ತಿರುಪತಿ ಲಡ್ಡುನಲ್ಲಿ ಗುಟ್ಕಾ ಪ್ಯಾಕೇಟ್ ಪತ್ತೆಯಾಗಿದ್ದು ನಿಜವೇ? ಟಿಟಿಡಿಯ ಸ್ಪಷ್ಟನೆ ಏನು?
ತಾನು ಖರೀದಿಸಿದ ತಿರುಮಲದ ಲಡ್ಡುವಿನಲ್ಲಿ ಗುಟ್ಕಾ ಪ್ಯಾಕೇಟ್ ಸಿಕ್ಕಿದೆ ಎಂದು ಮಹಿಳೆಯೊಬ್ಬರು ಹೇಳಿಕೊಂಡಿದ್ದುರು. ಮಹಿಳೆಯ ಆರೋಪಕ್ಕೆ ಟಿಟಿಡಿ ಸ್ಪಷ್ಟನೆ ನೀಡಿದೆ.
ತಿರುಪತಿ: ದನ ಹಾಗೂ ಹಂದಿ ಕೊಬ್ಬು ಬಳಕೆಯ ವಿವಾದದಲ್ಲಿ ಸಿಲುಕಿರುವ ಪ್ರಸಿದ್ಧ ತಿರುಪತಿ ತಿಮ್ಮಪ್ಪನ ದೇವಾಲಯದ ಲಡ್ಡು ಪ್ರಸಾದದಲ್ಲಿ ಮಹಿಳೆಯೊಬ್ಬರು ತಮಗೆ ತಂಬಾಕು ಸಿಕ್ಕಿದೆ ಎಂದು ಹೊಸ ಆರೋಪ ಮಾಡಿದ್ದಾರೆ. ಆದರೆ, ಇದನ್ನು ತಿರುಮಲ ತಿರುಪತಿ ದೇವಸ್ಥಾನಮ್ಸ್ (ಟಿಟಿಡಿ) ಮಂಡಳಿ ಅಲ್ಲಗಳೆದಿದೆ.
ಖಮ್ಮಂ ಜಿಲ್ಲೆಯ ದೊಂತು ಪದ್ಮಾವತಿ ಎಂಬ ಮಹಿಳೆ, ‘ನಾನು ಸೆ.19ರಂದು ತಿರುಪತಿ ದೇವಸ್ಥಾನಕ್ಕೆ ತೆರಳಿದ್ದೆ. ಅಲ್ಲಿಂದ ಕೆಲ ಲಡ್ಡು ಪ್ರಸಾದಗಳನ್ನು ತಂದಿದ್ದೆ. ಅದನ್ನು ಮನೆಯವರಿಗೆ ಹಾಗೂ ಅಕ್ಕಪಕ್ಕದವರಿಗೆ ಹಂಚಲು ಹೋದಾಗ ಲಡ್ಡು ಒಳಗೆ ಸಣ್ಣ ಕಾಗದದಲ್ಲಿ ಸುತ್ತಿದ ಕೆಲ ತಂಬಾಕಿನ ತುಣುಕುಗಳು ಸಿಕ್ಕಿವೆ. ಪ್ರಸಾದ ಪವಿತ್ರವಾಗಿರಬೇಕು. ಆದರೆ ಹೀಗೆ ಕಲಬೆರಕೆ ಆಗಿರುವುದನ್ನು ನೋಡಿ ತುಂಬಾ ಬೇಸರವಾಯಿತು’ ಎಂದು ಹೇಳಿಕೊಂಡಿದ್ದಾರೆ.
ಮಾತಾಡೋ ಮುನ್ನ ಯೋಚಿಸು; ಹಿಂದೂಗಳ ವಿರುದ್ಧ ನಾಲಗೆ ಹರಿಬಿಟ್ಟ ಪ್ರಕಾಶ ರಾಜ್‌ಗೆ ಡಿಸಿಎಂ ಪವನ್ ಕಲ್ಯಾಣ ಎಚ್ಚರಿಕೆ
ಇದಕ್ಕೆ ಪ್ರತಿಕ್ರಿಯೆ ನೀಡಿರುವ ಟಿಟಿಡಿ, ‘ತಿರುಪತಿ ಲಡ್ಡುವಿನಲ್ಲಿ ತಂಬಾಕಿನ ಪ್ಯಾಕೆಟ್ ಸಿಕ್ಕಿದೆ ಎಂಬುದು ಸುಳ್ಳು ಆರೋಪ. ಲಡ್ಡುವನ್ನು ಶ್ರೀವೈಷ್ಣವ ಬ್ರಾಹ್ಮಣರು ದೇವಸ್ಥಾನದ ‘ಲಡ್ಡು ಪೋಟು’ನಲ್ಲಿ ಬಹಳ ಎಚ್ಚರಿಕೆಯಿಂದ ತಯಾರಿಸುತ್ತಾರೆ. ಅಲ್ಲಿ ಸಾಕಷ್ಟು ಭದ್ರತೆ, ಮುನ್ನೆಚ್ಚರಿಕೆ ಕ್ರಮ, ಸಿಸಿಟಿವಿ ಕ್ಯಾಮೆರಾ ಕಣ್ಗಾವಲು ಎಲ್ಲವೂ ಇರುತ್ತದೆ. ಅಲ್ಲಿ ಯಾರೂ ತಂಬಾಕು ಬಳಸುವುದಿಲ್ಲ’ ಎಂದು ಹೇಳಿದೆ.
ಇದೇ ವೇಳೆ, ಆರೋಪ ಮಾಡಿರುವ ಮಹಿಳೆಯನ್ನು ಸಂಪರ್ಕಿಸಿರುವ ಟಿಟಿಡಿ, ತನಿಖೆಗಾಗಿ ಲಡ್ಡುವನ್ನು ಮರಳಿಸಬೇಕೆಂದು ಮನವಿ ಮಾಡಿದೆ.