ನವದೆಹಲಿ(ಜ.26): ಗಣರಾಜ್ಯೋತ್ಸವ ದಿನದ ಪರೇಡ್ ಮುಗಿಯುವ ಮುನ್ನವೇ ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಟ್ರಾಕ್ಟರ್ ರ್ಯಾಲಿ ನಡೆಸಲು ಮುಂದಾದ ಅನ್ನದಾತನನ್ನು ಪೊಲೀಸರು ತಡೆದಿದ್ದಾರೆ. ಪೊಲೀಸರ ಈ ನಡೆಯಿಂದ ರೈತರೂ ಆಕ್ರೋಶಿತರಾಗಿದ್ದಾರೆ. ಇದರಿಂದಾಗಿ ಪೊಲೀಸರು ಹಾಗೂ ರೈತರ ನಡುವೆ ವಾಗ್ವಾದ ಹಾಗೂ ತಳ್ಳಾಟ ನಡೆದಿದೆ. ಅತ್ತ ರೈತರು ಪೊಲೀಸರು ಹಾಕಿದ್ದ ಬ್ಯಾರಿಕೇಡ್ ಮುರಿದು ಪ್ರವೇಶಿಸಲು ಯತ್ನಿಸಿದ್ದು, ಈ ವೇಳೆ ಪೊಲೀಸರು ರೈತರ ನಿಯಂತ್ರಿಸಲು ಅಶ್ರುವಾಯು ಹಾಗೂ ಲಾಠಿಚಾರ್ಜ್ ಪ್ರಯೋಗಿಸಿದ್ದಾರೆ. ಇದರಿಂದ ಕೆರಳಿದ ರೈತ ಪೊಲೀಸರ ಮೇಲೆ ದಾಳಿ ನಡೆಸಿದ್ದಾರೆ. ಹೀಗಾಗಿ ಸಿಂಘು, ಘಾಜಿಪುರ ಮತ್ತು ಟಿಕ್ರಿ ಗಡಿಭಾಗದಲ್ಲಿ ಪ್ರಕ್ಷುಬ್ದ ವಾತಾವರಣದ ನಿರ್ಮಾಣವಾಗಿದೆ. 

ಹೌದು ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ರೈತರಿಗೆ ಟ್ರಾಕ್ಟರ್ ರ್ಯಾಲಿ ನಡೆಸಲು ಪೊಲೀಸರು ಅನುಮತಿ ಕೊಟ್ಟಿದ್ದಾರೆ. ಆದರೆ, ಗಣರಾಜ್ಯೋತ್ಸವ ಪರೇಡ್ ಮುಗಿದ ಬಳಿಕ ಮೆರವಣಿಗೆ ಮಾಡುವಂತೆ ಷರತ್ತು ವಿಧಿಸಿದ್ದರು. ಆದರೆ, ಲಕ್ಷಕ್ಕೂ ಹೆಚ್ಚಿನ ಸಂಖ್ಯೆಯಲ್ಲಿ ಸೇರಿದ್ದ ರೈತರ ಗುಂಪಲ್ಲಿ ಕೆಲವರು ತಾಳ್ಮೆಗೆಟ್ಟು ಬ್ಯಾರಿಕೇಡ್ ಮುರಿದು ನುಗ್ಗಲು ಯತ್ನಿಸಿದ್ಧಾರೆ. 

ಇಷ್ಟೇ ಟ್ರಾಕ್ಟರ್ ಮೆರವಣಿಗೆಗೆ ಪೊಲೀಸರು ದೆಹಲಿಯ ಕೆಲ ನಿರ್ದಿಷ್ಟ ಮಾರ್ಗಗಳನ್ನ ನಿಗದಿಪಡಿಸಿದ್ದರು. ಆದರೆ ಪ್ರತಿಭಟನಾಕಾರರು ಮಾತ್ರ ಬೇರೆ ಮಾರ್ಗಗಳ ಮೂಲಕ ನಗರ ಪ್ರವೇಶ ಮಾಡಲು ಯತ್ನಿಸಿದ್ಧಾರೆ. ಇದು ಪೊಲೀಸರಿಗೆ ಬಹುದೊಡ್ಡ ಸಮಸ್ಯೆಯಾಗಿ ಪರಿಣಮಿಸಿದೆ. 

ಇನ್ನು ನಿಗದಿತ ಸಮಯಕ್ಕಿಂತ ಮುಂಚೆ ಬ್ಯಾರಿಕೇಟ್ ಮುರಿದು ದೆಹಲಿಗೆ ನುಗ್ಗಲು ಯತ್ನಿಸಿದ ಪ್ರತಿಭಟನಾಕಾರರು ತಮ್ಮ ಸಂಘಟನೆಗೆ ಸೇರಿದವರಲ್ಲ ಎಂದು ಸಂಯುಕ್ತ್ ಕಿಸಾನ್ ಮೋರ್ಚಾ ಹೇಳಿಕೊಂಡಿದೆ. 41 ರೈತ ಸಂಘಟನೆಗಳ ಒಕ್ಕೂಟವಾಗಿರುವ ಸಂಯುಕ್ತ ಕಿಸಾನ್ ಮೋರ್ಚಾ ತಾನು ಮಧ್ಯಾಹ್ನ 12 ಗಂಟೆಗೆ ನಿಗದಿಯಂತೆ ಟ್ರಾಕ್ಟರ್ ರ್ಯಾಲಿ ಆಯೋಜಿಸುವುದಾಗಿ ಹೇಳಿದೆ. ಆದರೆ ಇಂದು ಬೆಳಗ್ಗೆ ಹಿಂಸಾಚಾರಕ್ಕಿಳಿದ ಪ್ರತಿಭಟನಾಕಾರರು ಕಿಸಾನ್ ಮಜ್ದೂರ್ ಸಂಘರ್ಷ್ ಸಮಿತಿಗೆ ಸೇರಿದವರು ಎಂದುವರದಿಗಳು ಉಲ್ಲೇಖಿಸಿವೆ.