ತಿರುಪತಿ(ಮೇ.16): 55 ದಿನಗಳ ಬಳಿಕ ತಿರುಪತಿ​- ತಿರುಮಲದಲ್ಲಿ ಲಡ್ಡು ಪ್ರಸಾದ ಮಾರಾಟ ಶುಕ್ರವಾರ ಪುನಾರಂಭಗೊಂಡಿದೆ. ತಿರುಪತಿ ತಿರುಮಲ ದೇವಸ್ಥಾನ ಸಮಿತಿ (ಟಿಟಿಡಿ) ಆಡಳಿತ ಕಚೇರಿ ಕಟ್ಟಡದಲ್ಲಿ ಪ್ರಾಯೋಗಿಕವಾಗಿ ಲಡ್ಡು ಮಾರಾಟ ಆರಂಭಿಸಲಾಗಿದ್ದು, ವಿಶೇಷ ಕೌಂಟರ್‌ ತೆರೆಯಲಾಗಿದೆ.

ಲಾಕ್‌ಡೌನ್‌ ಕಾರಣ ದೇವಸ್ಥಾನವು ಭಕ್ತಾದಿಗಳಿಗೆ ಬಂದ್‌ ಆಗಿದ್ದು, ಪ್ರಸಾದ ಮಾರಾಟವೂ ನಿಂತಿತ್ತು. ಈಗ ಪ್ರಾಯೋಗಿಕವಾಗಿ ಮಾರಾಟ ಶುರು ಮಾಡಲಾಗಿದ್ದು, ಸ್ಥಳೀಯರು ಖರೀದಿಸಬಹುದಾಗಿದೆ.

200 ರು.ಗೆ ದೊಡ್ಡ ಲಡ್ಡು ಹಾಗೂ 100 ರು.ಗೆ ವಡೆ ಮಾರಲಾಗುವುದು. 500 ಲಡ್ಡು ಹಾಗೂ ವಡೆಯನ್ನು ನಿತ್ಯ ಮಾರಲು ನಿರ್ಧರಿಸಲಾಗಿದೆ. ಮೊದಲ ದಿನ ಕೇವಲ 1 ತಾಸಿನಲ್ಲಿ ಎಲ್ಲ 500 ಲಡ್ಡು ಹಾಗೂ ವಡೆ ಮಾರಾಟವಾದವು. ಬಳಿಕ ಕೌಂಟರ್‌ ಮುಚ್ಚಲಾಯಿತು.

ಈ ಹಿಂದಿನ 55 ದಿನದಲ್ಲಿ 51 ದೊಡ್ಡ ಲಡ್ಡು ಮಾತ್ರ ತಯಾರಿಸಿ, ದೇಗುಲದಲ್ಲಿ ಶ್ರೀವಾರಿ ನೈವೇದ್ಯಕ್ಕೆ ಬಳಸಲಾಗುತ್ತಿತ್ತು. ಇನ್ನು ಲಾಕ್‌ಡೌನ್‌ ತೆರವಾಗಿ ಭಕ್ತರಿಗೆ ದೇಗುಲ ಮುಕ್ತವಾದ ಬಳಿಕ ಲಡ್ಡು ತಯಾರಿಕೆ ತೀವ್ರಗೊಳಿಸಲಾಗುವುದು ಎಂದು ಅಧಿಕಾರಿಗಳು ಹೇಳಿದ್ದಾರೆ.