Uttarakhand Elections: ಕಾಂಗ್ರೆಸ್‌ಗೆ ಉತ್ತರಾಖಂಡದಲ್ಲಿ ಶಾಕ್ ಕೊಟ್ಟ ರಾವತ್, ಹೊಸ ನಿರ್ಧಾರದ ಮಾತು!
* ಚುನಾವಣೆಗೆ ಸಜ್ಜಾಗಿರುವ ರಾಜ್ಯದಲ್ಲಿ ಕಾಂಗ್ರೆಸ್‌ಗೆ ಶಾಕ್
* ರಾಜ್ಯದಲ್ಲಿ ನನಗೆ ಯಾರಿಂದಲೂ ನೆರವು ಸಿಗುತ್ತಿಲ್ಲ
* ಇದು ನಿವೃತ್ತಿಯಾಗುವ ಸಮಯ ಎನ್ನಿಸುತ್ತಿದೆ
* ಮುಂದಿನ ವರ್ಷ ಹೊಸ ನಿರ್ಧಾರ ಪ್ರಕಟಿಸುವೆ
ಡೆಹ್ರಾಡೂನ್(ಡಿ,23): ಮುಂದಿನ ವರ್ಷದ ವಿಧಾನಸಭಾ ಚುನಾವಣೆಗೆ ಸಜ್ಜಾಗುತ್ತಿರುವ ಉತ್ತರಾಖಂಡದಲ್ಲಿ ಕಾಂಗ್ರೆಸ್‌ಗೆ ಬಹುದೊಡ್ಡ ಆಘಾತ ಉಂಟಾಗಿದೆ ರಾಜ್ಯದಲ್ಲಿ ಪಕ್ಷದ ಚುನಾವಣಾ ಪ್ರಚಾರದ ನೇತೃತ್ವ ವಹಿಸಿಕೊಂಡಿರುವ ಮಾಜಿ ಮುಖ್ಯಮಂತ್ರಿ ಹರೀಶ್ ರಾವತ್, ಇದೀಗ ಪಕ್ಷ, ಪಕ್ಷದ ನಾಯಕರ ವಿರುದ್ಧವೇ ಬಹಿರಂಗವಾಗಿ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
‘ಪಕ್ಷದಲ್ಲಿ ನನಗೆ ಸಹಕಾರ ಸಿಗುತ್ತಿಲ್ಲ. ನಿವೃತ್ತಿ ಆಗಬೇಕು ಎನ್ನಿಸುತ್ತಿದೆ. ಮುಂದಿನ ವರ್ಷ ನನ್ನ ಹೊಸ ದಿಕ್ಕು ಕಾಣಿಸಬಹುದು’ ಎನ್ನುವ ಮೂಲಕ ರಾವತ್ ಅವರು ಪಕ್ಷ ಬಿಡುವ ಪರೋಕ್ಷ ಮಾತುಗಳನ್ನಾಡಿದ್ದಾರೆ. ಪಕ್ಷದಲ್ಲಿನ ರಾಜ್ಯ ನಾಯಕರ ಜತೆಗಿನ ಕಚ್ಚಾಟದಿಂದ ರಾವತ್ ಈ ಮಾತು ಹೇಳಿದ್ದಾರೆ ಎನ್ನಲಾಗಿದೆ.
ಬುಧವಾರ ಸರಣಿ ಟ್ವೀಟ್ ಮಾಡಿರುವ ರಾವತ್ ‘ಇದು ವಿಚಿತ್ರವಲ್ಲವೇ? ಚುನಾವಣೆಯೆಂಬ ಸಮುದ್ರವನ್ನು ನಾನು ಈಜ ಬೇಕಾದ ಸಂದರ್ಭದಲ್ಲಿ, ನೆರವಿನ ಹಸ್ತ ಚಾಚಬೇಕಿದ್ದ ಸಂಘಟನೆಯ ವ್ಯವಸ್ಥೆ, ಬಹುತೇಕ ಕಡೆ ಒಂದೋ ಮುಖ ತಿರುಗಿಸಿಕೊಂಡು ಕುಳಿತಿದೇ ಇಲ್ಲವೇ ನಕಾರಾತ್ಮಕ ಕೆಲಸಗಳನ್ನು ಮಾಡುತ್ತಿದೆ. ಆಡಳಿತಾರೂಢ ಪಕ್ಷವು, ಈ ಸಮುದ್ರದಲ್ಲಿ ಹಲವು ಮೊಸಳೆಗಳನ್ನು ಬಿಟ್ಟಿದೆ. ಯಾರ ಆದೇಶದಂತೆ ನಾನು ಈಜಬೇಕಿದೆಯೋ, ಅವರಿಂದ ನೇಮಕಗೊಂಡವರೇ ನನ್ನ ಕೈ ಕಾಲುಗಳನ್ನು ಕಟ್ಟಿಹಾಕಿದ್ದಾರೆ. ಹೀಗಾಗಿಯೇ ಹಲವು ಬಾರಿ ನನ್ನ ಅಂತರಾತ್ಮವು ‘ಹರೀಶ್ ರಾವತ್ ಇನ್ನು ಸಾಕು. ನೀನು ಸಾಕಷ್ಟುಈಜಿದ್ದೀಯಾ. ಇದು ವಿರಾಮದ ಸಮಯ’ ಎಂದು ಹೇಳುತ್ತಲೇ ಇರುತ್ತದೆ. ಹೀಗಾಗಿ ನಾನೀಗ ಗೊಂದಲದಲ್ಲಿದ್ದೇನೆ. ಹೊಸ ವರ್ಷ ನನಗೆ ಹೊಸ ದಿಕ್ಕು ತೋರಬಹುದು ಎಂಬ ನಿರೀಕ್ಷೆಯಲ್ಲಿದ್ದೇನೆ’ ಎಂದಿದ್ದಾರೆ.
ಏನು ಕಚ್ಚಾಟ?:
ಚುನಾವಣೆ ಹಿನ್ನೆಲೆ ಪಕ್ಷದ ಹೈಕಮಾಂಡ್, ಹರೀಶ್ ರಾವತ್‌ಗೆ ಚುನಾವಣೆ ಪ್ರಚಾರದ ನೇತೃತ್ವ ವಹಿಸಿತ್ತು. ಜೊತೆಗೆ ರಾಜ್ಯ ಕಾಂಗ್ರೆಸ್ ಅಧ್ಯಕ್ಷರಾಗಿ ಗಣೇಶ್ ಗೋಡಿಯಾಲ್ ಅವರನ್ನು ನೇಮಿಸಿದೆ. ಜೊತೆಗೆ ವಿಧಾನಸಭೆಯಲ್ಲಿ ವಿಪಕ್ಷ ನಾಯಕರನ್ನಾಗಿ ರಾವತ್‌ರ ಕಟ್ಟಾವಿರೋಧಿ ಪ್ರೀತಂ ಸಿಂಗ್ ನೇಮಿಸಿದೆ. ಜೊತೆಗೆ ರಾಜ್ಯ ಘಟಕಕ್ಕೆ ನಾಲ್ವರು ಕಾರ್ಯಾಧ್ಯಕ್ಷರ ನೇಮಕ ಮಾಡಿದೆ. ಆದರೆ ಈ ಬೆಳವಣಿಗೆಗಳು ಬಿಕ್ಕಟ್ಟು ನಿವಾರಣೆ ಬದಲು ಮತ್ತಷ್ಟುಬಿಕ್ಕಟ್ಟಿಗೆ ಕಾರಣವಾಗಿದೆ. ಇದರ ಜೊತೆಗೆ ರಾಜ್ಯ ಕಾಂಗ್ರೆಸ್ ಉಸ್ತುವಾರಿ ದೇವೇಂದ್ರ ಯಾದವ್ ಬಗ್ಗೆ ರಾವತ್ ತೀವ್ರ ಅಸಮಾಧಾನ ಹೊಂದಿದ್ದಾರೆ. ಯಾದವ್, ರಾಜ್ಯದಲ್ಲಿ ತಮ್ಮ ವಿರೋಧಿ ಬಣಕ್ಕೆ ನೆರವಾಗುತ್ತಿದ್ದಾರೆ ಎಂಬುದು ರಾವತ್ ಬಣದ ಆರೋಪ. ಹೀಗಾಗಿ ನಾನಾ ಸಮಸ್ಯೆಗಳು ರಾವತ್‌ರ ಚುನಾವಣಾ ಪ್ರಚಾರ ಸಿದ್ಧತೆಗೆ ಅಡ್ಡಿ ಮಾಡಿವೆ ಎನ್ನಲಾಗಿದೆ.