ಭಾರತ ಮತ್ತು ಅಮೆರಿಕ ನಡುವೆ ಸುಂಕ ಸಂಘರ್ಷ ಏರ್ಪಟ್ಟಿರುವ ನಡುವೆಯೇ, ಭಾರತಕ್ಕೆ ಅಮೆರಿಕದ ಹೊಸ ರಾಯಭಾರಿಯನ್ನಾಗಿ ಟ್ರಂಪ್‌ ಆಪ್ತ ಸರ್ಗಿಯೋ ಗೋರ್‌ ಅವರನ್ನು ನೇಮಿಸಲಾಗಿದೆ.

ವಾಷಿಂಗ್ಟನ್: ಭಾರತ ಮತ್ತು ಅಮೆರಿಕ ನಡುವೆ ಸುಂಕ ಸಂಘರ್ಷ ಏರ್ಪಟ್ಟಿರುವ ನಡುವೆಯೇ, ಭಾರತಕ್ಕೆ ಅಮೆರಿಕದ ಹೊಸ ರಾಯಭಾರಿಯನ್ನಾಗಿ ಟ್ರಂಪ್‌ ಆಪ್ತ ಸರ್ಗಿಯೋ ಗೋರ್‌ ಅವರನ್ನು ನೇಮಿಸಲಾಗಿದೆ. ವಿಶ್ವದಲ್ಲೇ ಹೆಚ್ಚು ಜನಸಂಖ್ಯೆಹೊಂದಿರುವ ದೇಶವೊಂದರದಲ್ಲಿ ನಮ್ಮ ಕಾರ್ಯಸೂಚಿಗಳನ್ನು ಜಾರಿಗೊಳಿಸಲು ಮತ್ತು ನಮಗೆ ನೆರವಾಗಲು, ನಾನು ಪೂರ್ಣವಾಗಿ ನಂಬರುವ ಸರ್ಗಿಯೋ ಗೋರ್‌ ಅವರನ್ನು ನೇಮಕ ಮಾಡಿದ್ದೇನೆ. ಇದು ಮೇಕ್‌ ಅಮೆರಿಕ ಗ್ರೇಟ್‌ ಅಗೇನ್‌ ಕನಸು ನನಸು ಮಾಡಲು ನೆರವಾಗಲಿದೆ ಎಂದು ಟ್ರಂಪ್‌ ಘೋಷಿಸಿದ್ದಾರೆ.

38 ವರ್ಷದ ಗೋರ್ ಭಾರತಕ್ಕೆ ಟ್ರಂಪ್‌ ಹೇರಿರುವ ತೆರಿಗೆ ನೀತಿ ವಿರುದ್ಧ ಕಠಿಣ ನಿಲುವನ್ನು ಹೊಂದಿದ್ದಾರೆ. ಹೀಗಾಗಿ ಅವರನ್ನೇ ಇದೀಗ ರಾಯಭಾರಿಯನ್ನಾಗಿ ನೇಮಕ ಮಾಡುವ ಮೂಲಕ ಭಾರತಕ್ಕೆ ವಿಶ್ವದ ದೊಡ್ಡಣ ಮತ್ತೊಮ್ಮೆ ಎಚ್ಚರಿಕೆ ನೀಡಲು ಹೊರಟಿದ್ದಾರೆ ಎನ್ನಲಾಗಿದೆ. ಸರ್ಗಿಯೋ ಮೋದಿ ಸರ್ಕಾರಕ್ಕೆ ಟ್ರಂಪ್‌ ಸರ್ಕಾರದ ಪ್ರಬಲ ಸಂಕೇತವಾಗಿದ್ದು, ಅವರು ತೆರಿಗೆ ವಿಚಾರದಲ್ಲಿ ನಡೆಸುವ ಮಾತುಕತೆ, ನಿರ್ಧಾರಗಳು ಅಧ್ಯಕ್ಷರ ಸೂಚನೆಯ ಮೇರೆಗೆ ನಡೆಯುತ್ತದೆ ಎನ್ನುವುದನ್ನು ಸಾರಲು ಅಮೆರಿಕ ಈ ದಾಳ ಉರುಳಿಸಿದೆ ಎನ್ನುವ ಚರ್ಚೆಗಳು ಹುಟ್ಟಿವೆ.

ಟ್ರಂಪ್‌ ಪರಮಮಿತ್ರ:

ಗೋರ್‌ 2020 ರಿಂದಲೂ ಟ್ರಂಪ್‌ ಜತೆ ಒಡನಾಟ ಹೊಂದಿದ್ದಾರೆ. 2024ರ ಅಧ್ಯಕ್ಷೀಯ ಚುನಾವಣೆಗೆ ಮುನ್ನ ಟ್ರಂಪ್ ಪ್ರಚಾರದ ರಾಜಕೀಯ ಕ್ರಿಯಾ ಸಮಿತಿಯಲ್ಲಿ ಪ್ರಮುಖ ಪಾತ್ರ ವಹಿಸಿದ್ದರು. ಇನ್ನು ಅಮೆರಿಕ ಅಧ್ಯಕ್ಷ ಮತ್ತು ಎಲಾನ್‌ ಮಸ್ಕ್‌ ಸಂಘರ್ಷದಲ್ಲಿ ಗೋರ್ ಪಾತ್ರವಿತ್ತು. ಇದೇ ಕಾರಣಕ್ಕೆ ಮಸ್ಕ್‌ ಸರ್ಗಿಯೋ ಅವರನ್ನು ಒಮ್ಮೆ ಹಾವು ಎಂದು ಬಣ್ಣಿಸಿ ಕಿಡಿಕಾರಿದ್ದರು.