ನಮ್ಮ ಬೆಂಬಲಿಗರು ತಾಳ್ಮೆ ಕಳೆದುಕೊಳ್ಳದೆ ಮುಂದಿನ ಚುನಾವಣೆಗೆ ತಯಾರಾಗಬೇಕು ಎಂದು ಉದ್ಧವ್‌ ಠಾಕ್ರೆ ಕರೆ ನೀಡಿದ್ದಾರೆ.

ಮುಂಬೈ (ಫೆಬ್ರವರಿ 19, 2023): ತಮ್ಮ ಬಣದ ಶಿವಸೇನೆಗೆ ಬಿಲ್ಲು ಮತ್ತು ಬಾಣದ ಚಿಹ್ನೆ ಕೈತಪ್ಪಿದ್ದಕ್ಕೆ ಕ್ರುದ್ಧರಾಗಿರುವ ಮಹಾರಾಷ್ಟ್ರದ ಮಾಜಿ ಮುಖ್ಯಮಂತ್ರಿ ಹಾಗೂ ಶಿವಸೇನೆ ನಾಯಕ ಉದ್ಧವ್‌ ಠಾಕ್ರೆ ‘ಕಳ್ಳನಿಗೆ ಪಾಠ ಕಲಿಸಬೇಕು’ ಎಂದು ಮುಖ್ಯಮಂತ್ರಿ ಏಕನಾಥ್‌ ಶಿಂಧೆ ವಿರುದ್ಧ ಗುಡುಗಿದ್ದಾರೆ. ‘ಬಿಲ್ಲು ಮತ್ತು ಬಾಣದ ಚಿಹ್ನೆಯನ್ನು ಕದ್ದಿದ್ದಾರೆ. ಕಳ್ಳನಿಗೆ ಪಾಠ ಕಲಿಸಬೇಕಿದೆ. ಅವನು ಈಗಾಗಲೇ ಸಿಕ್ಕಿಬಿದ್ದಿದ್ದಾನೆ. ಬಿಲ್ಲು ಬಾಣ ಹಿಡಿದು ಮೈದಾನಕ್ಕೆ ಬರುವಂತೆ ಕಳ್ಳನಿಗೆ ಸವಾಲೆಸೆಯುತ್ತಿದ್ದೇನೆ. ಹೊರಗೆ ಬಂದರೆ ಉರಿಯುವ ದೊಂದಿಯಿಂದ (ಉದ್ಧವ್‌ ಬಣದ ಚಿಹ್ನೆ) ಬೆಂಕಿ ಹಚ್ಚಿಬಿಡುತ್ತೇವೆ’ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

‘ಚುನಾವಣಾ ಆಯೋಗ (Election Commission) ಪ್ರಧಾನಿ ಮೋದಿಯ (Narendra Modi) ಗುಲಾಮ. ಅದು ಹಿಂದೆಂದೂ ಮಾಡದ ಕೆಲಸ ಮಾಡಿದೆ. ನಮ್ಮ ಬೆಂಬಲಿಗರು ತಾಳ್ಮೆ ಕಳೆದುಕೊಳ್ಳದೆ ಮುಂದಿನ ಚುನಾವಣೆಗೆ (Election) ತಯಾರಾಗಬೇಕು’ ಎಂದೂ ಉದ್ಧವ್‌ ಠಾಕ್ರೆ (Uddhav Thackeray) ಕರೆ ನೀಡಿದ್ದಾರೆ.

ಇದನ್ನು ಓದಿ: ಇಂದಿರಾ ಗಾಂಧಿಯೂ ಇದೇ ಪರಿಸ್ಥಿತಿ ಎದುರಿಸಿದ್ರು: ಶಿವಸೇನೆ ಚಿಹ್ನೆ ಕಳೆದುಕೊಂಡ ಉದ್ಧವ್ ಠಾಕ್ರೆ ಸಂತೈಸಿದ ಶರದ್ ಪವಾರ್

ಶುಕ್ರವಾರವಷ್ಟೇ ಚುನಾವಣಾ ಆಯೋಗ ಏಕನಾಥ್‌ ಶಿಂಧೆ (Eknath Shinde) ಬಣಕ್ಕೆ ಶಿವಸೇನೆಯ ಮೂಲ ಚಿಹ್ನೆಯಾದ ಬಿಲ್ಲು ಬಾಣದ (Bow and Arrow) ಚಿಹ್ನೆಯನ್ನು (Symbol) ನೀಡಿತ್ತು. ಅದರ ವಿರುದ್ಧ ಪ್ರತಿಭಟಿಸಲು ಠಾಕ್ರೆಗಳ ‘ಮಾತೋಶ್ರೀ’ ನಿವಾಸದ ಮುಂದೆ ಸೇರಿದ್ದ ತಮ್ಮ ಬಣದ ಕಾರ್ಯಕರ್ತರನ್ನುದ್ದೇಶಿಸಿ ಕಾರಿನ ಸನ್‌ರೂಫ್‌ನಿಂದ ಉದ್ಧವ್‌ ಶನಿವಾರ ಭಾಷಣ ಮಾಡಿದರು. ಹಿಂದೆ ಪಕ್ಷದ ಸಂಸ್ಥಾಪಕ ಬಾಳಾ ಠಾಕ್ರೆ ಕೂಡ ಇದೇ ರೀತಿ ಕಾರಿನ ಮೇಲೆ ನಿಂತು ಭಾಷಣ ಮಾಡುತ್ತಿದ್ದುದನ್ನು ಇದು ನೆನಪಿಸಿತು. ಈ ವೇಳೆ ಉದ್ಧವ್‌ ಠಾಕ್ರೆ, ಮುಂಬರುವ ಮುಂಬೈ ಮಹಾನಗರ ಪಾಲಿಕೆ ಚುನಾವಣೆಯಲ್ಲಿ ಶಿಂಧೆ ಬಣಕ್ಕೆ ಪಾಠ ಕಲಿಸುವುದಾಗಿ ಶಪಥ ಮಾಡಿದರು.

ಶಿಂಧೆ ಬಣದಿಂದ ಸುಪ್ರೀಂಕೋರ್ಟ್‌ಗೆ ಕೇವಿಯಟ್‌
ನವದೆಹಲಿ: ಚುನಾವಣಾ ಆಯೋಗವು ತಮಗೆ ಬಿಲ್ಲು ಬಾಣ ಚಿಹ್ನೆ ನೀಡಿದ್ದನ್ನು ಪ್ರಶ್ನಿಸಿ ಉದ್ಧವ್‌ ಠಾಕ್ರೆ ಸುಪ್ರೀಂ ಕೋರ್ಟ್‌ ಮೊರೆ ಹೋಗುವ ಸಾಧ್ಯತೆ ಇರುವ ಕಾರಣ, ಮಹಾರಾಷ್ಟ್ರ ಮುಖ್ಯಮಂತ್ರಿ ಏಕನಾಥ್‌ ಶಿಂಧೆ ಬಣದವರು ಸುಪ್ರೀಂ ಕೋರ್ಟ್‌ಗೆ ಶನಿವಾರ ಕೇವಿಯಟ್‌ ಸಲ್ಲಿಸಿದ್ದಾರೆ. ಕೇವಿಯಟ್‌ ಸಲ್ಲಿಸಿದರೆ ಸುಪ್ರೀಂ ಕೋರ್ಟು, ಶಿಂಧೆ ಬಣದ ವಾದ ಆಲಿಸದೇ ಯಾವುದೇ ಆದೇಶ ಪಾಸು ಮಾಡುವಂತಿಲ್ಲ.

ಇದನ್ನೂ ಓದಿ: ಏಕನಾಥ್ ಶಿಂಧೆ ಬಣಕ್ಕೆ ಗೆಲುವು, ಠಾಕ್ರೆ ಕೈತಪ್ಪಿದ ಶಿವಸೇನೆ ಹೆಸರು, ಪಕ್ಷದ ಚಿಹ್ನೆ!

ಚಿಹ್ನೆ ಕೈತಪ್ಪಿದ್ದಕ್ಕೆ ತಲೆಕೆಡಿಸಿಕೊಳ್ಳಬೇಡಿ: ಉದ್ಧವ್‌ಗೆ ಪವಾರ್‌
ಪುಣೆ: ‘ಪಕ್ಷದ ಚಿಹ್ನೆ ಕೈತಪ್ಪಿದ್ದಕ್ಕೆ ತಲೆಕೆಡಿಸಿಕೊಳ್ಳಬೇಡಿ. ಅದರಿಂದ ಏನೂ ವ್ಯತ್ಯಾಸವಾಗುವುದಿಲ್ಲ’ ಎಂದು ಶಿವಸೇನೆಯ ಉದ್ಧವ್‌ ಠಾಕ್ರೆ ಬಣಕ್ಕೆ ಮಹಾವಿಕಾಸ್‌ ಅಗಾಢಿ ಮೈತ್ರಿಕೂಟದ ಪಾಲುದಾರ, ಎನ್‌ಸಿಪಿ ಮುಖ್ಯಸ್ಥ ಶರದ್‌ ಪವಾರ್‌ ಸಲಹೆ ನೀಡಿದ್ದಾರೆ.

ಶುಕ್ರವಾರವಷ್ಟೇ ಚುನಾವಣಾ ಆಯೋಗವು ಶಿವಸೇನೆಯ ಬಿಲ್ಲು ಮತ್ತು ಬಾಣದ ಚಿಹ್ನೆಯನ್ನು ಮುಖ್ಯಮಂತ್ರಿ ಏಕನಾಥ್‌ ಶಿಂಧೆ ಬಣದ ಶಿವಸೇನೆಗೆ ನೀಡಿದೆ. ಅದಕ್ಕೆ ಪ್ರತಿಕ್ರಿಯಿಸಿರುವ ಶರದ್‌ ಪವಾರ್‌, ‘ಹಿಂದೆ 1978ರಲ್ಲಿ ಇಂದಿರಾ ಗಾಂಧಿ ನೇತೃತ್ವದ ಕಾಂಗ್ರೆಸ್‌ ಕೂಡ ತನ್ನ ಎತ್ತು ಮತ್ತು ನೊಗದ ಚಿಹ್ನೆಯನ್ನು ಕಳೆದುಕೊಂಡಿತ್ತು. ನಂತರ ಆ ಬಣಕ್ಕೆ ಹಸ್ತದ ಚಿಹ್ನೆ ದೊರೆಯಿತು. ಅದರಿಂದ ಕಾಂಗ್ರೆಸ್‌ಗೆ ಏನೂ ಸಮಸ್ಯೆಯಾಗಲಿಲ್ಲ. ಹಾಗೆಯೇ ನೀವು ಕೂಡ ಚುನಾವಣಾ ಆಯೋಗದ ನಿರ್ಧಾರವನ್ನು ಒಪ್ಪಿಕೊಂಡು ಹೊಸ ಚಿಹ್ನೆ ಪಡೆದುಕೊಳ್ಳಿ. ಒಮ್ಮೆ ನಿರ್ಧಾರ ಕೈಗೊಂಡ ಮೇಲೆ ಅಲ್ಲಿ ಚರ್ಚೆಗೆ ಅವಕಾಶವಿರುವುದಿಲ್ಲ’ ಎಂದು ಹೇಳಿದ್ದಾರೆ.

ಇದನ್ನೂ ಓದಿ: ಶಿವಸೇನೆ - ಕಾಂಗ್ರೆಸ್‌ ಮೈತ್ರಿ ಖತಂ..? ಸಾವರ್ಕರ್‌ ವಿರುದ್ಧ ಹೇಳಿಕೆ ಹಿನ್ನೆಲೆ ಉದ್ಧವ್‌ ಬಣದ ಚಿಂತನೆ