ಮುಂಬೈ[ಜ.23]: ರಾಮ ಜನ್ಮಭೂಮಿ-ಬಾಬ್ರಿ ತೀರ್ಪಿನ ಬಳಿಕ ಅಯೋಧ್ಯೆಗೆ ಹೋಗುವುದಾಗಿ ಘೋಷಿಸಿದ್ದ ಮಹಾರಾಷ್ಟ್ರ ಮುಖ್ಯಮಂತ್ರಿ ಉದ್ಧವ್‌ ಠಾಕ್ರೆಗೆ ಅಘಾಡಿ ಮೈತ್ರಿ ತಡೆಯಾಗಿತ್ತು. ಆದರೆ ಈಗ ಅದಕ್ಕೆ ಸಮಯ ಕೂಡಿ ಬಂದಿದ್ದು, ಮಾಚ್‌ರ್‍ನಲ್ಲಿ ಮೈತ್ರಿ ಸರ್ಕಾರ ಅಧಿಕಾರಕ್ಕೆ ನೂರು ದಿನ ತುಂಬುವ ಹಿನ್ನೆಲೆ ಅವರು ಅಯೋಧ್ಯೆಗೆ ತೆರಳಲಿದ್ದಾರೆ ಎಂದು ಶಿವಸೇನೆ ಹೇಳಿದೆ.

ಮಾಚ್‌ರ್‍ನಲ್ಲಿ ಅಘಾಡಿ ಸರ್ಕಾರ ಅಧಿಕಾರಕ್ಕೆ ಬಂದು ನೂರು ದಿನ ತುಂಬಲಿದ್ದು, ಈ ವೇಳೆ ಶ್ರೀರಾಮನ ಆಶೀರ್ವಾದ ಪಡೆಯಲು ಉದ್ಧವ್‌ ಠಾಕ್ರೆ ಅಯೋಧ್ಯೆಗೆ ಭೇಟಿ ನೀಡಲಿದ್ದಾರೆ ಎಂದು ಹಿರಿಯ ನಾಯಕ ಸಂಜಯ್‌ ರಾವುತ್‌ ಹೇಳಿದ್ದಾರೆ. ಅಲ್ಲದೇ ಕಾಂಗ್ರೆಸ್‌ ನಾಯಕ ರಾಹುಲ್‌ ಗಾಂಧಿಗೂ ಅಹ್ವಾನ ನೀಡುವುದಾಗಿ ಹೇಳಿದ್ದಾರೆ.

ಈ ಹಿಂದೆ 2019 ನವೆಂಬರ್‌ 24 ರಂದು ಉದ್ಧವ್‌ ಅಯೋಧ್ಯೆಗೆ ಭೇಟಿ ನೀಡಬೇಕಿತ್ತು. ಆದರೆ ಅಘಾಡಿ ಸರ್ಕಾರ ರಚನೆ ಮಾತುಕತೆಗಳು ನಡೆಯುತ್ತಿದ್ದರಿಂದ ರದ್ದು ಗೊಳಿಸಿದ್ದರು.