* ರಷ್ಯಾದಿಂದ ತೈಲ, ಅನಿಲ ಆಮದು ನಿಷೇಧ ಸಾಧ್ಯತೆ* ರಷ್ಯಾಕ್ಕೆ ತೈಲ ಶಾಕ್‌ ನೀಡಲು ಇಯು, ಅಮೆರಿಕ ಒಲವು

ಮಾಸ್ಕೋ(ಮಾ.08): ಯಾವುದೇ ಮನವಿ ಮತ್ತು ನಿರ್ಬಂಧಕ್ಕೂ ಜಗ್ಗದ ರಷ್ಯಾಕ್ಕೆ ಇದೀಗ ದೊಡ್ಡ ಮಟ್ಟದ ಆರ್ಥಿಕ ಹೊಡೆತ ನೀಡುವ ಬಗ್ಗೆ ಅಮೆರಿಕ ಮತ್ತು ಯುರೋಪಿಯನ್‌ ಒಕ್ಕೂಟದ ದೇಶಗಳು ಸಹಮತದತ್ತ ಹೆಜ್ಜೆ ಹಾಕಿವೆ. ರಷ್ಯಾದ ಪ್ರಮುಖ ಆದಾಯ ಕಚ್ಚಾತೈಲ ಮತ್ತು ಅನಿಲ. ಇವೆರಡರ ಆಮದಿಗೂ ನಿಷೇಧ ಹೇರಿದರೆ, ಅದಕ್ಕೆ ದೊಡ್ಡ ಹೊಡೆತ ಬೀಳಲಿದೆ ಎಂಬುದು ಅಮೆರಿಕ ಮತ್ತು ಯುರೋಪಿಯನ್‌ ಒಕ್ಕೂಟದ ದೇಶಗಳ ನಾಯಕರ ಅಭಿಮತ. ಹೀಗಾಗಿಯೇ ಈ ನಿಟ್ಟಿನಲ್ಲಿ ಈಗಾಗಲೇ ನಿಷೇಧ ಕುರಿತು ಚರ್ಚೆ ಆರಂಭವಾಗಿದ್ದು ಶೀಘ್ರವೇ ನಿರ್ಧಾರ ಹೊರಬೀಳುವ ಸಾಧ್ಯತೆ ಇದೆ ಎಂದು ಮೂಲಗಳು ತಿಳಿಸಿವೆ.

ರಷ್ಯಾವು ತೈಲ ಉತ್ಪಾದಿಸುವ ಜಗತ್ತಿನ ಮೂರನೇ ಅತಿದೊಡ್ಡ ರಾಷ್ಟ್ರವಾಗಿದೆ. ಅಲ್ಲದೇ ನೈಸರ್ಗಿಕ ಅನಿಲ ಉತ್ಪಾದನೆಯಲ್ಲಿ ರಷ್ಯಾ ಜಗತ್ತಿನ 2ನೇ ಅತಿದೊಡ್ಡ ರಾಷ್ಟ್ರವಾಗಿದೆ. ಅದರಲ್ಲೂ ಯುರೋಪಿಯನ್‌ ಒಕ್ಕೂಟದ ದೇಶಗಳು ಮತ್ತು ಅಮೆರಿಕ ಕೂಡಾ ರಷ್ಯಾದಿಂದ ಭಾರೀ ಪ್ರಮಾಣದಲ್ಲಿ ತೈಲೋತ್ಪನ್ನಗಳನ್ನು ಆಮದು ಮಾಡಿಕೊಳ್ಳುತ್ತವೆ. ಹೀಗಾಗಿ ಈ ದೇಶಗಳು ಹೇರುವ ಯಾವುದೇ ನಿಷೇಧ ರಷ್ಯಾಕ್ಕೆ ದೊಡ್ಡಮಟ್ಟಿನ ಹೊಡೆತ ನೀಡುವುದು ಖಚಿತ ಎನ್ನಲಾಗಿದೆ.

ಅಮೆರಿಕ, ರಷ್ಯಾದಿಂದ ನಿತ್ಯ 2 ಲಕ್ಷ ಬ್ಯಾರಲ್‌ ಕಚ್ಚಾತೈಲ ಮತ್ತು 5 ಲಕ್ಷ ಬ್ಯಾರಲ್‌ಗಳಷ್ಟುಇತರೆ ಪೆಟ್ರೋಲಿಯಂ ಉತ್ಪನ್ನಗಳನ್ನು ಖರೀದಿಸುತ್ತದೆ. ಇನ್ನು ಯುರೋಪಿಯನ್‌ ದೇಶಗಳು ವರ್ಷಕ್ಕೆ ರಷ್ಯಾದಿಂದ 11.3 ಕೋಟಿ ಬ್ಯಾರಲ್‌ಗಳಷ್ಟುಕಚ್ಚಾತೈಲ ಖರೀದಿಸುತ್ತವೆ. ರಷ್ಯಾದ ಒಟ್ಟು ರಫ್ತಿನಲ್ಲಿ ಯುರೋಪಿಯನ್‌ ದೇಶಗಳ ಪಾಲು ಶೆ.60ರಷ್ಟಿದೆ.

ಚೀನಾ ಧ್ವಜ ಹಾಕಿ ರಷ್ಯಾ ಮೇಲೆ ದಾಳಿ ಮಾಡಬೇಕು: ಟ್ರಂಪ್‌

ಇತ್ತೀಚೆಗೆ ಉಕ್ರೇನ್‌ ಮೇಲೆ ರಷ್ಯಾ ಯುದ್ಧ ಸಾರಿದ್ದಕ್ಕೆ ಅಮೆರಿಕ ಅಧ್ಯಕ್ಷ ಜೋ ಬೈಡೆನ್‌ರನ್ನು ಟೀಕಿಸಿದ್ದ ಮಾಜಿ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌, ಈಗ ವಿವಾದಾತ್ಮಕ ಹೇಳಿಕೆಯೊಂದನ್ನು ನೀಡಿದ್ದಾರೆ. ‘ಚೀನಾ ಧ್ವಜಗಳನ್ನು ಹಾಕಿಕೊಂಡು ಎಫ್‌-22 ಯುದ್ಧವಿಮಾನಗಳ ಮೂಲಕ ರಷ್ಯಾ ಮೇಲೆ ಬಾಂಬ್‌ ದಾಳಿ ನಡೆಸಬೇಕು’ ಎಂದು ಟ್ರಂಪ್‌ ಹೇಳಿದ್ದಾರೆ.

‘ಎಫ್‌-22 ಯುದ್ಧವಿಮಾನಗಳ ಮೂಲಕ ಚೀನಾ ಧ್ವಜ ಬಳಸಿ ದಾಳಿ ಮಾಡಿದರೆ, ಚೀನಾ ಈ ದಾಳಿ ನಡೆಸಿದೆ ಎಂದು ರಷ್ಯಾ ಭಾವಿಸುತ್ತದೆ. ರಷ್ಯಾ-ಚೀನಾ ನಡುವೆ ಕದನ ಆರಂಭವಾಗುತ್ತದೆ. ನಾವು ಆಗ ಹಿಂದೆ ಕುಳಿತು ಮಜಾ ನೋಡೋಣ’ ಎಂದು ಟ್ರಂಪ್‌, ಸಮಾರಂಭವೊಂದರಲ್ಲಿ ಹೇಳಿಕೆ ನೀಡಿದ್ದಾರೆ. ಆಗ ಸಭೆಯಲ್ಲಿದ್ದವರು ಚಪ್ಪಾಳೆ ತಟ್ಟುವ ದೃಶ್ಯ ವಿಡಿಯೋದಲ್ಲಿ ಕಂಡುಬರುತ್ತದೆ.

ಇದೇ ವೇಳೆ, ನ್ಯಾಟೋ ಒಕ್ಕೂಟವನ್ನು ‘ಕಾಗದದ ಹುಲಿ’ ಎಂದು ಟ್ರಂಪ್‌ ಟೀಕಿಸಿದ್ದಾರೆ. ‘ಮಾನವತೆಯ ಮೇಲೆ ಈ ರೀತಿಯ ದಾಳಿ ನಡೆಸಲು ಅವಕಾಶ ನೀಡಬಾರದು’ ಎಂದು ರಷ್ಯಾ ನಡೆಯನ್ನು ಖಂಡಿಸಿದ್ದಾರೆ.

‘ರಷ್ಯಾಗೆ ಯುದ್ಧ ಮಾಡಲು ಬಿಡದ 21ನೇ ಶತಮಾನದ ಏಕೈಕ ಅಧ್ಯಕ್ಷ ಎಂಬ ಕೀರ್ತಿ ನನ್ನದು. ಬುಷ್‌ ಅವಧಿಯಲ್ಲಿ ಜಾರ್ಜಿಯಾ ಮೇಲೆ ದಾಳಿ ಮಾಡಿತು. ಒಬಾಮಾ ಅವಧಿಯಲ್ಲಿ ಕ್ರಿಮಿಯಾ ಮೇಲೆ ದಾಳಿ ನಡೆಸಿತು. ಈಗ ಬೈಡೆನ್‌ ಅವಧಿಯಲ್ಲಿ ಉಕ್ರೇನ್‌’ ಎಂದು ಟ್ರಂಪ್‌ ಟೀಕಿಸಿದ್ದಾರೆ.

ಇತ್ತೀಚೆಗೆ ಟ್ರಂಪ್‌ ಅವರು, ‘ನಾನು ಇಂದು ಅಮೆರಿಕ ಅಧ್ಯಕ್ಷ ಹುದ್ದೆಯಲ್ಲೇ ಇರುತ್ತಿದ್ದರೆ ಯುದ್ಧ ನಡೆಯಲು ಬಿಡುತ್ತಿರಲಿಲ್ಲ. ಬೈಡೆನ್‌ ಸುಮ್ಮನೇ ಇದ್ದುದರ ಫಲ ಇದು’ ಎಂದು ವಾಗ್ದಾಳಿ ನಡೆಸಿದ್ದರು.