ನವದೆಹಲಿ(ಡಿ.12): ಕಳೆದ ಹಲವು ದಿನಗಳಿಂದ ರೈತರು ಪ್ರತಿಭಟನೆ ನಡೆಸುತ್ತಿರುವ ದೆಹಲಿಯ ಸಿಂಘೂ ಗಡಿಯಲ್ಲಿ ಭದ್ರತಾ ಉಸ್ತುವಾರಿ ವಹಿಸಿಕೊಂಡಿದ್ದ ಹಿರಿಯ ಪೊಲೀಸ್‌ ಅಧಿಕಾರಿಗಳಿಬ್ಬರಿಗೆ ಕೊರೋನಾ ದೃಢಪಟ್ಟಿದೆ. ಆ ಮೂಲಕ ಸಿಂಘೂ ಗಡಿಯಲ್ಲಿ ಭಾರೀ ಪ್ರಮಾಣದಲ್ಲಿ ಕೋವಿಡ್‌ ಹರಡಿರುವ ಭೀತಿ ಎದುರಾಗಿದೆ.

ಗಡಿಯಲ್ಲಿ ರೈತರ ನಿಯಂತ್ರಣಕ್ಕೆ ಸಾವಿರಾರು ಪೊಲೀಸರನ್ನು ನಿಯೋಜಿಸಲಾಗಿದ್ದು, ಆ ಪೈಕಿ ಇಬ್ಬರು ಡಿಸಿಪಿ ದರ್ಜೆಯ ಅಧಿಕಾರಿಗಳಿಗೆ ಕೆಲ ದಿನಗಳ ಹಿಂದೆ ಕೋವಿಡ್‌ ಬಂದಿದೆ. ಅವರು ಐಸೋಲೇಶನ್‌ನಲ್ಲಿ ಇದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಸಹಸ್ರಾರು ಸಂಖ್ಯೆಯಲ್ಲಿ ರೈತರು ಜಮಾವಣೆಗೊಂಡಿರುವುದರಿಂದ ರೈತ ಹೋರಾಟ ಸ್ಥಳಗಳು ಕೊರೋನಾ ಕೇಂದ್ರಗಳಾಗಬಹುದು.

ರೈತರು ಸೂಪರ್‌ ಸ್ಪ್ರೆಡರ್‌ಗಳಾಗಬಹುದು ಎಂದು ಆರೋಗ್ಯ ಕ್ಷೇತ್ರದ ತಜ್ಞರು ಎಚ್ಚರಿಕೆ ನೀಡಿದ್ದರು. ರೈತರ ಹೋರಾಟ ಸ್ಥಳದಲ್ಲಿ ಬಹುತೇಕ ಮಂದಿ ಮಾಸ್ಕ್‌ ಧರಿಸಿಲ್ಲ. ಸಾಮಾಜಿಕ ಅಂತರವನ್ನೂ ಪಾಲಿಸುತ್ತಿಲ್ಲ. ಹೀಗಾಗಿ ಹೋರಾಟ ಸ್ಥಳ ಅವರ ಪ್ರಾಣಕ್ಕೆ ಅಪಾಯ ತಂದೊಡ್ಡಬಹುದು ಎಂದೂ ಹೇಳಿದ್ದರು.