ರಷ್ಯಾದಲ್ಲಿ 8.8 ತೀವ್ರತೆಯ ಭೂಕಂಪನ ಸಂಭವಿಸಿದ ನಂತರ ರಷ್ಯಾ ಹಾಗೂ ಜಪಾನ್ ಕರಾವಳಿಗೆ ಸುನಾಮಿ ಅಪ್ಪಳಿಸಿದ್ದು, ಭಾರಿ ಹಾನಿ ಸಂಭವಿಸಿದೆ.
ರಷ್ಯಾದಲ್ಲಿ 8.8 ತೀವ್ರತೆಯ ಭೂಕಂಪನ ಸಂಭವಿಸಿದ ನಂತರ ರಷ್ಯಾ ಹಾಗೂ ಜಪಾನ್ ಕರಾವಳಿಗೆ ಸುನಾಮಿ ಅಪ್ಪಳಿಸಿದ್ದು, ಭಾರಿ ಹಾನಿ ಸಂಭವಿಸಿದೆ. ರಷ್ಯಾದ ಕಮ್ಚಟ್ಕಾ ಪರ್ಯಾಯ ದ್ವೀಪದಲ್ಲಿ ಇಂದು ಮುಂಜಾನೆ 8.8 ತೀವ್ರತೆಯ ಪ್ರಬಲ ಭೂಕಂಪ ಸಂಭವಿಸಿತ್ತು. ಇದಾದ ನಂತರ ಜಪಾನ್ ಮತ್ತು ರಷ್ಯಾದ ಕರಾವಳಿಯಲ್ಲಿ ಸುನಾಮಿ ಅಲೆಗಳು ಅಪ್ಪಳಿಸಿವೆ.
ಈ ಭೂಕಂಪನ ಕೇಂದ್ರಬಿಂದು ಹೊಕ್ಕೈಡೊದಿಂದ ಸುಮಾರು 250 ಕಿಲೋಮೀಟರ್ ದೂರದಲ್ಲಿತ್ತು. ಇದರ ಜೊತೆಗ ಅಪ್ಪಳಿಸಿದ ಸುನಾಮಿಯಿಂದ ಬಂದರುಗಳ ರಚನೆಗೆ ಹಾನಿಯಾಗಿದೆ. ಜೊತೆಗೆ ತೀವ್ರವಾದ ಅಲೆಗಳ ಪರಿಣಾಮವಾಗಿ ನಾಲ್ಕು ತಿಮಿಂಗಿಲಗಳು ಜಪಾನಿನ ಕರಾವಳಿಯಲ್ಲಿ ತೀರಕ್ಕೆ ಬದು ಬಿದ್ದಿವೆ ಎಂದು ಅಲ್ಲಿನ ಬಿಎನ್‌ಒ ನ್ಯೂಸ್ ವರದಿ ಮಾಡಿದೆ.
ಅಮೆರಿಕಾದ ಭೂ ವೈಜ್ಞಾನಿಕ ಸಮೀಕ್ಷೆಯ ಪ್ರಕಾರ ಈ ಭೂಕಂಪನವು ದಾಖಲೆಯ 6ನೇಯ ಅತೀದೊಡ್ಡ ಭೂಕಂಪನವಾಗಿದೆ. ಜಪಾನ್‌ನ ರಾಷ್ಟ್ರೀಯ ಮಾಧ್ಯಮ ಎನ್‌ಹೆಚ್ ಭೂಕಂಪನದಿಂದಾಗಿ ಸಮುದ್ರದಲ್ಲಿ ದೊಡ್ಡ ಅಲೆಗಳು ಆಗಬಹುದು ಎಂದು ಎಚ್ಚರಿಕೆ ನೀಡಿದೆ. ಜಪಾನ್ ಹವಾಮಾನ ಸಂಸ್ಥೆ ಈ ಹಿಂದೆ ಮೂರು ಮೀಟರ್‌ಗಳಷ್ಟು ಎತ್ತರದ ಸುನಾಮಿ ಅಲೆಗಳು ಉತ್ತರ ಮತ್ತು ಪೂರ್ವ ಕರಾವಳಿ ಪ್ರದೇಶಗಳನ್ನು ಅಪ್ಪಳಿಸಬಹುದು ಎಂದು ಹೇಳಿತ್ತು ಈ ಸುನಾಮಿ ಅಲೆಗಳು ಒಸಾಕಾ ಬಳಿಯ ವಕಯಾಮಾದ ದಕ್ಷಿಣಕ್ಕೆ ವಿಸ್ತರಿಸಿದೆ ಎಂದು ವರದಿಯಾಗಿದೆ.
ಸಮುದ್ರದೊಳಗಿನ ಈ ಭೀಕರ ಭೂಕಂಪದಿಂದಾಗಿ ರಷ್ಯಾ ಮತ್ತು ಜಪಾನ್‌ನ ಕೆಲವು ಭಾಗಗಳಲ್ಲಿ ವ್ಯಾಪಕವಾಗಿ ಜನರ ಸ್ಥಳಾಂತರ ಕಾರ್ಯಗಳು ನಡೆದಿವೆ. ಸುನಾಮಿಯ ಮೊದಲ ದೃಶ್ಯಗಳು ಕ್ಯಾಮರಾಗಳಲ್ಲಿ ಸೆರೆಯಾಗಿದ್ದು, ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದೆ. ಅದರಲ್ಲಿ ರಷ್ಯಾದ ಕರಾವಳಿಯಲ್ಲಿ ಕಟ್ಟಡಗಳು ಮುಳುಗಿರುವುದನ್ನು ಮತ್ತು ಅಪಾರ ಪ್ರಮಾಣದ ನೀರು ಭೂಮಿಯನ್ನು ಆವರಿಸಿರುವುದನ್ನು ಕಾಣಬಹುದು.
ಸುನಾಮಿ ಎಚ್ಚರಿಕೆಯ ನಂತರ ಪೂರ್ವ ರಷ್ಯಾ ಗವರ್ನರ್ ಜನರು ಕರಾವಳಿಯಿಂದ ದೂರವಿರುವಂತೆ ಸೂಚಿಸಿದ್ದಾರೆ. ಭೂಕಂಪನವು ಸುಮಾರು 19 ಕಿಲೋಮೀಟರ್ ಆಳದಲ್ಲಿ ಸಂಭವಿಸಿದ್ದು, ರಷ್ಯಾದ ಪೆಟ್ರೋಪಾವ್ಲೋವ್ಸ್ಕ್-ಕಮ್ಚಾಟ್ಸ್ಕಿ ನಗರದ ಪೂರ್ವ-ಆಗ್ನೇಯಕ್ಕೆ 125 ಕಿಲೋಮೀಟರ್ ದೂರದಲ್ಲಿ ಭೂಕಂಪನದ ಕೇಂದ್ರ ಬಿಂದು ಪತ್ತೆಯಾಗಿದೆ.
ಸುನಾಮಿ ಅಲೆಗಳು 4 ಮೀಟರ್ ಎತ್ತರಕ್ಕೆ ಏರಿದ್ದು, ಹಲವಾರು ಪ್ರದೇಶಗಳಲ್ಲಿ ಹಾನಿಯನ್ನುಂಟುಮಾಡಿದೆ ಎಂದು ರಾಯಿಟರ್ಸ್ ವರದಿ ಮಾಡಿದೆ. ರಷ್ಯಾದಲ್ಲಿ ಇಂದು ಸಂಭವಿಸಿದ ಭೂಕಂಪವು ದಶಕಗಳಲ್ಲಿಯೇ ಅತ್ಯಂತ ಪ್ರಬಲವಾದ ಭೂಕಂಪ ಎಂದು ಕಮ್ಚಟ್ಕಾ ಗವರ್ನರ್ ವ್ಲಾಡಿಮಿರ್ ಸೊಲೊಡೊವ್ ವೀಡಿಯೊ ಸಂದೇಶದಲ್ಲಿ ತಿಳಿಸಿದ್ದಾರೆ ಎಂದು ಸುದ್ದಿಸಂಸ್ಥೆ ರಾಯಿಟರ್ಸ್ ವರದಿ ಮಾಡಿದೆ.
ಸುನಾಮಿಯಿಂದಾಗಿ ರಷ್ಯಾದ ತುರ್ತು ಸೇವೆಗಳು ಪೀಡಿತ ಪ್ರದೇಶಗಳಲ್ಲಿ ರಕ್ಷಣಾ ಕಾರ್ಯಾಚರಣೆಗೆ ಇಳಿದಿವೆ. ರಷ್ಯಾದ ಕಮ್ಚಟ್ಕಾದ ದಕ್ಷಿಣದಲ್ಲಿರುವ ಸಣ್ಣ ಪಟ್ಟಣವಾದ ಸೆವೆರೊ ಕುರಿಲ್ಸ್ಕ್‌ನಲ್ಲಿ, ಸುನಾಮಿ ಭಯ ಇರುವುದರಿಂದ ಜನರು ತಮ್ಮ ಮನೆಗಳನ್ನು ತೊರೆಯುವಂತೆ ಜನರಿಗೆ ಸ್ಥಳೀಯಾಡಳಿತ ಸೂಚಿಸಿದೆ.
ಜಪಾನ್, ಹವಾಯಿ ಮತ್ತು ಪೆಸಿಫಿಕ್‌ನ ಇತರ ಭಾಗಗಳಿಗೂ ಸುನಾಮಿ ಎಚ್ಚರಿಕೆ ನೀಡಲಾಗಿದೆ. ಜಾಗತಿಕ ಕಾಲಮಾನ 0100 ರ ಸುಮಾರಿಗೆ ಕರಾವಳಿ ನಗರಗಳಿಗೆ 3 ಮೀಟರ್‌ಗಳಷ್ಟು ಎತ್ತರದ ಅಲೆಗಳು ಅಪ್ಪಳಿಸಬಹುದು ಎಂದು ಜಪಾನ್‌ನ ಹವಾಮಾನ ಸಂಸ್ಥೆ ಎಚ್ಚರಿಕೆ ನೀಡಿತ್ತು.
