Terror Attack ಕಣಿವೆ ರಾಜ್ಯದಲ್ಲಿ ಹಿಂದೂಗಳ ಹತ್ಯೆಗೆ ಕಾಶ್ಮೀರ್ ಫೈಲ್ಸ್ ಚಿತ್ರ ಕಾರಣ, ವಿವಾದ ಸೃಷ್ಟಿಸಿದ ಮಾಜಿ ಸಿಎಂ!
- ಕಳೆದ ಒಂದು ತಿಂಗಳಲ್ಲಿ 9 ಹಿಂದುಗಳ ಹತ್ಯೆ
- ಹಿಂದೂಗಳ ಗುರಿಯಾಗಿಸಿ ಕಾಶ್ಮೀರದಲ್ಲಿ ದಾಳಿ
- ಹಿಂದುಗಳ ಮೇಲಿನ ದಾಳಿಗೆ ಬಾಲಿವುಡ್ ಚಿತ್ರ ಕಾರಣ
- ವಿವಾದಾತ್ಮಕ ಹೇಳಿಕೆ ನೀಡಿದ ಬಿಹಾರ್ ಮಾಜಿ ಸಿಎಂ
ನವದೆಹಲಿ(ಜೂ.03): ಜಮ್ಮು ಮತ್ತು ಕಾಶ್ಮೀರದಲ್ಲಿ ಹಿಂದುಗಳ ಟಾರ್ಗೆಟ್ ಮಾಡಿ ಹತ್ಯೆ ಮಾಡಲಾಗುತ್ತಿದೆ. ನಿನ್ನೆ ಬ್ಯಾಂಕ್ ಮ್ಯಾನೇಜರ್ ಹಾಗೂ ಬಿಹಾರ ಕಾರ್ಮಿಕನ ಹತ್ಯೆ ಬೆನ್ನಲ್ಲೇ ಗೃಹ ಸಚಿವ ಅಮಿತ್ ಶಾ 2 ಭದ್ರತಾ ಸಭೆ ನಡೆಸಿದ್ದಾರೆ. ಪರಿಸ್ಥಿತಿ ಹತೋಟಿಗೆ ತರಲು ಎಲ್ಲಾ ಪ್ರಯತ್ನಗಳನ್ನು ಮಾಡಲಾಗುತ್ತಿದೆ. ಇದರ ನಡುವೆ ಬಿಹಾರ ಮಾಜಿ ಸಿಎಂ ಜಿತಿನ್ ರಾಮ್ ಮಾಂಜಿ ಅನಗತ್ಯ ವಿವಾದ ಸೃಷ್ಟಿಸಿದ್ದಾರೆ. ಕಾಶ್ಮೀರದಲ್ಲಿ ಹಿಂದೂಗಳ ಹತ್ಯೆಗೆ ದಿ ಕಾಶ್ಮೀರ್ ಫೈಲ್ಸ್ ಚಿತ್ರ ಕಾರಣ ಎಂದು ಮಾಂಜಿ ಹೇಳಿದ್ದಾರೆ.
ದಿ ಕಾಶ್ಮೀರ್ ಫೈಲ್ಸ್ ಚಿತ್ರದಿಂದ ಕಣಿವೆ ರಾಜ್ಯದಲ್ಲಿ ಸೌಹಾರ್ಧತೆ ನಾಶವಾಗಿದೆ. ಚಿತ್ರದಿಂದ ಕಾಶ್ಮೀರದಲ್ಲಿ ಅಶಾಂತಿ ಸಷ್ಟಿಯಾಗಿದೆ. ಹೀಗಾಗಿ ಹಿಂದೂಗಳ ಟಾರ್ಗೆಟ್ ಮಾಡಿ ದಾಳಿ ಮಾಡಲಾಗುತ್ತಿದೆ. ಹಿಂದೂಗಳ ಹತ್ಯೆಗೆ ದಿ ಕಾಶ್ಮೀರ್ ಫೈಲ್ಸ್ ಚಿತ್ರ ಕಾರಣ ಎಂದು ಜಿತಿನ್ ರಾಮ್ ಮಾಂಜಿ ಹೇಳಿದ್ದಾರೆ.
ಕಾಶ್ಮೀರ ಹಿಂದುಗಳ ಸರಣಿ ಹತ್ಯೆ,ಅಮಿತ್ ಶಾ ಅಧ್ಯಕ್ಷತೆಯಲ್ಲಿ ಉನ್ನತ್ತ ಮಟ್ಟದ ಭದ್ರತಾ ಸಭೆ!
ಬಿಹಾರದಲ್ಲಿ ಬಿಜೆಪಿ ಬೆಂಬಿಲಿತ ನಿತೀಶ್ ಕುಮಾರ್ ಸರ್ಕಾರ ದಿ ಕಾಶ್ಮೀರ್ ಫೈಲ್ಸ್ ಚಿತ್ರಕ್ಕೆ ತೆರಿಗೆ ವಿನಾಯಿತಿ ನೀಡಿತ್ತು. ಸಚಿವರು, ಶಾಸಕರು, ಸಂಸದರು ಚಿತ್ರ ನೋಡಿ ಇತರರನ್ನು ನೋಡಲು ಪ್ರೇರಿಪಿಸಿದ್ದರು. ಚಿತ್ರ ಬಿಡುಗಡೆಗೆ ಹಲವು ವಿರೋಧಗಳಿತ್ತು. ಈ ರೀತಿಯ ಚಿತ್ರಗಳನ್ನು ನಿಷೇಧಿಸಿದರೆ ಮುಂಬರುವ ಅನಾಹುತಗಳನ್ನು ತಪ್ಪಿಸಬಹುದು ಎಂದು ಜಿತಿನ್ ರಾಮ್ ಮಾಂಜಿ ಹೇಳಿದ್ದಾರೆ.
ಕಾಶ್ಮೀರ್ ಫೈಲ್ಸ್ ಚಿತ್ರದಿಂದ ಪಂಡಿತರಲ್ಲಿ ಭಯದ ವಾತಾವರಣ ಹೆಚ್ಚಾಗಿದೆ. ಕಾಶ್ಮೀರಕ್ಕೆ ತೆರಳಲು ಸಾಧ್ಯವಾಗುತ್ತಿಲ್ಲ. ಇತ್ತ ಕಾಶ್ಮೀರದಲ್ಲಿರುವ ಹಿಂದೂಗಳನ್ನು ಗುರಿಯಾಗಿಸಿ ದಾಳಿಗಳು ನಡೆಯುತ್ತಲೇ ಇದೆ. ಕೇಂದ್ರ ಸರ್ಕಾರ ತನಿಖೆ ನಡೆಸಿ ಕಾಶ್ಮೀರದಲ್ಲಿ ಶಾಂತಿ ನೆಲೆಸುವಂತೆ ಮಾಡಬೇಕು ಎಂದು ಆಗ್ರಹಿಸಿದ್ದಾರೆ.
ಪಂಡಿತರಿಂದ ಜಮ್ಮು, ಶ್ರೀನಗರದಲ್ಲಿ ಪ್ರತಿಭಟನೆ
ಹಿಂದುಗಳನ್ನು ಗುರುತಿಸಿ ಕೊಲ್ಲುತ್ತಿರುವ ಘಟನೆಗಳು ಜಮ್ಮು ಕಾಶ್ಮೀರದಲ್ಲಿ ವಿಶೇಷವಾಗಿ ಸರ್ಕಾರಿ ನೌಕರರ ವಲಯದಲ್ಲಿ ತೀವ್ರ ಆತಂಕ ಮೂಡಿಸಿದೆ. ಹೀಗಾಗಿ ಜಮ್ಮು ಹಾಗೂ ಶ್ರೀನಗರದಲ್ಲಿ ಗುರುವಾರ ಹಿಂದೂಗಳ ಪ್ರತಿಭಟನೆ ನಡೆದಿದೆ. ಗುರುವಾರ ಜಮ್ಮುವಿನಲ್ಲಿ ನೂರಾರು ಸರ್ಕಾರಿ ನೌಕರರು ಬೀದಿಗಳಲ್ಲಿ ಮೆರವಣಿಗೆ ನಡೆಸಿ ಪ್ರತಿಭಟಿಸಿದರು. ತಮ್ಮನ್ನು ಸ್ವಂತ ಜಿಲ್ಲೆಗಳಿಗೆ ವರ್ಗಾವಣೆ ಮಾಡುವಂತೆ ಸರ್ಕಾರವನ್ನು ಕೋರಿದರು.
ಕಣಿವೆಯಲ್ಲಿ ಮತ್ತೆ ಹರಿದ ನೆತ್ತರು, ಬ್ಯಾಂಕ್‌ಗೆ ನುಗ್ಗಿ ಮ್ಯಾನೇಜರ್ ಹತ್ಯೆಗೈದ ಉಗ್ರರು!
ಈ ನಡುವೆ, ಶ್ರೀನಗರದಲ್ಲೂ ಪ್ರತಿಭಟನೆಗಳು ನಡೆದಿದ್ದು, ಕಣಿವೆಯನ್ನು ತೊರೆಯುವುದಾಗಿ ಪಂಡಿತ ಕುಟುಂಬಗಳು ಪ್ರತಿಭಟನೆ ನಡೆಸಿವೆ.
ಗುರುವಾರ ಬೆಳಿಗ್ಗೆ ಕುಲ್ಗಾಂ ಜಿಲ್ಲೆಯ ಬ್ಯಾಂಕೊಂದರಲ್ಲಿ ಮ್ಯಾನೇಜರ್‌ನನ್ನು ಉಗ್ರರು ಗುಂಡಿಕ್ಕಿ ಹತ್ಯೆಗೈದಿದ್ದಾರೆ. ಇದು ಮೇ 1ರ ನಂತರ ಕಣಿವೆಯಲ್ಲಿ ಹಿಂದುಗಳನ್ನು ಹತ್ಯೆಗೈದ 8ನೇ ಪ್ರಕರಣವಾಗಿದೆ.ದಕ್ಷಿಣ ಕಾಶ್ಮೀರದ ಕುಲ್ಗಾಂ ಜಿಲ್ಲೆಯ ಏರೆ ಮೋಹನ್‌ಪೋರಾ ಎಂಬಲ್ಲಿರುವ ಇಲಾಖಿ ದೇಹತಿ ಬ್ಯಾಂಕ್‌ನ ಶಾಖೆಯ ಮ್ಯಾನೇಜರ್ ವಿಜಯ್ ಕುಮಾರ್ ಅವರನ್ನು ಉಗ್ರರು ಗುರುವಾರ ಹತ್ಯೆಗೈದಿದ್ದಾರೆ. ಇವರು ರಾಜಸ್ಥಾನ ಮೂಲದವರಾಗಿದ್ದು, ಒಂದು ವಾರದ ಹಿಂದಷ್ಟೇ ಈ ಶಾಖೆಗೆ ವರ್ಗವಾಗಿ ಬಂದಿದ್ದರು. ತೀವ್ರ ಗುಂಡೇಟು ತಿಂದ ಅವರು ಆಸ್ಪತ್ರೆಗೆ ಸಾಗಿಸುವಾಗ ದಾರಿ ಮಧ್ಯೆಯೇ ಅಸುನೀಗಿದರು ಎಂದು ಪೊಲೀಸರು ತಿಳಿಸಿದ್ದಾರೆ. ಈ ಕೃತ್ಯ ಸಿಸಿಟೀವಿಯಲ್ಲೂ ಸೆರೆಯಾಗಿದೆ. ವಿಜಯ್ ಕುಮಾರ್ ಅವರ ಹಂತಕರಿಗಾಗಿ ಶೋಧ ಆರಂಭವಾಗಿದೆ.