ಗೋಲ್ಗಪ್ಪಕ್ಕಾಗಿ ಬಟಾಣಿ ಬೇಯಿಸುತ್ತಿದ್ದ ಪಾತ್ರೆಗೆ ಬಿದ್ದು ಒಂದೂವರೆ ವರ್ಷದ ಮಗು ಸಾವನ್ನಪ್ಪಿದೆ. ದುರಂತ ಎಂದರೆ ಎರಡು ವರ್ಷಗಳ ಹಿಂದೆ ಇದೇ ರೀತಿಯ ದುರಂತದಲ್ಲಿ ಮಗುವಿನ ಸಹೋದರಿ ಕೂಡ ಸಾವನ್ನಪ್ಪಿದ್ದಳು.

ಗೋಲ್ಗಪ್ಪಕ್ಕಾಗಿ ಬಟಾಣಿಯನ್ನು ಬೇಯಿಸುತ್ತಿದ್ದ ಪಾತ್ರೆಗೆ ಬಿದ್ದು ಒಂದೂವರೆ ವರ್ಷದ ಮಗು ಸಾವನ್ನಪ್ಪಿದ ಘಟನೆ ಉತ್ತರ ಪ್ರದೇಶದ ಸೋನಾಭದ್ರದಲ್ಲಿ ನಡೆದಿದೆ. ಬಿಸಿ ಬಿಸಿ ಕುದಿಯುತ್ತಿದ್ದ ಬಟಾಣಿಪಾತ್ರೆಗೆ ಬಿದ್ದ ಮಗಳನ್ನು ಕೂಡಲೇ ಆಸ್ಪತ್ರೆಗೆ ದಾಖಲಿಸಲಾಯಿತಾದರೂ ಚಿಕಿತ್ಸೆ ಫಲಕಾರಿಯಾಗದೇ ಆಕೆ ಸಾವನ್ನಪ್ಪಿದ್ದಾಳೆ. ಒಂದೂವರೆ ವರ್ಷದ ಮಗು ಪ್ರಿಯಾ ಸಾವನ್ನಪ್ಪಿದ ಬಾಲಕಿ, ದುರಂತ ಎಂದರೆ ಪ್ರಿಯಾಳ ಸೋದರಿ ಸೌಮ್ಯ ಕೂಡ ಎರಡು ವರ್ಷಗಳ ಹಿಂದೆ ಇದೇ ರೀತಿಯ ದುರಂತದಲ್ಲಿ ಸಾವನ್ನಪ್ಪಿದ್ದಳು.

ಮಗು ಪ್ರಿಯಾಳ ತಂದೆ ಶೈಲೇಂದ್ರ ಅವರು ಗೋಲ್‌ಗಪ್ಪ ಮಾರಾಟಗಾರನಾಗಿದ್ದಾರೆ. ಝಾನ್ಸಿ ಮೂಲದ ಅವರು ಕಳೆದ ನಾಲ್ಕು ವರ್ಷದಿಂದ ದುದ್ಧಿ ಬಳಿ ಬಾಡಿಗೆ ಮನೆಯೊಂದರಲ್ಲಿ ವಾಸ ಮಾಡುತ್ತಿದ್ದರು. ಜೂನ್ 27 ರಂದು ಅಂದರೆ ಕಳೆದ ಶುಕ್ರವಾರ ಶೈಲೇಂದ್ರ ಅವರ ಪತ್ನಿ ಪೂಜಾ ಅವರು ಗೋಲ್ಗಪ್ಪಗಾಗಿ ಸ್ಟೌ ಮೇಲೆ ಬಟಾಣಿ ಬೇಯಲು ಇಟ್ಟಿದ್ದಾರೆ. ನಂತರ ಅವರು ಬೇರೇನೋ ಕೆಲಸ ಮಾಡುವುದಕ್ಕಾಗಿ ಮನೆಯಿಂದ ಹೊರಗೆ ಬಂದಿದ್ದಾರೆ. ಈ ಸಮಯದಲ್ಲಿ ಅಲ್ಲಿ ಆಟವಾಡುತ್ತಿದ್ದ ಪ್ರಿಯ ತಲೆಕೆಳಗಾಗಿ ಬಟಾಣಿ ಬೇಯುತ್ತಿದ್ದ ಪಾತ್ರೆಯೊಳಗೆ ಬಿದ್ದಿದ್ದಾಳೆ.

ಹೀಗೆ ಪಾತ್ರೆಗೆ ಬಿದ್ದ ಪ್ರಿಯಾಳ ಕಿರುಚಾಟ ಕೇಳಿ ತಾಯಿ ಪೂಜಾ ಓಡಿ ಬಂದಿದ್ದು, ಈ ವೇಳೆ ಮಗು ಬಹುತೇಕ ಬೆಂದು ಹೋಗಿರುವುದು ಕಂಡು ಬಂದಿದೆ. ಕೂಡಲೇ ಆಕೆಯನ್ನು ಬಟ್ಟೆಯಲ್ಲಿ ಸುತ್ತಿ ಅವರು ಸಮೀಪದ ಆಸ್ಪತ್ರೆಗೆ ಎತ್ತಿಕೊಂಡು ಓಡಿದ್ದಾರೆ. ಆದರೆ ಅಲ್ಲಿನ ಮಗುವಿನ ಗಂಭೀರ ಸ್ಥಿತಿಯನ್ನು ನೋಡಿದ ವೈದ್ಯರು ಆಕೆಯನ್ನು ಜಿಲ್ಲಾ ಆಸ್ಪತ್ರೆಗೆ ಚಿಕಿತ್ಸೆಗಾಗಿ ಕರೆದೊಯ್ಯುವಂತೆ ಹೇಳಿದ್ದಾರೆ. ಆದರೆ ತುರ್ತು ಚಿಕಿತ್ಸೆ ನೀಡಿದರು ಗಂಭೀರ ಗಾಯಗೊಂಡಿದ್ದ ಪ್ರಿಯಾ ಚಿಕಿತ್ಸೆ ಫಲಕಾರಿಯಾಗದೇ ಸಾವನ್ನಪ್ಪಿದ್ದಾಳೆ.

ವಿಚಿತ್ರ ಎಂದರೆ ಪ್ರಿಯಾಳ ಅಕ್ಕ ಸೌಮ್ಯ ಕೂಡ ಎರಡು ವರ್ಷಗಳ ಹಿಂದೆ ಇದೇ ರೀತಿ ಸಾವನ್ನಪ್ಪಿದ್ದಳು, ಬೇಳೆ ಬೇಯಿಸುವ ಪಾತ್ರೆಗೆ ಬಿದ್ದು, ಮಗು ಸಾವನ್ನಪ್ಪಿತ್ತು. ಈಗ ಎರಡನೇ ಮಗುವನ್ನು ಕೂಡ ಈ ದಂಪತಿ ಕಳೆದುಕೊಂಡಿದ್ದು, ದಿಕ್ಕು ತೋಚದಂತಾಗಿದೆ. ಎರಡು ವರ್ಷಗಳ ಹಿಂದೆ ನಾವು ನಮ್ಮ ದೊಡ್ಡ ಮಗಳನ್ನು ಇದೇ ರೀತಿಯ ದುರಂತದಲ್ಲಿ ಕಳೆದುಕೊಂಡೆವು. ನನ್ನ ಮಗುವೆಂದರೆ ನನ್ನ ಪ್ರಪಂಚವಾಗಿದ್ದರು. ಆದರೆ ಈಗ ಅವರೇ ಹೊರಟು ಹೋದರು ಎಂದು ದಂಪತಿ ಗೋಳಾಡಿದ್ದಾರೆ.

ಪ್ರಿಯಾಳ ಸಾವಿನ ಸುದ್ದಿ ಕೇಳಿ ದಂಪತಿ ಆಘಾತಗೊಂಡು ಪ್ರಜ್ಞೆ ಕಳೆದುಕೊಂಡಿದ್ದು, ಕೂಡಲೇ ನೆರೆಮನೆಯವರು ಈ ಕುಟುಂಬದ ನೆರವಿಗೆ ಧಾವಿಸಿ ಬಂದಿದ್ದಾರೆ. ನಾವು ನಮ್ಮ ಹಿರಿಯ ಮಗಳನ್ನು ಪ್ರಿಯಾಳಲ್ಲಿ ನೋಡುತ್ತಿದ್ದೆವು. ಆದರೆ ಈಗ ಆಕೆಯೂ ಹೋದಳು, ನಾನು ತುಂಬ ನತದೃಷ್ಟ ಎಂದು ತಂದೆ ಶೈಲೇಂದ್ರ ಗೋಳಾಡಿದ್ದಾರೆ.