ಕೆಂಪು ಕೋಟೆಗೆ ಮುತ್ತಿಗೆ ಹಾಕಿದ ರೈತ ಸಂಘಟನೆ; ಪೊಲೀಸ್ ನಿಯಂತ್ರಣಕ್ಕೆ ಸಿಗದ ಪ್ರತಿಭಟನೆ!
ಕೇಂದ್ರ ಕೃಷಿ ಕಾಯ್ದೆ ವಿರೋಧಿಸಿ ಇಂದು ಆಯೋಜಿಸಿರುವ ರೈತರ ಟ್ರಾಕ್ಟರ್ ರ್ಯಾಲಿ ಇದೀಗ ಹಿಂಸಾರೂಪ ಪಡೆದುಕೊಂಡಿದೆ.ಕೆಲ ಗೊಂದಲ ನಿರ್ಮಾಣವಾದ ಕಾರಣ ಪೊಲೀಸ್ ಬ್ಯಾರಿಕೇಡ್ ಮುರಿದ ಪ್ರತಿಭಟನಾ ರೈತರು ಕೆಂಪು ಕೋಟೆಗೆ ಮುತ್ತಿಗೆ ಹಾಕಿದ್ದಾರೆ. ರೈತ ಪ್ರತಿಭಟನೆ ಕುರಿತ ಅಪ್‌ಡೇಟ್ ಇಲ್ಲಿದೆ.
ನವದೆಹಲಿ(ಜ.26): ಗಣರಾಜ್ಯೋತ್ಸವ ದಿನ ರೈತ ಸಂಘಟನೆಗಳ ಟ್ರಾಕ್ಟರ್ ರ್ಯಾಲಿ ಇದೀಗ ಹಿಂಸಾ ರೂಪ ಪಡೆದುಕೊಂಡಿದೆ. ಕೇಂದ್ರ ಕೃಷಿ ಕಾಯ್ದೆ ವಿರೋಧಿಸಿ ಟ್ರಾಕ್ಟರ್ ರ್ಯಾಲಿ ಆಯೋಜಿಸಿದ ರೈತ ಸಂಘಟನೆಗಳು ಇದೀಗ ತಾವು ಬಹಿರಂಗ ಪಡಿಸಿದ ಮಾರ್ಗ ಬದಲಾಯಿಸಿ ಕೆಂಪು ಕೋಟೆಗೆ ಮುತ್ತಿಗೆ ಹಾಕಿದ್ದಾರೆ.
ಹಿಂಸಾತ್ಮಕ ರೂಪ ತಳೆದ ಅನ್ನದಾತನ ಕಿಚ್ಚು: ಪೊಲೀಸರ ಮೇಲೆ ದಾಳಿ!.
ಪೊಲೀಸ್ ಬ್ಯಾರಿಕೇಡ್ ಮುರಿದು, ಭದ್ರತಾ ಸಿಬ್ಬಂದಿಗಳ ಮೇಲೆ ದಾಳಿ ಮಾಡಿದ ಪ್ರತಿಭಟನಾಕಾರರು, ಮಾರ್ಗ ಬದಲಾಯಿಸಿ ಕೆಂಪು ಕೋಟೆಗೆ ಮುತ್ತಿಗೆ ಹಾಕಿದ್ದಾರೆ. ಹಲವು ಭಾಗಗಗಳಿಂದ ರೈತರನ್ನು ನಿಯಂತ್ರಿಸಲು ಪೊಲೀಸರಿಗೆ ಸಾಧ್ಯವಾಗಿಲ್ಲ. ರೈತರ ಗುಂಪಿನಲ್ಲಿ ಕೆಲ ಸಂಘಟನೆಗಳು ಕತ್ತಿ ಗುರಾಣಿ ಮೂಲಕ ಪೊಲೀಸರ ಮೇಲೆ ದಾಳಿ ಮಾಡಿದೆ.
ನೇರವಾಗಿ ಕೆಂಪು ಕೋಟೆಗೆ ಮುತ್ತಿಗೆ ಹಾಕಿದ ರೈತ ಸಂಘಟನೆಗಳು, ಕೆಂಪು ಕೋಟೆಯಲ್ಲಿನ ಧ್ವಜ ಸ್ಥಂಭದಲ್ಲಿ ತಮ್ಮ ಧ್ವಜ ಹಾರಿಸಿದ್ದಾರೆ. ಇಷ್ಟೇ ಅಲ್ಲ ಕೆಂಪು ಕೋಟೆ ಮೇಲೆ ಹತ್ತಿ ಕೋಟೆಯ ಮೇಲ್ಬಾಗದಲ್ಲೂ ತಮ್ಮ ಧ್ವಜ ಹಾರಿಸಿದ್ದಾರೆ. ಪ್ರತಿಭಟನೆ ಉಗ್ರಸ್ಪರೂಪ ಪಡೆದುಕೊಂಡಿದೆ. ಇದೀಗ ಮತ್ತಷ್ಟು ಗುಂಪುಗಳು ಕೆಂಪು ಕೋಟೆಗೆ ಆಗಮಿಸುತ್ತಿದ್ದು, ಪ್ರತಿಭಟನೆ ಪೊಲೀಸರ ನಿಯಂತ್ರಣ ಮೀರಿದಂತೆ ಕಾಣುತ್ತಿದೆ.