ರಾಂಚಿ(ಜ.22): ನಾಳೆ(ಜ.23)ನೇತಾಜಿ ಸುಭಾಷ್ ಚಂದ್ರ ಬೋಸ್ ಅವರ 123ನೇ ಜನ್ಮ ಜಯಂತಿ. ಈ ಹಿನ್ನೆಲೆಯಲ್ಲಿ ಜ.23ರಂದು ಸಾರ್ವತ್ರಿಕ ರಜೆ ಎಂದು ಘೋಷಿಸಿ ಜಾರ್ಖಂಡ್ ಸರ್ಕಾರ ಆದೇಶ ಹೊರಡಿಸಿದೆ.

ಈ ಕುರಿತು ಟ್ವೀಟ್ ಮೂಲಕ ಮಾಹಿತಿ ನೀಡಿರುವ ಜಾರ್ಖಂಡ್ ಸಿಎಂ ಹೇಮಂತ್ ಸೋರೆನ್, ಜಗತ್ತು ಕಂಡ ಮಹಾನ್ ಸ್ವಾತಂತ್ರ್ಯ ಯೋಧ ನೇತಾಜಿ ಜನ್ಮದಿನದಂದು ಸರ್ಕಾರಿ ರಜೆ ಘೋಷಿಸುವ ನಿರ್ಣಯ ಕೈಗೊಳ್ಳಲಾಗಿದೆ ಎಂದು ಹೇಳಿದ್ದಾರೆ.

ಗುಮ್ನಾಮಿ ಬಾಬಾ ಅಥವಾ ನೇತಾಜಿ?: ಬಯಲಾಗಲಿದೆ ರಹಸ್ಯ!

ಜಾರ್ಖಂಡ್ ನೇತಾಜಿ ಸುಭಾಷ್ ಚಂದ್ರ ಬೋಸ್ ಅವರ ಕರ್ಮಭೂಮಿಯಾಗಿದ್ದು, ಅವರ ತತ್ವಾದರ್ಶಗಳನ್ನು ಇಂದಿನ ಯುವ ಪೀಳಿಗೆಗೆ ತಲುಪಿಸುವುದು ಸರ್ಕಾರದ ಕರ್ತವ್ಯ ಎಂದು ಸೋರೆನ್ ಟ್ವೀಟ್ ಮಾಡಿದ್ದಾರೆ.

ನೇತಾಜಿ ಸಾವಿಗೆ ಸಂಬಂಧಿಸಿದ ಎಲ್ಲಾ ವರದಿ ಬಹಿರಂಗ:
ಇನ್ನು ಕೇಂದ್ರ ಸರ್ಕಾರ ನೇತಾಜಿ ಸುಭಾಷ್ ಚಂದ್ರ ಬೋಸ್ ಅವರ ಸಾವಿಗೆ ಸಂಬಂಧಿಸಿದಂತೆ ಇರುವ ಎಲ್ಲಾ ವರದಿಗಳನ್ನು ಬಹಿರಂಗಗೊಳಿಸಿದ್ದು, ನ್ಯಾಷನಲ್ ಆರ್ಕೈವ್ಸ್ ಆಫ್ ಇಂಡಿಯಾದಲ್ಲಿ ಇವುಗಳನ್ನು ಸಾರ್ವಜನಿಕ ದರ್ಶನಕ್ಕೆ ಇಡಲಾಗಿದೆ.

ಒಟ್ಟು 304 ರಹಸ್ಯ ದಾಖಲೆಗಳ ಪೈಕಿ 303 ದಾಖಲೆಗಳು ಬಹಿರಂಗೊಂಡಿದ್ದು, ಇವುಗಳನ್ನು www.netajipapers.gov.in.ನಲ್ಲಿ ಅಪ್ಲೋಡ್ ಮಾಡಲಾಗಿದೆ ಎಂದು ಕೇಂದ್ರ ಸಚಿವ ಪ್ರಹ್ಲಾದ್ ಸಿಂಗ್ ಪಟೇಲ್ ಸ್ಪಷ್ಟಪಡಿಸಿದ್ದಾರೆ.