಈ ಕೃತ್ಯ ಎಸಗಿದ್ದನ್ನು ಪತ್ತೆಹಚ್ಚಿದ್ದಾರೆ. ವಿಚಾರಣೆ ವೇಳೆ ಸಿಸಿಎಲ್‌ ಕಂಪನಿಯಲ್ಲಿ ಉದ್ಯೋಗ ಪಡೆಯಲು ಕೊಲೆಗೈದಿದ್ದಾಗಿ ಆತ ಬಾಯ್ಬಿಟ್ಟಿದ್ದಾನೆ.

ಸಿಸಿಎಲ್‌ ಕಂಪನಿಯಲ್ಲಿ ಉದ್ಯೋಗಿಯು ಸೇವೆಯ ಅವಧಿಯಲ್ಲಿ ನಿಧನರಾದರೆ ಅವರ ಕುಟುಂಬಸ್ಥರಿಗೆ ಉದ್ಯೋಗ ನೀಡಬೇಕೆಂಬ ನಿಯಮವಿದೆ.