ನವದೆಹಲಿ(ಆ.08): ಅಮೆರಿಕ ಅಧ್ಯಕ್ಷರ ಪ್ರವಾಸಕ್ಕೆ ಇರುವ ಭಾರೀ ಭದ್ರತಾ ವ್ಯವಸ್ಥೆಗಳಿರುವ ಐಷಾರಾಮಿ ‘ಏರ್‌ಫೋರ್ಸ್‌ ಒನ್‌’ ವಿಮಾನ ಮಾದರಿಯಲ್ಲೇ, ದೇಶದ ರಾಷ್ಟ್ರಪತಿ, ಉಪರಾಷ್ಟ್ರಪತಿ ಹಾಗೂ ಪ್ರಧಾನ ಮಂತ್ರಿಗಳ ಪ್ರಯಾಣಕ್ಕೆ ವಿಶೇಷವಾಗಿ ಸಿದ್ಧಪಡಿಸಲಾಗಿರುವ ‘ ಏರ್‌ ಒಂಡಿಯಾ ವಿವಿಐಪಿ ವಿಮಾನ’ ತಿಂಗಳಾಂತ್ಯಕ್ಕೆ ದೇಶಕ್ಕೆ ಬರಲಿದೆ ಎಂದು ಮೂಲಗಳು ತಿಳಿಸಿವೆ.

ಬೋಯಿಂಗ್‌ 777-300ಎಸ್‌ ಮಾದರಿಯ ಎರಡು ವಿಮಾನವನ್ನು ಸುಸಜ್ಜಿತವಾಗಿ ಮಾರ್ಪಾಡು ಮಾಡಲಾಗಿದ್ದು, ಆ.24ಕ್ಕೆ ಮೊದಲ ವಿಮಾನ ಭಾರತಕ್ಕೆ ಬರಲಿದೆ. ವಿಮಾನ ಮಾರ್ಪಾಡು ಸಂಬಂಧ ಏರ್‌ ಇಂಡಿಯಾ ಹಾಗೂ ಬೋಯಿಂಗ್‌ ಜತೆ 2018ರಲ್ಲೇ ಒಪ್ಪಂದ ಮಾಡಿಕೊಂಡಿದ್ದು, ಜೂನ್‌ ಅಂತ್ಯಕ್ಕೆ ಭಾರತಕ್ಕೆ ಬರಬೇಕಿತ್ತು. ಆದರೆ ಕೋವಿಡ್‌ ನಿರ್ಬಂಧಗಳು ಇರುವುದರಿಂದ ಎರಡು ತಿಂಗಳು ತಡವಾಗಿ ದೇಶಕ್ಕೆ ಆಗಮಿಸುತ್ತಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ. ಈ ವಿಮಾನಗಳು ಭಾರತೀಯ ವಾಯು ಸೇನೆಗೆ ಹಸ್ತಾಂತರಿಸಲಾಗುವುದು. ವಾಯು ಸೇನೆಯ ಕೆ ಸರಣಿಯಡಿ ಇದನ್ನು ನೋಂದಣಿ ಮಾಡಲಾಗುತ್ತದೆ.

ವಿಮಾನದ ವೈಶಿಷ್ಟ್ಯ:

- ವೈಮಾನಿಕ ದಾಳಿಯನ್ನು ತಡೆಯುವ ಸಾಮರ್ಥ್ಯ

- ಕ್ಷಿಪಣಿ ದಾಳಿ ಎಚ್ಚರಿಸುವ ಸೆನ್ಸಾರ್‌

- ಅಮೆರಿಕ ಸ್ವ-ರಕ್ಷಣಾ ಸೂಟ್‌ ವ್ಯವಸ್ಥೆ

- ಸುಸಜ್ಜಿತ ಬೆಡ್‌ ರೂಂ ಹಾಗೂ ಬಾತ್‌ ರೂಂ

- ಪತ್ರಿಕಾಗೋಷ್ಠಿ ಕೊಠಡಿ, ವಿವಿಐಪಿ ಮೀಟಿಂಗ್‌ ಕೊಠಡಿ

- 4632 ಕೋಟಿ ವೆಚ್ಚದಲ್ಲಿ ತಯಾರಿ