ಜೋಧ್‌ಪುರ: ರಾಜಸ್ಥಾನದ ಜೋಧ್‌ಪುರದಲ್ಲಿ ಇಂದು ರೈಲೊಂದು ಹಳ್ಳಿ ತಪ್ಪಿದೆ. ಬಾಂದ್ರಾ ಟರ್ಮಿನಸ್-ಜೋಧ್‌ಪುರ ಸೂರ್ಯನಗರಿ ಎಕ್ಸ್‌ಪ್ರೆಸ್ ರೈಲಿನ ಎಂಟು ಬೋಗಿಗಳು ಇಂದು ಬೆಳಗ್ಗೆ ಹಳಿ ತಪ್ಪಿವೆ.
ಜೋಧ್‌ಪುರ: ರಾಜಸ್ಥಾನದ ಜೋಧ್‌ಪುರದಲ್ಲಿ ಇಂದು ರೈಲೊಂದು ಹಳ್ಳಿ ತಪ್ಪಿದೆ. ಬಾಂದ್ರಾ ಟರ್ಮಿನಸ್-ಜೋಧ್‌ಪುರ ಸೂರ್ಯನಗರಿ ಎಕ್ಸ್‌ಪ್ರೆಸ್ ರೈಲಿನ ಎಂಟು ಬೋಗಿಗಳು ಇಂದು ಬೆಳಗ್ಗೆ ಹಳಿ ತಪ್ಪಿವೆ. ಇಂದು ಮುಂಜಾನೆ 3.27 ಕ್ಕೆ ಈ ಅವಘಡ ಸಂಭವಿಸಿದೆ. ಜೋಧ್‌ಪುರ ವಿಭಾಗದ ರಾಜ್‌ಕಿವಾಸ್-ಬೊಮದ್ರಾ ವಿಭಾಗದ ನಡುವೆ ಬೋಗಿಗಳು ಹಳಿತಪ್ಪಿವೆ ಎಂದು ವಾಯುವ್ಯ ರೈಲ್ವೆಯ ಸಿಪಿಆರ್‌ಒ ಶಶಿ ಕಿರಣ್ ತಿಳಿಸಿದ್ದಾರೆ. ರೈಲು ಹಳಿ ತಪ್ಪಿದ್ದರಿಂದ ಆಗಿರುವ ಅನಾಹುತದ ಬಗ್ಗೆ ವರದಿ ಆಗಿಲ್ಲ, ಪ್ರಯಾಣಿಕ ರೈಲು ಅಪಘಾತವಾದ ಹಿನ್ನೆಲೆಯಲ್ಲಿ ರೈಲ್ವೆ ಇಲಾಖೆ ಸಹಾಯವಾಣಿ ತೆರೆದಿದೆ. ಘಟನೆಯಲ್ಲಿ ಕೆಲವರು ಗಾಯಗೊಂಡಿದ್ದಾರೆ ಎಂದು ತಿಳಿದು ಬಂದಿದ್ದು ಅವರನ್ನು ಸಮೀಪದ ಆಸ್ಪತ್ರೆಗೆ ಸೇರಿಸಲಾಗಿದೆ ಎಂಬ ಮಾಹಿತಿ ಇದೆ.
ಅಪಘಾತವಾದ ಸ್ಥಳಕ್ಕೆ ಜೋಧ್‌ಪುರದಿಂದ ಪರಿಹಾರ ರೈಲನ್ನು ಕಳುಹಿಸಲಾಗಿದೆ ಪರಿಸ್ಥಿತಿಯನ್ನು ಅವಲೋಕಿಸಲು ಉನ್ನತ ಅಧಿಕಾರಿಗಳು ಸ್ಥಳಕ್ಕೆ ತಲುಪಿದ್ದಾರೆ ಎಂದು ಸುದ್ದಿಸಂಸ್ಥೆ ಎಎನ್‌ಐ ವರದಿ ಮಾಡಿದೆ. ಉತ್ತರ ಪಶ್ಚಿಮ ರೈಲ್ವೆಯ ಪ್ರಧಾನ ವ್ಯವಸ್ಥಾಪಕರು ಮತ್ತು ಇತರ ಉನ್ನತ ಅಧಿಕಾರಿಗಳು ಜೈಪುರದ ಪ್ರಧಾನ ರೈಲ್ವೆ ಕಚೇರಿಯ ನಿಯಂತ್ರಣ ಕೊಠಡಿಯಲ್ಲಿ ಪರಿಸ್ಥಿತಿಯನ್ನು ಮೇಲ್ವಿಚಾರಣೆ ಮಾಡುತ್ತಿದ್ದಾರೆ ಎಂದು ಸಿಪಿಆರ್‌ಒ ತಿಳಿಸಿದ್ದಾರೆ. ರೈಲು ಹಳ್ಳಿ ತಪ್ಪಿದ ಪರಿಣಾಮ 11 ಬೋಗಿಗಳಲ್ಲಿದ್ದ ಪ್ರಯಾಣಿಕರ ಮೇಲೆ ಪರಿಣಾಮ ಬೀರಿದ್ದು, ಮಧ್ಯದಲ್ಲಿ ಸಿಲುಕಿಕೊಂಡ ಪ್ರಯಾಣಿಕರಿಗೆ ತಮ್ಮ ಊರು ತಲುಪಲು ಬಸ್‌ಗಳ ವ್ಯವಸ್ಥೆ ಮಾಡಲಾಗಿದೆ ಎಂದು ರೈಲ್ವೆ ಅಧಿಕಾರಿ ಹೇಳಿದ್ದಾರೆ. ರೈಲು ಹಳಿ ತಪ್ಪಿದ ಕಾರಣ 12 ರೈಲುಗಳ ಮಾರ್ಗವನ್ನು ಬದಲಿಸಲಾಗಿದೆ ಮತ್ತು ಎರಡು ರೈಲುಗಳನ್ನು ರದ್ದುಗೊಳಿಸಲಾಗಿದೆ ಎಂದು ರೈಲ್ವೆ ಅಧಿಕಾರಿ ತಿಳಿಸಿದ್ದಾರೆ.
ಈ ಘಟನೆ ನಡೆದಾಗ ರೈಲಿನಲ್ಲಿ ಪ್ರಯಾಣಿಸುತ್ತಿದ್ದ ವ್ಯಕ್ತಿಯೊಬ್ಬರು ಮಾತನಾಡಿ, ಮಾರ್ವಾರ್ ಜಂಕ್ಷನ್‌ನಿಂದ ರೈಲು ಹೊರಟ 5 ನಿಮಿಷಗಳಲ್ಲಿ ರೈಲಿನೊಳಗೆ ಕಂಪನದ ಶಬ್ದ ಕೇಳಿಸಿತು ಮತ್ತು 2-3 ನಿಮಿಷಗಳ ನಂತರ ರೈಲು ನಿಂತಿತು. ನಾವು ಇಳಿದು ನೋಡಿದಾಗ ಕನಿಷ್ಠ 8 ಸ್ಲೀಪರ್ ಕ್ಲಾಸ್ ಕೋಚ್‌ಗಳು ಹಳಿ ತಪ್ಪಿ ಉರುಳಿ ಬಿದ್ದಿದ್ದವು. ಇದಾಗಿ 15 ರಿಂದ 20 ನಿಮಿಷಗಳಲ್ಲಿ ಸ್ಥಳಕ್ಕೆ ಆಂಬ್ಯುಲೆನ್ಸ್‌ಗಳು ಬಂದವು ಎಂದು ಹೇಳಿದ್ದಾರೆ. ರೈಲು ಹಳಿ ತಪ್ಪಿದ ಹಿನ್ನೆಲೆಯಲ್ಲಿ ರೈಲಿನಲ್ಲಿ ಪ್ರಯಾಣಿಸುತ್ತಿದ್ದವರ ಕ್ಷೇಮ ವಿಚಾರಿಸಿಕೊಳ್ಳಲು ಅವರ ಕುಟುಂಬದವರಿಗೆ ನೆರವಾಗುವ ಸಲುವಾಗಿ ರೈಲ್ವೆ ಇಲಾಖೆ ಸಹಾಯವಾಣಿ (Helpline numbers) ತೆರೆದಿದೆ. ಪ್ರಯಾಣಿಕರು ಮತ್ತು ಸಂಬಂಧಿತ ಕುಟುಂಬ ಸದಸ್ಯರಿಗೆ ಈ ಸಹಾಯವಾಣಿ ಸಂಖ್ಯೆಗಳನ್ನು ನೀಡಲಾಗಿದೆ. ಜೋಧ್‌ಪುರ ಸಂಪರ್ಕಿಸಲು ಸಹಾಯವಾಣಿ ಸಂಖ್ಯೆ 02912654979, 02912654993, 02912624125, 02912431646 ಹಾಗೂ ಪಾಲಿ ಮಾರ್ವಾರ್ (Pali Marwar) ಸಂಪರ್ಕಿಸಲು 02932250324 ಸಂಖ್ಯೆ ನೀಡಲಾಗಿದೆ. ರೈಲಿನಲ್ಲಿ ಪ್ರಯಾಣಿಸುತ್ತಿದ್ದ ತಮ್ಮವರ ಮಾಹಿತಿಗಾಗಿ ಪ್ರಯಾಣಿಕರು ಮತ್ತು ಅವರ ಕುಟುಂಬಗಳು 138 ಮತ್ತು 1072 ಯನ್ನು ಕೂಡ ಸಂಪರ್ಕಿಸಬಹುದಾಗಿದೆ.