ಕೊಲ್ಹಾಪುರ(ಫೆ.23): ಈವರೆಗೆ ಗಡಿ ವಿಚಾರವಾಗಿ ತಗಾದೆ ತೆಗೆದುಕೊಂಡು ಬಂದಿರುವ ಮಹಾರಾಷ್ಟ್ರ, ಕೊರೋನಾ ನಿಯಂತ್ರಣ ಸಲುವಾಗಿ ಕರ್ನಾಟಕ ಸರ್ಕಾರ ತೆಗೆದುಕೊಂಡಿರುವ ನಿರ್ಧಾರದ ವಿರುದ್ಧವೂ ಕಿಡಿಕಾರಿದೆ. ಮಹಾರಾಷ್ಟ್ರದಲ್ಲಿ ವ್ಯಾಪಕವಾಗಿ ಸೋಂಕು ಕಂಡುಬರುತ್ತಿರುವ ಹಿನ್ನೆಲೆಯಲ್ಲಿ ಆ ರಾಜ್ಯದಿಂದ ಬರುವವರು 48ರಿಂದ 72 ತಾಸಿನೊಳಗೆ ಮಾಡಿಸಲಾದ ಆರ್‌ಟಿ-ಪಿಸಿಆರ್‌ ವರದಿಯನ್ನು ಕಡ್ಡಾಯವಾಗಿ ತರಬೇಕು ಎಂದು ಕರ್ನಾಟಕ ಸೂಚಿಸಿದೆ. ಇದರ ವಿರುದ್ಧ ಮಹಾರಾಷ್ಟ್ರ ತೀವ್ರ ಆಕ್ರೋಶ ವ್ಯಕ್ತಪಡಿಸಿದೆ.

‘ಮಹಾರಾಷ್ಟ್ರದಿಂದ ಕರ್ನಾಟಕಕ್ಕೆ ಬರುವವರ ಕೊರೋನಾ ಪರೀಕ್ಷೆ ಮಾಡಿಸುವ ಹೊಣೆಗಾರಿಕೆಯನ್ನು ಕರ್ನಾಟಕ ಸರ್ಕಾರವೇ ಹೊತ್ತುಕೊಳ್ಳಬೇಕು. ಇಲ್ಲದೇ ಹೋದಲ್ಲಿ ಕರ್ನಾಟಕದಿಂದ ಮಹಾರಾಷ್ಟ್ರಕ್ಕೆ ಬರುವವರಿಗೆ ನಿಷೇಧ ಹೇರಬೇಕಾಗುತ್ತದೆ’ ಎಂದು ಗೃಹ ಖಾತೆ ರಾಜ್ಯ ಸಚಿವ ಸತೇಜ್‌ ಪಾಟೀಲ್‌ ಗುಡುಗಿದ್ದಾರೆ.

ಕೊರೋನಾ ದೃಢಪಟ್ಟಹಿನ್ನೆಲೆಯಲ್ಲಿ 15 ದಿನಗಳ ಕಾಲ ಕ್ವಾರಂಟೈನ್‌ನಲ್ಲಿರುವ ಅವರು ಸೋಮವಾರ ಹೇಳಿಕೆಯೊಂದನ್ನು ಬಿಡುಗಡೆ ಮಾಡಿದ್ದಾರೆ. ‘ಕರ್ನಾಟಕ- ಮಹಾರಾಷ್ಟ್ರ ಗಡಿಯಲ್ಲಿರುವ ಬೆಳಗಾವಿ ಜಿಲ್ಲೆಯ ಕೊಗನೋಳಿಯಲ್ಲಿ ಕರ್ನಾಟಕ ಚೆಕ್‌ಪೋಸ್ಟ್‌ ತೆರೆದಿದೆ. ಮಹಾರಾಷ್ಟ್ರದಿಂದ ಬರುವವರಿಂದ ಆರ್‌ಟಿ-ಪಿಸಿಆರ್‌ ವರದಿ ಕೇಳುತ್ತಿದೆ. ನೆಗೆಟಿವ್‌ ವರದಿ ಇಲ್ಲದಿದ್ದರೆ ವಾಪಸ್‌ ಕಳುಹಿಸುತ್ತಿದೆ. ಕರ್ನಾಟಕ ಸರ್ಕಾರವೇ ಕೊರೋನಾ ಪರೀಕ್ಷೆಯ ಹೊಣೆ ಹೊತ್ತುಕೊಳ್ಳಬೇಕು. ಇಲ್ಲದೇ ಹೋದಲ್ಲಿ ಕರ್ನಾಟಕದಿಂದ ಬರುವವರಿಗೆ ನಾವೂ ನಿಷೇಧ ಹೇರಬೇಕಾಗುತ್ತದೆ’ ಎಂದಿದ್ದಾರೆ.

‘ಈ ವಿಚಾರದಲ್ಲಿ ಕೇಂದ್ರ ಸರ್ಕಾರ ಮಧ್ಯಪ್ರವೇಶಿಸಬೇಕು. ಈ ಸಂಬಂಧ ಕರ್ನಾಟಕ ಮುಖ್ಯ ಕಾರ್ಯದರ್ಶಿ ಹಾಗೂ ಕರ್ನಾಟಕ ಸರ್ಕಾರದ ಜತೆ ಮಾತನಾಡಲಿದ್ದೇನೆ. ಕರ್ನಾಟಕದ ನಿರ್ಧಾರದಿಂದಾಗಿ ಪುಣೆ- ಬೆಂಗಳೂರು ರಾಷ್ಟ್ರೀಯ ಹೆದ್ದಾರಿಯಲ್ಲಿ ವಾಹನಗಳ ಉದ್ದದ ಸಾಲು ನಿಂತಿದೆ. ಇದರಿಂದಾಗಿ ಗಡಿಯಲ್ಲಿ ಕಾನೂನು- ಸುವ್ಯವಸ್ಥೆಗೆ ಸಮಸ್ಯೆಯಾಗಲಿದೆ’ ಎಂದು ಅಲವತ್ತುಕೊಂಡಿದ್ದಾರೆ.