ಶಿಮ್ಲಾ(ಡಿ.28): 1991ರಲ್ಲಿ ಅಂದಿನ ವಿತ್ತ ಸಚಿವ ಮನಮೋಹನ ಸಿಂಗ್‌ ಹಾಗೂ ನಂತರ ಅಧಿಕಾರಕ್ಕೆ ಬಂದ ಅಟಲ್‌ ಬಿಹಾರಿ ವಾಜಪೇಯಿ ಸರ್ಕಾರ ಕೈಗೊಂಡ ಆರ್ಥಿಕ ಸುಧಾರಣಾ ಕ್ರಮಗಳು ಧನಾತ್ಮಕ ಪರಿಣಾಮ ಬೀರಲು 4-5 ವರ್ಷ ಬೇಕಾಯಿತು. ಹೀಗಾಗಿ ಮೋದಿ ಸರ್ಕಾರ ಜಾರಿಗೊಳಿಸಿರುವ ಕೃಷಿ ಕಾಯ್ದೆಗಳು ಧನಾತ್ಮಕ ಪರಿಣಾಮ ಬೀರಲು ರೈತರು 2 ವರ್ಷ ಕಾಯಬೇಕು ಎಂದು ರಕ್ಷಣಾ ಸಚಿವ ರಾಜನಾಥ ಸಿಂಗ್‌ ಅವರು ಮನವಿ ಮಾಡಿದ್ದಾರೆ.

ಹಿಮಾಚಲ ಪ್ರದೇಶದ ಜೈರಾಂ ಠಾಕೂರ್‌ ಸರ್ಕಾರದ ಮೊದಲ ವರ್ಷಾಚರಣೆ ಸಮಾರಂಭದಲ್ಲಿ ಭಾನುವಾರ ಮಾತನಾಡಿದ ಅವರು, ‘1991ರಲ್ಲಿ ಪಿ.ವಿ. ನರಸಿಂಹರಾವ್‌ ಅವಧಿಯಲ್ಲಿ ವಿತ್ತ ಸಚಿವರಾಗಿದ್ದ ಮನಮೋಹನ ಸಿಂಗ್‌ ಹಾಗೂ ನಂತರದ ಅಟಲ್‌ ಸರ್ಕಾರ ಕೈಗೊಂಡ ಆರ್ಥಿಕ ಸುಧಾರಣೆಗಳು ಪರಿಣಾಮ ಬೀರಲು 4-5 ವರ್ಷ ಬೇಕಾಯಿತು. ಈಗ 4-5 ವರ್ಷ ಕಾಯಲು ಸಾಧ್ಯವಿಲ್ಲ ಎಂದಾದರೆ, ಕನಿಷ್ಠ 2 ವರ್ಷವಾದರೂ ಕಾಯೋಣ. ಆಗ ನರೇಂದ್ರ ಮೋದಿ ಅವರು ಜಾರಿಗೆ ತಂದಿರುವ ಕೃಷಿ ಸುಧಾರಣಾ ನೀತಿಗಳ ಧನಾತ್ಮಕ ಪರಿಣಾಮ ಕಾಣಲು ಸಾಧ್ಯ’ ಎಂದರು. ಇದೇ ವೇಳೆ, ‘ಧನಾತ್ಮಕ ಪರಿಣಾಮ ಆಗದೇ ಹೋದರೆ ಮಾತುಕತೆ ಮೂಲಕ ಸುಧಾರಣೆ ಮಾಡಿಕೊಳ್ಳೋಣ’ ಎಂದೂ ಅವರು ರೈತರಿಗೆ ಆಹ್ವಾನ ನೀಡಿದರು.

‘ಕೃಷಿ ಕಾಯ್ದೆಗಳನ್ನು ಜಾರಿ ಮಾಡಲು ಬಿಡಿ. ಇವುಗಳ ಪರಿಣಾಮದ ಗುಣ-ಅವಗುಣ ಅವಲೋಕನಕ್ಕೆ 2 ವರ್ಷ ಕಾಯಿರಿ. ಕಾಯ್ದೆಗಳು ಮಾರಕವಾಗಿವೆ ಎಂದಾದರೆ, ಅವುಗಳಲ್ಲಿನ ಮಾರಕ ಅಂಶಗಳ ತಿದ್ದುಪಡಿಗೆ ನಮ್ಮ ಸರ್ಕಾರ ಸಿದ್ಧ’ ಎಂದು ಇತ್ತೀಚೆಗೆ ರಾಜನಾಥ್‌ ಹೇಳಿದ್ದರು.