140 ಕೋಟಿ ಜನರ ನಂಬಿಕೆಯೇ ರಕ್ಷಾ ಕವಚ: ಸಂಸತ್ತಲ್ಲಿ ಮೋದಿ ಗುಡುಗು
ಭಾರತ್ ಜೋಡೋ ಯಾತ್ರೆಯ ಕೊನೆಯ ಚರಣವನ್ನು ಪರೋಕ್ಷವಾಗಿ ಪ್ರಸ್ತಾಪಿಸಿದ ಮೋದಿ, 90ರ ದಶಕದಲ್ಲಿ ತಾವು ಶ್ರೀನಗರದ ಲಾಲ್‌ಚೌಕ್‌ನಲ್ಲಿ ರಾಷ್ಟ್ರಧ್ವಜ ಹಾರಿಸಲು ಬಿಜೆಪಿ ಅಭಿಯಾನ ಆರಂಭಿಸಿದಾಗ ಉಗ್ರರು ಹೊರಡಿಸಿದ್ದ ಎಚ್ಚರಿಕೆಯ ಹೊರತಾಗಿಯೂ ಅಲ್ಲಿಗೆ ತೆರಳಿದ್ದನ್ನು ಸ್ಮರಿಸಿಕೊಂಡರು.
ನವದೆಹಲಿ (ಫೆಬ್ರವರಿ 9, 2023): ಹಿಂಡನ್‌ಬರ್ಗ್ ವರದಿ ಪ್ರಸ್ತಾಪಿಸಿ ಉದ್ಯಮಿ ಗೌತಮ್ ಅದಾನಿ ಜೊತೆಗೆ ತಮ್ಮ ನಂಟನ್ನು ಪ್ರಶ್ನಿಸುತ್ತಿರುವ ವಿಪಕ್ಷಗಳ ವಿರುದ್ಧ ತೀಕ್ಷ್ಣ ವಾಗ್ದಾಳಿ ನಡೆಸಿರುವ ಪ್ರಧಾನಿ ನರೇಂದ್ರ ಮೋದಿ, ‘ಟೀಕಾಕಾರರು ತಮ್ಮ ಮೇಲೆ ಮಾಡುತ್ತಿರುವ ಸುಳ್ಳು ಆರೋಪ ಮತ್ತು ದೂಷಣೆಗೆ 140 ಕೋಟಿ ಭಾರತೀಯರು ನನ್ನ ಮೇಲಿಟ್ಟಿರುವ ನಂಬಿಕೆಯೇ ರಕ್ಷಣಾ ಕವಚ’ ಎಂದು ಬಣ್ಣಿಸಿದ್ದಾರೆ. ಜೊತೆಗೆ ‘ನನ್ನ ಜೀವನದ ಪ್ರತಿ ಕ್ಷಣವನ್ನೂ ದೇಶಕ್ಕಾಗಿ ಮುಡಿಪಿಟ್ಟಿದ್ದು, ಹಿಂದಿನ ಕಾಂಗ್ರೆಸ್ ನೇತೃತ್ವದ ಯುಪಿಎ ಸರ್ಕಾರದ ಅವಧಿಯಲ್ಲಿ ‘ಕಳೆದುಕೊಂಡ ದಶಕ’ವನ್ನು ನಮ್ಮ ಸರ್ಕಾರ ‘ಭಾರತದ ದಶಕ’ದ ಮೂಲಕ ಸರಿಗಟ್ಟುವ ಯತ್ನ ಮಾಡುತ್ತಿದೆ ಎಂದು ಹೇಳಿದ್ದಾರೆ.
ರಾಷ್ಟ್ರಪತಿಗಳ ಭಾಷಣಕ್ಕೆ ವಂದನೆ ಸಲ್ಲಿಸುವ ನಿರ್ಣಯದ ಮೇಲಿನ ಚರ್ಚೆಯಲ್ಲಿ ಭಾಗಿಯಾಗಿ ಮಂಗಳವಾರ ಸುದೀರ್ಘ 85 ನಿಮಿಷ ಮಾತನಾಡಿದ ಮೋದಿ, ‘ಶತಮಾನದಲ್ಲೊಮ್ಮೆ ಕಾಣಿಸುವ ಕೋವಿಡ್‌ನಂಥ ದುರಂತ ಮತ್ತು ಜಾಗತಿಕ ಸಂಘರ್ಷದಿಂದಾಗಿ ಜಗತ್ತಿನ ಹಲವು ದೇಶಗಳು ಅಸ್ಥಿರ ಸನ್ನಿವೇಶ ಎದುರಿಸುತ್ತಿರುವ ಹೊತ್ತಿನಲ್ಲಿ ಇಡೀ ವಿಶ್ವ ಭಾರತದತ್ತ ಭರವಸೆ ಮತ್ತು ಧನಾತ್ಮಕ ದೃಷ್ಟಿಕೋನದಿಂದ ನೋಡುತ್ತಿದೆ. ಭಾರತದಲ್ಲಿನ ಸ್ಥಿರ ಮತ್ತು ನಿರ್ಣಾಯಕ ಸರ್ಕಾರದ ಫಲವಾಗಿ ಜಾಗತಿಕ ಸಂಸ್ಥೆಗಳು ಭಾರತದತ್ತ ವಿಶ್ವಾಸ ಇರಿಸಿವೆ ಎಂದು ಬಣ್ಣಿಸಿದರು.
ಇದನ್ನು ಓದಿ: ಕಾಶ್ಮೀರ ಶಾಂತಿ ಕದಡಲಿದೆ ಎಂದವರೇ ಲಾಲ್‌ಚೌಕ್‌ನಲ್ಲಿ ತಿರಂಗ ಹಾರಿಸಿದ್ದಾರೆ, ಮೋದಿ ಮಾತಿಗೆ ಕಾಂಗ್ರೆಸ್ ಸೈಲೆಂಟ್!
ಈ ಸರ್ಕಾರ ರಾಷ್ಟ್ರೀಯ ಹಿತಾಸಕ್ತಿಯಲ್ಲಿ ನಿರ್ಧಾರ ತೆಗೆದುಕೊಳ್ಳುವ ಶಕ್ತಿ ಹೊಂದಿದೆ. ಅನಿವಾರ್ಯತೆಯ ಬದಲಾಗಿ ಇಚ್ಛಾಶಕ್ತಿಯ ಮೂಲಕ ಸುಧಾರಣೆಗಳನ್ನು ತರುತ್ತಿದೆ. ಆದರೆ ಕಂಠಮಟ್ಟದವರೆಗೂ ಹತಾಶೆ ತುಂಬಿರುವ ಕೆಲ ವ್ಯಕ್ತಿಗಳಿಗೆ ಮಾತ್ರ ಭಾರತದ ಅಭಿವೃದ್ಧಿಯ ಕಥೆ ಹಾಗೂ 140 ಕೋಟಿ ಭಾರತೀಯರ ಸಾಧನೆಗಳು ಕಾಣುತ್ತಿಲ್ಲ ಎಂದು ವಿಪಕ್ಷಗಳ ವಿರುದ್ಧ ಹರಿಹಾಯ್ದರು.
ಅವರು (ವಿಪಕ್ಷಗಳು) ಅಧಿಕಾರದಲ್ಲಿದ್ದಾಗಲೂ ವಿಫಲರಾದರು ಮತ್ತು ಇದೀಗ ವಿರೋಧ ಪಕ್ಷವಾಗಿಯೂ ವಿಫಲರಾಗಿದ್ದಾರೆ. ಕೆಲ ವ್ಯಕ್ತಿಗಳು ತಮ್ಮ ಕುಟುಂಬಕ್ಕಾಗಿ ಬದುಕುತ್ತಿದ್ದರೆ, ನಾನು 25 ಕೋಟಿ ಭಾರತೀಯ ಕುಟುಂಬಗಳಿಗಾಗಿ ಬದುಕುತ್ತಿದ್ದೇನೆ. 140 ಕೋಟಿ ಜನರ ವಿಶ್ವಾಸವು ನನಗೆ ನೀಡಿರುವ ರಕ್ಷಾ ಕವಚವನ್ನು ಸುಳ್ಳಿನ ಆಯುಧಗಳು ಭೇದಿಸಲಾರವು ಎಂದು ಕಾಂಗ್ರೆಸ್ ನಾಯಕರ ವಿರುದ್ಧ ಕಿಡಿಕಾರಿದರು.
ಇದನ್ನೂ ಓದಿ: ಶಿಕಾರಿ ಕತೆಯೊಂದಿಗೆ ಕಾಂಗ್ರೆಸ್ ಆಡಳಿತ ವೈಖರಿ ವಿವರಿಸಿದ ಮೋದಿ, ನಗೆಗಡಲಲ್ಲಿ ತೇಲಿದ ಸಂಸತ್ತು!
ರಚನಾತ್ಮಕ ಟೀಕೆ:
ರಚನಾತ್ಮಕ ಟೀಕೆಯನ್ನು ನಾವು ಪ್ರಜಾಪ್ರಭುತ್ವವನ್ನು ಶುದ್ಧೀಕರಿಸುವ ಪ್ರಕ್ರಿಯೆ ಎಂದು ಸ್ವಾಗತಿಸುತ್ತೇವೆ. ಆದರೆ ಕಳೆದ 9 ವರ್ಷಗಳಲ್ಲಿ ಉದ್ದೇಶಪೂರ್ವಕ ಟೀಕೆಯು, ರಚನಾತ್ಮಕ ಟೀಕೆಯ ಸ್ಥಾನವನ್ನು ಆವರಿಸಿಕೊಂಡಿದೆ. ಜೊತೆಗೆ, ಕೆಲವರು ನನ್ನನ್ನು ಟೀಕೆ ಮಾಡಿಕೊಂಡೇ ತಾವು ಬೆಳೆಯಬಹುದೆಂಬ ತಪ್ಪುಕಲ್ಪನೆಯನ್ನೇ ಕಳೆದ 22 ವರ್ಷಗಳಿಂದ ಆರೈಕೆ ಮಾಡಿಕೊಂಡು ಬಂದಿದ್ದಾರೆ ಎಂದು ಹೆಸರು ಹೇಳದೆಯೇ ಕಾಂಗ್ರೆಸ್ ನಾಯಕರನ್ನು ಕುಟುಕಿದರು.
ಇ.ಡಿ.ಗೆ ಕೃತಜ್ಞತೆ:
ಹಲವು ಚುನಾವಣಾ ಸೋಲಿನ ಹೊರತಾಗಿಯೂ ವಿಪಕ್ಷಗಳು ಒಂದು ವೇದಿಕೆಗೆ ಬರಲು ಸಾಧ್ಯವಾಗಲಿಲ್ಲ. ಆದರೆ ಭ್ರಷ್ಟಾಚಾರದ ಕೇಸಲ್ಲಿ ಜಾರಿ ನಿರ್ದೇಶನಾಲಯದ ಕ್ರಮಗಳ ಬಳಿಕ ಅವರೆಲ್ಲಾ ಇದೀಗ ಒಂದಾಗಿದ್ದಾರೆ. ಮತದಾರರು ಮಾಡಲಾಗದ್ದನ್ನು ಮಾಡಿದ್ದಕ್ಕೆ ವಿಪಕ್ಷಗಳೆಲ್ಲಾ ಇದೀಗ ಜಾರಿ ನಿರ್ದೇಶನಾಲಯಕ್ಕೆ ಕೃತಜ್ಞತೆ ಸಲ್ಲಿಸಬೇಕು ಎಂದು ಪ್ರಧಾನಿ ವ್ಯಂಗ್ಯವಾಡಿದರು.
ದೂಷಣೆ ಸರಣಿ:
ನೀವು ಚುನಾವಣೆ ಸೋತಾಗ ಇವಿಎಂ ದೂಷಿಸಿದಿರಿ, ಚುನಾವಣಾ ಆಯೋಗವನ್ನು ಟೀಕಿಸಿದಿರಿ. ನಿಮ್ಮ ಪರವಾಗಿ ತೀರ್ಪು ನೀಡದೇ ಇದ್ದಾಗ ಸುಪ್ರೀಂಕೋರ್ಚ್ ವಿರುದ್ಧ ಟೀಕೆ ಮಾಡಿದಿರಿ. ಭ್ರಷ್ಟಾಚಾರದ ವಿಷಯದಲ್ಲಿ ತನಿಖೆ ಮಾಡಿದರೆ ತನಿಖಾ ಸಂಸ್ಥೆಗಳನ್ನು ದೂಷಣೆ ಮಾಡಿದಿರಿ. ಸೇನೆ ತನ್ನ ಸಾಮರ್ಥ್ಯವನ್ನು ಪ್ರದರ್ಶಿಸಿದರೆ ಅವರನ್ನೂ ಪ್ರಶ್ನಿಸಿದಿರಿ. ಆರ್ಥಿಕ ಪ್ರಗತಿ ಸಾಧಿಸಿದರೆ ಆರ್‌ಬಿಐ ಅನ್ನೂ ಟೀಕಿಸಿದಿರಿ ಎಂದು ವಿಪಕ್ಷಗಳ ವಿರುದ್ಧ ಕಿಡಿಕಾರಿದರು.
ಮೋದಿಜೀ ನಿಮ್ಗೆ ನಂದೊಂದೇ ಕ್ಷೇತ್ರ ಸಿಕ್ಕಿರೋದಾ, ಸಂಸತ್ತಿನಲ್ಲಿ ಖರ್ಗೆ ಪ್ರಶ್ನೆ!
ಜೀವನ ದೇಶಕ್ಕೆ ಮುಡಿಪು:
ಇಂದು ನಾನು ಇಷ್ಟು ದೂರ ಸಾಗಿ ಬಂದಿದ್ದೇನೆ ಎಂದರೆ ಅದು ಮಾಧ್ಯಮಗಳ ಹೆಡ್‌ಲೈನ್ ಮೂಲಕ ಅಲ್ಲ, ಬದಲಾಗಿ ಈ ದೇಶಕ್ಕಾಗಿ ನನ್ನ ಜೀವನದ ಪ್ರತಿ ಕ್ಷಣವನ್ನೂ ಅರ್ಪಿಸಿದ ಕಾರಣಕ್ಕೆ. ದೇಶದ ಜನತೆ ಮೋದಿ ಮೇಲೆ ಇಟ್ಟಿರುವ ವಿಶ್ವಾಸ ವಿಪಕ್ಷಗಳ ಊಹೆಗೂ ನಿಲುಕದ್ದು. ವಿಪಕ್ಷಗಳು ನನ್ನ ಮೇಲೆ ಎಸೆದ ಸುಳ್ಳು ಆರೋಪಗಳು ಮತ್ತು ದೂಷಣೆಗಳು ಸರ್ಕಾರದ ಉಚಿತ ಆಹಾರ, ಮನೆ, ಸಬ್ಸಿಡಿ ಔಷಧಿ, ಆರೋಗ್ಯ ವಿಮೆ, ಕುಡಿಯುವ ನೀರು ಸೇರಿದಂತೆ ಹಲವು ಯೋಜನೆಗಳ ಲಾಭ ಪಡೆದ ಕೋಟ್ಯಂತರ ಜನರ ವಿಶ್ವಾಸದ ಗೋಡೆಯನ್ನು ದಾಟಲಾರವು ಎಂದು ಪ್ರಧಾನಿ ಹೇಳಿದರು.
ಹಗರಣಗಳ ಸಾಲು:
ಯುಪಿಎ ಸರ್ಕಾರದ ಅವಧಿಯಲ್ಲಿ ದೇಶದ ವಿವಿಧ ಭಾಗಗಳಲ್ಲಿ ನಡೆದ ಭಯೋತ್ಪಾದಕ ದಾಳಿಗಳು, ಮುಂಬೈ ದಾಳಿ ಬಳಿಕ ಸರ್ಕಾರ ಸೂಕ್ತ ತಿರುಗೇಟು ನೀಡದೇ ಇದ್ದಿದ್ದನ್ನು ಪ್ರಸ್ತಾಪಿಸಿದ ಮೋದಿ ಇದೇ ವೇಳೆ 2ಜಿ, ಕಲ್ಲಿದ್ದಲು, ಕಾಮನ್‌ವೆಲ್ತ್ ಸೇರಿದಂತೆ ಹಲವು ಹಗರಣಗಳನ್ನು ಪ್ರಸ್ತಾಪಿಸಿ ಕಾಂಗ್ರೆಸ್‌ಗೆ ಇರಿಸು ಮುರುಸು ಉಂಟು ಮಾಡಿದರು.
ಇದನ್ನೂ ಓದಿ: ಲೋಕಸಭೆಯಲ್ಲಿ ರಾಹುಲ್ ಗಾಂಧಿ ವಿರುದ್ಧ ಹಕ್ಕುಚ್ಯುತಿ ಮಂಡನೆಗೆ ಮುಂದಾದ ಬಿಜೆಪಿ ಸಂಸದ
2004-14ರ ದಶಕವು, ಸ್ವಾತಂತ್ರ್ಯಾನಂತರ ಭಾರತ ಕಂಡ ಅತಿ ಹೆಚ್ಚು ಹಗರಣದ ದಶಕವಾಗಿತ್ತು. ದೇಶಾದ್ಯಂತ ನಡೆದ ಭಯೋತ್ಪಾದನಾ ದಾಳಿಗಳು ದೇಶದ ಜನರಲ್ಲಿ ಅಸುರಕ್ಷತೆಯ ಭಾವನೆಯನ್ನು ಹುಟ್ಟುಹಾಕಿದ್ದವು. ಉಗ್ರರ ಅಟ್ಟಹಾಸ ಮಿತಿ ಮೀರಿತ್ತು ಎಂದು ಮೋದಿ ಟೀಕಿಸಿದರು.
ಇದೇ ವೇಳೆ ರಾಹುಲ್ ಗಾಂಧಿ ನಡೆಸಿದ ಭಾರತ್ ಜೋಡೋ ಯಾತ್ರೆಯ ಕೊನೆಯ ಚರಣವನ್ನು ಪರೋಕ್ಷವಾಗಿ ಪ್ರಸ್ತಾಪಿಸಿದ ಮೋದಿ, 90ರ ದಶಕದಲ್ಲಿ ತಾವು ಶ್ರೀನಗರದ ಲಾಲ್‌ಚೌಕ್‌ನಲ್ಲಿ ರಾಷ್ಟ್ರಧ್ವಜ ಹಾರಿಸಲು ಬಿಜೆಪಿ ಅಭಿಯಾನ ಆರಂಭಿಸಿದಾಗ ಉಗ್ರರು ಹೊರಡಿಸಿದ್ದ ಎಚ್ಚರಿಕೆಯ ಹೊರತಾಗಿಯೂ ಅಲ್ಲಿಗೆ ತೆರಳಿದ್ದನ್ನು ಸ್ಮರಿಸಿಕೊಂಡರು. ಜೊತೆಗೆ, ಇತ್ತೀಚೆಗೆ ಶ್ರೀನಗರಕ್ಕೆ ಹೋಗಿ ಬಂದವರು ಮತ್ತು ತಿರಂಗಾ ಯಾತ್ರೆಯಲ್ಲಿ ಭಾಗಿಯಾಗಿದ್ದವರು ಇದೀಗ ಶ್ರೀನಗರದಲ್ಲಿ ಎಷ್ಟುಮುಕ್ತವಾಗಿ ಓಡಾಡಬಹುದು ಎಂಬುದರ ಅರಿವು ಪಡೆದುಕೊಂಡಿದ್ದಾರೆ ಎಂದು ರಾಹುಲ್‌ಗೆ ಟಾಂಗ್ ನೀಡಿದರು.
ಜೊತೆಗೆ, ಕೆಲವರಿಗೆ ಹಾರ್ವರ್ಡ್ ಅಧ್ಯಯನದ ಬಹಳ ಕ್ರೇಜ್ ಇದೆ. ಅವರೆಲ್ಲಾ ಕೋವಿಡ್‌ನಿಂದ ಭಾರತದ ವಿನಾಶದ ಬಗ್ಗೆ ಹಾರ್ವರ್ಡ್ ಸ್ಟಡಿ ಆಗುತ್ತದೆ ಅಂತಿದ್ದರು. ಆದರೆ ಇದೀಗ ಹಾರ್ವರ್ಡ್ ಸೇರಿದಂತೆ ದೊಡ್ಡ ದೊಡ್ಡ ವಿವಿಗಳೆಲ್ಲಾ ಕಾಂಗ್ರೆಸ್‌ನ ಪತನ ಮತ್ತು ಅದಕ್ಕೆ ಕಾರಣರಾದವರ ವಿರುದ್ಧ ಅಧ್ಯಯನ ಶುರು ಮಾಡಲಿವೆ ಎಂದು ಕಾಂಗ್ರೆಸ್ ವಿರುದ್ಧ ಹಾಸ್ಯವಾಡಿದರು.