Asianet Suvarna News Asianet Suvarna News

Turning Point: 'ಅತ್ತೇ ಒಂದ್ ನಿಮಿಷ..' ಸೋನಿಯಾ ಮಾತಿಗೆ ಬದಲಾಯ್ತು ಇಂದಿರಾ ನಿರ್ಧಾರ, ರೊಚ್ಚಿಗೆದ್ದಿದ್ರು ಕಿರಿಸೊಸೆ..!

ದೇಶವನ್ನೇ ಆಳಿದ ಕುಟುಂಬವಾದರೂ, ಗಾಂಧಿ ಕುಟುಂಬದಲ್ಲಿ ಆಂತರಿಕ ಸಂಬಂಧವೇ ಚೆನ್ನಾಗಿಲ್ಲ ಅನ್ನೋದಕ್ಕೆ ಸಾಕಷ್ಟು ಉದಾಹರಣೆಗಳು ಸಿಗುತ್ತಾ ಹೋಗುತ್ತದೆ. ಅಷ್ಟಕ್ಕೂ ಇದಲ್ಲ ಆರಂಭವಾಗಿದ್ದು ಯಾವಾಗ ಎನ್ನುವುದಕ್ಕೆ ಉತ್ತರ ಇಲ್ಲಿದೆ.
 

Turning Point political Fight between Maneka gandhi indira gandhi and sonia gandhi san
Author
First Published Apr 8, 2024, 4:14 PM IST

42 ವರ್ಷಗಳ ಹಿಂದೆ ಸೋನಿಯಾ ಗಾಂಧಿ ಆಡಿದ್ದ ಅದೊಂದು ಮಾತು ಇಡೀ ಗಾಂಧಿ ಕುಟುಂಬವನ್ನು ತುಂಡು ಮಾಡಿಬಿಟ್ಟಿತು. "ಅತ್ತೇ ಒಂದ್ ನಿಮಿಷ.." ಅಂದಿದ್ದರು ಇಂದಿರಾ ಗಾಂಧಿಯ ಹಿರಿಸೊಸೆ ಸೋನಿಯಾ ಗಾಂಧಿ. ಒಂದೇ ನಿಮಿಷದಲ್ಲಿ ಪ್ರಧಾನಿ ಇಂದಿರಾ ನಿರ್ಧಾರ ಕೂಡ ಬದಲಾಗಿ ಬಿಟ್ಟಿತು. ಇದರ ಬೆನ್ನಲ್ಲಿಯೇ ಗಾಂಧಿ ಪರಿವಾರದ ವಿರುದ್ಧವೇ ತಿರುಗಿ ಬಿದ್ದಿದ್ದರು ಇಂದಿರೆಯ ಕಿರಿಸೊಸೆ ಮನೇಕಾ ಗಾಂಧಿ. ಗಾಂಧಿ ಕುಟುಂಬದಲ್ಲಿ "ವಾರಗಿತ್ತಿ ವಾರ್" ಶುರುವಾಗಿದ್ದೇಕೆ ಕಾರಣವೇನು? ಇಂದಿರಾ ಗಾಂಧಿ ಸೊಸೆಯಂದಿರ ಮಧ್ಯೆ ಮನಸ್ತಾಪ ಹುಟ್ಟಿಕೊಂಡದ್ದೇಕೆ..? ಯೆಸ್‌...ಮನೇಕಾ ಗಾಂಧಿಗೆ "ಮನೆ ಬಿಟ್ಟು ಹೊರಡು" ಅಂದಿದ್ದರು ಅತ್ತೆ ಇಂದಿರಾ. ಸಂಜಯನ ಪತ್ನಿಯ ವಿರುದ್ಧ ಅತ್ತೆ ಇಂದಿರಾ ಬೆಂಕಿಯಾಗೋದಕ್ಕೆ ಕಾರಣವೇನು? ಇಂದಿರಾ ಹಿರಿಸೊಸೆಯ ಒಂದು ಮಾತಿಗೆ ಕಿರಿಸೊಸೆ ರೊಚ್ಚಿಗೆದ್ದಿದ್ದರು. ಕೊನೆಗೆ ರಾಜೀವ್ ಗಾಂಧಿ ವಿರುದ್ಧವೇ ಮನೇಕಾ ಗಾಂಧಿ ಚುನಾವಣೆ ನಿಲ್ಲುವ ಮಟ್ಟಕ್ಕೆ ಹೋಗಿ ನಿಂತಿತ್ತು.
ಸೋನಿಯಾ ಗಾಂಧಿ ಆಡಿದ್ದ ಅದೊಂದು ಮಾತು, ಗಾಂಧಿ ಕುಟುಂಬದ ಮನೆ-ಮನಗಳನ್ನು ಮುರಿದು ಹಾಕಿ ಬಿಡ್ತು. ಅತ್ತೆಯ ರಾಜಕೀಯ ವಾರಸ್ದಾರಿಣಿಯ ಕನಸು ಕಂಡಿದ್ದ ಇಂದಿರೆಯ ಕಿರಿಸೊಸೆ, ತನ್ನ ಪರಿವಾರದ ವಿರುದ್ಧವೇ ತಿರುಗಿ ನಿಲ್ಲಲು ಕಾರಣವಾಯ್ತು ಆ ಘಟನೆ. ಮಾಜಿ ಪ್ರಧಾನಿ ಇಂದಿರಾ ಗಾಂಧಿಯವರ ಸೊಸೆಯಂದಿರ ನಡುವಿನ ಘರ್ಷಣೆ, ರಾಷ್ಟ್ರ ರಾಜಕಾರಣಕ್ಕೆ ತಿರುವು ನೀಡಿದ್ದು ಹೇಗೆ..? ಎನ್ನುವ ವಿವರ ಇಲ್ಲಿದೆ.

ಆಕೆಯನ್ನು ದುರ್ಗಿ ಅಂತ ಕರೆದಿದ್ದರು ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ. ಆಕೆ, ದೊಡ್ಡ ದೊಡ್ಡವರೇ ತನ್ನ ಮುಂದೆ ನಡು ಬಗ್ಗಿಸಿ ಸಲಾಂ ಹೊಡೆಯುವಂತೆ ಮಾಡಿದ್ದ ಗಟ್ಟಿಗಿತ್ತಿ. ಆಕೆಗೆ ಇಬ್ಬರು ಗಂಡು ಮಕ್ಕಳು, ಒಬ್ಬ ರಾಜೀವ್ ಗಾಂಧಿ, ಮತ್ತೊಬ್ಬ ಸಂಜಯ್ ಗಾಂಧಿ. ಈ ಕಥೆ ಶುರುವಾಗೋದು ಮಾಜಿ ಪ್ರಧಾನಿ ಇಂದಿರಾ ಗಾಂಧಿಯವರ 2ನೇ ಪುತ್ರ ಸಂಜಯ್ ಗಾಂಧಿಯ ಸಾವಿನ ಘಟನೆಯಿಂದ. ಇಂದಿರೆಯ ಮಗ ಸಂಜಯ ಗಾಂಧಿಯದ್ದು ಚಿಕ್ಕಂದಿನಿದ್ಲೂ ಹುಚ್ಚು ಮನಸ್ಸು. ಯಾರ ಹಿಡಿತಕ್ಕೂ ಸಿಗದ, ಯಾರ ಅಂಕೆಗೂ ನಿಲುಕದ ಹುಂಭ. 1975ರಲ್ಲಿ ಪ್ರಧಾನಿ ಇಂದಿರಾ ಗಾಂಧಿ ದೇಶಕ್ಕೆ ತುರ್ತು ಪರಿಸ್ಥಿತಿ ಹೇರಿದರಲ್ಲ,  ಅವತ್ತು ರಾಜೀನಾಮೆಗೆ ಮುಂದಾಗಿದ್ದ ತಾಯಿಗೆ, ಎಮರ್ಜೆನ್ಸಿಯಂಥಾ ಖತರ್ನಾಕ್ ಐಡಿಯಾ ಕೊಟ್ಟದ್ದೇ ಈ “ಮಗಧೀರ” ಸಂಜಯ್ ಗಾಂಧಿ. 

ಆ ಕಾಲಕ್ಕೆ ಸಂಜಯ್ ಗಾಂಧಿ ದೇಶದ ರಾಜಕಾರಣದಲ್ಲಿ ಮೋಸ್ಟ್ ಪವರ್'ಫುಲ್ ಮ್ಯಾನ್.. ಪ್ರಧಾನಮಂತ್ರಿಯ ಮಗ, ಲೋಕಸಭಾ ಸದಸ್ಯ.. ಕಾಂಗ್ರೆಸ್ ಪಕ್ಷದ ಜನರಲ್ ಸೆಕ್ರೆಟರಿ. ಚುನಾವಣೆಗಳಲ್ಲಿ ಅಮ್ಮನನ್ನು ಗೆಲ್ಲಿಸಿ, ತಾನೂ ಗೆದ್ದು, ತನ್ನ ಜೊತೆ 100ಕ್ಕೂ ಹೆಚ್ಚು ಹಿಂಬಾಲಕರಿಗೆ ಟಿಕೆಟ್ ನೀಡಿ ಗೆಲ್ಲಿಸಿ ಪಾರ್ಲಿಮೆಂಟ್'ಗೆ ಕರೆ ತಂದಿದ್ದ ಹುಂಬ ರಾಜಕಾರಣಿ. ನೆನಪಿರ್ಲಿ.. ಆಗಿನ್ನೂ ಸಂಜಯ್ ಗಾಂಧಿ ವಯಸ್ಸು ಜಸ್ಟ್ 29. 

ತುರ್ತು ಪರಿಸ್ಥಿತಿಯ ನಂತರ ಅಧಿಕಾರ ಕಳೆದುಕೊಂಡಿದ್ದ ಇಂದಿರಾ ಗಾಂಧಿ, ಮತ್ತೆ ದೆಹಲಿ ಗದ್ದುಗೆಯೇರಲು ಕಾರಣವಾಗಿದ್ದು ಸಂಜಯ್ ಗಾಂಧಿಯ ರಾಜಕೀಯ ಚಾಣಾಕ್ಷತೆ. ಮುರಾರ್ಜಿ ದೇಸಾಯಿ ಮತ್ತು ಚರಣ್ ಸಿಂಗ್ ಮಧ್ಯೆ ಒಡಕು ತಂದಿಟ್ಟು, ಇಂದಿರಾ ಗಾಂಧಿ ಬೆಂಬಲದೊಂದಿಗೆ ಚರಣ್ ಸಿಂಗ್ ಪ್ರಧಾನಿಯಾಗುವಂತೆ ಮಾಡಿ, ಕೊನೆಗೆ ಆ ಸರ್ಕಾರಕ್ಕೆ ನೀಡಿದ್ದ ಬೆಂಬಲವನ್ನು ವಾಪಸ್ ಪಡೆದದ್ದರ ಹಿಂದೆ ಸಂಜಯ್ ಗಾಂಧಿಯ ಮಾಸ್ಟರ್’ಮೈಂಡ್ ಕೆಲಸ ಮಾಡಿತ್ತು. 

ಇಂಥಾ ಸಂಜಯ್ ಗಾಂಧಿಗೊಂದು ಖಯಾಲಿಯಿತ್ತು. ಸಮಯ ಸಿಕ್ಕಾಗ ವಿಮಾನ ಹತ್ತೋದು, ಆಕಾಶದಲ್ಲಿ ಯರ್ರಾ ಬಿರ್ರಿ ಓಡಿಸೋದು. ಆದರೆ, ಒಂದಿನ ಅದೇ ಖಯಾಲಿ ತನ್ನ ಜೀವಕ್ಕೇ ಕಂಟಕವಾಗಲಿದೆ ಅನ್ನೋದ್ರ ಸಣ್ಣ ಆತಂಕವೂ ಸಂಜಯ್ ಗಾಂಧಿಗೆ ಇರ್ಲಿಲ್ಲ. ಅವತ್ತು ಇಂದಿರೆಯ ಮಗನ ಗ್ರಹಚಾರ ಕೆಟ್ಟಿತ್ತು ಅಂತ ಕಾಣತ್ತೆ. 1980ರ ಜೂನ್ 23ರ ದಿನ. ಪತ್ನಿ ಮನೇಕಾ ಆಗಿನ್ನೂ 3 ತಿಂಗಳ ಬಾಣಂತಿ. ಬೆಳ್ಳಂ ಬೆಳಗ್ಗೆ ಎದ್ದವರೇ ದಿಲ್ಲಿಯ ಫ್ಲೈಯಿಂಗ್ ಕ್ಲಬ್'ಗೆ ನುಗ್ಗಿ ಬಿಡುತ್ತಾರೆ ಸಂಜಯ್ ಗಾಂಧಿ. ಎದುರಿಗಿದ್ದದ್ದು "ಪಿಟ್ಸ್ S-2A" ಹೆಸರಿನ ಪುಟ್ಟ ವಿಮಾನ. ಕ್ಯಾಪ್ಟನ್ ಸುಭಾಷ್ ಸಕ್ಸೇನಾ ಅವರನ್ನು ವಿಮಾನಕ್ಕೆ ಹತ್ತಿಸಿಕೊಂಡ ಸಂಜಯ್ ಗಾಂಧಿ, ಏರೋಬ್ಯಾಟಿಕ್ ಸ್ಟಂಟ್'ಗಳನ್ನು ಮಾಡುವ ಗುರಿಯೊಂದಿಗೆ ವಿಮಾನವನ್ನು ಆಕಾಶಕ್ಕೆ ಏರಿಸಿ ಬಿಡುತ್ತಾರೆ..  ಇಂದಿರಾ ಗಾಂಧಿಯವರ ಕಿರಿಮಗ ಸಂಜಯ್ ಗಾಂಧಿಗೆ ವಿಪರೀತ ವಿಮಾನ ಶೋಕಿ. ಅವರಿಗೆ ವಿಮಾನ ಓಡಿಸೋದು ಗೊತ್ತಿತ್ತೇ ವಿನಃ, ಈ ಏರೋಬ್ಯಾಟಿಕ್ ಸ್ಟಂಟ್'ಗಳಲ್ಲಿ ಎಕ್ಸ್'ಪರ್ಟ್ ಏನೂ ಆಗಿರಲಿಲ್ಲ. ಮೊದಲೇ ಹುಂಬ, ಹುಚ್ಚು ಧೈರ್ಯ.. ಅದೇ ಹುಂಬತನ, ಹುಚ್ಚುತನವೇ ಸಂಜಯ್ ಗಾಂಧಿಯ ಜೀವಕ್ಕೆ ಕಂಟಕವಾಗಿ ಬಿಡ್ತು.

ವಿಮಾನ ಆಕಾಶಕ್ಕೆ ನೆಗೆದು ಕೆಲವೇ ಕ್ಷಣಗಳಾಗಿತ್ತಷ್ಟೆ. ಮುಗಿಲೆತ್ತರದಲ್ಲಿ ಹಾರಾಡ್ತಿದ್ದ ಲೋಹದ ಹಕ್ಕಿ, ಕ್ಷಣ ಮಾತ್ರದಲ್ಲಿ ದೊಡ್ಡ ಶಬ್ದದೊಂದಿಗೆ ನೆಲಕ್ಕಪ್ಪಳಿಸಿ ಬಿಟ್ಟಿತ್ತು. ಅಷ್ಟೇ.. ವಿಮಾನದ ಕಾಕ್'ಪಿಟ್'ನಲ್ಲಿದ್ದ ಸಂಜಯ್ ಗಾಂಧಿ ಮತ್ತು ಕ್ಯಾಪ್ಟನ್ ಸುಭಾಷ್ ಸಕ್ಸೇನಾ ಅವರ ದೇಹಗಳು ಛಿದ್ರ ಛಿದ್ರವಾಗಿ ಬಿದ್ದಿದ್ವು.  ಇಂದಿರಾ ಗಾಂಧಿಯವರಿಗೆ ಸಂಜಯ್ ಗಾಂಧಿ ಅತ್ಯಂತ ಪ್ರೀತಿ ಪಾತ್ರ ಮಗ. ರಾಜಕೀಯ ವಾರಸ್ದಾರ ಇವ್ನೇ ಅಂತ ನಿರ್ಧರಿಸಿ ಬಿಟ್ಟಿದ್ದರು. ಅಂಥಾ ಮಗನನ್ನು ಶಾಶ್ವತವಾಗಿ ಕಳೆದುಕೊಂಡ ಇಂದಿರಾ ಗಾಂಧಿ ಅಕ್ಷರಶಃ ಕುಗ್ಗಿ ಹೋಗಿದ್ದರು. ಮಗನ ಸಾವಿನ ನಾಲ್ಕನೇ ದಿನ. ಕರುಳು ಸುಟ್ಟು ಕಣ್ಣೀರು ಬರ್ತಾ ಇದ್ರೂ, ಪ್ರಧಾನಿಯ ಗತ್ತಿನ ಮುಂದೆ ಅದನ್ನು ಬಲವಂತದಿಂದ ಮರೆ ಮಾಚಿ, ಮತ್ತದೇ ಬಿರುಸಿನೊಂದಿಗೆ ಪ್ರಧಾನಿ ಕಚೇರಿಗೆ ಹೊರಟು ನಿಂತಿದ್ದರು ಇಂದಿರಾ ಗಾಂಧಿ. 

ಈ ಸಮಯದಲ್ಲಿ ಸಂಜಯ್ ಗಾಂಧಿ ಸಾವಿನಿಂದ ಗರಬಡಿದಂತೆ ಕೂತಿದ್ದ ಒಬ್ಬ ಮಹಿಳೆಯ ಬಗ್ಗೆ ಹೇಳಲೇಬೇಕು. ಆಕೆಯೇ ಮನೇಕಾ ಆನಂದ್.

ಮನೇಕಾ ಆನಂದ್, ಸಂಜಯ್ ಗಾಂಧಿ ಪ್ರೀತಿಸಿ ಮದುವೆಯಾದ ಹೆಣ್ಣು. ಕರ್ನಲ್ ಆನಂದ್ ಅನ್ನೋ ಸಿಖ್ ಸೈನ್ಯಾಧಿಕಾರಿಯ ಮುದ್ದಿನ ಮಗಳು. ಸಂಜಯ್ ಗಾಂಧಿ ಜೊತೆ ಮನೇಕಾ ಬಾಳಿ ಬದುಕಿದ್ದು ಜಸ್ಟ್ ಆರೇ ಆರು ವರ್ಷ. ಗಂಡ ಸತ್ತಾಗ ಮನೇಕಾ ಕೇವಲ 23 ವರ್ಷದ ಹೆಣ್ಣು ಮಗಳು. ಕೈಯಲ್ಲಿ 3 ತಿಂಗಳ ಹಸುಗೂಸು. 23ನೇ ವರ್ಷಕ್ಕೆ ವಿಧವೆಯಾದವಳು ಮುಂದೇನು ಅನ್ನೋ ಯೋಚನೆಯಲ್ಲಿದ್ದಾಗ್ಲೇ, ಬಂತು ನೋಡಿ ಅಮೇಥಿ ಲೋಕಸಭಾ ಕ್ಷೇತ್ರಕ್ಕೆ ಬೈ ಎಲೆಕ್ಷನ್.

ಸ್ಮೃತಿ ಇರಾನಿ ಎಂಟ್ರಿ ಕೊಡೋವರೆಗೆ ಅಮೇಥಿ ಅಖಾಡ, ಗಾಂಧಿ ಕುಟುಂಬದ ಭದ್ರಕೋಟೆಯಾಗಿದ್ದ ಕ್ಷೇತ್ರ. ಅಮೇಥಿಯ ಆ ಭದ್ರಕೋಟೆಗೆ ಅಡಿಪಾಯ ಹಾಕಿದವರು ಸಂಜಯ್ ಗಾಂಧಿ. 1980ರ ಚುನಾವಣೆಯಲ್ಲಿ ಅಮೇಥಿಯಿಂದ ಸ್ಪರ್ಧಿಸಿ ಗೆದ್ದ ಸಂಜಯ್, ಒಂದೇ ವರ್ಷದಲ್ಲಿ ಸಾವಿಗೀಡಾಗ್ತಾರೆ. ಉಪಚುನಾವಣೆ ಘೋಷಣೆಯಾಗುತ್ತೆ. ಹಿರಿಮಗ ರಾಜೀವ್ ಗಾಂಧಿಯನ್ನು ಬಲವಂತವಾಗಿ ಚುನಾವಣೆಗೆ ನಿಲ್ಲಿಸುತ್ತಾರೆ ಇಂದಿರಾ ಗಾಂಧಿ.

ರಾಜೀವ್ ಗಾಂಧಿ ರಾಜಕೀಯಕ್ಕೆ ಬರೋದು ಪತ್ನಿ ಸೋನಿಯಾಗೆ ಇಷ್ಟ ಇರ್ಲಿಲ್ಲ. ಹೆಂಡತಿಯ ವಿರೋಧ ಕಟ್ಟಿಕೊಂಡೇ ಚುನಾವಣಾ ಅಖಾಡ ಪ್ರವೇಶ ಮಾಡುತ್ತಾರೆ. ಬೈ ಎಲೆಕ್ಷನ್'ನಲ್ಲಿ 2 ಲಕ್ಷಕ್ಕೂ ಹೆಚ್ಚು ಮತಗಳ ಗೆಲುವು ಅವರದಾಗುತ್ತದೆ. ರಾಜೀವ್ ಗಾಂಧಿ ಗೆದ್ದು ವಿಜಯದ ಸಂಭ್ರಮಾಚರಣೆಯಲ್ಲಿರೋವಾಗ್ಲೇ, ದೆಹಲಿಯ ಸಫ್ದರ್’ಜಂಗ್’ನಲ್ಲಿರುವ ಪ್ರಧಾನಿ ನಿವಾಸದಲ್ಲಿ ಕೂತಲ್ಲೇ ಕನಲಿ ಹೋಗಿದ್ದು ಸಂಜಯ್ ಪತ್ನಿ ಮನೇಕಾ ಗಾಂಧಿ.

ಗಂಡನ ಸಾವಿನಿಂದ ತೆರವಾದ ಅಮೇಥಿ ಲೋಕಸಭಾ ಕ್ಷೇತ್ರದಿಂದ ತಾವೇ ಸ್ಪರ್ಧಿಸ್ಬೇಕು ಅನ್ನೋದು ಮನೇಕಾ ಯೋಚನೆಯಾಗಿತ್ತು. ಆದರೆ, ಆಗಿನ್ನೂ ಮನೇಕಾಗೆ 23 ವರ್ಷ. ಲೋಕಸಭಾ ಚುನಾವಣೆಯಲ್ಲಿ ಸ್ಪರ್ಧಿಸೋದಕ್ಕೆ 25 ವರ್ಷ ತುಂಬಿರ್ಬೇಕು. ಪರಿಸ್ಥಿತಿ ವಿರುದ್ಧವಾಗಿತ್ತು. ಗಂಡ ಕಟ್ಟಿದ ಕೋಟೆಯಲ್ಲಿ ರಾಜೀವ್ ಗೆದ್ದದ್ದನ್ನು ನೋಡಿ ಮನೇಕಾ ಕೆಂಡವಾಗುತ್ತಾರೆ. ಗಾಂಧಿ ಕುಟುಂಬದ ಮನೆಯೊಳಗೆ ಬಿರುಗಾಳಿಯೇ ಎದ್ದು ಬಿಡತ್ತೆ.  ಹೀಗೆ ಪ್ರತೀ ಹೆಜ್ಜೆಯಲ್ಲೂ ಸಂಜಯ್ ಗಾಂಧಿ ಬೆನ್ನ ಹಿಂದೆ ಇದ್ದವರು ಪತ್ನಿ ಮನೇಕಾ. ಸಹಜವಾಗಿಯೇ ಗಂಡನ ರಾಜಕೀಯ ವಾರಸ್ದಾರೆ ನಾನೇ ಆಗ್ಬೇಕು ಅನ್ನೋ ಆಸೆ ಆ ಹೆಣ್ಣು ಮಗಳಿಗೆ ಬಂದಿದ್ರಲ್ಲಿ ಆಶ್ಚರ್ಯ ಏನಿಲ್ಲ. ಆದರೆ, ಆ ಆಸೆಗೆ ಇಂದಿರಾ ಗಾಂಧಿ ಅಡ್ಡಗಾಲು ಹಾಕ್ತಾರೆ. ಹಿರಿಮಗ ರಾಜೀವ್’ನನ್ನ ಅಮೇಥಿ ಬೈ ಎಲೆಕ್ಷನ್’ನಲ್ಲಿ ನಿಲ್ಲಿಸಿ ಗೆಲ್ಲಿಸಿಕೊಳ್ಳುತ್ತಾರೆ. ಅತ್ತ ಮನೇಕಾ ಗಾಂಧಿ ಅತ್ತೆ ಹಾಗೂ ಭಾವನ ವಿರುದ್ಧ ಬೆಂಕಿಯುಗುಳೋದಕ್ಕೆ ಶುರು ಮಾಡ್ತಾರೆ. ಅತ್ತೆಯ ಇಚ್ಛೆಗೆ ವಿರುದ್ಧವಾಗಿ ರಾಜಕೀಯ ವೇದಿಕೆಯೊಂದನ್ನು ಹತ್ತಿ ಅಲ್ಲಿ ಭಾಷಣ ಮಾಡ್ತಾರೆ.

ಇಷ್ಟೆಲ್ಲಾ ಆದರೂ ವಿಧವೆ ಸೊಸೆ ಬಗ್ಗೆ ಇಂದಿರಾ ಗಾಂಧಿ ಒಳಗೊಳಗೇ ಮರುಕ ಪಡ್ತಾ ಇದ್ರು. ಗಂಡನನ್ನು ಕಳೆದುಕೊಂಡಿದ್ದ ದುಃಖ ಮರೆಸಲು, “ತನ್ನೊಂದಿಗೆ ಪ್ರಧಾನಿ ಕಚೇರಿಗೆ ಬಾ”, ಅಂತ ಸೊಸೆಯನ್ನು ಕರೆಯುತ್ತಾರೆ. ಸೊಸೆಯನ್ನು ತನ್ನ ಆಪ್ತ ಸಹಾಯಕಿ, ಅಂದ್ರೆ ಪ್ರಧಾನಮಂತ್ರಿಗಳ ಆಪ್ತ ಸಹಾಯಕಿಯನ್ನಾಗಿ ನೇಮಕ ಮಾಡಲು ಇಂದಿರಾ ಮುಂದಾಗ್ತಾರೆ. ನೇಮಕ ಪತ್ರಕ್ಕೆ ಸಹಿ ಹಾಕುತ್ತೇನೆ ಅಂತ ಹೊರಟು ನಿಂತವರಿಗೆ ಮನೆಯೊಳಗಿಂದ ಧ್ವನಿಯೊಂದು ಕೇಳತ್ತೆ. "ಅತ್ತೇ ಒಂದ್ ನಿಮಿಷ.." ಅವತ್ತು ಮನೆಯೊಳಗೆ ನಿಂತು “ಅತ್ತೇ ಒಂದ್ ನಿಮಿಷ” ಅಂದವರು ಇಂದಿರಾ ಗಾಂಧಿಯವರ ಹಿರಿಸೊಸೆ ಸೋನಿಯಾ ಗಾಂಧಿ. ಅಷ್ಟಕ್ಕೂ ಅವತ್ತು ಸೋನಿಯಾ ಅತ್ತೇ ಒಂದ್ ನಿಮಿಷ ಅಂದಿದ್ದೇಕೆ..?  ಅವತ್ತು ಇಂದಿರಾ ಗಾಂಧಿಯವರನ್ನು ಹಿರಿಸೊಸೆ ಸೋನಿಯಾ ತಡೆಯದೇ ಹೋಗಿದ್ದರೆ, ದೇಶದ ರಾಜಕೀಯ ಬೇರೆಯದ್ದೇ ದಿಕ್ಕಲ್ಲಿ ಸಾಗುತ್ತಿತ್ತೋ ಏನೋ.. ಆದ್ರೆ ಸೋನಿಯಾ ಗಾಂಧಿ ಅತ್ತೆ ಇಂದಿರಾಗೆ ಹೇಳಿದ ಅದೊಂದು ಮಾತು, ಹೊಸ ಕಥೆಗೆ ಮುನ್ನುಡಿ ಬರೆದು ಬಿಡ್ತು. ಅದೆಂಥಾ ಕಥೆ ಗೊತ್ತಾ..? 

* "ಅತ್ತೇ ಒಂದ್ ನಿಮಿಷ.." ಅಂದರು ಸೋನಿಯಾ..!: ಅದೊಂದು ಮಾತಿಗೆ ಇಂದಿರಾ ಗಾಂಧಿಯವರ ನಿರ್ಧಾರವೇ ಬದಲಾಗಿ ಹೋಗಿತ್ತು. 23ನೇ ವಯಸ್ಸಲ್ಲೇ ಗಂಡನನ್ನು ಕಳೆದುಕೊಂಡು ವಿಧವೆಯಾಗಿದ್ದ ಕಿರಿಸೊಸೆಗೆ ಪ್ರಧಾನಮಂತ್ರಿಗಳ ಆಪ್ತ ಸಹಾಯಕಿ ಹುದ್ದೆ ಕೊಡಲು ಹೊರಟ್ಟಿದ್ದವರು, ಸೋನಿಯಾ ಹೇಳಿದ ಒಂದೇ ಒಂದು ಮಾತಿಗೆ ನಿರ್ಧಾರವನ್ನೇ ಬದಲಿಸಿ ಬಿಟ್ರು ಇಂದಿರಾ.  'ಮನೇಕಾ ಚಿಕ್ಕವಳು ನಿಜ.. ತುಂಬಾ ನೊಂದಿದ್ದಾಳೆ ಅನ್ನೋದೂ ನಿಜ. ಮುಂದೆ ಸರಿ ಹೋಗುತ್ತಾಳೆ. ಆದರೆ ಇವತ್ತು ಅವಳಿರುವ ಮನಸ್ಥಿತಿಯಲ್ಲಿ ನೀವು ಕರ್ಕೊಂಡ್ ಹೋಗಿ ಪ್ರಧಾನಿ ಕಚೇರಿಯಲ್ಲಿ ಕೂರಿಸಿಬಿಟ್ಟರೆ, ಆಗೋ ಅನಾಹುತುಗಳು ಒಂದೆರಡಲ್ಲ. ಈಗ ಮನೆಯಲ್ಲಿ ಆಗುತ್ತಿರುವುದೇ ಸಾಕು. ಅವಳನ್ನು ಪ್ರೈಮ್ ಮಿನಿಸ್ಟರ್ ಆಫೀಸ್'ಗೆ ಕರ್ಕೊಂಡ್ ಹೋಗೋ ಆಲೋಚನೆಯನ್ನು ಬಿಟ್ಟು ಬಿಡಿ ಮಮ್ಮೀ"  ಹೀಗಂತ ಒಂದೇ ಉಸಿರಿನಲ್ಲಿ ಅತ್ತೆಯ ಮುಂದೆ ನಿಂತು ಹೇಳಿ ಬಿಟ್ಟಿದ್ದರು ಇಂದಿರಾ ಗಾಂಧಿಯವರ ಹಿರಿಸೊಸೆ ಸೋನಿಯಾ ಗಾಂಧಿ.
ಇಟಲಿಯಿಂದ ಬಂದ್ರೂ, ಭಾರತೀಯ ಅವಿಭಕ್ತ ಕುಟುಂಬಕ್ಕೆ ತಕ್ಕ ಸೊಸೆಯಾಗಿ ಬದಲಾಗಿದ್ದ ಸೋನಿಯಾ ಮಾತನ್ನು ಇಂದಿರಾ ಗಾಂಧಿ ಯಾವತ್ತೂ ತೆಗೆದು ಹಾಕುತ್ತಿರಲಿಲ್ಲ. ಆ ಕ್ಷಣ ಹಿರಿಸೊಸೆ ಹೇಳಿದ ಮಾತಲ್ಲಿ ಅರ್ಥವಿದೆ ಅನ್ನೋದು ಇಂದಿರಮ್ಮನ ಅರಿವಿಗೆ ಬರುತ್ತೆ. ಅಷ್ಟೇ.., ಆಪ್ತ ಸಹಾಯಕಿಯಾಗಿ ಮನೇಕಾ ಗಾಂಧಿಯನ್ನು ನೇಮಿಸಿ ಹೊರಡಿಸಿದ್ದ ಆಜ್ಞೆ ಇಂದಿರಾ ಗಾಂಧಿಯ ಸಹಿ ಕಾಣದೆ ಕಸದ ಬುಟ್ಟಿ ಸೇರಿಕೊಂಡು ಬಿಟ್ಟಿತು.

'ಪಿಎಂ ಆಫೀಸ್‌ಗೆ ಕರ್ಕೊಂಡು ಹೋಗೋ ಪ್ಲ್ಯಾನ್‌ನ ಬಿಟ್ಬಿಡಿ ಮಮ್ಮಿ...' ಅತ್ತೆಗೆ ಹೇಳಿದ್ದರು ಸೋನಿಯಾ ಗಾಂಧಿ!

ವಾರಗಿತ್ತಿ ವಿರುದ್ಧವೇ ಯುದ್ಧ ಸಾರಿದಳು ಮನೇಕಾ: ಅಲ್ಲಿಯವರೆಗೆ ವಾರಗಿತ್ತಿಯರ ಮಧ್ಯೆ ಯಾವ ಸಮಸ್ಯೆಯೂ ಇದ್ದಿರಲಿಲ್ಲ. ಹಾಗೆ ನೋಡಿದ್ರೆ, ಸಂಜಯ್ ಗಾಂಧಿ ಮಗ ವರುಣ್’ನನ್ನು ಹೆತ್ತ ತಾಯಿಗಿಂತ ಹೆಚ್ಚು ಅಕ್ಕರೆ ತೋರಿಸಿ ಬೆಳೆಸಿದ್ದೇ ಸೋನಿಯಾ ಗಾಂಧಿ. ಆದ್ರೆ ತನಗೊಂದು ಹುದ್ದೆ ಸಿಗೋದ್ರಲ್ಲಿದ್ದಾಗ ಅಕ್ಕ ಅಡ್ಡಗಾಲು ಹಾಕಿದ್ಳು ಅನ್ನೋದು ಗೊತ್ತಾಗ್ತಾ ಇದ್ದಂತೆ ರಣಚಂಡಿಯಾಗಿ ಬಿಡ್ತಾರೆ ಮನೇಕಾ. ವಾರಗಿತ್ತಿಯ ವಿರುದ್ಧ ಯುದ್ಧವನ್ನೇ ಸಾರಿ ಬಿಡ್ತಾರೆ. ಮನೆಯ ಹೆಣ್ಣು ಮಕ್ಕಳ ಮಧ್ಯೆಯೇ ಯುದ್ಧ ಶುರುವಾದರೆ, ಆ ಮನೆಯ ನೆಮ್ಮದಿ ಕೆಡೋದಕ್ಕೆ ಅದೆಷ್ಟು ಹೊತ್ತು...? ಪ್ರತೀ ದಿನ ಗಲಾಟೆ-ಜಗಳ.. ಕೊನೆಗೊಂದು ದಿನ ಪುಟ್ಟ ಮಗನನ್ನು ಕರ್ಕೊಂಡ್ ದೆಹಲಿಯ ಸಫ್ದರ್'ಜಂಗ್ ರಸ್ತೆಯ ಪ್ರಧಾನಮಂತ್ರಿಗಳ ಮನೆಯಿಂದ ಮನೇಕಾ ಹೊರನಡೆದುಬಿಟ್ಟಿದ್ದರು.

Turning Point ಎಮರ್ಜೆನ್ಸಿ ಪ್ರಮಾದಕ್ಕೆ ಅಮ್ಮ-ಮಗನಿಗೆ ದೇಶ ಕೊಟ್ಟ ಶಿಕ್ಷೆ ಎಂಥದ್ದು..?

ಗಾಂಧಿ ಕುಟುಂಬದ ದೊಡ್ಮನೆಯಿಂದ ಹೊರಬಿದ್ದ ಮನೇಕಾ ಹೆಡೆಮೆಟ್ಟಿದ ನಾಗರಹಾವಿನಂತಾಗಿ ಬಿಟ್ಟಿದ್ದರು. 1984ರ ಲೋಕಸಭಾ ಚುನಾವಣೆಯಲ್ಲಿ ರಾಜೀವ್ ಗಾಂಧಿ ಅಮೇಥಿಯಿಂದ ಸ್ಪರ್ಧಿಸಿದಾಗ, ಪಕ್ಷೇತರ ಅಭ್ಯರ್ಥಿಯಾಗಿ ಅಖಾಡದಲ್ಲಿ ಕಾಣಿಸಿಕೊಂಡವರು ಯಾರು ಗೊತ್ತಾ..? ಗಾಂಧಿ ಕುಟುಂಬದ ಕಿರಿಸೊಸೆ ಮನೇಕಾ ಗಾಂಧಿ. ಇಂದಿರಾ ಗಾಂಧಿಯವರ ಸಾವಿನ ಅನುಕಂಪದಲ್ಲಿ ನಡೆದ ಎಲೆಕ್ಷನ್ ಅದು. 3 ಲಕ್ಷಕ್ಕೂ ಹೆಚ್ಚು ಲೀಡ್'ನೊಂದಿಗೆ ರಾಜೀವ್ ಗಾಂಧಿ ಗೆಲ್ಲುತ್ತಾರೆ. ಮನೇಕಾ ಗಾಂಧಿಗೆ ಬಿದ್ದದ್ದು 50 ಸಾವಿರ ಚಿಲ್ಲರೆ ವೋಟ್'ಗಳಷ್ಟೇ. ಅಲ್ಲಿಂದ ವಾರಗಿತ್ತಿ ವಿರುದ್ಧ ಹೊಸ ಯುದ್ಧ. ಅಮೇಥಿಯಿಂದ ಹೊರಬಿದ್ದ ಮನೇಕಾ, ಫಿಲಿಬಿಟ್ ಲೋಕಸಭಾ ಕ್ಷೇತ್ರವನ್ನು ತಮ್ಮ ರಾಜಕೀಯ ಕರ್ಮಭೂಮಿ ಮಾಡಿಕೊಳ್ಳುತ್ತಾರೆ.

42 ವರ್ಷಗಳ ಹಿಂದೆ ಸೋನಿಯಾ ಗಾಂಧಿ “ಅತ್ತೇ ಒಂದು ನಿಮಿಷ” ಅಂತ ಹೇಳದೇ ಇದ್ದಿದ್ದರೆ, ಮನೇಕಾ ಗಾಂಧಿ ಈಗಲೂ ಕಾಂಗ್ರೆಸ್’ನಲ್ಲೇ ಇರ್ತಾ ಇದ್ರಾ..? ವಾರಗಿತ್ತಿ ಸೋನಿಯಾ ಜಾಗದಲ್ಲಿ ಗಾಂಧಿ ಕುಟುಂಬದ ರಾಜಕೀಯ ಉತ್ತರಾಧಿಕಾರಿಯಾಗಿ ಕೂರ್ತಾ ಇದ್ದದ್ದು ಮನೇಕಾ ಗಾಂಧಿನಾ..? ಗೊತ್ತಿಲ್ಲ.  ಆದ್ರೆ ಅಂಥಾ ಸಾಧ್ಯತೆಯಂತೂ ಇತ್ತು. ಅದಕ್ಕೆ ಅಡ್ಡಗಾಲು ಹಾಕಿದ್ದು ಸೋನಿಯಾ ಗಾಂಧಿಯವರ ಅವತ್ತಿನ “ಅತ್ತೇ ಒಂದು ನಿಮಿಷ” ಅನ್ನೋ ಆ ಮಾತು. 
 

Follow Us:
Download App:
  • android
  • ios