Asianet Suvarna News Asianet Suvarna News

ವಿಷಪ್ರಾಶನದ ಆರೋಪದ ಬೆನ್ನಲ್ಲೇ ಮುಖ್ತಾರ್‌ ಅನ್ಸಾರಿ ಸಾವಿನ ತನಿಖೆ ಶುರು, ಇಲ್ಲಿಯವರೆಗೂ ಆಗಿದ್ದೇನು?

Mukhtar Ansari Death News ರಾಜಕಾರಣಿಯಾಗಿ ಬದಲಾಗಿದ್ದ ಗ್ಯಾಂಗ್‌ಸ್ಟರ್‌ ಮುಖ್ತಾರ್‌ ಅನ್ಸಾರಿ, ಗುರುವಾರ ರಾತ್ರಿ ಉತ್ತರ ಪ್ರದೇಶದ ಬಂದಾ ಆಸ್ಪತ್ರೆಯಲ್ಲಿ ಹೃದಯಾಘಾತದಿಂದ ಸಾವು ಕಂಡಿದ್ದರು. ಸಾವಿಗೂ ಮುನ್ನ ಅವರನ್ನು ಉಳಿಸುವ ನಿಟ್ಟಿನಲ್ಲಿ 9 ವೈದ್ಯರ ತಂಡ ಶ್ರಮವಹಿಸಿತ್ತು ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.
 

Top points in Mukhtar Ansari death probe ordered amid poisoning claim san
Author
First Published Mar 29, 2024, 10:38 AM IST

ನವದೆಹಲಿ (ಮಾ.29): ರಾಜಕಾರಣಿಯಾಗಿ ಬದಲಾಗಿದ್ದ ಗ್ಯಾಂಗ್‌ಸ್ಟರ್‌ ಮುಖ್ತಾರ್‌ ಅನ್ಸಾರಿ ಗುರುವಾರ ರಾತ್ರಿ ಹೃದಯಾಘಾತದಿಂದ ಸಾವು ಕಂಡಿದ್ದಾರೆ. 2005ರಿಂದ ಜೈಲುವಾಸದಲ್ಲಿಯೇ ಇದ್ದ ಮುಖ್ತಾರ್‌ ಅನ್ಸಾರಿ ಸಾವಿನ ಬೆನ್ನಲ್ಲಿಯೇ ವಿವಾದಗಳು ಕೂಡ ಹುಟ್ಟಿಕೊಂಡಿದೆ. ಮುಖ್ತಾರ್‌ ಅನ್ಸಾರಿ ಪುತ್ರ ಹೇಳಿರುವ ಪ್ರಕಾರ, ಮಾಜಿ ಶಾಸಕರಾಗಿರುವ ಅವರ ತಂದೆಗೆ ಜೈಲಿನಲ್ಲಿಯೇ 'ಸ್ಲೋ ಪಾಯ್ಸನಿಂಗ್‌' ಮಾಡಲಾಗಿದೆ ಎಂದು ಆರೋಪಿಸಿದ್ದಾರೆ. 60 ವರ್ಷದ ಮುಖ್ತಾರ್‌ ಅನ್ಸಾರಿ ಗುರುವಾರ ರಾತ್ರಿ ಬಂದಾ ಆಸ್ಪತ್ರೆಯಲ್ಲಿ ಹೃದಯಾಘಾತದಿಂದ ನಿಧನರಾದರು. ಸಾವಿಗೂ ಮುನ್ನ ಅವರನ್ನು ಉಳಿಸಿಕೊಳ್ಳುವ ನಿಟ್ಟಿನಲ್ಲಿ 9 ವೈದ್ಯರ ತಂಡ ಅಪಾರ ಶ್ರಮವಹಿಸಿತ್ತು. ಕಾನೂನು ಸುವ್ಯವಸ್ಥೆ ಹದಗೆಡದಂತೆ ತಡೆಯಲು ಉತ್ತರ ಪ್ರದೇಶ ಪೊಲೀಸರು ರಾಜ್ಯಾದ್ಯಂತ ನಿಷೇಧಾಜ್ಞೆ ಜಾರಿಗೊಳಿಸಿದ್ದಾರೆ. ಅನ್ಸಾರಿ ವಿರುದ್ಧ 60ಕ್ಕೂ ಹೆಚ್ಚು ಕ್ರಿಮಿನಲ್ ಪ್ರಕರಣಗಳ ವಿಚಾರಣೆಗಳು ಇನ್ನೂ ಬಾಕಿ ಇವೆ.

ಮುಖ್ತಾರ್‌ ಅನ್ಸಾರಿ ಸಾವು, ಇಲ್ಲಿಯವರೆಗೂ ಆಗಿದ್ದೇನು?
* ಗುರುವಾರ ರಾತ್ರಿ 8.25ರ ಸುಮಾರಿಗೆ ಮುಕ್ತಾರ್ ಅನ್ಸಾರಿಯನ್ನು ಜಿಲ್ಲಾ ಕಾರಾಗೃಹದಿಂದ ಬಂಡಾದಲ್ಲಿರುವ ರಾಣಿ ದುರ್ಗಾವತಿ ವೈದ್ಯಕೀಯ ಕಾಲೇಜಿಗೆ ಕರೆತರಲಾಗಿತ್ತು. ಈ ವೇಳೆ ಆತ ಪ್ರಜ್ಞಾಹೀನ ಸ್ಥಿತಿಯಲ್ಲಿದ್ದ ಎಂದು ವೈದ್ಯಕೀಯ ಬುಲೆಟಿನ್‌ ತಿಳಿಸಿದೆ. ಆರಂಭದಲ್ಲಿ ಅವರಿಗೆ ವಾಂತಿ ಎಂದು ತಿಳಿಸಲಾಗಿತ್ತು. 9 ವೈದ್ಯರ ತಂಡ ಅವರಿಗೆ ಚಿಕಿತ್ಸೆ ನೀಡಲು ಆರಂಭಿಸಿದ ಬಳಿಕ ಹೃದಯಾಘಾತದಿಂದ ಅವರು ನಿಧನರಾದರು. ಇದಕ್ಕೂ ಮುನ್ನ, ಹೊಟ್ಟೆ ನೋವಿನಿಂದ ಬಳಲುತ್ತಿದ್ದ ಅನ್ಸಾರಿ ಅವರನ್ನು ಮಂಗಳವಾರ ಸುಮಾರು 14 ಗಂಟೆಗಳ ಕಾಲ ಆಸ್ಪತ್ರೆಗೆ ದಾಖಲಿಸಲಾಗಿತ್ತು.

* ಅನ್ಸಾರಿಯವರ ಮರಣೋತ್ತರ ಪರೀಕ್ಷೆಯನ್ನು ಶುಕ್ರವಾರ ಬಂದಾದಲ್ಲಿ ಮಾಡಲಾಗುವುದು ಮತ್ತು ಅದನ್ನು ವೀಡಿಯೊಗ್ರಾಫ್ ಮಾಡಲಾಗುವುದು ಎಂದು ಲಕ್ನೋದ ಪೊಲೀಸ್ ಪ್ರಧಾನ ಕಚೇರಿಯ ಅಧಿಕಾರಿಗಳು ತಿಳಿಸಿದ್ದಾರೆ. ಅಗತ್ಯವಿದ್ದರೆ ಒಳಾಂಗಗಳನ್ನು ಸಂರಕ್ಷಿಸಲಾಗುವುದು ಎಂದು ತಿಳಿಸಿದ್ದಾರೆ. ಈ ನಡುವೆ, ಮೊಹಮದಾಬಾದ್ ಸ್ಮಶಾನದಲ್ಲಿ ಅವರ ಅಂತ್ಯಕ್ರಿಯೆಗೆ ಸಿದ್ಧತೆಗಳು ನಡೆಯುತ್ತಿವೆ.

* ಮುಖ್ತಾರ್ ಅನ್ಸಾರಿ ಸಾವಿನ ಕುರಿತು ಮ್ಯಾಜಿಸ್ಟ್ರೇಟ್ ತನಿಖೆಯನ್ನು ಮೂವರು ಸದಸ್ಯರ ತಂಡ ನಡೆಸಲಿದೆ ಎಂದು ವರದಿಯಾಗಿದೆ. ಅನ್ಸಾರಿಯವರ ಸಹೋದರ ಮತ್ತು ಘಾಜಿಪುರ ಸಂಸದ ಅಫ್ಜಲ್ ಅನ್ಸಾರಿ ಮತ್ತು ಅನ್ಸಾರಿ ಅವರ ಪುತ್ರ, ಜೈಲಿನಲ್ಲಿ ಮುಖ್ತಾರ್‌ "ಸ್ಲೋ ಪಾಯ್ಸನಿಂಗ್" ಗೆ ತುತ್ತಾಗಿದ್ದರು ಎಂದು ಆರೋಪಿಸಿದ ನಂತರ ಈ ತನಿಖೆ ನಡೆಯಲಿದೆ. ಆದರೆ, ಅಧಿಕಾರಿಗಳು ಇದನ್ನು ನಿರಾಕರಿಸಿದ್ದಾರೆ. ಅನ್ಸಾರಿ ಅವರ ಪುತ್ರ ಉಮರ್ ಅನ್ಸಾರಿ ಅವರ ಕುಟುಂಬ ಸಾವಿನ ಕುರಿತು ಕೋರ್ಟ್‌ ಮೆಟ್ಟಿಲೇರುವುದಾಗಿ ತಿಳಿಸಿದ್ದಾರೆ.

* ಮುಖ್ತಾರ್‌ ಅನ್ಸಾರಿ ಸಾವನ ಬೆನ್ನಲ್ಲಿಯೇ ಇಡೀ ಉತ್ತರ ಪ್ರದೇಶದಲ್ಲಿ ಹೈಅಲರ್ಟ್‌ ಘೋಷಿಸಲಾಗಿದೆ. ಉತ್ತರ ಪ್ರದೇಶದಾದ್ಯಂತ ಕ್ರಿಮಿನಲ್ ಪ್ರೊಸೀಜರ್ ಕೋಡ್ (CrPC) ನ ಸೆಕ್ಷನ್ 144 ಅನ್ನು ವಿಧಿಸಿರುವುದರಿಂದ ದೊಡ್ಡ ಸಭೆಗಳನ್ನು ನಿಷೇಧಿಸಲಾಗಿದೆ. ರಾಜ್ಯ ಪೊಲೀಸರು ಬಂದಾ, ಮೌ, ಘಾಜಿಪುರ ಮತ್ತು ವಾರಣಾಸಿ ಜಿಲ್ಲೆಗಳಲ್ಲಿ ಹೆಚ್ಚುವರಿ ಭದ್ರತಾ ಸಿಬ್ಬಂದಿಯನ್ನು ನಿಯೋಜಿಸಿದ್ದಾರೆ. ಆನ್‌ಲೈನ್‌ನಲ್ಲಿ ಕಾನೂನುಬಾಹಿರ ಅಂಶಗಳ ಮೇಲೆ ನಿಗಾ ಇಡಲು ಉತ್ತರ ಪ್ರದೇಶ ಪೊಲೀಸರ ಸೋಶಿಯಲ್‌ ಮೀಡಿಯಾ ಸೆಲ್‌ ಸಹ ಸಕ್ರಿಯಗೊಳಿಸಲಾಗಿದೆ ಎಂದು ಪೊಲೀಸ್ ಮುಖ್ಯಸ್ಥರು ತಿಳಿಸಿದ್ದಾರೆ.

 

32 ವರ್ಷದ ಹಿಂದಿನ ಕೊಲೆ ಕೇಸ್‌: ಕುಖ್ಯಾತ ಗ್ಯಾಂಗ್‌ಸ್ಟರ್‌ ಮುಖ್ತಾರ್ ಅನ್ಸಾರಿಗೆ ಜೀವಾವಧಿ ಶಿಕ್ಷೆ

* ಹಲವಾರು ರಾಜಕೀಯ ಮುಖಂಡರು ಅನ್ಸಾರಿ ಅವರ ನಿಧನಕ್ಕೆ ಸಂತಾಪ ಸೂಚಿಸಿದ್ದಾರೆ ಮತ್ತು ಶಾಸಕರ ಸಾವಿನ ಸುತ್ತಲಿನ ಆರೋಪಗಳ ಬಗ್ಗೆ ಯೋಗಿ ಆದಿತ್ಯನಾಥ್ ನೇತೃತ್ವದ ಉತ್ತರ ಪ್ರದೇಶ ಸರ್ಕಾರವನ್ನು ಪ್ರಶ್ನಿಸಿದ್ದಾರೆ. ಎಐಎಂಐಎಂ ನಾಯಕ ಅಸಾದುದ್ದೀನ್ ಓವೈಸಿ ಮಾತನಾಡಿ, ಮಾಜಿ ಶಾಸಕರಿಗೆ ವಿಷವುಣಿಸಲಾಗಿದೆ ಎನ್ನುವ ಬಗ್ಗೆ ಗಂಭೀರ ಆರೋಪಗಳಿದ್ದರೂ ರಾಜ್ಯ ಸರ್ಕಾರ ಅವರ ಚಿಕಿತ್ಸೆಗೆ ಗಮನ ಹರಿಸಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಜೈಲು ಶಿಕ್ಷೆಯಲ್ಲಿದ್ದ ಗ್ಯಾಂಗ್‌ಸ್ಟರ್, ರಾಜಕಾರಣಿ ಮುಖ್ತಾರ್ ಅನ್ಸಾರಿ ಹೃದಯಾಘಾತದಿಂದ ನಿಧನ!

ಬಂದಾದ ಜೈಲಿನಲ್ಲಿ ಅನ್ಸಾರಿ ಅವರಿಗೆ ಸ್ಲೋ ಪಾಯ್ಸನಿಂಗ್‌ ಮಾಡಲಾಗಿದೆ ಎನ್ನುವ ಆರೋಪಗಳನ್ನು ಉತ್ತರ ಪ್ರದೇಶ ಸರ್ಕಾರ ಗಂಭೀರವಾಗಿ ತೆಗೆದುಕೊಂಡಿಲ್ಲ ಎಂದು ಆರ್‌ಜೆಡಿ ನಾಯಕ ತೇಜಸ್ವಿ ಯಾದವ್‌ ಹಾಗೂ ಸಮಾಜವಾದಿ ಪಕ್ಷ ಸೋಶಿಯಲ್‌ ಮೀಡಿಯಾದಲ್ಲಿ ಪೋಸ್ಟ್‌ ಮಾಡಿದೆ. ಇತ್ತೀಚೆಗೆ ಕಾಂಗ್ರೆಸ್‌ಗೆ ಸೇರ್ಪಡೆಗೊಂಡ ಬಿಹಾರದ ಮಾಜಿ ಸಂಸದ ಪಪ್ಪು ಯಾದವ್, ಅನ್ಸಾರಿ ಅವರ ಸಾವನ್ನು "ಸಾಂಸ್ಥಿಕ ಕೊಲೆ" ಎಂದು ಕರೆದಿದ್ದು,  ನ್ಯಾಯಾಲಯದ ಮೇಲ್ವಿಚಾರಣೆಯ ತನಿಖೆಗೆ ಒತ್ತಾಯ ಮಾಡಿದ್ದಾರೆ.
 

Follow Us:
Download App:
  • android
  • ios