ಪಶ್ಚಿಮ ಬಂಗಾಳ ವಿಧಾನಸಭಾ ಚುನಾವಣೆಗೆ ಕೆಲವೇ ದಿನ ಬಾಕಿ| ನಟಿ ಕೌಶಾನಿ ಮುಖರ್ಜಿ, ಪ್ರಿಯಾ ದಾಸ್ ಟಿಎಂಸಿ ಸೇರ್ಪಡೆ
ಕೋಲ್ಕತ್ತ(ಜ.25): ಪಶ್ಚಿಮ ಬಂಗಾಳ ವಿಧಾನಸಭಾ ಚುನಾವಣೆ ಸಮೀಪಿಸುತ್ತಿರುವ ಬೆನ್ನಲ್ಲೇ ನಟಿ ಕೌಶಾನಿ ಮುಖರ್ಜಿ ಮತ್ತು ಪ್ರಿಯಾ ದಾಸ್ ಭಾನುವಾರ ತೃಣಮೂಲ ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಯಾಗಿದ್ದಾರೆ.
ಬಳಿಕ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಕೌಶಾನಿ ಮುಖರ್ಜಿ, ‘ಮಮತಾ ದೀದಿಗೆ ನೇತಾಜಿ ಸುಭಾಷ್‌ಚಂದ್ರ ಬೋಸ್ ಜನ್ಮಜಯಂತಿ ಕಾರ‍್ಯಕ್ರಮದಲ್ಲಿ ಆದ ಅವಮಾನವನ್ನು ನಾನು ಖಂಡಿಸುತ್ತೇನೆ’ ಎಂದರು.
ನೇತಾಜಿ ಜನ್ಮದಿನದ ಅಂಗವಾಗಿ ಶನಿವಾರ ನಡೆದ ಕಾರ‍್ಯಕ್ರಮದಲ್ಲಿ ಪ್ರಧಾನಿ ಮೋದಿ ಮತ್ತು ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಭಾಗಿಯಾಗಿದ್ದರು. ಈ ವೇಳೆ ಮಮತಾ ಬ್ಯಾನರ್ಜಿ ಭಾಷಣ ಆರಂಭಿಸುತ್ತಿದ್ದಂತೆಯೇ ಕೆಲವರು ‘ಜೈ ಶ್ರೀ ರಾಮ್’, ‘ಮೋದಿ, ಮೋದಿ’ ಘೋಷಣೆ ಕೂಗಿದ್ದರು. ಘಟನೆಯಿಂದ ಕೋಪಗೊಂಡ ದೀದಿ ಭಾಷಣ ಮಾಡಲ್ಲ ಎಂದು ನಿರಾಕರಿಸಿದ್ದರು.
