ನವದೆಹಲಿ [ಜ.02]: ಇತ್ತೀಚೆಗೆ ಜಾರಿಗೆ ಬಂದ ಕೇಬಲ್‌ ಟೀವಿ ನಿಯಮಗಳು ಗ್ರಾಹಕರಿಗೆ ಹೊರೆಯಾಗುತ್ತಿರುವುದನ್ನು ಮನಗಂಡಿರುವ ದೂರಸಂಪರ್ಕ ನಿಯಂತ್ರಣಾ ಸಂಸ್ಥೆಯದ ‘ಟ್ರಾಯ್‌’ ಕೇಬಲ್‌ ಟೀವಿ ನಿಯಮಗಳಲ್ಲಿ ಬುಧವಾರ ಹಲವು ಮಹತ್ವದ ಬದಲಾವಣೆಗಳನ್ನು ತಂದಿದೆ.

ಈ ಹೊಸ ನಿಯಮಗಳಿಂದಾಗಿ ಗ್ರಾಹಕರು ಕಡಿಮೆ ಶುಲ್ಕದಲ್ಲೇ ಹೆಚ್ಚಿನ ಉಚಿತ ಚಾನೆಲ್‌ಗಳನ್ನು ಪಡೆಯಬಹುದಾಗಿದೆ. ಅಲ್ಲದೆ ಟೀವಿ ಚಾನೆಲ್‌ಗಳು ವಿಧಿಸುತ್ತಿದ್ದ ದರಗಳ ಮೇಲೂ ಕಡಿವಾಣ ಹಾಕಿದೆ. ಮತ್ತೊಂದೆಡೆ ಪ್ರಸಾರಕರು ಕ್ಯಾರಿಯೇಜ್‌ ಶುಲ್ಕದ ರೂಪದಲ್ಲಿ ಡಿಪಿಒ (ಡಿಸ್ಟ್ರಿಬ್ಯೂಷನ್‌ ಫ್ಲಾಟ್‌ಫಾಮ್‌ರ್‍ ಆಪರೇಟ​ರ್‍ಸ್)ಗಳಿಗೆ ನೀಡಬೇಕಿದ್ದ ಶುಲ್ಕದ ಮೇಲೂ ಗರಿಷ್ಠ ಮಾಸಿಕ 4 ಲಕ್ಷ ರು.ಗಳ ಮಿತಿಯನ್ನು ಹೇರಲಾಗಿದೆ. ಈ ಎಲ್ಲಾ ಬೆಳವಣಿಗೆಗಳು ಶೀಘ್ರವೇ ಕೇಬಲ್‌ ಟೀವಿ ಮತ್ತು ಡಿಟಿಎಚ್‌ ಬಳಕೆದಾರರಿಗೆ ಇನ್ನಷ್ಟುಅಗ್ಗದ ದರದಲ್ಲಿ ಸೇವೆಯನ್ನು ಒದಗಿಸಲಿವೆ ಎನ್ನಲಾಗಿದೆ.

ಜ.15ರೊಳಗೆ ಈ ಎಲ್ಲಾ ನಿಯಮಗಳನ್ನು ಪ್ರಸಾರಕರು, ತಮ್ಮ ವೆಬ್‌ಸೈಟ್‌ಗಳಲ್ಲಿ ಪ್ರಕಟಿಸಬೇಕು. ಹೊಸ ನೀತಿ 2020ರ ಮಾ.1ರಿಂದ ಬರಲಿದೆ.

ಹೊಸ ನಿಯಮದ ಮುಖ್ಯಾಂಶಗಳು.

- ಎನ್‌ಸಿಎಫ್‌ ಶುಲ್ಕ (ಮಾಸಿಕ ಕಡ್ಡಾಯವಾಗಿ ಪಾವತಿಸಬೇಕಾದ)ವನ್ನು 130 ರು.(ತೆರಿಗೆ ಹೊರತುಪಡಿಸಿ)ಗೆ ಸೀಮಿತಗೊಳಿಸಲಾಗಿದೆ. ಅಂದರೆ ಅಂದಾಜು 150 ರು.ಗೆ 200 ಉಚಿತ ಚಾನೆಲ್‌ಗಳನ್ನು ನೀಡಬೇಕು. ಈ ಮೊದಲು 100 ಉಚಿತ ಚಾನೆಲ್‌ಗಳನ್ನು ನೀಡಬೇಕು ಎಂಬ ನಿಯಮವಿತ್ತು.

ದಶಕದ ನೆನಪು: ಹತ್ತಿರವಾಯ್ತು ಕ್ಯಾಬ್, ಮನೆಗೇ ಬರುತ್ತೆ ಬಯಸಿದ ತಿನಿಸು!...

- ಎನ್‌ಸಿಎಫ್‌ ಶುಲ್ಕ 160 ರು. (ತೆರಿಗೆ ಹೊರತುಪಡಿಸಿ) ಪಡೆದರೆ, ಅದಕ್ಕೆ ಲಭ್ಯವಿರುವ ಎಲ್ಲಾ ಉಚಿತ ಚಾನೆಲ್‌ಗಳನ್ನು ಗ್ರಾಹಕರಿಗೆ ನೀಡಬೇಕು.

- ಬಳಕೆದಾರನೊಬ್ಬನ ಹೆಸರಲ್ಲಿ ಒಂದಕ್ಕಿಂತ ಹೆಚ್ಚು ಸಂಪರ್ಕ ಇದ್ದರೆ, ಆತನಿಗೆ ಎರಡು ಮತ್ತು ತದನಂತರದ ಪ್ರತಿ ಸಂಪರ್ಕಕ್ಕೆ ಮೊದಲ ಸಂಪರ್ಕದ ಶೇ.40ರಷ್ಟನ್ನು ಮಾತ್ರವೇ ಎನ್‌ಸಿಎಫ್‌ ಶುಲ್ಕವಾಗಿ ವಿಧಿಸಬಹುದು.

- ಕೇಂದ್ರ ಮಾಹಿತಿ ಮತ್ತು ಪ್ರಸಾರ ಸಚಿವಾಲಯವು ಕಡ್ಡಾಯವಾಗಿ ಪ್ರಸಾರ ಮಾಡಲೇಬೇಕು ಎಂದು ಪಟ್ಟಿಮಾಡಿರುವ ಚಾನೆಲ್‌ಗಳು ಎನ್‌ಸಿಎಫ್‌ನ 200 ಚಾನೆಲ್‌ಗಳ ವ್ಯಾಪ್ತಿಗೆ ಬರದು. ಈ ಚಾನೆಲ್‌ಗಳನ್ನು ಹೊರತುಪಡಿಸಿ ಅವರು 200 ಉಚಿತ ಚಾನೆಲ್‌ಗಳನ್ನು 150 ರು.ಗೆ ನೀಡಬೇಕು.

- ಗುಚ್ಛಗಳಲ್ಲಿ ಲಭ್ಯವಿರುವ ಚಾನೆಲ್‌ಗಳನ್ನು ಗ್ರಾಹಕನೊಬ್ಬ ಪ್ರತ್ಯೇಕವಾಗಿ ಪಡೆಯಬಯಸಿದರೆ, ಆತನಿಗೆ ಸೇವಾ ಕಂಪನಿಗಳು ಪ್ರತಿ ಚಾನೆಲ್‌ಗೆ ವಿಧಿಸುವ ಶುಲ್ಕವು, ಗುಚ್ಛದಲ್ಲಿ ಲಭ್ಯವಿರುವ ಎಲ್ಲಾ ಚಾನೆಲ್‌ಗಳ ಸರಾಸರಿ ಶುಲ್ಕದ ಒಂದೂವರೆ ಪಟ್ಟಿಗಿಂತ ಹೆಚ್ಚಿರಬಾರದು. (ಉದಾಹರಣೆಗೆ ಒಂದು ಗುಚ್ಛದಲ್ಲಿ 5 ಚಾನೆಲ್‌ಗಳಿದ್ದು ಅದಕ್ಕೆ 40 ರು. ಶುಲ್ಕ ಇದೆ ಎಂದಿಟ್ಟುಕೊಳ್ಳಿ. ಆಗ 5 ಚಾನೆಲ್‌ಗಳ ಸರಾಸರಿ ಶುಲ್ಕ 8 ರು. ಆಗುತ್ತದೆ. ಹೀಗಾಗಿ ಈ ಗುಚ್ಛದಲ್ಲಿ ಯಾವುದೇ ಚಾನೆಲ್‌ ಅನ್ನು ಗ್ರಾಹಕ ಪ್ರತ್ಯೇಕವಾಗಿ ಬಯಸಿದರೆ ಅದರ ಶುಲ್ಕ 12 ರು.ಗಿಂತ ಹೆಚ್ಚಿರಬಾರದು)

- 12 ರು. ಮತ್ತು ಅದಕ್ಕಿಂತ ಕಡಿಮೆ ಶುಲ್ಕ ಹೊಂದಿರುವ ಚಾನೆಲ್‌ಗಳನ್ನು ಮಾತ್ರವೇ ಪ್ರಸಾರಕರು ಚಾನೆಲ್‌ಗಳ ಗುಚ್ಛದಲ್ಲಿ ಸೇರಿಸಲು ಅವಕಾಶವಿರುತ್ತದೆ.

- ಪ್ರಸಾರಕರು ಕ್ಯಾರಿಯೇಜ್‌ ಶುಲ್ಕದ ರೂಪದಲ್ಲಿ ಡಿಪಿಒ (ಡಿಸ್ಟ್ರಿಬ್ಯೂಷನ್‌ ಫ್ಲಾಟ್‌ಫಾಮ್‌ರ್‍ ಆಪರೇಟ​ರ್‍ಸ್)ಗಳಿಗೆ ನೀಡಬೇಕಿದ್ದ ಶುಲ್ಕದ ಮೇಲೂ ಗರಿಷ್ಠ ಮಾಸಿಕ 4 ಲಕ್ಷ ರು.ಗಳ ಮಿತಿ ಹೇರಲಾಗಿದೆ.