* ಕೊರೋನಾ ನಿರ್ಬಂಧ ಸಡಿಲ, ತಿಮ್ಮಪ್ಪನ ದರ್ಶನಕ್ಕೆ ಧಾವಿಸುತ್ತಿರುವ ಜನ* ತಿಮ್ಮಪ್ಪನ ಹುಂಡಿಗೆ ದಾಖಲೆಯ ದೇಣಿಗೆ, ಇತಿಹಾಸದಲ್ಲೇ ಗರಿಷ್ಠ ಕಾಣಿಕೆ* ಭಕ್ತರು ನೀಡಿದ ನಗದು ಕಾಣಿಕೆಗಳ ಮೂಲಕ 130.29 ಕೋಟಿ ರೂಪಾಯಿ ಆದಾಯ

ಅಮರಾವತಿ(ಮೇ.11): ತಿರುಮಲ ತಿರುಪತಿ ದೇವಸ್ಥಾನ(ಟಿಟಿಡಿ) ಈ ವರ್ಷ ಮೇ ತಿಂಗಳಲ್ಲಿ ತಿರುಮಲ ದೇವಸ್ಥಾನದ ಹುಂಡಿಯಲ್ಲಿ ಭಕ್ತರು ನೀಡಿದ ನಗದು ಕಾಣಿಕೆಗಳ ಮೂಲಕ 130.29 ಕೋಟಿ ರೂಪಾಯಿ ಆದಾಯ ಗಳಿಸಿದೆ. ಟಿಟಿಡಿ ಕಾರ್ಯನಿರ್ವಾಹಕ ಅಧಿಕಾರಿ ಎಡಿ ಧರ್ಮಾ ರೆಡ್ಡಿ ಮಾತನಾಡಿ ಇದು ಟಿಟಿಡಿ ಇತಿಹಾಸದಲ್ಲಿ ಇದುವರೆಗಿನ ಒಂದು ತಿಂಗಳ ಗರಿಷ್ಠ ಕಾಣಿಕೆ ಎಂದಿದ್ದಾರೆ.

ಶುಕ್ರವಾರ ಇಲ್ಲಿನ ಅನ್ನಮಯ್ಯ ಭವನದಲ್ಲಿ ಡಯಲ್ ಯುವರ್ ಇಒ ಕಾರ್ಯಕ್ರಮದ ನಂತರ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಇಒ, ಪರಿಸ್ಥಿತಿ ಸಾಮಾನ್ಯ ಸ್ಥಿತಿಗೆ ಮರಳಿದ ನಂತರ ಯಾತ್ರಿಕರು ದೇವಸ್ಥಾನದೆಡೆ ಧಾವಿಸಿದ್ದರು. ಹೀಗಾಗೇ ಆದಾಯ ಸಂಗ್ರಹಣೆಯಲ್ಲಿ ಟಿಟಿಡಿ ಗಮನಾರ್ಹ ಸಾಧನೆ ಮಾಡಿದೆ ಎಂದು ಹೇಳಿದರು. ಸುಮಾರು ಎರಡು ವರ್ಷಗಳಿಂದ ಕೋವಿಡ್ ಅವಧಿಯಲ್ಲಿನ ನಿರ್ಬಂಧಗಳಿಂದಾಗಿ ತಮ್ಮ ಹರಕೆ ಪೂರೈಸಲು ಸಾಧ್ಯವಾಗದ ಭಕ್ತರು, ಸ್ವಾಭಾವಿಕವಾಗಿ ತಿರುಮಲಕ್ಕೆ ತಕ್ಷಣ ಭೇಟಿ ನೀಡಲು ಉತ್ಸುಕರಾಗಿದ್ದರು. ಹೀಗಾಗೇ ಕೊರೋನಾ ಹಾವಳಿ ಕಡಿಮೆಯಾಗಿ ನಿರ್ಬಂಧಗಳನ್ನು ಸಡಿಲಗೊಳಿಸಿದಾಗ ದೇವಾಲಯದ ಪಟ್ಟಣವು ಕಳೆದ ಮೂರು ತಿಂಗಳಿನಿಂದ ಭಕ್ತರಿಂದ ತುಂಬಿತ್ತು. ಬೇಸಿಗೆ ರಜೆಯಿಂದಾಗಿ ಮೇ ತಿಂಗಳಲ್ಲಿ ಗರಿಷ್ಠ ಮಟ್ಟ ತಲುಪಿದ್ದು, ಗರಿಷ್ಠ ಕಾಣಿಕೆ ಬಂದಿದೆ ಎಂದು ಅವರು ವಿವರಿಸಿದರು.

ಹುಂಡಿ ಕಾಣಿಕೆ ಮೂಲಕ ಫೆಬ್ರವರಿಯಲ್ಲಿ 79.34 ಕೋಟಿ ರೂ.ಗಳಷ್ಟಿದ್ದ ತಿರುಮಲ ದೇವಸ್ಥಾನದ ಆದಾಯ ಮಾರ್ಚ್‌ನಲ್ಲಿ 128.60 ಕೋಟಿ ರೂ.ಗೆ ಏರಿಕೆಯಾಗಿತ್ತು. ಅಂದರೆ ಸರಿ ಸುಮಾರು 50 ಕೋಟಿ ರೂ. ಹೆಚ್ಚಳವಾಗಿತ್ತು. ಆದರೆ ಏಪ್ರಿಲ್‌ನಲ್ಲಿ, ಆದಾಯವು ಕೊಂಚ ಇಳಿದು 127 ಕೋಟಿ ರೂ.ಗೆ ತಲುಪಿತ್ತು. ಆದರೆ ಮೇ ತಿಂಗಳಲ್ಲಿ 130.29 ಕೋಟಿ ರೂ.ಗೆ ಜಿಗಿದಿದೆ, ಇದು ಈವರೆಗೆ ಒಂದು ತಿಂಗಳಲ್ಲೇ ಸಂಗ್ರಹವಾದ ಅತ್ಯಧಿಕ ಮೊತ್ತವಾಗಿದೆ.

ಇನ್ನು ಟಿಟಿಡಿಯಲ್ಲಿ ಫೆಬ್ರವರಿಯಲ್ಲಿ ದರ್ಶನ ಪಡೆದ ಯಾತ್ರಾರ್ಥಿಗಳ ಸಂಖ್ಯೆ ಕೇವಲ 10.97 ಲಕ್ಷ, ಮುನ್ನೆಚ್ಚರಿಕೆ ಕ್ರಮವಾಗಿ ಸೀಮಿತ ಸಂಖ್ಯೆಯ ಯಾತ್ರಾರ್ಥಿಗಳಿಗೆ ಮಾತ್ರ ದರ್ಶನಕ್ಕೆ ಅವಕಾಶ ಕಲ್ಪಿಸಲಾಗಿತ್ತು. ಆದಾಗ್ಯೂ, ಟಿಟಿಡಿ ದರ್ಶನಕ್ಕೆ ಪ್ರತಿದಿನ ಅನುಮತಿಸುವ ಯಾತ್ರಾರ್ಥಿಗಳ ಸಂಖ್ಯೆಯನ್ನು ಸ್ಥಿರವಾಗಿ ಹೆಚ್ಚಿಸಿದ್ದರಿಂದ, ಮಾರ್ಚ್‌ನಲ್ಲಿ 19.72 ಲಕ್ಷ ಯಾತ್ರಾರ್ಥಿಗಳು ಭೇಟಿ ನೀಡಿದ್ದರೆ, ಏಪ್ರಿಲ್‌ನಲ್ಲಿ 20.64 ಲಕ್ಷ ಮತ್ತು ಈ ವರ್ಷದ ಮೇನಲ್ಲಿ 22.62 ಲಕ್ಷ ಯಾತ್ರಾರ್ಥಿಗಳು ಭೇಟಿ ನೀಡಿದ್ದಾರೆ. ಸುಮಾರು 75,000 ಜನರು ದೈನಂದಿನ ದರ್ಶನವನ್ನು ಪಡೆದಿದ್ದಾರೆ, ಇದು ಬಹಳ ದೊಡ್ಡ ಸಂಖ್ಯೆಯಾಗಿದ್ದು, ಹುಂಡಿ ನಗದು ಕಾಣಿಕೆಗಳ ಮೂಲಕ ಟಿಟಿಡಿಗೆ ಹೆಚ್ಚಿನ ಆದಾಯ ಗಣಿಸಲು ಕಾರಣವಾಯ್ತು. ಮೇ ತಿಂಗಳಲ್ಲಿ 1.86 ಕೋಟಿ ಲಡ್ಡುಗಳು ಮಾರಾಟವಾಗಿದ್ದರೆ, 47.03 ಯಾತ್ರಾರ್ಥಿಗಳು ಟಿಟಿಡಿಒದಗಿಸಿದ ಅನ್ನಪ್ರಸಾದವನ್ನು (ಉಚಿತ ಆಹಾರ) ಪಡೆದಿದ್ದಾರೆ ಎಂದು ಇಒ ಹೇಳಿದರು.

ಮೇ 29 ರಂದು ಅತಿ ಹೆಚ್ಚು 92,000 ಯಾತ್ರಾರ್ಥಿಗಳು ದರ್ಶನ ಪಡೆದಿದ್ದಾರೆ ಎಂದು ಮಾಹಿತಿ ನೀಡಿದ ಅವರು, ಟಿಟಿಡಿ ತನ್ನ ಕಡೆಯಿಂದ ಉಚಿತ ಆಹಾರ, ನೀರು, ನೈರ್ಮಲ್ಯ, ಭದ್ರತೆ ಇತ್ಯಾದಿ ಸೌಲಭ್ಯಗಳನ್ನು ಗರಿಷ್ಠವಾಗಿ ವಿಸ್ತರಿಸಿದೆ. ಈ ಮೂಲಕ ಅನಾನುಕೂಲತೆಯನ್ನು ಕಡಿಮೆ ಮಾಡಿದೆ ಎಂದು ಹೇಳಿದರು. ಜುಲೈ 15 ರವರೆಗೆ ಶುಕ್ರವಾರ-ಶನಿವಾರ-ಭಾನುವಾರದಂದು ಕೇವಲ ಪ್ರೋಟೋಕಾಲ್ ಗಣ್ಯರಿಗೆ ಮಾತ್ರ ವಿಐಪಿ ಬ್ರೇಕ್ ಸೀಮಿತವಾಗಿದೆ, ಇದರಿಂದಾಗಿ ಹೆಚ್ಚಿನ ಸಾಮಾನ್ಯ ಭಕ್ತರಿಗೆ ಶ್ರೀವರ ದರ್ಶನವನ್ನು ಒದಗಿಸಬಹುದು ಎಂದು ಅವರು ವಿವರಿಸಿದರು.

ಇದೇ ವೇಳೆ ಜನಸಂದಣಿ ಮತ್ತು ವಿಪರೀತ ಬೇಸಿಗೆಯ ಇರುವ ಈ ಸಂದರ್ಭದಲ್ಲಿ ಭಕ್ತರು 48 ಗಂಟೆಗಳಿಗಿಂತ (2 ದಿನಗಳು) ದರ್ಶನಕ್ಕಾಗಿ ತಾಳ್ಮೆಯಿಂದ ಇರಬೇಕೆಂದು ಧರ್ಮಾ ರೆಡ್ಡಿ ಭಕ್ತರಿಗೆ ಮನವಿ ಮಾಡಿದರು.