Asianet Suvarna News Asianet Suvarna News

ಇಂದು 77ನೇ ಸ್ವಾತಂತ್ರ್ಯ ಸಂಭ್ರಮ: 10ನೇ ಬಾರಿ ಧ್ವಜರೋಹಣ ನೆರವೇರಿಸಿದ ಪ್ರಧಾನಿ

ದೇಶದ 77ನೇ ಸ್ವಾತಂತ್ರ್ಯ ದಿನಾಚರಣೆಯನ್ನು ದೇಶಾದ್ಯಂತ ವಿಜೃಂಭಣೆಯಿಂದ ಆಚರಿಸಲಾಗುತ್ತಿದ್ದು ದೆಹಲಿಯ ಕೆಂಪುಕೋಟೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಧ್ವಜಾರೋಹಣ ಮಾಡಿದರು

Today is 77th Independence Day Prime Minister will hoist the flag for the 10th time today akb
Author
First Published Aug 15, 2023, 6:17 AM IST

ನವದೆಹಲಿ: ದೇಶದ 77ನೇ ಸ್ವಾತಂತ್ರ್ಯ ದಿನಾಚರಣೆಯನ್ನು ದೇಶಾದ್ಯಂತ ವಿಜೃಂಭಣೆಯಿಂದ ಆಚರಿಸಲಾಗುತ್ತಿದ್ದು ದೆಹಲಿಯ ಕೆಂಪುಕೋಟೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಧ್ವಜಾರೋಹಣ ಮಾಡಿದರು. ಇದು ಮೋದಿ ಅವರು ನಡೆಸುತ್ತಿರುವ ಸತತ 10ನೇ ರಾಷ್ಟ್ರಧ್ವಜಾರೋಹಣ ಆಗಲಿದೆ ಹಾಗೂ 2024ರ ಚುನಾವಣೆಗೆ ಮುನ್ನ ಕೊನೆಯದಾಗಲಿದೆ. ಬಳಿಕ ಮೋದಿ ದೇಶದ ಜನರನ್ನುದ್ದೇಶಿಸಿ ಮಾತನಾಡಲಿದ್ದಾರೆ. ಪ್ರತಿ ಸಲದಂತೆ ಈ ಸಲ ಕೂಡ ಮೋದಿ ಅವರು ಹಲವು ಮಹತ್ವದ ಹೊಸ ಘೋಷಣೆಗಳನ್ನು ಮಾಡುವ ನಿರೀಕ್ಷೆಯಿದೆ. ಚುನಾವಣಾ ವರ್ಷ ಆಗಿರುವ ಕಾರಣ ಹಲವು ವಿಶೇಷ ಪ್ರಕಟಣೆಗಳು ಪ್ರಧಾನಿಯಿಂದ ಹೊರಬೀಳುವ ನಿರೀಕ್ಷೆ ಇದೆ ಎನ್ನಲಾಗಿದೆ.

ಇಂದಿನ ಕಾರ‍್ಯಕ್ರಮ ಏನು?:

ಮಂಗಳವಾರ ಮುಂಜಾನೆ ಪ್ರಧಾನಿ ಮೋದಿಯವರು (Prime Minister) ಕೆಂಪುಕೋಟೆಗೆ (Redport)ಆಗಮಿಸುತ್ತಾರೆ. ಬಳಿಕ ಪ್ರಧಾನಿಗಳಿಗೆ ಸೇನೆಯು ಗೌರವ ವಂದನೆ ಸಲ್ಲಿಸಲಿದೆ. ನಂತರ ಅವರು ಧ್ವಜಾರೋಹಣ ಸಮಾರಂಭ ನಡೆಯುವ ಸ್ಥಳಕ್ಕೆ ತೆರಳುತ್ತಾರೆ. ಈ ವೇಳೆ ರಕ್ಷಣಾ ಮಂತ್ರಿ ರಾಜ್‌ನಾಥ್‌ ಸಿಂಗ್‌ (Rajanath singh), ರಕ್ಷಣಾ ಇಲಾಖೆಯ ರಾಜ್ಯ ಖಾತೆ ಸಚಿವ ಅಜಯ್‌ ಭಟ್‌ (Ajay Bhat), ರಕ್ಷಣಾ ಸಿಬ್ಬಂದಿ ಮುಖ್ಯಸ್ಥ ಜನರಲ್‌ ಅನಿಲ್‌ ಚೌಹಾಣ್‌, ಸೇನಾ ಮುಖ್ಯಸ್ಥ ಜನರಲ್‌ ಮನೋಜ್‌ ಪಾಂಡೆ, ನೌಕಾಪಡೆಯ ಮುಖ್ಯಸ್ಥ ಆರ್‌ ಹರಿಕುಮಾರ್‌ ಮತ್ತು ವಾಯುಪಡೆ ಮುಖ್ಯಸ್ಥ ವಿ. ಆರ್‌ ಚೌಧರಿ V.R. choudhary) ಮತ್ತು ಪ್ರಧಾನಿಗಳನ್ನು ಸ್ವಾಗತಿಸುತ್ತಾರೆ.

ಇದೇ ಮೊದಲ ಬಾರಿಗೆ ಕೆಂಪು ಕೋಟೆ ಮೇಲೆ ಬುಲೆಟ್ ಪ್ರೂಫ್ ಬಾಕ್ಸ್‌ನಲ್ಲಿ ನಿಂತು ಮೋದಿ ಭಾಷಣ?

ಬಳಿಕ ಪ್ರಧಾನಿ ಮೋದಿಯವರು ಕೆಂಪುಕೋಟೆಯ ಮೇಲೆ ಧ್ವಜಾರೋಹಣ ಮಾಡುತ್ತಿದ್ದಂತೆ ಭಾರತದ ವಾಯುಪಡೆಯ ಎರಡು ಸುಧಾರಿತ ಲಘು ಹೆಲಿಕಾಪ್ಟರ್‌ಗಳಾದ ಮಾರ್ಕ್ -3 ಧ್ರುವ್‌ ಮೇಲಿನಿಂದ ಧ್ವಜರೋಹಣದ ಮೇಲೆ ಪುಷ್ಪ ದಳಗಳನ್ನು ಸುರಿಸಲಿವೆ. ಈ ವೇಳೆ ರಾಷ್ಟ್ರಗೀತೆ (National Anthem)ಮೊಳಗಲಿದೆ. ನಂತರ ಪ್ರಧಾನಿ ಮೋದಿ ಭಾಷಣ ಮಾಡಲಿದ್ದಾರೆ.

10,000 ಭದ್ರತಾ ಸಿಬ್ಬಂದಿ ನಿಯೋಜನೆ:

ಕೆಂಪುಕೋಟೆಯಲ್ಲಿ ಬರೋಬ್ಬರಿ 10,000 ಭದ್ರತಾ ಸಿಬ್ಬಂದಿಗಳನ್ನು ನಿಯೋಜನೆ ಮಾಡಲಾಗಿದೆ. ಅಲ್ಲದೇ ಭದ್ರತೆಗಾಗಿ ಮುಖ ಗುರುತಿಸುವಿಕೆ ಸಾಮರ್ಥ್ಯವಿರುವ ಸುಮಾರು 1,000 ಕ್ಯಾಮರಾಗಳನ್ನು ಆಯಕಟ್ಟಿನ ಜಾಗಗಳಲ್ಲಿ ಅಳವಡಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಈ ಸಲ 1800 ಜನಸಾಮಾನ್ಯ ‘ವಿಶೇಷ ಅತಿಥಿಗಳು’ ಸಮಾರಂಭದಲ್ಲಿ ಭಾಗಿಯಾಗಲಿದ್ದು, ದೇಶದ ವಿವಿಧ ಭಾಗಗಳಿಮದ ಜನಸಾಮಾನ್ಯರನ್ನು ಮೊದಲ ಬಾರಿ ಆಹ್ವಾನಿಸಲಾಗಿದೆ. ಇನ್ನು ಸೆಂಟ್ರಲ್‌ ವಿಸ್ತಾ ಯೋಜನೆಯ ಕಾರ್ಮಿಕರು, ದಾದಿಯರು ಮತ್ತು ಮೀನುಗಾರರನ್ನೂ ಸಮಾರಂಭಕ್ಕೆ ಕರೆತರಲಾಗುತ್ತದೆ. ಅನೇಕರು ತಮ್ಮ ಸಾಂಪ್ರದಾಯಕ ಉಡುಗೆಯಲ್ಲೇ ಭಾಗಿಯಾಗಲಿದ್ದಾರೆ.

ಒಟ್ಟಾರೆ ವರ್ಷದ ಕಾರ್ಯಕ್ರಮದಲ್ಲಿ 20,000ಕ್ಕೂ ಹೆಚ್ಚು ಅಧಿಕಾರಿಗಳು ಮತ್ತು ನಾಗರಿಕರು ಭಾಗವಹಿಸಲಿದ್ದಾರೆ. ಇಲ್ಲಿನ ಜ್ಞಾನಪಥವನ್ನು ಹೂವುಗಳು ಮತ್ತು ಜಿ20 ಚಿಹ್ನೆಯಿಂದ ಅಲಂಕರಿಸಲಾಗಿದೆ. ಇನ್ನು ಕಾರ್ಯಕ್ರಮ ಮುಗಿಯುವವರೆಗೆ ಸಂಪೂರ್ಣ ಸ್ಥಳವನ್ನು ‘ಗಾಳಿಪಟ ಹಾರಾಟ ನಿರ್ಬಂಧಿತ ವಲಯ’ ಎಂದು ಗುರುತಿಸಲಾಗುತ್ತಿದ್ದು ಗಾಳಿಪಟ ಹಾರಾಟ ತಡೆಯಲು ಸಿಬ್ಬಂದಿಗಳನ್ನು ನೇಮಿಸಲಾಗಿದೆ. ಅಲ್ಲದೇ ಡ್ರೋನ್‌ ಹಾರಾಟಕ್ಕೆ ನಿರ್ಬಂಧ ಸೇರಿದಂತೆ ಎಲ್ಲ ರೀತಿಯ ಭಯೋತ್ಪಾದನಾ ಚಟುವಟಿಕೆ ನಿಗ್ರಹ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳಲಾಗಿದೆ. ಈಗಾಗಲೇ ರಾಜ್‌ಘಾಟ್‌, ಐಟಿಒ ಮತ್ತು ಕೆಂಪುಕೋಟೆ ಪ್ರದೇಶಗಳಲ್ಲಿ ಸ್ವಾತಂತ್ರ್ಯ ದಿನಾಚಣೆ ಹಿನ್ನೆಲೆಯಲ್ಲಿ ಸೆಕ್ಷನ್‌ 144 ಜಾರಿ ಮಾಡಲಾಗಿದೆ.

ಕೆಂಪು ಕೋಟೆಯಲ್ಲಿ ಮೋದಿ ಧ್ವಜಾರೋಹಣಕ್ಕೆ DRDO ಆ್ಯಂಟಿ ಡ್ರೋನ್ ಬಳಸಿದ ಭದ್ರತಾ ಪಡೆ!

 ದೇಶದಲ್ಲಿ ಸಹಬಾಳ್ವೆಯಿಂದ ಬದುಕೋಣ: ಮುರ್ಮು

ಸೋಮವಾರ ಸ್ವಾತಂತ್ರ್ಯ ದಿನಾಚರಣೆಯ ಮುನ್ನಾ ದಿನದಂದು ದೇಶವನ್ನುದ್ದೇಶಿಸಿ ಮಾತನಾಡಿದ ರಾಷ್ಟ್ರಪತಿ (president) ದ್ರೌಪದಿ ಮುರ್ಮು ‘ದೇಶದಲ್ಲಿ ವೈವಿಧ್ಯಮಯ ಅಸ್ಮಿತೆಯ ಹೊರತಾಗಿಯೂ ಸಮಾನ ಅವಕಾಶಗಳು, ಹಕ್ಕುಗಳು ಮತ್ತು ಕರ್ತವ್ಯಗಳನ್ನು ಹೊಂದಿರುವ ಎಲ್ಲ ನಾಗರಿಕರು ಸೌಹಾರ್ದತೆ ಮತ್ತು ಸಹೋದರತ್ವದಿಂದ ಮುನ್ನಡೆಯಬೇಕು’ ಎಂದು ಸಂದೇಶ ನೀಡಿದ್ದಾರೆ. ಇತ್ತೀಚಿನ ಮಣಿಪುರ ಜನಾಂಗೀಯ ಸಂಘರ್ಷ ಹಾಗೂ ಇತರ ಕೋಮುಗಲಭೆಗಳ ಬೆನ್ನಲ್ಲೇ ಮುರ್ಮು ಅವರಿಂದ ಈ ಹೇಳಿಕೆ ಬಂದಿದ್ದು ಮಹತ್ವದ್ದಾಗಿದೆ.

ಅಲ್ಲದೇ ಪ್ರತಿಯೊಬ್ಬ ಭಾರತೀಯರು ಅನೇಕ ಗುರುತುಗಳನ್ನು ಹೊಂದಿದ್ದಾರೆ. ಆದರೆ ಜಾತಿ, ಧರ್ಮ, ಭಾಷೆ, ಪ್ರದೇಶ, ಕುಟುಂಬ ಮತ್ತು ವೃತ್ತಿಯನ್ನು ಹೊರತುಪಡಿಸಿ ಒಂದು ಗುರುತಿದೆ, ಅದೇ ‘ಭಾರತದ ಪ್ರಜೆ’ ಎಂಬ ಗುರುತು. ನಮ್ಮ ಪ್ರತಿಯೊಬ್ಬರಿಗೂ ಸಮಾನ ಅವಕಾಶಗಳಿವೆ. ಆ.15, 1947ರಂದು ರಾಷ್ಟ್ರವು ಹೊಸದಾಗಿ ಉದಯವಾಯಿತು. ವಿದೇಶಿಗರ ಆಳ್ವಿಕೆಯಿಂದ ನಾವು ಸ್ವಾತಂತ್ರ್ಯ ಮಾತ್ರವಲ್ಲದೇ ನಮ್ಮ ಹಣೆಬರಹವನ್ನೂ ಪುನಃ ಬರೆಯುವ ಸ್ವಾತಂತ್ರ್ಯ ಗಳಿಸಿದ್ದೇವೆ. ಸಂವಿಧಾನವು ದೇಶದ ಮಾರ್ಗದರ್ಶಿ ದಾಖಲೆಯಾಗಿದೆ ಎಂದರು.
 

Follow Us:
Download App:
  • android
  • ios